ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಅನುಮೋದನೆಗೊಂಡಿದ್ದ ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದು, ಕೇಂದ್ರ ಸರ್ಕಾರ ಇಂದು(ಸೆ.29) ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ.
ಮಸೂದೆಗೆ ಕಾನೂನು ರೂಪ ಸಿಕ್ಕಿದ್ದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳೆಯರಿಗೆ 33% ರಾಜಕೀಯ ಮೀಸಲಾತಿ ನೀಡಲಿದೆ. ಮುಂದಿನ ಜಾತಿಗಣತಿ ಬಳಿಕ ಕ್ಷೇತ್ರ ಪುನರ್ ವಿಂಗಡಣೆಯಾಗಲಿದ್ದು, ಆ ಬಳಿಕವಷ್ಟೆ ಈ ಕಾನೂನು ಜಾರಿಗೆ ಬರಲಿದೆ ಎಂದು ಗೆಜೆಟ್ನಲ್ಲಿ ತಿಳಿಸಿದೆ. ಸೆಪ್ಟೆಂಬರ್ 20 ರಂದು ಮಸೂದೆಯನ್ನು ಅಂಗೀಕರಿಸಲಾಯಿತು. 454 ಸದಸ್ಯರು ಮಸೂದೆ ಪರವಾಗಿ ಮತ ಚಲಾಯಿಸಿದರು. ಮಸೂದೆ ವಿರುದ್ಧ ಇಬ್ಬರು ಮತ ಚಲಾಯಿಸಿದ್ದರು. ಸೆಪ್ಟೆಂಬರ್ 21 ರಂದು, ನಾರಿ ಶಕ್ತಿ ವಂದನ್ ಅಧಿನಿಯಮವನ್ನು ರಾಜ್ಯಸಭೆಯಲ್ಲಿ ಅವಿರೋಧವಾಗಿ ಅಂಗೀಕರಿಸಲಾಯಿತು.