News Karnataka Kannada
Tuesday, April 30 2024
ವಿಶೇಷ

ಹಿಂದುಳಿದ ವರ್ಗಗಳ ನೇತಾರ, ಕೆ.ಎಚ್. ರಾಮಯ್ಯನೆಂಬ ಭಾಗ್ಯವಿಧಾತ

Leader of backward classes, K.H. Ramayya is the lucky one
Photo Credit : By Author

ಜಾತ್ಯತೀತ ಸಿದ್ಧಾಂತದ, ಹಿಂದುಳಿದ ವರ್ಗಗಳ ನೇತಾರ ಸ್ವತಂತ್ರ ಪೂರ್ವದಲ್ಲೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪರಿಕಲ್ಪನೆ ಹೊಂದಿದ್ದು ಮಂಡನೆ ಮಾಡಿದ ಶ್ರೀ ಕೆ ಹೆಚ್ ರಾಮಯ್ಯನವರು ನಮ್ಮನ್ನು ದೈಹಿಕವಾಗಿ ಅಗಲಿ ಇಂದಿಗೆ 89 ವರ್ಷಗಳು, 89ನೇ ವರ್ಷದ ಪುಣ್ಯ ಸ್ಮರಣೆಯ ಈ ದಿನದಲ್ಲಿ ನಾವು ಅವರನ್ನು ಅವರ ವಿಚಾರಗಳನ್ನು ಅವರ ಆದರ್ಶಗಳನ್ನು ನೆನೆಯುವದು ಔಚಿತ್ಯಪೂರ್ಣ.

ರಾಮಯ್ಯನವರು ಹುಟ್ಟಿದ್ದು 12-07-1879ರಂದು ಬೆಂಗಳೂರಿನ ಬಳೇಪೇಟೆಯಲ್ಲಿರುವ ರಂಗನಾಥಸ್ವಾಮಿಗುಡಿ ಬೀದಿಯ ಮನೆ ನಂಬರ್ 104. ತಂದೆ ಹನುಮಾ ಮೇಸ್ತ್ರಿ, ತಾಯಿ ನಂಜಮ್ಮ. ಇವರ ಪೂರ್ವಿಕರ ಊರು ದೊಡ್ಡಬಳ್ಳಾಪುರದ ಕಲ್ಲುದೇವರಹಳ್ಳಿ. ರಾಮಯ್ಯನವರು 1933 ಅಕ್ಟೋಬರ್ 5ರಂದು ಹೃದಯಾಘಾತದಿಂದ ನಿಧನರಾದರು. ಒಕ್ಕಲಿಗ ಜನಾಂಗದ ಅಪೂರ್ವ ಪುರುಷ ಸಿಂಹನೆಂದೇ ಜನಜನಿತರಾಗಿದ್ದ ರಾಮಯ್ಯನವರು ಒಕ್ಕಲಿಗರ ಹಿತ ಏಳಿಗೆಗಾಗಿಯೇ ದುಡಿದವರಲ್ಲ, ಹಿಂದುಳಿದ ಎಲ್ಲಾ ವರ್ಗದ ಶ್ರೇಯಸ್ಸಿಗೆ ಶ್ರಮಿಸಿದ ಮಹನೀಯ. ಒಕ್ಕಲಿಗರ ಸಂಘದ ರೂವಾರಿ ಆಗಿದ್ದರೂ ಸಹ ಆದಿ ಕರ್ನಾಟಕ ಸಂಸ್ಥೆ ಕಟ್ಟಿದ ಮಹಾತ್ಮರಿವರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಕಲ್ಲುದೇವರಹಳ್ಳಿಯ ರೈತ ಕುಟುಂಬ ಮೂಲದಿಂದ ಬಂದ ರಾಮಯ್ಯನವರು ನ್ಯಾಯಾಂಗ ಪದವೀಧರರಾಗಿ ಇಂಗ್ಲೆಂಡ್‌ಗೆ ಹೋಗಿ ನ್ಯಾಯಶಾಸ್ತ್ರದ ಉನ್ನತ ಪದವಿ ಬಾರ್ ಆಟ ಲಾ ಮಾಡಿ ಬಂದವರು. ವಿದ್ಯಾರ್ಥಿ ದೆಶೆಯಲ್ಲಿಯೇ ಕರ್ನಾಟಕದ ಹಿಂದುಳಿದ ಜನಾಂಗಗಳ ಬಗ್ಗೆ, ಅವರ ಶಿಕ್ಷಣದ ಬಗ್ಗೆ, ಏಳಿಗೆಯ ಬಗ್ಗೆ ಚಿಂತಿಸಿದವರು. ಬ್ರಾಹ್ಮಣೇತರರಿಗೆ ಆ ಕಾಲದಲ್ಲಿ ಅವರು ಎಷ್ಟೇ ಉನ್ನತ ಶಿಕ್ಷಣ ಪಡೆದಿದ್ದರೂ ಸರ್ಕಾರದ ಉನ್ನತ ಹುದ್ದೆಗಳು ದೊರೆಯುತ್ತಿರಲಿಲ್ಲ. ಇದರ ವಿರುದ್ಧ ಚಳುವಳಿಯೊಂದನ್ನು ರೂಪಿಸಿ ಆಗ ಮೈಸೂರು ದೇಶವನ್ನು ಆಳುತ್ತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಬಗ್ಗೆ ಚಿಂತಿಸುವಂತೆ ಪ್ರಭಾವ ಬೀರಿದ್ದರು. ಇದರಿಂದಾಗಿ ಮಹಾರಾಜರ ಸರ್ಕಾರ ಸಮಿತಿಯೊಂದನ್ನು ರಚಿಸಿ ಬ್ರಾಹ್ಮಣೇತರರಿಗೆ ಸರ್ಕಾರಿ ಹುದ್ದೆಗಳನ್ನು ಮೀಸಲಿಡುವ ಪದ್ಧತಿ ಜಾರಿಗೆ ಬಂತು. ಈ ಹಿನ್ನೆಲೆಯಲ್ಲಿ ಕೆ.ಎಚ್. ರಾಮಯ್ಯನವರು ತಮ್ಮ ವಿದೇಶ ಅಧ್ಯಯನವನ್ನು ಮುಗಿಸಿ ಬಂದ ಮೇಲೆ ಮಹಾರಾಜರ ಸರ್ಕಾರದಲ್ಲಿ ಉನ್ನತ ಹುದ್ದೆಯೊಂದನ್ನು ಅವರಿಗೆ ನೀಡಲಾಯಿತು.

ಹದಿನೆಂಟು-ಹತ್ತೊಂಬತ್ತನೆಯ ಶತಮಾನಗಳಲ್ಲಿ ಪಾಶ್ಚಿಮಾತ್ಯ ದೇಶಗಳು ಕೈಗಾರಿಕಾ ಕ್ರಾಂತಿ ಮತ್ತು ಪರಸ್ಪರ ಸಹಕಾರದಿಂದ ಉನ್ನತಿಯನ್ನು ಸಾಧಿಸಿ ಮುನ್ನಡೆಯುತ್ತಿದ್ದವು. ಇದರ ಪರಿಣಾಮ ಮೈಸೂರು ರಾಜ್ಯ ವಿಶೇಷವಾಗಿ ಗ್ರಾಮಾಂತರ ಪ್ರದೇಶದ ಅಭಿವೃದ್ಧಿಯ ದೃಷ್ಟಿಯಿಂದ ಸಹಕಾರ ಇಲಾಖೆಯನ್ನು ಸ್ಥಾಪಿಸಿತು. ಈ ಇಲಾಖೆಯ ಮುಖ್ಯಸ್ಥರಾಗಿ ಕೆ.ಎಚ್. ರಾಮಯ್ಯನವರನ್ನು ನಿಯೋಜಿಸಲಾಯಿತು. ಗ್ರಾಮೀಣ ಜನಸಾಮಾನ್ಯರ ಏಳಿಗೆಯ ಆಶೋತ್ತರಗಳನ್ನು ಸದಾ ಚಿಂತಿಸುತ್ತಿದ್ದ ರಾಮಯ್ಯನವರಿಗೆ ಈ ಹುದ್ದೆ ದೊರೆತದ್ದು ಸಂತೋಷವನ್ನೇ ಉಂಟು ಮಾಡಿತು. ಅವರು ಇಡೀ ರಾಜ್ಯದ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ವಿವಿಧ ಜನಾಂಗಗಳ ಬಗ್ಗೆ ಅಧ್ಯಯನ ನಡೆಸಿದರು. ಇದು ಎಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಪಡೆದುಕೊಂಡಿತೆಂದರೆ ಪ್ರತಿಯೊಂದು ಜನಾಂಗವು ತಮ್ಮ-ತಮ್ಮ ಜನಾಂಗದ ಏಳಿಗೆಗಾಗಿ ರಚಿಸಿಕೊಂಡ ಸಂಘ ಸಂಸ್ಥೆಗಳಿಗೆ ಕೆ.ಎಚ್. ರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾರ್ಗದರ್ಶಕರನ್ನಾಗಿ ಮಾಡಿಕೊಂಡರು.

ಮೈಸೂರು ರಾಜ್ಯದಲ್ಲಿ ಈ ಸಹಕಾರಿ ಚಳುವಳಿ ಸಮಸ್ತ ಜನ ಸಮುದಾಯಗಳನ್ನು ಆಕರ್ಷಿಸಲಾರಂಭಿಸಿತು. ಇದರಿಂದಾಗಿ ಮಹಾರಾಜರು ಕೆ.ಎಚ್. ರಾಮಯ್ಯನವರಿಗೆ ಸಹಕಾರ ಇಲಾಖೆಯ ಮುಖ್ಯಾಧಿಕಾರದ ಜೊತೆಗೆ ಜನಾಂಗ ಅಭಿವೃದ್ಧಿಯ ಹೊಣೆಯನ್ನು ಇಲಾಖೆಯ ಮುಖ್ಯಾಧಿಕಾರ ವಹಿಸಿದರು. ಹೀಗಾಗಿ ಕೆ.ಎಚ್. ರಾಮಯ್ಯನವರು ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಅವರ ತಮ್ಮ ಕಂಠೀರವ ನರಸಿಂಹರಾಜ ಒಡೆಯರ ಗಮನವನ್ನು ಸೆಳೆದರು. ಇಂಗ್ಲೆಂಡ್‌ನಲ್ಲಿ ಉಂಟಾಗಿದ್ದ ಕೈಗಾರಿಕಾ ಕ್ರಾಂತಿ ಮತ್ತು ಸಮಾಜ ಅಭಿವೃದ್ಧಿ ಕಾರ‍್ಯಗಳು ಈ ಇಬ್ಬರನ್ನು ಬಹಳವಾಗಿ ಆಕರ್ಷಿಸಿದವು. ಅಂತಹ ಒಂದು ಕೈಗಾರಿಕಾ ಅಭಿವೃದ್ಧಿ ಮೈಸೂರು ರಾಜ್ಯದಲ್ಲಿಯು ಆಗಬೇಕೆಂಬುದು ಮಹಾರಾಜರ ಆಸೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸಹೋದರ ಕಂಠೀರವ ನರಸಿಂಹರಾಜ ಒಡೆಯರನ್ನು ಯೂರೋಪ್ ದೇಶಗಳಿಗೆ ಅಧ್ಯಯನ ಪ್ರವಾಸಕ್ಕಾಗಿ ಕಳುಹಿಸಲು ತೀರ್ಮಾನಿಸಿದರು. ಕೆ.ಎಚ್. ರಾಮಯ್ಯನವರನ್ನು ಯುವರಾಜರ ಆಪ್ತ ಕಾರ‍್ಯದರ್ಶಿಯಾಗಿ ಕಳುಹಿಸಿ ನಿರ್ಧರಿಸಿದರು.

ಯುವರಾಜರು ಮತ್ತು ರಾಮಯ್ಯನವರು ಪ್ರವಾಸ ಮುಗಿಸಿ ಹಿಂತಿರುಗುವ ಹೊತ್ತಿಗೆ ಅವರ ಮಧ್ಯೆ ಇದ್ದ ರಾಜ ಮತ್ತು ಪ್ರಜೆ ಎಂಬ ಅಂತರ ಹೋಗಿ ಆತ್ಮೀಯ ಸ್ನೇಹಿತರಾಗಿದ್ದರು. ರಾಮಯ್ಯನವರ ಅಕಾಲಿಕ ಮರಣದ ಸಂದರ್ಭದಲ್ಲಿ ಯುವರಾಜ ಕಂಠೀರವ ನರಸಿಂಹರಾಜ ಒಡೆಯರು ಈ ವಿಚಾರವನ್ನು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. ಹೀಗೆ ಅನಕ್ಷರಸ್ಥ ರೈತ ಕುಟುಂಬ ಮೂಲದಿಂದ ಬಂದ ಒಬ್ಬ ವ್ಯಕ್ತಿ ಮಹಾರಾಜರಿಗೆ ಆಪ್ತರಾಗಿ ಯುವ ರಾಜರಿಗೆ ಆತ್ಮೀಯ ಸ್ನೇಹಿತರಾಗಿ ರೂಪುಗೊಂಡದ್ದು ಒಂದು ವಿಸ್ಮಯಕಾರಿ ಅಪೂರ್ವ ಘಟನೆ.

ಕೆ.ಎಚ್. ರಾಮಯ್ಯನವರನ್ನು ಮಹಾರಾಜರ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯದೊಂದಿಗೆ ಹಿಂದುಳಿದ ಜನಾಂಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಏಳಿಗೆಗಾಗಿ ನಿಯೋಜಿಸಿದ್ದು ರಾಜಾಡಳಿತದಲ್ಲಿ ಒಂದು ಆಶ್ಚರ್ಯಕರವಾದ ಘಟನೆ ಎಂದು ಹೇಳಬಹುದು. ರಾಮಯ್ಯನವರು. ಇಡೀ ಮೈಸೂರು ದೇಶವನ್ನು ಸುತ್ತಿ ಪ್ರತಿಯೊಂದು ಹಿಂದುಳಿದ ಜನಾಂಗವು ಹೇಗೆ ಅಭಿವೃದ್ಧಿ ಪಥದಲ್ಲಿ ನಡೆಯಬೇಕೆಂಬುದನ್ನು ತಿಳಿಸಿ ಮಾರ್ಗದರ್ಶನ ಮಾಡಿದರು. ಅವರಿಗೆ ಸರ್ಕಾರಿ ಅಧಿಕಾರಿ ಎಂಬ ಯಾವುದೇ ನಿರ್ಬಂಧಗಳು ಇರಲಿಲ್ಲ. ಸರ್ಕಾರದ ಉನ್ನತ ಅಧಿಕಾರಿಯೊಬ್ಬ ನಿರಂಕುಶ ರಾಜಪ್ರಭುತ್ವದ ಕಾಲದಲ್ಲಿ ರಾಜಕೀಯ ಪಕ್ಷಗಳು ಅಧ್ಯಕ್ಷತೆ ವಹಿಸಿದ್ದು, ಆ ಬಗ್ಗೆ ರಾಜಕಾರಣಿಗಳೊಂದಿಗೆ ಬೆರೆತು ಚರ್ಚೆ ನಡೆಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ ದೂರದರ್ಶಿತ್ವದ ಸಂಕೇತವಾಗಿದೆ ಎಂದು ಹೇಳಬಹುದು.

ಮೈಸೂರು ರಾಜ್ಯದ ಜನಾಂಗಗಳಲ್ಲಿ ಬ್ರಾಹ್ಮಣರೇತರರಿಗೆ ಶಿಕ್ಷಣ ಇರಲಿಲ್ಲ. ಒಂದು ರೀತಿಯಲ್ಲಿ ಅದಕ್ಕೆ ಅವಕಾಶವು ಇರಲಿಲ್ಲ ಎಂದು ಹೇಳಬಹುದು.ಪ್ರಮುಖ ಹುದ್ದೆಗಳಲ್ಲಿ ಇದ್ದವರೆಲ್ಲ ಮೇಲುವರ್ಗದವರಾಗಿದ್ದು ಗ್ರಾಮಾಂತರ ಜನರು ಶಿಕ್ಷಣ ಪಡೆದು ಮೇಲೆ ಬರುವುದನ್ನು ಒಪ್ಪುವವರಾಗಿರಲಿಲ್ಲ. ಆ ಪ್ರತಿಯೊಬ್ಬರು ತಮ್ಮ-ತಮ್ಮ ಕುಲಕಸುಬಗಳನ್ನು ಮಾಡಿಕೊಂಡು ಕೇವಲ ಅಧೀನರಾಗಿ ಇರಬೇಕೆಂಬುದೇ ಅವರ ಆಶಯವಾಗಿತ್ತು. ಇದಕ್ಕೆ ತಡೆ ಹಾಕಿದವರು ಬ್ರಿಟಿಷರು ಎಂಬುದನ್ನು ಜನ ಕೃತಜ್ಞತೆಯಿಂದ ಸ್ಮರಿಸಬೇಕು. ಸಮಾನ ಶಿಕ್ಷಣ, ಸಮಾನ ಅವಕಾಶ, ಸಮಾನ ಪರಿಸರ ಎಲ್ಲರಿಗೂ ದೊರೆಯಬೇಕೆಂಬುದು ಆಗಿನ ಸರ್ಕಾರದ ಬ್ರಿಟಿಷ್ ಅಧಿಕಾರಿಗಳ ಇಷ್ಟವಾಗಿತ್ತು. ಬ್ರಿಟಿಷರು ನಮ್ಮ ದೇಶದ ಸಂಪತ್ತನ್ನು ಲೂಟಿ ಹೊಡೆದಿರಬಹುದು. ನಮ್ಮನ್ನು ಒಂದು ರೀತಿಯ ಸಂಪತ್ತನ್ನು ಲೂಟಿ ಹೊಡೆದಿರಬಹುದು. ನಮ್ಮನ್ನು ಒಂದು ರೀತಿಯ ಗುಲಾಮಗಿರಿಯಲ್ಲೂ ಇಟ್ಟಿರಬಹುದು. ಆದರೆ ಮೂಢನಂಬಿಕೆಗಳ ಜಾತಿ ವ್ಯವಸ್ಥೆಯ ಮೇಲು-ಕೀಳುಗಳ ಅಂಧಕಾರದಲ್ಲಿ ಮುಳುಗಿದ್ದ ಈ ಜನರನ್ನು ಬೆಳಕಿನತ್ತ ತಿರುಗಿಸಿದ್ದು, ಪ್ರಜಾಪ್ರಭುತ್ವದ ಕಲ್ಪನೆ ಮೂಡಿಸಿದ್ದು ಇಂಗ್ಲೀಷರು ಎಂಬುದನ್ನು ಮರೆಯಬಾರದು.

ಮೈಸೂರು ರಾಜ್ಯದಲ್ಲಿ ಅನೇಕ ಜನಾಂಗಗಳಿದ್ದು ಅವುಗಳಲ್ಲಿ ಅನೇಕ ಒಳಪಂಗಡಗಳಿದ್ದವು. ಈ ಒಳ ಪಂಗಡಗಳು ಸದಾ ಪರಸ್ಪರ ಕಿತ್ತಾಟದಲ್ಲಿ ತೊಡಗಿರುತ್ತಿದ್ದವು. ಒಬ್ಬರ ಏಳಿಗೆಯನ್ನು ಇನ್ನೊಬ್ಬರು ಸಹಿಸುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಕೆ.ಎಚ್. ರಾಮಯ್ಯನವರು ಪ್ರತಿಯೊಂದು ಜನಾಂಗದ ಸಭೆಗಳನ್ನು ನಡೆಸಿ ಈ ಎಲ್ಲಾ ಜನಾಂಗದ ಒಳಪಂಗಡದವರನ್ನು ಒಂದೆಡೆ ಸೇರಿಸಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಪ್ರಗತಿ ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಈ ಒಳಪಂಗಡಗಳ ಕಿತ್ತಾಟ ಮೇಲ್ವರ್ಗದವರನ್ನು ಕಾಡುತ್ತಿತ್ತು. ಅಂತಹ ಮೇಲುವರ್ಗದ ಜನಾಂಗದವರಿಗೆ ಕೂಡ ಮಾರ್ಗದರ್ಶನ ಮಾಡಿದ್ದಾರೆ. ಪ್ರತಿಯೊಂದು ಹಿಂದುಳಿದ ಜನಾಂಗವು ತಮ್ಮ ತಮ್ಮ ಜನಾಂಗಗಳ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದು ಹೇಳುವುದರ ಜೊತೆಗೆ ಅದಕ್ಕಾಗಿ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸುವಂತೆ ಪ್ರೇರೇಪಿಸುತ್ತಿದ್ದರು. ಹೀಗೆ ಹಿಂದುಳಿದ ಜನಾಂಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಏಳಿಗೆಗೆ ಅವರು ದುಡಿದಿದ್ದಾರೆ.

ರಾಜ್ಯ ಒಕ್ಕಲಿಗರ ಸಂಘದ ಸ್ಥಾಪನೆಯಲ್ಲಿ ರಾಮಯ್ಯನವರ ಪಾತ್ರ :-

ಪ್ರತಿಯೊಂದು ಜನಾಂಗಗಳು ಸಂಘಟಿತರಾಗಬೇಕು ಆ ಮೂಲಕ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಶಕ್ತಿಯನ್ನು ತುಂಬಿಕೊಳ್ಳಬೇಕು ಎಂಬುದು ಶ್ರೀ ಕೆ ಹೆಚ್ ರಾಮಯ್ಯನವರ ಅಭಿಪ್ರಾಯವಾಗಿತ್ತು ಅದಕ್ಕಾಗಿ ರಾಜ್ಯ ಒಕ್ಕಲಿಗರ ಸಂಘದ ಪರಿಕಲ್ಪನೆಯನ್ನು ಕಂಡು ಅದನ್ನು ಸಾಕಾರಗೊಳಿಸಲು ಹಲವು ದಾರ್ಶನಿಕರ ಜೊತೆಗೂಡಿ 1906 ಏಪ್ರಿಲ್ ಒಂದರಂದು ರಾಜ್ಯ ಒಕ್ಕಲಿಗರ ಸಂಘಕ್ಕೆ ಬುನಾದಿಯನ್ನು ಹಾಕಿದರು ಜೊತೆಗೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಅಂದಿಗೆ ಮೈಸೂರು ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯಂತಹ ಉನ್ನತ ಹುದ್ದೆ ನಿಭಾಯಿಸುತ್ತಿದ್ದ ಶ್ರೀ ರಾಮಯ್ಯನವರಿಗೆ ಮೈಸೂರು ಸಂಸ್ಥಾನ ಎರಡು ಹುದ್ದೆಗಳನ್ನು ನಿರ್ವಹಿಸುವುದು ಸೌಜನ್ಯವಲ್ಲ ಎಂದು ಆದೇಶ ಹೊರಡಿಸಿತ್ತು ಇದಕ್ಕೆ ಅನುಗುಣವಾಗಿ ಅಂದು ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿ ಮುಂದುವರೆಯುತ್ತಾರೆ ಇಂದುಗೆ ಹಲವು ಹುದ್ದೆಗಳಲ್ಲಿ ಇರುವವರು ರಾಜ್ಯ ಒಕ್ಕಲಿಗರ ಸಂಘ ಪ್ರವೇಶಿಸುತ್ತಿರುವಾಗ ರಾಮಯ್ಯನವರ ಈ ತ್ಯಾಗವನ್ನು ಅವರು ಮನಗಾಣುವರೆ.

ಜಾತ್ಯತೀತ ಸಂತ ಶ್ರೀ ಕೆ ಹೆಚ್ ರಾಮಯ್ಯನವರು :-

ರಾಮಯ್ಯನವರು ಕೇವಲ ಒಕ್ಕಲಿಗರ ಸ್ವಯೊಬ್ಬರಿಗೆ ಶ್ರಮಿಸಲಿಲ್ಲ ಬದಲಿಗೆ ಸಮಾಜದ ಎಲ್ಲಾ ತಳಸ್ಥರದ ಸಮುದಾಯಗಳು ಶೈಕ್ಷಣಿಕವಾಗಿ ಮೇಲ ಬರಬೇಕು. ಸಂಘಟಿತರಬೇಕು ಶಿಕ್ಷಣವೇ ಸಮಾಜ ಮೇಲ್ಬರಲು ಇರುವ ರಹಧಾರಿ ಎಂಬುದನ್ನು ಹರಿಸಿದರು ಹಾಗಾಗಿ ಅಂದಿಗೆ ಹರಿಜನರ ಶ್ರೇಯ ಅಭಿವೃದ್ಧಿಗಾಗಿ ಶಿಕ್ಷಣಕ್ಕಾಗಿ ಮಳವಳ್ಳಿ ಸಮೀಪದಲ್ಲಿ ಪ್ರಥಮ ದಲಿತರ ಶಿಕ್ಷಣಕಾಗಿ ಶಾಲೆಯೊಂದನ್ನು ಮೈಸೂರು ಸಂಸ್ಥಾನದ ಜೊತೆಗೂಡಿ ಜೊತೆಗೂಡಿ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿ ಸ್ಥಾಪನೆ ಮಾಡಿದರು ಜೊತೆಗೆ ಆ ಶಾಲೆಗೆ ಶಿಕ್ಷಣ ನೀಡಲು ಮೇಲ್ವರ್ಗದ ಜನ ಭಾರತ ಇದ್ದಾಗ ತಲಕಾಡಿನ ಶ್ರೀ ರಂಗೇಗೌಡರನ್ನು ಅಲ್ಲಿನ ಶಿಕ್ಷಕರಾಗಿ ನೇಮಿಸುವುದರ ಮೂಲಕ ದಲಿತರಿಗೂ ಸಹ ಶಿಕ್ಷಣ ನೀಡುವ ಮೈಸೂರು ಸಂಸ್ಥಾನದ ಮಹತ್ವಕಾಂಕ್ಷಿಯ ಯೋಜನೆಗೆ ತೆರೆಯ ಹಿಂದಿನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದವರು ಶ್ರೀ ಕೆ ಹೆಚ್ ರಾಮಯ್ಯನವರು ಜೊತೆಗೆ ಆದಿ ದ್ರಾವಿಡ ಸಂಘ ಎಂಬ ದಲಿತರ ಸಂಘಟನೆಯನ್ನು ಹುಟ್ಟು ಹಾಕಿ ಆ ಮೂಲಕ ಆ ಸಮುದಾಯವೂ ಸಹ ಅವರ ಪರಿಮಿತಿಯಲ್ಲಿ ಸಂಘಟಿತರಾಗಬೇಕು ಎಂಬ ಉದ್ದೇಶ ಹೊಂದಿದರು ನಾವು ನೀವು ಕಾಣುವ ಜಾತ್ಯತೀತ ತತ್ವವನ್ನು ಅಂದಿಗೆ ಅವರು ಅನುಷ್ಠಾನಗೊಳಿಸಿ ಜಾರಿಗೆ ತಂದವರು ಎಂಬುದನ್ನು ನಾವು ನೆನೆಯಬೇಕಿದೆ.

ಆದಿಚುಂಚನಗಿರಿ ಮಠ ಹಾಗೂ ಕೆಎಚ್ ರಾಮಯ್ಯನವರು :-

ರಾಮಯ್ಯನವರಿಗೆ ಒಕ್ಕಲಿಗ ಸಮಾಜ ಗುರು ಪರಂಪರೆ ಹಾಗೂ ಸಂಘಟನೆ ಇಲ್ಲದೆ ಹಿಂದುಳಿಯುತ್ತಿರುವ ಅರಿವು ಇತ್ತು ಅದಕ್ಕಾಗಿ ಒಕ್ಕಲಿಗರಿಗೆ ಗುರು ಪರಂಪರೆಯನ್ನು ತರುವ ಉದ್ದೇಶದಿಂದ ನಾಥ ಪರಂಪರೆಯ ಕ್ಷೇತ್ರವಾಗಿದ್ದ ಉತ್ತರ ಭಾರತದ ನಾಥಪಂಥೀಯರು ನಿರ್ವಹಣೆ ಮಾಡುತ್ತಿದ್ದ ಆದಿಚುಂಚನಗಿರಿ ಮಠಕ್ಕೆ ಅಲ್ಲಿನ ಗುರುಗಳ ಮರಣದ ತರುವಾಯ ಒಕ್ಕಲಿಗ ಸಮುದಾಯದ ಧರಸಗುಪ್ಪೆ ಪಟೇಲ್ ನಿಂಗೇಗೌಡರನ್ನು ಪೀಠಾಧಿಪತಿಗಳನ್ನಾಗಿ ನೇಮಿಸುವ ಮೂಲಕ ಸಮುದಾಯಕ್ಕೆ ಗುರು ಪರಂಪರೆಯನ್ನು ತಂದುಕೊಟ್ಟರು ಹಾಗೂ ಮಠದ ಪರಂಪರೆಯನ್ನು ಕಲ್ಪಿಸಿಕೊಟ್ಟರು ಮತ್ತು ಅದರ ಶ್ರೇಯೋಭಿವೃದ್ಧಿಗಾಗಿ ನಾಲ್ವಡಿ ಅವರೊಡನೆ ಚರ್ಚಿಸಿದ್ದರು ಹಾಗೂ ಅದರ ಅನುಷ್ಠಾನದಲ್ಲಿ ಇದ್ದ ತೊಡಕುಗಳನ್ನು ನಿವಾರಿಸಿದರು.

ಸಮಾಜದ ಉನ್ನತಿಗಾಗಿ ಕೆಲಸ ಮಾಡಿದವರನ್ನು ಸ್ಮರಿಸಿ ಗೌರವಿಸುವುದು ಒಂದು ಸಾಮಾಜಿಕ ಕರ್ತವ್ಯ. ಅನೇಕ ಮಹನೀಯರು ನಾನಾ ಕ್ಷೇತ್ರಗಳಲ್ಲಿ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಸಮಾಜದ ಏಳಿಗೆಗಾಗಿ ದುಡಿದಿರುವ ಅನೇಕ ಉದಾಹರಣೆಗಳಿವೆ. ಅವರ ಮಹನೀಯರನ್ನು ಮತ್ತು ಅವರ ಜೀವನ ಸಾಧನೆಗಳನ್ನು ದಾಖಲಿಸಿ ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವುದು ಅಗತ್ಯ. ಏಕೆಂದರೆ ಅಂತಹ ಮಹನೀಯರ ಆದರ್ಶ ಬದುಕು ಮತ್ತು ಜೀವನ ಸಾಧನೆಗಳು ಮುಂದಿನ ಪೀಳಿಗೆಯವರಿಗೆ ತಮ್ಮ ಜೀವನವನ್ನು ಸರಿಮಾರ್ಗದಲ್ಲಿ ರೂಪಿಸಿಕೊಳ್ಳಲು ಮಾರ್ಗದರ್ಶಕವಾಗುತ್ತವೆ. ಅನೇಕ ವೇಳೆ ಹೀಗೆ ಸೇವೆ ಮಾಡಿದವರನ್ನು ನಾನಾ ಕಾರಣಗಳಿಗಾಗಿ ನಿರ್ಲಕ್ಷಿಸುವುದು, ಮರೆತು ಬಿಡುವುದು ಉಂಟು. ಅಕ್ಷರಸ್ಥ ಸಮಾಜದಲ್ಲಿ ಅಕ್ಷರ ಬಲ್ಲವರು ತಮ್ಮವರನ್ನು, ತಮಗೆ ಬೇಕಾದವರನ್ನು ದಾಖಲಿಸುವುದುಂಟು. ಬೇರೆಯವರ ಬಗ್ಗೆ ಇವರು ದಾಖಲಿಸುವ ಗೋಜಿಗೆ ಹೋಗುವುದಿಲ್ಲ. ತಮ್ಮವರನ್ನು ಮಾತ್ರ ಉತ್ಪ್ರೇಕ್ಷಿಸಿ ದಾಖಲಿಸುವುದುಂಟು. ಹೀಗೆ ಅವಜ್ಞೆಗೆ ಗುರಿಯಾದ ಅನೇಕ ಸಾಧಕರ ಜೀವನ ಸಾಧನೆಗಳು ಕಾಲಗರ್ಭದಲ್ಲಿ ಅಡಗಿ ಹೋಗಿವೆ ಎಂದು ಹೇಳಬಹುದು. ಅಪಾರವಾದ ಸಾಧನೆ ಮಾಡಿಯೂ ಈ ರೀತಿಯ ನಿರ್ಲಕ್ಷ್ಯತೆ ಒಳಗಾದ ಅನೇಕರಲ್ಲಿ ದಿವಂಗತ ಕೆ. ಹೆಚ್. ರಾಮಯ್ಯನವರು ಒಬ್ಬರು.

ರಾಮಯ್ಯನವರ ಅಕಾಲಿಕ ಮರಣ ರಾಜಮನೆತನಕ್ಕೆ ನೋವು ತಂದಿತ್ತು ಅದಕ್ಕಾಗಿ ಆಪ್ತ ಮಿತ್ರನ ಅಂತ್ಯ ಸಂಸ್ಕಾರ ಅರಸರ/ಒಡೆಯರ ನೇತೃತ್ವದಲ್ಲಿ ಜರುಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು