News Karnataka Kannada
Sunday, April 28 2024
ವಿಶೇಷ

ಯುವ ಜನತೆ ಅರಿಯದ ಭಾರತ ದೇಶಕ್ಕಾದ ಆ ಕರಾಳ ಛಾಯೆ

That dark shadow of India, which the young people do not know
Photo Credit : Facebook

ಈ ದೇಶದಲ್ಲಿ ಪ್ರಜಾಪ್ರಭುತ್ವದಲ್ಲಿ ಅದೊಂದು ಕರಾಳ ಅಧ್ಯಾಯ ಎಂದು ಕರೆಯುತ್ತೇವೆ. ಅವತ್ತು ಮಾಧ್ಯಮಗಳನ್ನು ಅಕ್ಷರಶಃ ಸಂವೇದಕ ಮಾಡಿದರು, ಮುದ್ರಣಾಲಯಗಳನ್ನು ಮುಚ್ಚಿ ಹಾಕಿದ್ದರು, 11 ಲಕ್ಷ ಜನರನ್ನು ಜೈಲಿಗೆ ಹಟ್ಟಿದ್ದರು, ಸಂಸತ್ತಿನಲ್ಲಿ ಪ್ರಶ್ನೋತ್ತರ ಅವಧಿಯನ್ನು ಕಿತ್ತುಹಾಕಿದ್ದರು ಹಾಗೂ ಸರ್ವೋಚ್ಚ ನ್ಯಾಯಾಲಯದ ಅಧಿಕಾರವನ್ನು ಕಿತ್ತುಕೊಂಡಿದ್ದರು. ಇವತ್ತು ನಾವೆಲ್ಲ ಜೋರಾಗಿ ಹೋರಾಟ ಮಾಡುತ್ತೇವೆ, ಚೀನ್ ಕರ್ ಆಜಾದಿ ಲೇಂಗೆ (ಸ್ವತಂತ್ರವನ್ನು ಕಿತ್ತುಕೊಳ್ಳುತ್ತೇವೆ) ಎಂದು ಘೋಷಣೆ ಕೂಗುತ್ತೇವೆ. ಆದರೆ ಅಕ್ಷರಶಹ ಈ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕನ್ನು ಅಧಿಕಾರವನ್ನು ಹಾಗೂ ಸ್ವತಂತ್ರವನ್ನು ಕಿತ್ತುಕೊಂಡಿದ್ದರು. ಈ ದೇಶದಲ್ಲಿ ಪ್ರಜಾಪ್ರಭುತ್ವದ ಕರಾಳ ಛಾಯೆ ತುರ್ತು ಪರಿಸ್ಥಿತಿ ಜಾರಿಗೆ ಬಂದಿತು.

1975ರಲ್ಲಿ ಈ ದೇಶದಲ್ಲಿ ಶ್ರೀಮತಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿದರು, 2025ಕ್ಕೆ 50 ವರ್ಷವಾಗುತ್ತದೆ. ಬಹುತೇಕ ಈಗಿನ ಯುವ ಪೀಳಿಗೆಯವರಿಗೆ ತುರ್ತು ಪರಿಸ್ಥಿತಿ ವಿಷಯದ ಕುರಿತು ಅರಿವಿಲ್ಲ. ಇವತ್ತಿನ ಹೋರಾಟಗಾರರು ಅವತ್ತಿನ ದಿನಗಳನ್ನು ನೆನಪು ಮಾಡಿಕೊಳ್ಳೋದು ಕಡಿಮೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂತಹ ಪರಿಸ್ಥಿತಿ ಬರಬಾರದು ಪ್ರಜಾಪ್ರಭುತ್ವ ಗಟ್ಟಿಯಾಗಿ ಇರಬೇಕಾದರೆ ಈ ದೇಶದ ಪ್ರತಿಯೊಬ್ಬ ಯುವಕ, ಚಿಂತಕ, ಕಾರ್ಮಿಕ, ರೈತ ವಿದ್ಯಾರ್ಥಿ ಹಾಗೂ ದಲಿತ ತುರ್ತು ಪರಿಸ್ಥಿತಿಯ ಬಗ್ಗೆ ಆಲೋಚನೆ ಮಾಡುವಂಥದ್ದ ಅನಿವಾರ್ಯ ಹಾಗೂ ಬಹಳ ಅವಶ್ಯಕವಾಗಿದೆ ಎಂದು ಭಾವಿಸುತ್ತೇನೆ.

ತುರ್ತು ಪರಿಸ್ಥಿತಿ ಘೋಷಣೆ ಏಕೆ ಮತ್ತು ಅವಶ್ಯಕತೆ :1971ರ ಚುನಾವಣೆಯಲ್ಲಿ ಶ್ರೀಮತಿ ಇಂದಿರಾಗಾಂಧಿಯವರು ವಿರುದ್ಧ ಅಭ್ಯರ್ಥಿ ರಾಜ್ ನಾರಾಯಣ ಅವರನ್ನು ಸೋಲಿಸಿ ಅಧಿಕಾರವನ್ನು ಹಿಡಿಯುತ್ತಾರೆ. ಆದರೆ ವಾತಾವರಣ ಹಾಗಿರಲಿಲ್ಲ, ನಾನು ಗೆಲ್ಲಬಹುದಾಗಿತ್ತು ಏಕೆ ಸೋತೆ ಎಂದು ಅರಿತು ರಾಜ್ ನಾರಾಯಣ ಅವರು ಅಲಹಾಬಾದಿನ ಹೈಕೋರ್ಟಿನಲ್ಲಿ ಇಂದಿರಾ ಗಾಂಧಿ ಅವರ ವಿರುದ್ಧ ಆರು ಆರೋಪಗಳ ಮನವಿಯನ್ನು ಸಲ್ಲಿಸುತ್ತಾರೆ. ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸಿ ಜೂನ್ 12, 1975 ರಂದು “ಆರೋಪಗಳು ಸಾಬೀತಾಗಿದೆ ಶ್ರೀಮತಿ ಇಂದಿರಾಗಾಂಧಿಯವರು ಚುನಾವಣೆಯಲ್ಲಿ ಗೆದ್ದಿರುವುದು ಅಸಿಂಧು ಕೂಡಲೆ ರಾಜೀನಾಮೆ ನೀಡಬೇಕು” ಎಂದು ಆದೇಶಿಸಿತು. ಹೈಕೋರ್ಟ್ ನೀಡಿರುವ ಆದೇಶದ ಮೇಲೆ ಇಂದಿರಾ ಗಾಂಧಿಯವರು ಭಾರತದ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುತ್ತಾರೆ. ವಿಚಾರಣೆಗೆ ಕೈಗೆತ್ತಿಕೊಂಡ ಉಚ್ಚ ನ್ಯಾಯಾಲಯ ಅಲಹಾಬಾದ್ ಹೈಕೋರ್ಟ್ ನೀಡಿರುವ ಆದೇಶಕ್ಕೆ ಪೂರ್ಣವಾಗಿ ತಡೆಯಾಗಲಿ ನೀಡಲು ಅಸಾಧ್ಯ, ಭಾಗಶಹ ತಡೆಯಾಗ್ನೆಯನ್ನು ಕೊಡಬಹುದು ಅದು ಏನೆಂದರೆ ” ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಮುಗಿಯುವವರೆಗೆ ಇಂದಿರಾ ಗಾಂಧಿಯವರು ಪ್ರಧಾನಮಂತ್ರಿಯಾಗಿ ಮುಂದುವರೆಯಬಹುದು. ಆದರೆ ಸಂಸತ್ತಿನ ಕಲಾಪದಲ್ಲಿ ಹಾಗೂ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ” ಎಂದು ಆದೇಶಿಸಿತು.

ಇದರ ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆ ಕೊಡಬೇಕು ಎನ್ನುವಂತ ಹೋರಾಟ ಬಹಳ ದೊಡ್ಡ ಮಟ್ಟದಲ್ಲಿ ಅಂದು ನಡೆಯುತ್ತದೆ. ಜೂನ್ 24, 25 ನೇ ತಾರೀಖು ದೆಹಲಿಯಲ್ಲಿ ಜಯಪ್ರಕಾಶ್ ನಾರಾಯಣ ಅವರ ನೇತೃತ್ವದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ಕೈಗೆತ್ತಿಕೊಳ್ಳುತ್ತಾರೆ. ಅವತ್ತೇ 5 ಲಕ್ಷ ಜನ ಸೇರಿದ್ದರು. ‘ಕುರ್ಚಿ ಖಾಲಿ ಕರೋ ಜನತಾ ಆತಿ ಹೇ’ ಎಂಬುದು ಜಯಪ್ರಕಾಶ್ ನಾರಾಯಣ್ ಅವರ ಪ್ರಸಿದ್ಧ ಘೋಷವಾಕ್ಯವಾಗಿತ್ತು. ಶ್ರೀಮತಿ ಇಂದಿರಾ ಗಾಂಧಿಯವರು ಸರ್ವೋಚ್ಚ ನ್ಯಾಯಾಲಯವು ಸಂಪೂರ್ಣವಾದ ತಡೆ ಆಜ್ಞೆಯನ್ನು ಕೊಡದೆ ಇದ್ದರೂ ಕೂಡ ನೈತಿಕವಾಗಿ ನೀವು ಚುನಾವಣೆಯನ್ನು ಗೆದ್ದಿರುವುದು ಅಸಿಂಧು ಅಂತ ಹೇಳಿ ಅಲಹಾಬಾದ್ ಹೈಕೋರ್ಟ್ ಹೇಳಿದರೂ ಕೂಡ ಇಂದಿರಾ ಗಾಂಧಿಯವರು ರಾಜೀನಾಮೆ ಕೊಡಲು ಬದಲಾಗಿ ಈ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸುತ್ತಾರೆ.

ತುರ್ತು ಪರಿಸ್ಥಿತಿ ಜಾರಿಗೆ ಬಂದದ್ದು ಜೂನ್ 25, 1975. ಆ ದಿನ ರಾತ್ರಿ 11:00ಗೆ ಅವತ್ತಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರ ಮನೆಗೆ ಇಂದಿರಾ ಗಾಂಧಿಯವರು ಭೇಟಿ ಮಾಡುತ್ತಾರೆ. ತುರ್ತು ಪರಿಸ್ಥಿತಿಯನ್ನು ಹೇರುತ್ತಾ ಇದ್ದೇನೆ ಪತ್ರವನ್ನು ಕಳುಹಿಸುವೆ ಅಂಕಿತ ಹಾಕಿ ಎಂದು ಹೇಳುತ್ತಾರೆ. ರಾಷ್ಟ್ರಪತಿಯವರಿಗೆ ಪ್ರಶ್ನೆ ಮಾಡುವ, ತಿರಸ್ಕಾರ ಮಾಡುವ, ಅಂಕಿತ ಹಾಕಲು ತಡೆಹಿಡುವ ಹಾಗೂ ಸಂಪೂರ್ಣ ಮಾಹಿತಿ ಕೇಳುವ ಅಧಿಕಾರ ಸಂವಿಧಾನ ಹಾಗೂ ಕಾನೂನು ನೀಡಿತ್ತು. ಆದರೆ ಪ್ರಶ್ನಿಸದೆ ಸಹಿ ಹಾಕಿ ಅಂಗೀಕರಿಸಲಾಯಿತು. ಈ ಕಡೆ ಸಹಿ ಹಾಕಿಸಿಕೊಳ್ಳುವ ಪ್ರಕ್ರಿಯೆ ನಡೆದಿರುತ್ತದೆ, ಮತ್ತೊಂದೆಡೆ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ಜಯಪ್ರಕಾಶ್ ನಾರಾಯಣ ಅವರನ್ನು ದಸ್ತಗಿರಿ ಮಾಡಲಾಗುತ್ತದೆ. ಈ ವಿಷಯ ಕೇಳಿ ಚಂದ್ರಶೇಖರ್ ಅವರು ಪೊಲೀಸ್ ಠಾಣೆಗೆ ಬಂದಾಗ ಅವರನ್ನು ಸಹ ಕೂಡಲೇ ಬಂಧಸಲಾಗುತ್ತದೆ. ಅವರ ಜೊತೆಗೆ ಮೊರಾಜಿ ದೇಸಾಯಿ ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ, ಜೆ ಬಿ ಕೃಪಲಾನಿ ಮುಂತಾದ ನಾಯಕರನ್ನು ಬಂಧಿಸಲಾಗುತ್ತದೆ.

ದೆಹಲಿಯಲ್ಲಿದ್ದ ಮುದ್ರಣಾಲಯಗಳಿಗೆ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುತ್ತಾರೆ. ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಈ ವಿಷಯವನ್ನು ರಾಷ್ಟ್ರದ ಜನತೆಗೆ ತಿಳಿಸಲು ಆಪ್ತ ಕಾರ್ಯದರ್ಶಿಗೆ ಸರಳವಾದ ಕಡತವನ್ನು ತಯಾರಿಸಲು ಸೂಚಿಸಿ, ಅಂದಿನ ಕ್ಯಾಬಿನೆಟ್ ಸಚಿವರಿಗೆ ನಾಳೆ ಬೆಳಗ್ಗೆ 6 ಗಂಟೆಗೆ ಕ್ಯಾಬಿನೆಟ್ ಸಭೆಯಲ್ಲಿ ಭಾಗಿಯಾಗಬೇಕೆಂದು ತಿಳಿಸಿದರು. ಸುಮಾರು ಎಂಟು ಸಚಿವರು ಹಾಗೂ ಕ್ಯಾಬಿನೆಟ್ ಸಚಿವರು ಸಭೆಗೆ ಆಗಮಿಸಿದಾಗ ಕೆಲ ಸಚಿವರು ರಾಜೀನಾಮೆ ನೀಡಬಹುದು ಎಂದು ತಿಳಿದಿದ್ದರು. ಆದರೆ ಅಲ್ಲಿ ಇಂದಿರಾ ಗಾಂಧಿಯವರು ‘Gentleman emergency has been declared and arrested J P Narayan, Morarji Desai, A B Vajpayee, L K Advani and others’ ಎಂದು ಹೇಳಿದರು.

ಇಂದಿರಾ ಗಾಂಧಿಯವರು ಆಕಾಶವಾಣಿ ರೇಡಿಯೋ ಕೇಂದ್ರಕ್ಕೆ ತೆರಳುತ್ತಾರೆ. ಜನರು ಎಲ್ಲರೂ 8:00ಗೆ ರೇಡಿಯೋ ಕಾರ್ಯಕ್ರಮವನ್ನು ಕೇಳಬೇಕು ಎಂದು ಕೂತಾಗ ದಿಡೀರನೆ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಧ್ವನಿ ಕೇಳಿ ಬರುತ್ತದೆ – ‘ಬೆಹೆನೋ ಆರ್ ಭಾಹಿಯೋ ರಾಷ್ಟ್ರಪತಿಜೀನೇ ಆಪತ್ಕಾಲ್ ಘೋಷಣಾ ಕೀ ಹೈ, ಇಸೆ ಆತಂಕಿತ್ ಹೋನೆ ಕಾ ಕಾರಣ್ ನಹೀ ಹೈ’ ಎಂದು ಹೇಳುತ್ತಾರೆ. ಅನಂತರದಲ್ಲಿ ಈ ದೇಶದಲ್ಲಿ 10 ಲಕ್ಷಕ್ಕಿಂತ ಜನರಂತು ಬಂಧಿಸಿದ್ದರು, ಪತ್ರಿಕೆಗಳು ಸಂವೇದಕಕ್ಕೆ ಒಳಗಾದವು, ಸಂಸತ್ತಿನ ಅಧಿಕಾರ ಪ್ರಶ್ನೋತ್ತರ ಅವಧಿಯನ್ನು ಅಮಾನತು ಮಾಡಿದರು ಹಾಗೂ ನ್ಯಾಯಾಂಗದ ಅಧಿಕಾರವನ್ನು ಕಿತ್ತುಕೊಂಡರು.

ಸಂವಿಧಾನದ 38, 39 ಹಾಗೂ 40ನೇ ತಿದ್ದುಪಡಿ :ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದರು, ಅವರ ವಿರೋಧಿಗಳು ಬಂದಿತರಾದರು, ಪತ್ರಿಕೆಯನ್ನು ಸಂವೇದಕ ಮಾಡಿದರು, ಅನಂತರದಲ್ಲಿ ಸದನದಲ್ಲಿ ಪ್ರಶ್ನೆಸಬಾರದು ಎಂದು ಪ್ರಶ್ನೋತ್ತರ ಅವಧಿಯನ್ನು ರದ್ದುಗೊಳಿಸಿದರು. ಆದರೆ ಇಂದಿರಾಗಾಂಧಿಯವರಿಗೆ ಒಂದು ತೂಗುಗತ್ತಿ ಇತ್ತು ಅದು ಸುಪ್ರೀಂ ಕೋರ್ಟಿನಲ್ಲಿ ಮನವಿ ಮಾಡಿರುವ ತಡೆ ಆಜ್ಞೆ ಅರ್ಜಿ ಎಲ್ಲಿ ವಜಾ ಆಗಿಬಿಡುತ್ತದೆ ಎಂದು ಇದ್ದ ಆತಂಕವನ್ನು ದೂರ ಮಾಡಿಕೊಳ್ಳಲು ಸಂವಿಧಾನದ 38 ಹಾಗು 39 ತಿದ್ದುಪಡಿಯನ್ನು ಜಾರಿಗೆ ತಂದರು.

ಈ ದೇಶದಲ್ಲಿ ಇವತ್ತಿನವರೆಗೆ ಸಂವಿಧಾನದ 105ಕ್ಕಿಂತ ಹೆಚ್ಚು ತಿದ್ದುಪಡಿಗಳು ಆಗಿದ್ದಾವೆ. ಸಂವಿಧಾನದ 368ನೇ ವಿಧಿಯು ಯಾವ ಕಾರಣಕ್ಕೆ ತಿದ್ದುಪಡಿ ಮಾಡಬೇಕು ಎಂದು ಸಂಪೂರ್ಣವಾಗಿ, ವಿವರವಾಗಿ ಹೇಳುತ್ತದೆ. ಇಡೀ ಜಗತ್ತಿನ ಸಂವಿಧಾನದಲ್ಲಿ ತಿದ್ದುಪಡಿಯಾಗುತ್ತದೆ, ಆದರೆ ಒಬ್ಬ ವ್ಯಕ್ತಿಯನ್ನು ರಕ್ಷಣೆ ಮಾಡುವ ಸಲುವಾಗಿ, ಅಧಿಕಾರವನ್ನು ಉಳಿಸುವ ಸಲುವಾಗಿ ಈ ಜಗತ್ತಿನಲ್ಲಿ ಸಂವಿಧಾನ ತಿದ್ದುಪಡಿಯಾಗಿದೆ ಎಂದರೆ ಅದು ನಮ್ಮ ಭಾರತ ಸಂವಿಧಾನದ 38 ಹಾಗೂ 39ನೇ ತಿದ್ದುಪಡಿ. ಕೇವಲ ಇಂದಿರಾ ಗಾಂಧಿಯವರನ್ನು ರಕ್ಷಣೆ ಮಾಡಲಿಕ್ಕಾಗಿ, ತುರ್ತು ಪರಿಸ್ಥಿತಿಯ ಜಾರಿಯನ್ನು ಮುಂದುವರಿಸುವ ಸಲುವಾಗಿ ಹಾಗೂ ಇಂದಿರಾ ಗಾಂಧಿ ಅವರ ಅಧಿಕಾರವನ್ನು ಉಳಿಸಲು ಈ ತಿದ್ದುಪಡಿಯನ್ನು ಮಾಡಿದರು.

38ನೇ ತಿದ್ದುಪಡಿ: ರಾಷ್ಟ್ರಪತಿಯ ಸಮಾಧಾನವೇ ಅಂತಿಮ ಹಾಗೂ ನಿರ್ಣಾಯಕ ಹಾಗೂ ಅದನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ತುರ್ತು ಪರಿಸ್ಥಿತಿಯ ಘೋಷಣೆ ಜಾರಿಯಲ್ಲಿದ್ದಾಗ ಸಂವಿಧಾನದ 359ನೇ ಅನುಚ್ಛೇದದ 3ನೇ ಭಾಗದಿಂದ ಪ್ರದತ್ತವಾದ ಹಕ್ಕುಗಳನ್ನು ಮೊಟಕುಗೊಳಿಸುವ ಅಥವಾ ಅಮಾನತ್ತಿನಲ್ಲಿಡುವ ಅಧಿಕಾರವನ್ನು ರಾಷ್ಟ್ರಪತಿಗೆ ವಹಿಸಲಾಗಿದೆ.
39ನೇ ತಿದ್ದುಪಡಿ: ಪ್ರಧಾನಮಂತ್ರಿಯ ಚುನಾವಣೆಯ ಬಗ್ಗೆ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.

ಸಂವಿಧಾನದ ಮೇಲೆ ದೊಡ್ಡ ಅಕ್ರಮಣ ಆಗಿತ್ತು ಎಂದರೆ ಅದು 38 ಹಾಗೂ 39ನೆಯ ತಿದ್ದುಪಡಿಯಿಂದ. ಮುಂದೆ ಜನತಾಪಕ್ಷ ಸರ್ಕಾರಕ್ಕೆ ಅಧಿಕಾರ ಬಂದಿತು, ಮೊರಾಜಿ ದೇಸಾಯಿ ಪ್ರಧಾನಿಯಾದರು. ಆ ಸರ್ಕಾರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್ ಕೆ ಅಡ್ವಾಣಿಯವರು ಸಹ ಇದ್ದರು. ಅವರು 44ನೇ ತಿದ್ದುಪಡಿ ಜಾರಿಗೊಳಿಸಿದರು. 44ನೇ ತಿದ್ದುಪಡಿಯ ಮೂಲಕ ಮೂಲ ಸಂವಿಧಾನದಲ್ಲಿದ್ದ ಅಂಶಗಳನ್ನು ಎತ್ತಿ ಹಿಡಿದರು, ತುರ್ತುಪರಿಸ್ಥಿತಿಯಲ್ಲಿ ಮಾಡಿದಂತಹ ಎಲ್ಲಾ ತಿದ್ದುಪಡಿಗಳನ್ನು ಹಿಂಪಡೆದು ನ್ಯಾಯಾಂಗಕ್ಕೆ ಸ್ವತಂತ್ರ ಅಧಿಕಾರವನ್ನು ನೀಡಿತು.

44ನೇ ತಿದ್ದುಪಡಿ: ತುರ್ತು ಪರಿಸ್ಥಿತಿ ಜಾರಿಗೊಳಿಸುವ ಮುನ್ನ ಕೇಂದ್ರ ಸರ್ಕಾರವು ದೃಢ ನಿರ್ಧಾರ ಮಾಡಬೇಕು, ರಾಷ್ಟ್ರಪತಿಗಳಿಂದ ಅಂಕಿತಗೊಂಡ 30 ದಿನದೊಳಗೆ ಸಂಸತ್ತಿನಲ್ಲಿ 2/3 ಬಹುಮತದ ಮೇರೆಗೆ ಒಪ್ಪಿಗೆ ತೆಗೆದುಕೊಳ್ಳಬೇಕು, ಶಸಸ್ತ್ರ ದಂಗೆ ಎದ್ದಾಗ ಮಾತ್ರ ಆಂತರಿಕವಾಗಿ ಜಾರಿಗೊಳಿಸಬಹುದು, ದೇಶದ ಯಾವ ಪ್ರಜೆಯಾದರು ತುರ್ತು ಪರಿಸ್ಥಿತಿ ಜಾರಿಯಾಗುವುದರ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಹಾಗೂ ಯಾವುದೇ ಸಂದರ್ಭದಲ್ಲಿ ಸಹ ಜೀವಿಸುವ ಹಾಗೂ ಬದುಕುವ ಹಕ್ಕನ್ನು ಕಿತ್ತುಕೊಳ್ಳಬಾರದು.

ತುರ್ತು ಪರಿಸ್ಥಿತಿ ಜಾರಿ ಮಾಡಿದಾಗ ಅಂದಿನ ಸಚಿವರಿಗೆ ಮತ್ತು ಬೆಂಬಲ ನೀಡಿದ ಹಿರಿಯರು ಈ ಕಳಂಕವನ್ನು ಹೊತ್ತುಕೊಳ್ಳಬೇಕಾದ ಪರಿಸ್ಥಿತಿ ಒದಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅತ್ಯಂತ ಕರಾಳ ಛಾಯೆಯನ್ನು, ತುರ್ತು ಪರಿಸ್ಥಿತಿಯನ್ನು ತಂದಂತಹ ಸನ್ನಿವೇಶ ಅದು ಬಹಳ ದೊಡ್ಡದಾಗಿ ಮಾನವ ಕುಲದ ಮೇಲೆ ಮಾಡಿರುವ ಅಕ್ರಮಣವಾಗಿದೆ. ಈ ಆಕ್ರಮಣದ ಕುರಿತು ಇವತ್ತಿನ ಯುವಕರಿಗೆ ಈ ವಿಷಯ ತಿಳಿದಿಲ್ಲ. ತುರ್ತು ಪರಿಸ್ಥಿತಿ ಹೇಗೆ ಜಾರಿಯಾಯಿತು?, ಏಕಾಯಿತು?, ಅದರ ಪರಿಣಾಮವೇನಾಯಿತು? ಎಂಬುದರ ಬಗ್ಗೆಯೂ ಸಹ ಅರಿವಿಲ್ಲ ಆದರೆ ಗೊತ್ತಾಗಬೇಕು. ಕೇವಲ ಆಜಾದಿ ಕಾ ಚೀನ್ ಕರ್ ಲೂಂಗಾ ಎಂದು ಘೋಷಣೆ ಕೂಗುವುದಲ್ಲ ಸ್ವಾತಂತ್ರ್ಯವನ್ನು ಹೇಗೆ ಕಿತ್ತುಕೊಂಡರು ಎಂಬುದನ್ನು ಪ್ರತಿಯೊಬ್ಬ ಚಿಂತಕನಿಗೆ, ವಿದ್ಯಾರ್ಥಿಗಳಿಗೆ ತಿಳಿಯಬೇಕಾದ ಸಂಗತಿ.

ಮೂಲ :- ಶಾ ಕಮಿಟಿ ವರದಿ – ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ.ಸಿ.ಶಾ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು