News Karnataka Kannada
Saturday, May 04 2024
ವಿಶೇಷ

ಕ್ಷಣಿಕ ಸುಖಕ್ಕೆ ಬಲಿಯಾಗುವ ಮುನ್ನ ಯೋಚಿಸಿ

Think before falling prey to fleeting pleasures
Photo Credit : Freepik

ಮೋಸ, ವಂಚನೆ, ಅನ್ಯಾಯ, ದೌರ್ಜನ್ಯ ಅತ್ಯಾಚಾರದ ಸುದ್ದಿಗಳನ್ನು ನೋಡಿದಾಗ ಮನುಷ್ಯನಿಗೇನಾಗಿದೆ ಎಂಬ ಪ್ರಶ್ನೆ ಮೂಡದಿರದು. ಮನುಷ್ಯ ಕ್ಷಣಿಕ ಸುಖದ ಬೆನ್ನತ್ತಿ ಹೋಗುತ್ತಿರುವುದರಿಂದಲೇ ಇಂತಹ ವಾತಾವರಣ ನಿರ್ಮಾಣವಾಗಿದೆ ಎಂದರೆ ತಪ್ಪಾಗಲಾರದು.

ಸ್ವಾಮಿ ಶಿವಾನಂದರು ಹೇಳಿದ ಈ ರೂಪ ಕಥೆ ಓದಿದರೆ ಕ್ಷಣಿಕ ಸುಖಕ್ಕೆ ಬಲಿಯಾದರೆ ಏನಾಗುತ್ತದೆ ಎಂಬುದು ಗೊತ್ತಾಗುತ್ತದೆ. ನದಿಯೊಂದರ ತಟ ಮೇಲೆ ಸೇರಿದ ಅಗ್ನಿ ಮತ್ತು ಜಲ ತಮ್ಮಲ್ಲಿ ಯಾರು ಬಲಿಷ್ಠರು ಎಂಬುದರ ಬಗ್ಗೆ ಚರ್ಚಿಸತೊಡಗಿದರು. ಇಬ್ಬರೂ ತಮ್ಮ ತಮ್ಮ ಶಕ್ತಿಗಳನ್ನು ಹೇಳಿಕೊಳ್ಳತೊಡಗಿದರು. ಜಲವು ತಾನು ಎಷ್ಟು ಬಲಿಷ್ಠನೆಂದರೆ ಅಗಾಧ ಜ್ವಾಲೆಗಳನ್ನು ಕ್ಷಣಾರ್ಧದಲ್ಲಿ ಆರಿಸಿ ಬಿಡುವ ಶಕ್ತಿ ನನಗಿದೆ. ಸಣ್ಣ ಪಾತ್ರೆಗಳಲ್ಲಿ ಸಿಕ್ಕಾಗ ಮಾತ್ರ ನಿನಗೆ ಸೋಲುವೆನಾದರೂ ಉಳಿದಂತೆ ನನಗೆ ನೀನು ಯಾವ ರೀತಿಯಿಂದಲೂ ಸಮಾನನಲ್ಲ ಎಂದಿತು. ಅದು ಅಗ್ನಿಗೆ ನಿಜ ಎಂಬಂತೆ ತೋರಿತು. ಹೇಗಾದರು ಮಾಡಿ ಉಪಾಯದಿಂದ ಜಲವನ್ನು ಸೋಲಿಸುವ ಬಗೆಗೆ ಆಲೋಚಿಸಿತು.

ನೇರವಾಗಿ ಜಲದೊಂದಿಗೆ ಸೆಣಸಿ ಗೆಲ್ಲುವಂತೆಯೂ ಇರಲಿಲ್ಲ. ಹಾಗಾಗಿ ಜಲವನ್ನು ಉಪಾಯದಿಂದ ಸೋಲಿಸುವ ಪ್ರಯತ್ನವನ್ನು ಅಗ್ನಿಯು ಮಾಡಿತು. ಜಲವೇ ಲೋಕ ಕಲ್ಯಾಣದಲ್ಲಿ ತೊಡಗಿರುವ ನೀನು ಲೋಕದ ಪಾಪವನ್ನೆಲ್ಲಾ ತೊಳೆದು ಪವಿತ್ರಗೊಳಿಸುವ ಕಾಯಕದಲ್ಲಿ ನಿರತರಾಗಿರುವೆ. ಈ ಭರದಲ್ಲಿ ನಿನ್ನ ಮೈಯೆಲ್ಲಾ ಕೊಳೆ ತುಂಬಿದೆ. ನಿನ್ನ ಮೈಯ್ಯಲ್ಲಿರುವ ಕೊಳೆ ತೊಳೆದು ಪರಿಶುದ್ಧವಾಗುವುದಾದರು ಬೇಡವೆ? ಈ ಸುಂದರವಾದ ಚಿನ್ನದ ಬಿಂದಿಗೆಯಲ್ಲಿ ಇಳಿ ಇದರಿಂದ ನೀನು ಶುದ್ಧವಾಗಿ ಬಿಡುವೆ ಎಂದಿತು. ಅಗ್ನಿ ಹೇಳುವುದು ನಿಜವೇ ಎಂದರಿತ ಜಲವು ಬಿಂದಿಗೆಯೊಳಗೆ ಇಳಿಯಿತು. ಇದೇ ಸಂದರ್ಭ ಕಾಯುತ್ತಿದ್ದ ಅಗ್ನಿಯು ತನ್ನ ಶಕ್ತಿಯನ್ನು ಬಳಸಿ ಬಿಂದಿಗೆಗೆ ಶಾಖ ನೀಡತೊಡಗಿತು. ಬಿಂದಿಗೆ ಶಾಖದಿಂದ ಬಿಸಿಯಾಗತೊಡಗಿತು. ಮೊದಮೊದಲು ಬಿಂದಿಗೆಯ ಒಳಗಿದ್ದ ಜಲಕ್ಕೆ ಹೊರಗಿನ ಬೆಚ್ಚಗೆ ಹಿತವಾಗತೊಡಗಿ ಸುಖದ ನಿಟ್ಟುಸಿರು ಬಿಡತೊಡಗಿತು. ಆದರೆ ಹೆಚ್ಚು ಹೊತ್ತು ಆ ಸುಖ ನಿಲ್ಲಲಿಲ್ಲ. ಶಾಖ ಹೆಚ್ಚಾಗತೊಡಗಿದಂತೆ ಜಲವು ಕುದಿಯತೊಡಗಿತು. ಈಗ ಜಲಕ್ಕೆ ಅಗ್ನಿಯ ಬಣ್ಣದ ಮಾತಿಗೆ ಸೋತು ಎಂತಹ ತೊಂದರೆಗೆ ಸಿಲುಕಿದೆ ಎಂಬುದು ಅರಿವಾಗತೊಡಗಿತು. ಆ ಬಗ್ಗೆಯೇ ಚಿಂತಿಸತೊಡಗಿತು.

ಈ ಕಥೆಯ ಪೂರ್ಣ ಮರ್ಮವನ್ನು ಕೂಡ ಅವರು ಹೀಗೆಯೇ ವಿವರಿಸಿದ್ದಾರೆ. ಅದೇನೆಂದರೆ ಮನುಷ್ಯನ ಇಚ್ಛೆಗಳು ಸಹ ಜಲದಂತೆ ಪರಿಶುದ್ಧವಾಗಿರಬೇಕು. ಅಷ್ಟೇ ಅಲ್ಲ ಗ್ರಾಹಕ ಶಕ್ತಿಯೂ ಪರ್ಯಾಲೋಚನೆಗೊಳಪಟ್ಟಿರಬೇಕು. ನಮ್ಮ ಕಾರ್ಯತತ್ಪರತೆಯೂ ಮೋಕ್ಷತ್ವವೂ ಮತ್ತು ಪ್ರೇಮವು ಆತ್ಮೋನ್ನತಿಗಾಗಿ ಸದಾ ಮೀಸಲಾಗಿರಬೇಕು. ಹರಿದು ತನ್ನ ಪಾಡಿಗೆ ಹೋಗುವ ಜಲ ಹೇಗೆ ಶುದ್ಧವಾಗಿರುತ್ತದೆಯೋ ಅಷ್ಟೇ ಅಲ್ಲ ಸುತ್ತಲಿನ ಪರಿಸರವನ್ನು ಹೇಗೆ ಪರಿಶುದ್ಧವಾಗಿರಿಸುತ್ತದೆಯೋ ಹಾಗೆ ನಾವು ನಮ್ಮ ಇಚ್ಚೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ನಮ್ಮ ಮುಮುಕ್ಷತ್ವವನ್ನೂ ನಮ್ಮ ವಿಚಾರ ಶಕ್ತಿಯನ್ನು ಪರಿಜ್ಞಾನಪೂರ್ವಕ ಜಾಣ್ಮೆಯನ್ನೂ ನಮ್ಮೊಳಗೆ ಭದ್ರಗೊಳಿಸಿ ಇಂದ್ರಿಯಗಳನ್ನು ನಿಗ್ರಹಿಸುವ ಮೂಲಕ ಪರಿಶುದ್ಧವಾದ ಸಂತುಷ್ಟ ಬದುಕನ್ನು(ಕಟ್ಟಿಕೊಳ್ಳಬೇಕು) ಕಟ್ಟಿಕೊಂಡಿರುತ್ತೇವೆ ಎಂದಾದಲ್ಲಿ ನಮ್ಮ ಶಕ್ತಿಯನ್ನು ಪ್ರದರ್ಶಿಸಿ ಗೆಲುವು ನಿರೀಕ್ಷಿಸುವುದು ನಮ್ಮನ್ನೇ ನಾವು ನಾಶಮಾಡಿಕೊಂಡಂತೆ. ಏಕೆಂದರೆ ನಮ್ಮಲ್ಲಿ ಅಡಗಿರುವ ಶಕ್ತಿ ನಮ್ಮ ಒಳಿತಿಗಾಗಿಯೇ ಇರುವಾಗ ಅದನ್ನು ಪ್ರದರ್ಶಿಸುವ ಅಗತ್ಯವೇ ಇಲ್ಲ. ಹಾಗೊಂದು ವೇಳೆ ಈ ಬಗ್ಗೆ ಪ್ರಯತ್ನ ಮಾಡಿದ್ದೇ ಆದರೆ ಕಾಮವೆಂಬ ಅಗ್ನಿ ನಮ್ಮನ್ನು ಮೋಸಗೊಳಿಸಲು ಸಿದ್ಧವಾಗುತ್ತದೆ.

ಮೊದಮೊದಲು ನಮಗೆ ದೊರೆಯುವ ಸುಖಗಳು ಅದು ಶಾರೀರಿಕ ಅಥವಾ ಬಾಹ್ಯವೇ ಆಗಿರಲಿ ನಮಗೆ ಎಲ್ಲಿಲ್ಲದ ಸುಖವನ್ನು ನೀಡುತ್ತದೆ. ಇದು ಬಿಂದಿಗೆಯೊಳಗಿನ ಜಲದ ಪಾಡಿನಂತೆ ಹಿತವೆನಿಸುತ್ತದೆ. ಆದರೆ ಕಾಮವೆಂಬ ಅಗ್ನಿಯ ಶಾಖ ಹೆಚ್ಚಾಗಿ ಕುದಿಯತೊಡಗಿದಾಗ ನಮ್ಮ ನಾಶ ಬಹಳ ಸಮೀಪದಲ್ಲಿದೆ ಎಂಬುದು ಅರಿವಾಗುತ್ತದೆ. ಆಗ ನಾವು ಮಾಡಿದ ತಪ್ಪುಗಳು ಕಣ್ಮುಂದೆ ಬರುತ್ತವೆ. ಚಿಂತೆಗಳು ನಮ್ಮನ್ನು ಜೀವಂತವಾಗಿ ಸುಡಲು ಆರಂಭಿಸುತ್ತದೆ.

ಹಾಗೆನೋಡಿದರೆ ಸಣ್ಣಪುಟ್ಟ ಶಾರೀರಿಕ ಸುಖಗಳಿಂದ ಮನತಣಿಸಿಕೊಳ್ಳಲು ಸ್ಪರ್ಶ ಸುಖವು ಸದಾ ಕಾತರಗೊಂಡಿರುತ್ತದೆ. ಇಲ್ಲಿ ಕಾಮವನ್ನು ಅಗ್ನಿಗೆ ಸ್ಪರ್ಶ, ದೇಹವನ್ನು ಜಲಕ್ಕೆ ಹೋಲಿಸಬಹುದು. ನಮ್ಮ ಆತ್ಮೋನ್ನತಿಗಾಗಿ ಬೇಕಾದ ಪ್ರೇಮ ಮತ್ತು ಬಯಕೆಗಳನ್ನು ಪಡೆಯಲು ನಮ್ಮಲ್ಲಿರುವ ಉನ್ನತ ಶಕ್ತಿಯನ್ನು ಉಪಯೋಗಿಸುವ ಮೂಲಕ ದುಷ್ಟವಾಸನೆಗಳೆಂಬ ಕೀಳು ಸ್ವಭಾವದ ಕಾಮವೆಂಬ ಅಗ್ನಿಗೆ ಬಲಿಯಾಗದೆ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಾಗಿದೆ. ಅದು ಅಗತ್ಯವೂ ಹೌದು!

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು