ಬೆಂಗಳೂರು: ಕೆಜಿಎಫ್, ಕಾಂತಾರ ಅನ್ನೋ ಸೂಪರ್ ಹಿಟ್ ಸಿನಿಮಾಗಳ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಪ್ಯಾನ್ ಇಂಡಿಯಾದಲ್ಲಿ ಸದ್ದು ಮಾಡಿದೆ. ಇದೇ ಹೊಂಬಾಳೆ ಫಿಲಂಸ್ ಇವತ್ತು ಒಂದಲ್ಲ, ಎರಡಲ್ಲ ಮುಂದಿನ 8 ಬಿಗ್ ಬಜೆಟ್ ಸಿನಿಮಾಗಳ ಬಗ್ಗೆ ಲೇಟೆಸ್ಟ್ ಅಪ್ಡೇಟ್ ಕೊಟ್ಟಿದೆ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಚಿತ್ರಗಳ ಮೂಲಕ ಹೆಸರುವಾಸಿಯಾದ ಹೊಂಬಾಳೆ ಫಿಲಂಸ್ 2025ರ ಹೊತ್ತಿಗೆ 8 ಸಿನಿಮಾಗಳನ್ನು ಬಿಡುಗಡೆ ಮಾಡೋ ಪ್ಲಾನ್ ಮಾಡಿದೆ. ‘ಸಲಾರ್ ಪಾರ್ಟ್- 1, ಸೀಸ್ಫೈರ್’ ಚಿತ್ರವನ್ನು ಮುಂದಿನ ಡಿಸೆಂಬರ್ 22 ರಂದು ಜಗತ್ತಿನಾದ್ಯಂತ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲಂಸ್ ಪ್ರಕಟಿಸಿದೆ.
ಮುಂದಿನ ದಿನಗಳಲ್ಲಿ ‘ಯುವ’, ‘ಕಾಂತಾರ 2’, ‘ರಘು ತಥಾ’, ‘ಬಘೀರ’, ‘ಸಲಾರ್ ಪಾರ್ಟ್ 2’, ‘ಕೆಜಿಎಫ್ 3’, ‘ರಿಚರ್ಡ್ ಆಂಟೋನಿ’, ‘ಟೈಸನ್’ ಮುಂತಾದ ಚಿತ್ರಗಳನ್ನು ಹೊಂಬಾಳೆ ನಿರ್ಮಿಸುತ್ತಿದೆ. ಈಗ ‘ಸಲಾರ್ 1’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗುವ ಮೂಲಕ ಈ ಸಂಭ್ರಮ ಇನ್ನಷ್ಟು ಹೆಚ್ಚಾಗಿದೆ. ‘ಕೆಜಿಎಫ್ 3’ ಸಿನಿಮಾದ ಶೂಟಿಂಗ್ 2024ರ ಕೊನೆಯಲ್ಲಿ ಆರಂಭ ಆಗುವ ನಿರೀಕ್ಷೆ ಇದೆ. 2025ರ ಡಿಸೆಂಬರ್ ವೇಳೆಗೆ ಸಿನಿಮಾ ತೆರೆಗೆ ಬರಲಿದೆಯಂತೆ. ಈ ವಿಚಾರ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ‘ಸಲಾರ್’ ರಿಲೀಸ್ ಬಳಿಕ ಈ ಬಗ್ಗೆ ಅಧಿಕೃತ ಘೋಷಣೆ ಆಗುವ ನಿರೀಕ್ಷೆ ಇದೆ.