ಬೆಂಗಳೂರು: ‘ಕಾಂತಾರ’ ಸಿನಿಮಾ ಜಗತ್ತಿನ ಗಮನಸೆಳೆದು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ಎಲ್ಲರಿಗೂ ತಿಳಿದಿದೆ. ಇದೀಗ ‘ಕಾಂತಾರ’ ಕತೆಯನ್ನು ಮತ್ತಷ್ಟು ಬೆಳೆಸಿ ಇನ್ನೊಂದು ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ ರಿಷಬ್ ಶೆಟ್ಟಿ. ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಅನ್ನು ರಿಷಬ್ ಶೆಟ್ಟಿ ಬರೆದಿದ್ದು, ಚಿತ್ರೀಕರಣವನ್ನೂ ಪ್ರಾರಂಭಿಸಿದ್ದಾರೆ ಎನ್ನಲಾಗುತ್ತಿದೆ.
ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಎರಡು ಭಿನ್ನ ಗೆಟಪ್ನಲ್ಲಿ ರಿಷಬ್ ಕಾಣಿಸಿಕೊಳ್ಳಲಿದ್ದಾರೆ. ‘ಕಾಂತಾರ 2’ ಸಿನಿಮಾದ ಚಿತ್ರೀಕರಣವನ್ನು ರಿಷಬ್ ಶೆಟ್ಟಿ ಬಹಳ ಗುಟ್ಟಾಗಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಬಗ್ಗೆ ಸಿನಿಮಾದ ಕತೆಯ ಬಗ್ಗೆ ಗುಟ್ಟನ್ನು ಬಿಟ್ಟುಕೊಡದೆ ಚಿತ್ರೀಕರಣ ಮಾಡುತ್ತಿದ್ದಾರೆ ರಿಷಬ್. ಆದರೆ ಇದೀಗ ರಿಷಬ್ರ ಹೊಸ ಲುಕ್ ಬಹಿರಂಗಗೊಂಡಿದ್ದು, ಆ ಲುಕ್ ‘ಕಾಂತಾರ 2’ ಗಾಗಿಯೇ ಮಾಡಲಾಗಿದೆ ಎನ್ನಲಾಗುತ್ತಿದೆ. ‘ಕಾಂತಾರ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ತೆಳ್ಳನೆ ಗಡ್ಡ ಬಿಟ್ಟಿದ್ದ ರಿಷಬ್ ಶೆಟ್ಟಿ ಇದೀಗ ಋಷಿಗಳ ಮಾದರಿಯಲ್ಲಿ ಉದ್ದನೆಯ ಗಡ್ಡ ಬಿಟ್ಟಿದ್ದಾರೆ. ರಿಷಬ್ರ ಈ ಲುಕ್ ‘ಕಾಂತಾರ 2’ ಸಿನಿಮಾದ್ದು ಎನ್ನಲಾಗುತ್ತಿದೆ.