News Karnataka Kannada
Sunday, April 28 2024
ವಿಶೇಷ

ಕ್ಷಮಾಗುಣ, ಸಹಾನುಭೂತಿ, ಸಮಾನತೆಯ ಪ್ರತೀಕ: ರಮಝಾನ್

ramdan celebration
Photo Credit : By Author

ಮಂಗಳೂರು: ಇಸ್ಲಾಮಿನ ಚಾಂದ್ರಮಾಸ ಪಂಚಾಂಗದ ಒಂಭತ್ತನೆಯ ತಿಂಗಳಾಗಿದೆ ರಮಝಾನ್. ತಿಂಗಳಾದ್ಯಂತ ಮುಸಲ್ಮಾನರು ಉಪವಾಸ ಆಚರಿಸುತ್ತಾರೆ. ಸದಾ ತಿಂದುಂಡು ತೇಗುವ ಮನುಷ್ಯರಿಗೆ ಹಸಿವಿನ ಅನುಭವದ ತೀಕ್ಷತೆಯನ್ನು ಬೋಧಿಸಿ ಜೀವನದಲ್ಲಿ ಮಹತ್ತರವಾದ ಪಲ್ಲಟಗಳನ್ನು ತರಬಲ್ಲ ಶಕ್ತಿ ಈ ಆಚರಣೆಗಿದೆ. ದಯೆ, ಸಹಾನುಭೂತಿ, ಕ್ಷಮಾಶೀಲತೆ, ಸಹಜೀವಿಗಳೊಂದಿಗಿನ ಪ್ರೀತಿ ಮತ್ತು ಆರಾಧನೆಗಳಲ್ಲಿನ ಆನಂದದ ತರಬೇತಿ ನೀಡುತ್ತದೆ ರಮಝಾನ್ ಆಚರಣೆ, ಅಸಡ್ಡೆ, ಅಚಾತುರ್ಯ, ಉದಾಸೀನತೆ ಮುಂತಾದ ಮಾನವನ ಅಭಿವೃದ್ಧಿಗೆ ತೊಡಕಾಗಿರುವ ಸಂಗತಿಗಳನ್ನು ಕಂಡುಹಿಡಿದು ಅದರಿಂದ ಮುಕ್ತಿ ಪಡೆಯುವ ಅವಕಾಶವನ್ನು ಈ ತಿಂಗಳು ಒದಗಿಸುತ್ತದೆ. ಮನಸ್ಸನ್ನು ಸರ್ವ ಕುರುಡು ರೋಗಗಳಿಂದ ದೂರೀಕರಿಸಿ ದುರ್ಭಾವನೆಗಳನ್ನು ಹೋಗಲಾಡಿಸಿ ಪ್ರಾಂಜಲವಾದ ಹೃದಯವನ್ನು ನಮ್ಮದಾಗಿಸಲು ಸಹಾಯ ಮಾಡುತ್ತದೆ.

ಪಾಪಮೋಚನೆ, ನರಕವಿಮೋಚನೆ ಮತ್ತು ಸ್ವರ್ಗಪ್ರಾಪ್ತಿ ಎಂಬ ಉನ್ನತವಾದ ಉದ್ದೇಶಗಳನ್ನಿಟ್ಟುಕೊಂಡು ವಿಶ್ವಾಸಿ ರಮಝಾನಿನಾದ್ಯಂತ ಅಹರ್ನಿಶಿ ದುಡಿಯುತ್ತಾನೆ. ರಮಝಾನಿನ ಹಗಲುಹೂರ್ತಿ ಉಪವಾಸ ಆಚರಿಸುವ ಮತ್ತು ರಾತ್ರಿಯಲ್ಲಿ ನಿಂತುಕೊಂಡು ವಿಶೇಷ ಪ್ರಾರ್ಥನೆ ಸಲ್ಲಿಸುವ ವಿಶ್ವಾಸಿಗಳಿಗೆ ಪಾಪಮೋಚನೆ ಇದೆಯೆಂದು ಪ್ರವಾದಿಯವರ ನುಡಿಯ ಪ್ರಭಾವ ಇದರ ಬೆನ್ನಿಗಿದೆ. ಈ ರೀತಿಯಲ್ಲಿ ಬಹಳ ಆದರ್ಶಪ್ರಾಯವಾದ ಆಚರಣೆಗಳನ್ನು ನಿರ್ವಹಿಸಿದ ತರುವಾಯ ಬರುವ ಹಬ್ಬವಾಗಿದೆ. ಈದುಲ್ ಫಿತ್ ಅಥವಾ ರಮಝಾನ್ ಹಬ್ಬ, ರಮಝಾನ್ ತಿಂಗಳ ನಂತರ ಬರುವ ಶಾಲಿನ ಬಾಲಚಂದಿರ ಬಾನಂಗಳದಲ್ಲಿ ಪ್ರತ್ಯಕ್ಷವಾದರೆ ಈದುಲ್ ಫಿತ್ ರಂಗೇರುತ್ತದೆ. ವಿವಿಧ ಕಾರಣಗಳಿಂದ ಮನುಷ್ಯನ ಮನಸ್ಸನ್ನು ಜೀರ್ಣತೆಗಳು ಮತ್ತು ಕಪ್ಪುಚುಕ್ಕೆಗಳು ಮೆತ್ತಿಕೊಳ್ಳಬಹುದು. ಅತಿಯಾದ ಸ್ವಾರ್ಥ ಚಿಂತನೆಗಳು ಮನಸ್ಸನ್ನು ಮಲಿನಗೊಳಿಸುತ್ತದೆ. ಇತರರ ಬಗೆಗಿನ ಚಿಂತನ ಮತ್ತು ಪರಿಗಣನೆ ಮನಸ್ಸಿನಿಂದ ಹೊರಡುವಾಗಲೂ ಮನಸ್ಸು ತನ್ನ ಶುಭ್ರತೆಯನ್ನು ಕಳೆದುಕೊಳ್ಳುತ್ತದೆ. ಸಂಪತ್ತನ್ನು ಪೇರಿಸಿಟ್ಟು ಮೋಜು ಮಸ್ತಿಗಳಲ್ಲಿ ಮುಳುಗುವುದೇ ಜೀವನ ಎಂಬ ಚಿಂತನೆಯ ಅಮಲಿನಲ್ಲಿ ಮುಳುಗಿ ಹೋದರೂ ಮನಸ್ಸು ಮರಗಟ್ಟಿ ಹೋಗುತ್ತದೆ.

ಅತಿಯಾದ ಸುಖದ ಸುಪ್ಪತ್ತಿಗೆಯಲ್ಲಿ ಮಿಂದೇಳುವ ಜನರು ಒಂದು ಕಡೆಯಾದರೆ ದಾರಿದ್ರತೆ ಮತ್ತು ದುಗುಡ ದುಮ್ಮಾನಗಳಲ್ಲಿ ಬೆಂದು ನಲುಗುವ ಜೀವಗಳು ಬೇರೊಂದು ಕಡೆ. ಅತಿ ಸುಖ ಮತ್ತು ಅತಿ ದುಃಖ ಇವೆರಡೂ ಜನರು ದಾರಿತಪ್ಪಲು ಕಾರಣವಾಗುತ್ತದೆ. ಆದರೆ ರಮಝಾನ್ ಈ ಎರಡೂ ಕಾರಣಗಳಿಂದ ದಾರಿತಪ್ಪಿ ಹೋಗದಿರಲು ಬೇಕಾದ ತರಬೇತಿ ನೀಡುತ್ತದೆ. ಒಂದು ತಿಂಗಳ ದೀರ್ಘತೆ ಇರುವ ಸ್ವಯಂ ಆಯ್ದುಕೊಳ್ಳುವ ತ್ಯಾಗಮಯ ಮತ್ತು ನಿಯಂತ್ರಿತ ಜೀವನಕ್ರಮದ ಮೂಲಕ ಬದುಕನ್ನು ಮತ್ತು ಮನಸ್ಸನ್ನು ಹತೋಟಿಗೆ ತರಲು ಸಾಧ್ಯವಾಗುತ್ತದೆ.

ದಯಾಮಯನಾದ ದೇವರು ದಯಪಾಲಿಸಿದ ಬದುಕು ಅಥವಾ ಅಸ್ತಿತ್ವ ಎಂಬ ಸೌಭಾಗ್ಯವನ್ನು ಅರ್ಥೈಸಲು ಸಾಧ್ಯವಾಗುತ್ತದೆ. ಒಂದು ತಿಂಗಳ ಅವಧಿಯ ಈ ಶುಚೀಕರಣ ಪ್ರಕ್ರಿಯೆ ಇಲ್ಲದೆ ಹೋದಲ್ಲಿ ತಮ್ಮ ಮನಸ್ಸಿನಲ್ಲಿನ ಜೀರ್ಣತೆಗಳನ್ನು ಗುರುತಿಸುವುದು ಎಲ್ಲರಿಗೂ ಕಷ್ಟಸಾಧ್ಯವೆನಿಸುತ್ತಿತ್ತು. ವ್ರತಾಚರಣೆ ಮತ್ತು ಆತ್ಮಸಮರ್ಪಣೆಯ ಪ್ರತೀಕವಾದ ಉಪವಾಸದ ನಂತರ ನಮ್ಮೆಡೆಗೆ ಅಗತವಾಗುವ ಈದುಲ್ ಫಿತ್ರ ಬಹಳ ಮಹತ್ವ ಪಡೆದಿದೆ.

ಹಸಿವಿನೊಂದಿಗೆ ಆಧ್ಯಾತ್ಮಿಕ ಮತ್ತು ಭೌತಿಕ ಸಂಸ್ಕರಣೆಯನ್ನು ಪಡೆದುಕೊಂಡು ಈದ್ ಆಚರಣೆಗೆ ಇಳಿಯುವ ವಿಶ್ವಾಸಿಯ ಹಬ್ಬದಲ್ಲಿ ವಿಶಾಲವಾದ ಅರ್ಥಗಳನ್ನು ಅದು ಒಡಮೂಡಿಸುತ್ತದೆ. ಸಹೋದರತೆಯ ಸೌಂದರ್ಯವನ್ನು ನಮ್ಮ ಮುಂದೆ ತೆರೆದಿಡುತ್ತದೆ ಈದ್, ಪರಸ್ಪರ ಸಹಾಯ ಮಾಡಬೇಕಾದ ಮತ್ತು ಆಸರೆ ಆಗಬೇಕಾದ ಅನಿವಾರ್ಯತೆಯನ್ನು ಅದು ಒತ್ತಿ ಹೇಳುತ್ತದೆ. ಆಹಾರದ ಮೌಲ್ಯವನ್ನು ಮತ್ತು ಹಸಿವಿನ ಅರ್ಥವನ್ನು ಒಂದು ತಿಂಗಳ ಕಠಿಣ ತಪಸ್ಸಿನಿಂದ ಮನವರಿಕೆ ಮಾಡಿದ ನಂತರ ಒಂದಾಗಿ ಕೂತು ಹಬ್ಬದೂಟ ಸವಿಯುವಾಗ ಹೊಸ ಸಾಮಾಜಿಕ ಪಾಠಗಳ ಮೆರುಗನ್ನು ಅದು ಮೇಳೈಸಿರುತ್ತದೆ. ದೇವರಿಗೆ ಮತ್ತು ತನ್ನ ಸುತಮುತ್ತಲಿರುವ ಎಲ್ಲರಿಗೂ ಕೃತಜ್ಞರಾಗುವ ಮನೋಭಾವವನ್ನು ನಮ್ಮಲ್ಲಿ ಅದು ಬೆಳೆಸುತ್ತದೆ. ದಯೆಯ ಉದಾತ್ತ ನಿದರ್ಶನಗಳು ಈದ್ ಆಚರಣೆಯ ಮುಖಮುದ್ರೆ, ಸಹಜೀವಿಗಳೊಂದಿಗೆ ದಯೆ ತೋರಿಸುವಲ್ಲಿ ವಿಶ್ವಾಸಿ ವಹಿಸುವ ಕಾಳಜಿ, ಬಯಕೆ ಮತ್ತು ಪ್ರಾರ್ಥನೆಗಳು ಹಬ್ಬದ ಪ್ರಸ್ತುತತೆಯನ್ನು ಇನ್ನಷ್ಟು ವೃದ್ಧಿಸುತ್ತದೆ.

ಈದ್ ದಿನದಲ್ಲಿ ತನಗೆ ಮತ್ತು ತನ್ನ ಕುಟುಂಬಿಕರಿಗೆ ಬೇಕಾದ ಖರ್ಚಿಗಿಂತ ಹೆಚ್ಚಿನ ಸಂಪತ್ತಿನ ಸಂಗ್ರಹವಿರುವ ಎಲ್ಲಾ ವಿಶ್ವಾಸಿಗಳು ತಂತಮ್ಮ ಊರಿನಲ್ಲಿರುವ ಬಡಜನರಿಗೆ ನಿಗದಿತ ಪ್ರಮಾಣದ ಧಾನ್ಯಗಳನ್ನು ತಲುಪಿಸಿ ಕೊಡಲೇಬೇಕು. ಹಬ್ಬದ ಸಂಭ್ರಮ ಕೆಲವೇ ಕೆಲವು ಶ್ರೀಮಂತರಿಗೆ ಮಾತ್ರ ಸೀಮಿತವಾಗದಂತೆ ಇದು ನೋಡಿಕೊಳ್ಳುತ್ತದೆ. ಒಂದೆಡೆ ಒಗ್ಗೂಡಿ ಪ್ರಾರ್ಥನೆಗಳಲ್ಲಿ ನಿರತರಾಗುವಾಗಲೂ ಒಗ್ಗಟ್ಟು ಮತ್ತು ಸಾಮಾಜಿಕ ಸಹಭಾಗಿತ್ವದ ಉದಾಹರಣೆಗಳು ಅನಾವರಣಗೊಳ್ಳುತ್ತದೆ. ಹಸ್ತಲಾಘವ ಮಾಡಿ ಪರಸ್ಪರ ಬರಸೆಳೆಯವಾಗ ಸಂಬಂಧಗಳು ಸದೃಢಗೊಳ್ಳುತ್ತದೆ.

ಕುಟುಂಬಸ್ಥರ, ನೆರೆಹೊರೆಯವರ ಮನೆಗಳಿಗೆ ಭೇಟಿ ನೀಡಿ ಸ್ನೇಹ ವಿನಿಮಯ ಮಾಡುವ ಮೂಲಕ ಸಾಮಾಜಿಕ ಬಾಂಧವ್ಯಗಳನ್ನು ಗಟ್ಟಿಗೊಳಿಸಲಾಗುತ್ತದೆ. ಮನುಷ್ಯನು ಒಂದು ಸಾಮಾಜಿಕ ಜೀವಿಯಾಗಿದ್ದು ಸಮಾಜದಿಂದ ಬೇರ್ಪಟ್ಟು ಯಾವ ಹಬ್ಬವೂ ಪರಿಪೂರ್ಣ ಎನಿಸದು ಎಂಬ ಸಂದೇಶವನ್ನು ಈದುಲ್ ಫಿತ್ ನಮ್ಮ ಮುಂದಿಡುತ್ತದೆ. ಈ ಸುದಿನದ ಆರಾಧನೆಗಳಲ್ಲಿ ತುಂಬಿ ನಿಲ್ಲುವುದು ಸ್ವಂತಕ್ಕಾಗಿನ ಪ್ರಾರ್ಥನೆಗಳಲ್ಲ. ಮಾನವರಾಶಿಯ ವಿಮೋಚನೆಯೇ ಅಲ್ಲಿನ ಕೇಂದ್ರಬಿಂದು. ಎಲ್ಲರೂ ಬಾಳಬೇಕು ಎಂಬ ಉತ್ಕಟ ಬಯಕೆಯನ್ನು ಹೊರಹೊಮ್ಮಿಸುತ್ತದೆ ಈದ್.

ಪ್ರತಿಯೊಂದು ಹಬ್ಬದ ಜೀವಾಳ ಇರುವುದು ಪರಸ್ಪರ ಒಗ್ಗಟ್ಟು ಮತ್ತು ಬೆಸುಗೆಗಳಲ್ಲಿ. ನಾವು ನಮ್ಮ ಅಸ್ತಿತ್ವವನ್ನು, ನಮ್ಮ ಸಂಪತ್ತನ್ನು ಮತ್ತು ಸರ್ವಸ್ವವನ್ನು ಇತರರೊಂದಿಗೆ ಹೆಚ್ಚಾಗಿ ಹಂಚಿ ಕೊಳ್ಳುವುದು ಹಬ್ಬದೆ ದಿನಗಳಲ್ಲಿ, ಈದುಲ್ ಫಿತ್ ಕೂಡಾ ಹಾಗೆಯೇ ಆಗಬೇಕು. ದ್ವೀಪಗಳಾಗಿ ಒಡೆದು ಹೋಗುತ್ತಿರುವ ಸಮಾಜಗಳನ್ನು ಒಂದೇ ನೂಲಿನಲ್ಲಿ ಪೋಣಿಸಬಹುದಾದ ಸಂದರ್ಭಗಳಾಗಿ ಅವುಗಳನ್ನು ಮಾರ್ಪಡಿಸಲು ನಾವು ಕೆಲಸ ಮಾಡಬೇಕು. ರಮಝಾನಿನ ವ್ರತಾಚರಣೆ ಮತ್ತು ಶವ್ವಾಲ್ ಒಂದರ ಈದುಲ್ ಫಿತ್ ಆತ್ಮ ಪರಿಶುದ್ಧತೆ ಮತ್ತು ಸಾಮಾಜಿಕ ಬೆಸುಗೆಯನ್ನು ಸಾಧಿಸುವಲ್ಲಿ ಉದಾತ್ತ ಸಾಫಲ್ಯವನ್ನು ಕಾಣುವಂತಾಗಲಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು