News Karnataka Kannada
Tuesday, April 30 2024
ವಿಶೇಷ

ಇಂದು ನರ್ಸ್ ದಿನಾಚರಣೆ: ತಾಯಂದಿರ ಕಣ್ಮಣಿ ಮಹಾತಾಯಿ ನರಸಮ್ಮ

Today is Nurses' Day.
Photo Credit : News Kannada

ಪ್ರತಿಯೊಂದು ಹೆಣ್ಣಿಗೂ ತಾಯ್ತನ ಎಷ್ಟು ಸಂಭ್ರಮದ ವಿಷಯವೋ ಅಷ್ಟೇ ಆತಂಕದ ವಿಷಯವೂ ಹೌದು ! ಗರ್ಭಿಣಿ ಮಹಿಳೆಯ ತಾಯಿಯಿಂದ ಹಿಡಿದು ಸುತ್ತಮುತ್ತಲಿನವರು ನೀಡುತ್ತಿದ್ದ ’ಏನೂ ಹೆದ್ರಬೇಡ್ವೇ ನರಸಮ್ಮ ಇದ್ದಾಳೆ’ ಎಂಬ ಅಭಯದ ಮಾತು ಗರ್ಭಿಣಿ ಹೆಣ್ಣು ಮಕ್ಕಳ ಆತಂಕವನ್ನು ದೂರ ಮಾಡುತ್ತಿತ್ತು.

ದಿನ ತುಂಬಿದ ಗರ್ಭಿಣಿಯ ಹೊಟ್ಟೆಯ ಮೇಲೆ ಹಿತವಾಗಿ ಕೈಯಾಡಿಸುತ್ತಾ ಧೈರ್ಯ ತುಂಬಿ ಸಲೀಸಾಗಿ ಹೆರಿಗೆ ಮಾಡಿಸುತ್ತಿದ್ದ ಮಹಾತಾಯಿ ನರಸಮ್ಮ ಸುತ್ತಮುತ್ತಲಿನವರಿಗೆ ಸೂಲಗಿತ್ತಿ ನರಸಮ್ಮ ಎಂದೇ ಚಿರಪರಿಚಿತರಾಗಿದ್ದರು.

ನರಸಮ್ಮ ಇದ್ದರೆ ಭೀಮ ಬಲ:
ಹೆರಿಗೆ ಸಮಯದಲ್ಲಿ ನರಸಮ್ಮ ಇದ್ದರೆ ಭೀಮ ಬಲ ಇದ್ದಂತೆ ಎನ್ನುವ ಜನರ ಮಾತಿಗೆ ’ಅಯ್ಯೋ ನನ್ನ ಕೈಲಿ ಏನೈತೆ ಸೋಮಿ, ಎಲ್ಲ ಭಗವಂತ ಮಡಿಸ್ತಾವ್ನೆ ನಾನು ಹೆಸರಿಗೆ ಮಾತ್ರ’ ಎಂದು ವಿನಯವಾಗಿ ಹೇಳುತ್ತಿದ್ದ ನರಸಮ್ಮ ಎಷ್ಟೇ ಕ್ಲಿಷ್ಟ ಪರಿಸ್ಥಿತಿಯಿದ್ದರೂ ತಮ್ಮ ಅನುಭವದಿಂದ ಸುಲಭವಾಗಿ ಹೆರಿಗೆ ಮಾಡಿಸುತ್ತಿದ್ದರು. ಅವರ ಕೈಗುಣವೇ ಹಾಗೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಸುತ್ತಮುತ್ತ ಸೂಲಗಿತ್ತಿ ನರಸಮ್ಮ ಎಂದೇ ಪ್ರಸಿದ್ಧಿಯಾಗಿದ್ದ ಇವರು ಮಾಡಿಸಿದ ಹದಿನೈದು ಸಾವಿರಕ್ಕೂ ಹೆಚ್ಚು ಹೆರಿಗೆಗಳಲ್ಲಿ ಒಂದೂ ಫೇಲ್ ಆಗದಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

ಊರಿನ ಕೀರ್ತಿ ಬೆಳಗಿದ ನರ್ಸ್ ಅಮ್ಮ(ನರಸಮ್ಮ):
ಇವರ ಸಾಧನೆ, ಕಾಯಕನಿಷ್ಠೆ, ಮಾತೃವಾತ್ಸಲ್ಯದ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ತೊಂಭತ್ತೆಂಟು ವರ್ಷ ಕಾಲ (ಜನನಃ ೧೬-೬-೧೯೨೦, ಮರಣಃ ೨೫-೧೨-೨೦೧೮)ಬದುಕಿದ್ದ ಹಿರಿಯ ಜೀವ ಡಾ|| ಸೂಲಗಿತ್ತಿ ನರಸಮ್ಮ ಅವರು ಪಾವಗಡ ತಾಲೂಕು ತಿಮ್ಮನಾಯಕನ ಪೇಟೆ ಗ್ರಾಮದ ಕದಿರಪ್ಪ ಮತ್ತು ಬಾವಮ್ಮ ಅವರ ಒಟ್ಟು ಏಳು ಮಕ್ಕಳಲ್ಲಿ ಎರಡನೇ ಮಗಳು. ಪುಣ್ಯಾತ್ಮರು ಅದ್ಯಾವ ಗಳಿಗೆಯಲ್ಲಿ ನರಸಮ್ಮ ಎಂದು ಹೆಸರಿಟ್ಟರೋ!! ನರ್ಸ್ ಅಮ್ಮನಾಗಿ ತಮ್ಮ ವಿಶಿಷ್ಟ ಸೇವೆಯಿಂದ ಊರಿನ ಕೀರ್ತಿಯನ್ನು ಬೆಳಗಿದರು. ಹೆಣ್ಣು ಆರತಿ ಎತ್ತಿ, ತೊಟ್ಟಿಲು ತೂಗುವುದು ಮಾತ್ರವಲ್ಲ. ಕೀರ್ತಿಯನ್ನೂ ತರಬಲ್ಲಳು ಎಂದು ನರಸಮ್ಮ ತೋರಿಸಿಕೊಟ್ಟಿದ್ದಾರೆ.

ಅಜ್ಜಿಯಿಂದ ಬಳುವಳಿ:
ನರಸಮ್ಮ ಅವರಿಗೆ ಹೆರಿಗೆ ಮಾಡಿಸುವುದು ತನ್ನ ಅಜ್ಜಿ(ತಾಯಿಯ ತಾಯಿ)ಯಿಂದ ವಂಶಪಾರಂಪರಿಕವಾಗಿ ಬಂದ ಬಳುವಳಿ. ಇವರ ಅಜ್ಜಿ ಮರಿಗಮ್ಮ ಪ್ರಸೂತಿ ಪ್ರವೀಣೆಯಾಗಿದ್ದರು. ಏಕಾಗ್ರತೆಯಿಂದ ತನ್ನ ಅಜ್ಜಿಯಿಂದ ಕಲಿತ ಸುಸೂತ್ರ ಹೆರಿಗೆ ಮಾಡಿಸುವ ವಿದ್ಯೆಯನ್ನು ಯಾರಿಂದಲೂ ಏನನ್ನೂ ಬಯಸದೇ ಪರರ ಉಪಕಾರಕ್ಕಾಗಿ ಮುಡುಪಾಗಿಟ್ಟಿದ್ದರು.

ಮೂರು ದಿನಗಳ ಕಾಲ ತಾಯಿ-ಮಗುವಿನ ಆರೈಕೆ:
ಯಾವುದೇ ಜಾತಿ-ಮತ-ವರ್ಗವೆಂದು ಬೇಧವಿಲ್ಲದೆ ಸಮಾನವಾಗಿ ಮಿಡಿಯುವ ಮನಸ್ಸು ಅವರದು. ಇವರ ಈ ಕಾಯಕಕ್ಕೆ ಪ್ರತ್ಯುಪಕಾರವಾಗಿ ಒಂದು ಮೊರ ರಾಗಿ ಕೊಟ್ಟವರೂ ಇದ್ದಾರೆ. ಸೀರೆ ಉಡಿಸಿ ಮಡಿಲು ತುಂಬಿದವರೂ ಇದ್ದಾರೆ. ಆದರೆ ಮಮತಾಮಯಿ ನರಸಮ್ಮ ಅವರಿಗೆ ಯಾವ ಬೇಧವೂ ಇಲ್ಲ. ತನ್ನ ಕೆಲಸವಾದೊಡನೆ ಮಗುವನ್ನು ತೊಳೆದು ಮೊರದಲ್ಲಿ ಮಲಗಿಸಿ, ಬೆಚ್ಚಗೆ ಹೊದಿಸಿ ಮೂರು ದಿನ ತಾಯಿ-ಮಗುವನ್ನು ಕಣ್ಣಿಗೆ ಅಂಜನ ಹಾಕಿ ಕಾದು ಮಗುವಿನ ದೃಷ್ಟಿ ತೆಗೆದು ನೀವಾಳಿಸಿ ಬಾಣಂತಿಗೆ ಮತ್ತವಳ ತಾಯಿಗೆ ಒಂದಿಷ್ಟು ಸಲಹೆ ನೀಡಿ ಬಂಗಾರದಂಥ ಮಗು ಹುಟ್ಟೈತೆ, ಚೆನ್ನಾಗಿ ನೋಡ್ಕೊಳ್ರವ್ವಾ ಎಂದು ಹೇಳಿ ಹೊರಡುತ್ತಿದ್ದರು.

ಪ್ರಸವದ ದಿನದ ಲೆಕ್ಕ ತಪ್ಪಿದ್ದೇ ಇಲ್ಲ:
ನರಸಮ್ಮ ತಮ್ಮ ಅನುಭವದಿಂದಲೇ ಗರ್ಭಿಣಿಯ ಪ್ರಸವದ ದಿನವನ್ನು ಲೆಕ್ಕಾಚಾರ ಮಾಡುತ್ತಿದ್ದರು. ಅವರ ಎಣಿಕೆ ತಪ್ಪಿದ್ದೇ ಇಲ್ಲ. ಗರ್ಭಿಣಿಯರ ಆತಂಕದ ಅರಿವಿದ್ದ ನರಸಮ್ಮ ತಮ್ಮ ಮನೆ ಕೆಲಸವನ್ನೆಲ್ಲ ಬೇಗ ಮುಗಿಸಿ ಕರ್ತವ್ಯದ ಕರೆಗೆ ಓಗೊಡುತ್ತಿದ್ದರು. ಬೆಂಗಳೂರಿನಂತಹ ನಗರ ಪ್ರದೇಶಗಳಿಗೆ ಹೆಣ್ಣು ಕೊಟ್ಟಿದ್ದ ಗ್ರಾಮೀಣರು ನರಸಮ್ಮ ಇದ್ದಾರೆ ಎಂಬ ಏಕೈಕ ಧೈರ್ಯದಿಂದ ಬಾಣಂತನಕ್ಕೆ ಕರೆದುಕೊಂಡು ಬರುತ್ತಿದ್ದರೆಂದರೆ ಇವರ ಪರಿಣತಿಯ ಬಗ್ಗೆ ಅರ್ಥವಾದೀತು.
ಗರ್ಭಿಣಿಯರಿಗೆ ಮೂರು ತಿಂಗಳಿಂದಲೇ ಎಲ್ಲ ಸೂಚನೆಗಳನ್ನು ತಿಳಿಸುತ್ತಿದ್ದ ನರಸಮ್ಮ ಏನು ತಿನ್ನಬೇಕು ಎನ್ನುವುದಕ್ಕಿಂತ ಏನು ತಿನ್ನಬಾರದೆಂಬ ವಿಷಯದ ಬಗ್ಗೆ ತುಂಬಾ ಸೂಕ್ಷ್ಮವಾಗಿ ಗಮನ ಕೊಡುತ್ತಿದ್ದರು.

ನರ್ಸ್ ವೃತ್ತಿ ನಿರಾಕರಣೆ:
ತಮ್ಮ ೨೨ನೇ ವಯಸ್ಸಿಗೆ ಈ ಪವಿತ್ರ ವೃತ್ತಿಗೆ ಅರ್ಪಿಸಿಕೊಂಡ ಇವರಿಗೆ ಪಾವಗಡ ಸರ್ಕಾರಿ ಆಸ್ಪತ್ರೆಯ ನರ್ಸ್ ವೃತ್ತಿಗೆ ಬಂದ ಆಹ್ವಾನವನ್ನು ನಯವಾಗಿಯೇ ನಿರಾಕರಿಸಿ ಸ್ವತಂತ್ರವಾಗಿ ತಮ್ಮ ಸೇವೆಯನ್ನು ಸಮಾಜಕ್ಕೆ ಮೀಸಲಿಟ್ಟರು.

ಕೈಗುಣ ದೊಡ್ಡದು:
ಇವರು ಮೊದಲು ಹೆರಿಗೆ ಮಾಡಿಸಿದ್ದು, ತಮ್ಮ ಪತಿಯ ಸೋದರ ಮಾವನ ಪತ್ನಿ ಕನುಮಕ್ಕನ ಎರಡನೇ ಮಗುವಿಗೆ. ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಕ್ಕೆ ಕನುಮಕ್ಕ ಕೃತಜ್ಞತೆಯಿಂದ ನರಸೂ ಈ ಹೆರಿಗೆ ಮೊದಲ ಹೆರಿಗೆಗಿಂತ ಸಲೀಸು ಎನ್ನಿಸಿತು. ನಿನ್ನ ಕೈಗುಣ ನಿಜಕ್ಕು ದೊಡ್ಡದು. ಈ ಕೆಲಸವನ್ನು ಮುಂದುವರೆಸು ಎಂದು ಸಲಹೆ ನೀಡಿದ್ದರಂತೆ. ಮುಂದೆ ತಿಪ್ಪಪ್ಪನ ಹೆಂಡತಿ ನರಸಮ್ಮ, ಸುಬ್ಬಪ್ಪನ ಹೆಂಡತಿ ಹನುಮಕ್ಕ, ಅಗಸರ ನಿಂಗಮ್ಮ, ಬೂದಿಬೆಟ್ಟ ಲಕ್ಷ್ಮಮ್ಮ, ದೊಡ್ಡಗಂಗಮ್ಮ, ತಲಾರಿ ಅರಿಯಮ್ಮ, ನೇಯ್ಗೆ ಪದ್ಮಕ್ಕ ಹೀಗಿ ಪ್ರಾರಂಭವಾದ ಕಾಯಕಯಾತ್ರೆಯ ಒಂದೊಂದು ಯಶಸ್ಸೂ ಅವರಿಗೆ ಒಳ್ಳೆಯ ಪ್ರಚಾರ ಒದಗಿಸಿತು.

ನರಸಮ್ಮ ಅವರ ಮೇಲೂ ಬುರ್ರಕಥೆ ಕಟ್ಟಿದ ಲಕ್ಷ್ಮಮ್ಮ:
ಆ ಕಾಲಕ್ಕೆ ದೃಶ್ಯ ಮಾಧ್ಯಮ ಇರಲಿಲ್ಲ. ಪತ್ರಿಕಾ ಮಾಧ್ಯಮ ಇದ್ದರೂ ತುಂಬಾ ಕಡಿಮೆ. ಆದರೆ ನರಸಮ್ಮ ಅವರಿಂದ ಹೆರಿಗೆ ಮಾಡಿಸಿಕೊಂಡಿದ್ದ ಬುರ್ರಕಥೆ ಲಕ್ಷ್ಮಮ್ಮ ಹತ್ತಾರು ಹಳ್ಳಿಗಳಲ್ಲಿ ವಾದ್ಯ ನುಡಿಸಿಕೊಂಡು ನರಸಮ್ಮ ಅವರ ಮೇಲೆ ಬುರ್ರ ಕಥೆ ಹೇಳಿದ್ದರಿಂದ ಬೇರೆ ಊರಿಗೂ ಎತ್ತಿನ ಗಾಡಿಯಲ್ಲಿ ಹೋಗಿ ಹೆರಿಗೆ ಮಾಡಿ ಬರುವಷ್ಟು ಪ್ರಸಿದ್ಧಿಯಾದರು. ಹೀಗೆ ನರಸಮ್ಮ ಅವರ ಹೆಸರು ಬಾಯಿಂದ ಬಾಯಿಗೆ ಪರಿಚಯವಾಗಿ ಹಳ್ಳಿಯಿಂದ ಹಳ್ಳಿಗೆ ಆಂಧ್ರ ಮತ್ತು ಕರ್ನಾಟಕ ಎರಡೂ ರಾಜ್ಯಗಳಲ್ಲಿ ಪ್ರಚಲಿತವಾಗುತ್ತಾ ಹೋಯಿತು.

ಹದಿನೈದು ಸಾವಿರ ಹೆರಿಗೆ:
ತಮ್ಮ ೧೨ನೇ ವಯಸ್ಸಿಗೆ ಕೃಷ್ಣಾಪುರದ ಅಂಜಿನಪ್ಪ ಅವರೊಂದಿಗೆ ವಿವಾಹವಾದ ಇವರಿಗೆ ೧೨ ಮಂದಿ ಮಕ್ಕಳು. ೩೬ ಮಂದಿ ಮೊಮ್ಮಕ್ಕಳು. ಏಳು ದಶಕಗಳ ಕಾಲ ನಿರಂತರ ಹೆರಿಗೆ ಕಾಯಕದಲ್ಲಿ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದು, ಒಂದೂ ವಿಫಲವಾಗಿಲ್ಲ. ತಮ್ಮ ಮಕ್ಕಳು, ಮೊಮ್ಮಕ್ಕಳು, ಸೊಸೆಯರ ಹೆರಿಗೆ ಕೂಡಾ ಇವರೇ ಮಾಡಿಸಿದ್ದು, ಗರ್ಭಿಣಿಯರ ದೈಹಿಕ ಲಕ್ಷಣ ನೋಡಿಯೇ ಗಂಡು ಅಥವಾ ಹೆಣ್ಣು ಮಗು ಎಂದು ಹೇಳುತ್ತಿದ್ದರು. ಮಗುವಿನ ಜನನವಾದ ನಂತರ ಕಸ ಬೀಳದಿದ್ದರೆ ಯಾವುದೇ ಔಷಧಿ ಬಳಸದೆಯೇ ಕಸ ಬೀಳುವಂತೆ ಮಾಡುತ್ತಿದ್ದರು.

ಸದಾ ನೆನಪಿನಲ್ಲಿ ಉಳಿದ ಹೆರಿಗೆ:
ಆಂಧ್ರದಿಂದ ವಲಸೆ ಬಂದಿದ್ದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅಲೆಮಾರಿ ಜನಾಂಗದ ಬುಡಬುಡಿಕೆ ಚಂದ್ರಪ್ಪನ ಪತ್ನಿ ಮಾರಕ್ಕನಿಗೆ ಮಾಡಿಸಿದ ಹೆರಿಗೆ ನರಸಮ್ಮ ಅವರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿತ್ತು. ಮಗು ಹೊಟ್ಟೆಯಲ್ಲೇ ಸತ್ತಿರಬಹುದು. ಅದಕ್ಕೇ ಹೆರಿಗೆ ಕಷ್ಟವಾಗ್ತಾ ಇದೆ ಎಂದು ಹೆರಿಗೆ ಮಾಡಿಸಲು ಬಂದಿದ್ದ ಐದಾರು ಮಹಿಳೆಯರು ಚಂದ್ರಪ್ಪನಿಗೆ ಹೇಳಿದ್ದರು. ದೊಡ್ಡಜೀವ ಒಂದನ್ನು ಉಳಿಸಕ್ಕ ಸಾಕು ಎಂದು ಚಂದ್ರಪ್ಪ ಸರಿರಾತ್ರಿಯಲ್ಲಿ ನರಸಮ್ಮನ ಮನೆಯ ಬಾಗಿಲನ್ನು ತಟ್ಟಿದ್ದನ್ನು ಅವರಿಗೆ ಎಂದೂ ಮರೆಯಲಾಗಲಿಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ನರಸಮ್ಮ ತನ್ನ ಪತಿ ಅಂಜಿನಪ್ಪ ಅವರೊಂದಿಗೆ ಕಂದೀಲು ಹಿಡಿದು ಹೊರಟೇ ಬಿಟ್ಟರು. ನಡುರಾತ್ರಿಯಲ್ಲಿ ಚಂದ್ರಪ್ಪನ ಗುಡಾರ ತಲುಪಿದ ನರಸಮ್ಮ ಸ್ವಲ್ಪ ಸಮಯ ತೆಗೆದುಕೊಂಡು ಮಾರಕ್ಕನಿಗೆ ಹೆರಿಗೆ ಮಾಡಿಸಿದರು. ಹೆರಿಗೆಯಾಗಿ ಎಲ್ಲ ಸರಿ ಹೋಗಲು ಕೋಳಿ ಕೂಗುವ ಹೊತ್ತಾಯಿತು. ಭಯ ಪಡಬೇಡಿ ತಾಯಿ-ಮಗು ಚೆನ್ನಾಗಿದ್ದಾರೆ ಎಂದು ಹೇಳಿ ಹಿಂದಿರುಗಿದ ನೆನಪು ಅಚ್ಚಳಿಯದೆ ಉಳಿದಿತ್ತು.

ನಿಸ್ವಾರ್ಥ ಸೇವೆಯನ್ನು ಗುರುತಿಸಿ ನರಸಮ್ಮ ಅವರಿಗೆ ೨೦೧೩ರಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ೨.೫೦ಲಕ್ಷ ರೂ. ನಗದು ಹಾಗು ವಯೋಶ್ರೇಷ್ಠ ಸಮ್ಮಾನ್ ಪ್ರಶಸ್ತಿ, ೨೦೧೮ರಲ್ಲಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ದೇವರಾಜ ಅರಸು ಪ್ರಶಸ್ತಿ, ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಪಾರಂಪರಿಕ ರಾಷ್ಟ್ರೀಯ ವೈದ್ಯ ಪರಿಷತ್ತಿನಿಂದ ವೈದ್ಯರತ್ನ ಪ್ರಶಸ್ತಿ, ಝಾನ್ಸಿರಾಣಿ ಪ್ರಶಸ್ತಿ, ಅಬ್ಬಕ್ಕ, ಗಡಿನಾಡು ರತ್ನ, ಮದರ್ ಥೆರೇಸಾ, ಮಹಾತ್ಮಗಾಂಧಿ, ರೈತ ರತ್ನ, ಕಾಯಕರತ್ನ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು