News Karnataka Kannada
Saturday, May 04 2024
ಸಂಪಾದಕೀಯ

ಸೌಜನ್ಯ ಹಿಂದೂ ಸಮುದಾಯದ ಹೆಣ್ಣು ಮಗಳಲ್ಲವೇ

Isn't Soujanya the daughter of the Hindu community?
Photo Credit : News Kannada

ಉಡುಪಿ ಕಾಲೇಜು ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯವರು ಅಬ್ಬರಿಸಿ ಬೊಬ್ಬಿರಿಯುವ ಹೋರಾಟ ನಡೆಸಿದ್ದರು. ಇದು ಜಿಹಾದಿಗಳ ಹೊಸ ಆಟ ಎಂದು ಮೂರು ಲೋಕ ಒಂದಾಗುವಂತೆ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಿದ್ದರು. ಆದರೆ ಇಂತಹುದೇ ನಿಲುವನ್ನು ಹಿಂದೂ ಹೆಣ್ಣುಮಗಳು ಸೌಜನ್ಯ ಹೋರಾಟಕ್ಕೆ ಸಂಬಂಧಿಸಿ ಕೈಗೊಳ್ಳದಿರುವುದು ಹಿಂದೂಗಳ ರಕ್ಷಣೆಗೆ ಪೇಟೆಂಟ್‌ ಪಡೆದಂತೆ ಮಾತನಾಡುವ ಬಿಜೆಪಿ, ಸಂಘಪರಿವಾರದ ಇಬ್ಬಗೆ ನೀತಿಯನ್ನು ಬಹಿರಂಗ ಮಾಡಿದ್ದು, ಕರಾವಳಿ ಸೇರಿದಂತೆ ರಾಜ್ಯದೆಲ್ಲೆಡೆ ಸೌಜನ್ಯ ಹಿಂದೂ ಹೆಣ್ಣಲ್ಲವೇ ಎಂಬ ಪ್ರಶ್ನೆಗಳು ಮೂಡಿ ಬರುವಂತಾಗಿದೆ.

ಉಡುಪಿಯ ಪ್ಯಾರಾ ಮೆಡಿಕಲ್‌ ಕಾಲೇಜೊಂದರ ಶೌಚಗೃಹದಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಶೌಚಗೃಹದಲ್ಲಿ ಮೊಬೈಲ್‌ ನಲ್ಲಿ ವಿಡಿಯೋ ಮಾಡಿದ್ದಾರೆ ಎಂಬುದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಈ ಕುರಿತು ಉಗ್ರ ಹೋರಾಟ ನಡೆಸಿದ್ದ ಬಿಜೆಪಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಹಿಂದೂಗಳನ್ನು ವ್ಯವಸ್ಥಿತವಾಗಿ ಹಳಿಯುವ ಮತ್ತು ಅವರ ಮೇಲೆ ಸರ್ಕಾರಿ ಯಂತ್ರ ದುರ್ಬಳಕೆ ಮಾಡಿ ಆಕ್ರಮಿಸುವ ಕೆಲಸಕ್ಕೆ ಕೈ ಹಾಕಿದೆ ಎಂದು ಆರೋಪಿಸಿತ್ತು. ಬಿಜೆಪಿ ಶಾಸಕ ಯಶ್‌ಪಾಲ್‌ ಒಂದು ಹೆಜ್ಜೆ ಮುಂದು ಹೋಗಿ ಇದು ಜಿಹಾದಿಗಳ ಸಂಚು ಎಂದಿದ್ದರು. ‌

ಶಸ್ತ್ರ ಹಿಡಿಯಿರಿ ಎಂದವರು ಸೌಜನ್ಯ ವಿಚಾರದಲ್ಲಿ ಗಪ್‌ ಚುಪ್‌: ವಿಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಬಿಜೆಪಿ, ಪರಿವಾರದ ಸಂಘಟನೆಗಳು ಬೃಹತ್‌ ಪ್ರತಿಭಟನೆ ನಡೆಸಿದ್ದವು. ಈ ವೇಳೆ ಮಾತನಾಡಿದ್ದ ಹಿಂದೂ ಮುಖಂಡ ಶರಣ್‌ ಪಂಪ್‌ವೆಲ್‌ ಸೌಟು, ಪೊರಕೆ ಹಿಡಿಯುವ ತಾಯಂದಿರ ಕೈಗಳು ಶಸ್ತ್ರ ಹಿಡಿಯಬೇಕು. ಅನ್ಯಾಯಕ್ಕೆದುರಾಗಿ ತಲವಾರು ಹಿಡಿಯಬೇಕು. ನಮ್ಮ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂಬ ಎಚ್ಚರಿಕೆ ಕೊಡಬೇಕಾಗಿದೆ. ಹಿಂದೂ ಯುವತಿಯರು, ಶ್ರದ್ಧಾಕೇಂದ್ರಗಳನ್ನು ಮುಸ್ಲಿಮರು ಟಾರ್ಗೆಟ್ ಮಾಡಿದ್ದಾರೆ. ಮಕ್ಕಳಿರುವಾಗಲೇ ಮದ್ರಸಾದಲ್ಲಿ ಈ ರೀತಿಯ ಶಿಕ್ಷಣ ನೀಡುತ್ತಿರುವ ಬಗ್ಗೆ ಅನುಮಾನ ಇದೆ. ರಾಜ್ಯ ಸರ್ಕಾರ ಕೂಡಲೇ ಮದ್ರಸ ಶಿಕ್ಷಣವನ್ನು ಬ್ಯಾನ್‌ ಮಾಡಬೇಕು. ಉಡುಪಿ ಕಾಲೇಜಿನ ವಿಡಿಯೋ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಬೇಕು. ಇದರ ಹಿಂದೆ ಭಯೋತ್ಪಾದಕ ಕೃತ್ಯದ ಹುನ್ನಾರ ಇದೆಯೇ ಎಂಬುದನ್ನು ಪತ್ತೆ ಮಾಡಬೇಕು ಎಂದು ವೀರಾವೇಷದ ಭಾಷಣ ಮಾಡಿದ್ದರು.

ಆದರೆ ಇದೇ ಶರಣ್‌ ಪಂಪ್‌ವೆಲ್‌ ಸೇರಿದಂತೆ ಹಿಂದು ಮುಖಂಡರು ಸೌಜನ್ಯ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ಕೆಲದಿನಗಳ ಕಾಲ ಸುಮ್ಮನಿದ್ದವರು. ಬಳಿಕ ದಿಢೀರ್‌ ಎಂದು ಸುದ್ದಿಗೋಷ್ಠಿ ನಡೆಸಿ ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ಬೇಡಿಕೆ. ಆದರೆ ಕ್ಷೇತ್ರದ ತಂಟೆಗೆ ಬರಬಾರದು ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು.

ಅಂದರೆ ಯಾರ ವಿರುದ್ಧ ಈಗ ಆರೋಪ ಕೇಳಿ ಬಂದಿದೆಯೋ ಅವರ ಕುರಿತು ಮಾತನಾಡಬೇಡಿ ಎಂದು ಪರೋಕ್ಷವಾಗಿ ಹೇಳಿದಂತಿತ್ತು.
ನಂತರ ಉಜಿರೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸೌಜನ್ಯ ತಾಯಿಯನ್ನು ವೇದಿಕೆಗೆ ಹತ್ತಲು ಅನುವು ಮಾಡದೇ ಗೂಂಡಾಗಳಂತೆ ವರ್ತಿಸಿದ ವೇಳೆ ಬಿಜೆಪಿ, ಕಾಂಗ್ರೆಸ್‌ ಮುಖಂಡರ ಸಹಿತ ಎಲ್ಲರೂ ಮೂಕಪ್ರೇಕ್ಷಕರಂತೆ ವರ್ತನೆ ಮಾಡಿದ್ದರು. ಈ ವಿಚಾರವೇ ಈಗ ಚರ್ಚೆಗೆ ಕಾರಣವಾಗಿದ್ದು ಬಿಜೆಪಿ, ಹಿಂದೂ ಸಂಘಟನೆಗಳ ಹೋರಾಟ ಕೇವಲ ಉಡುಪಿ ಹಿಂದೂ ಹೆಣ್ಣುಮಗಳ ಹೋರಾಟಕ್ಕೆ ಸೀಮಿತವೇ? ಎಂಬ ಪ್ರಶ್ನೆ ಹುಟ್ಟುಹಾಕುವಂತೆ ಮಾಡಿದೆ. ಅದೇ ರೀತಿ ವಿಟ್ಲ ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿಯೂ ನಾಲ್ವರ ಹಿಂದೂ ಯುವಕರ ವಿರುದ್ಧ ಆರೋಪ ಕೇಳಿಬಂದಿತ್ತು. ಆ ವೇಳೆಯಲ್ಲಿಯೂ ಹಿಂದೂ ಸಂಘಟನೆಗಳು, ಬಿಜೆಪಿ ಮುಖಂಡರು ನನ್‌ ಆಫ್‌ ಮೈ ಬಿಸಿನೆಸ್‌ ಎಂಬ ನೀತಿ ತೋರಿದ್ದರು. ಈ ಕುರಿತು ಕೈ ಮುಖಂಡರು ಟ್ವೀಟ್‌ ಮೂಲಕ ನಿಮ್ಮ ಹೋರಾಟ ಉಡುಪಿಗೆ ಸೀಮಿತವೇ ಎಂದು ಪ್ರಶ್ನಿಸಿ ಟಾಂಗ್‌ ನೀಡಿದ್ದನ್ನು ನೆನಪಿಸಿಕೊಳ್ಳಬಹುದು.

ಕರಾವಳಿ ಕಾಂಗ್ರೆಸ್‌ ನದ್ದೂ ಇದೇ ಕಥೆ: ಕರಾವಳಿಯ ಕಾಂಗ್ರೆಸ್‌ ನಾಯಕರೂ ಈ ವಿಚಾರದಲ್ಲಿ ಮಾತನಾಡದೇ ಚುಪ್‌ ನೀತಿ ಅನುಸರಿಸುವುದು ನಗ್ನ ಸತ್ಯ. ಮಾಜಿ ಶಾಸಕ ವಸಂತ ಬಂಗೇರ ಸೌಜನ್ಯ ವಿಚಾರದಲ್ಲಿ ಸತ್ಯ ಹೇಳಿದರೆ ನನ್ನನ್ನು ಕೊಲ್ಲಬಹುದು ಎಂದಿದ್ದರು. ಬಳಿಕ ಯಾವ ಒತ್ತಡವೋ ಏನೋ ನಾನು ಆ ರೀತಿ ಮಾತೇ ಆಡಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ಉಳಿದ ಕೈ ನಾಯಕರು ಈ ವಿಚಾರದಲ್ಲಿ ಸೊಲ್ಲೆತ್ತುತ್ತಿಲ್ಲ. ಕೆಲ ಕಾಂಗ್ರೆಸ್‌ ಮುಖಂಡರಂತೂ ಸೌಜನ್ಯ ಪರ ನಾವಿದ್ದೇವೇ ಎಂದು ಹೇಳುತ್ತಲೇ. ಅಮಾಯಕ ಹುಡುಗಿ ಸಾವಿನ ಬಗ್ಗೆ ನ್ಯಾಯಬೇಕೆಂದು ಹೋರಾಟ ನಡೆಸುತ್ತಿರುವವರನ್ನು ನೀಚ ಭಾಷೆಯಿಂದ ಬೈಯುತ್ತಾ, ನಾವು ಸುಮ್ನಿರಲ್ಲ, ನೋಡ್ಕೊಳ್ತೀವಿ ಎಂದು ಥೇಟ್‌ ಭಯತ್ಪೋದಕರ ಶೈಲಿಯಲ್ಲಿಯೇ ವರ್ತಿಸಿರುವುದನ್ನು ರಾಜ್ಯದ ಜನತೆ ಕಂಡಿದ್ದಾರೆ.

ಕೊನೆ ಮಾತು: ಹಿಂದು ವಿಚಾರವೆಂಬುದು ಕೇವಲ ಓಟ್‌ ಬ್ಯಾಂಕ್‌ ರಾಜಕಾರಣ, ಜನರನ್ನು ಧರ್ಮದಲ್ಲಿ ಆಧಾರದಲ್ಲಿ ವಿಭಜಿಸುವ ತಂತ್ರವೆಂಬದು ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಆದರೆ ಜನರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಂದನ್ನು ಪರಾಮರ್ಶಿಸುವ ಅವಕಾಶ ಪಡೆದಿದ್ದಾರೆ. ಪ್ರತಿನಾಯಕರು, ರಾಜಕೀಯ ಪಕ್ಷಗಳು, ಸಂಘಟನೆಗಳ ಒಳಬಣ್ಣ ಆಂತರ್ಯ, ಏನೆಂಬುದನ್ನು ಕ್ಷಣ ಮಾತ್ರದಲ್ಲಿ ವಿಮರ್ಶೆ ಮಾಡುವ ಅವಕಾಶ, ಶಕ್ತಿಯನ್ನು ಹೊಂದಿದ್ದಾರೆ ಎಂಬುದನ್ನು ನಮ್ಮನ್ನಾಳುವ ನಾಯಕರು, ಸಂಘಟನೆ ಮುಖಂಡರು ಇನ್ನಾದರೂ ಅರಿಯುವುದು ಸೂಕ್ತ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು