News Karnataka Kannada
Sunday, May 05 2024
ಪ್ರವಾಸ

ಕರ್ನಾಟಕದ ಗಗನಚುಂಬಿ ‘ಶಿವಗಂಗೆ’ ಗೆ ಒಮ್ಮೆ ಭೇಟಿ ನೀಡಿ

shivaganga temple
Photo Credit : Facebook

ನೀವು ಸಾಹಸಿಗರೂ ಆಗಿದ್ದು, ದೈವಭಕ್ತರೂ ಹೌದಾದಲ್ಲಿ ಈ ವೀಕೆಂಡ್ ಎಂಜಾಯ್ ಮಾಡಲು ಶಿವಗಂಗೆಯತ್ತ ಹೊರಡಿ. ದಕ್ಷಿಣ ಕಾಶಿ ಎಂದೇ ಹೆಸರಾದ ಶಿವಗಂಗೆ ಬೆಂಗಳೂರಿನಿಂದ ಕೇವಲ 60 ಕಿಲೋಮೀಟರ್ ದೂರದಲ್ಲಿದೆ. ಶಿವಗಂಗೆ ಕ್ಷೇತ್ರವು ಒಂದು ಸಾಹಸ ಮತ್ತು ಭಕ್ತಿಯ ಕೇಂದ್ರವಾಗಿದೆ. ಸುಮಾರು 804.8 ಮೀಟರ್ ಅಥವಾ 2640.3 ಅಡಿ ಎತ್ತರವಿರುವ ಸುಂದರ ಪರ್ವತ ಶಿಖರವನ್ನು ಸರಿ ಸುಮಾರು 2ಕಿಲೋ ಮೀ. ಕ್ರಮಿಸಿ, ಒಂದುವರೆ ಯಿಂದ 2ಗಂಟೆ ಅವಧಿ ಬೇಕು ನೀವೂ ಈ ಬೆಟ್ಟದ ತುದಿ ತಲುಪಲು.

ಬೆಂಗಳೂರಿನಿಂದ ತುಮಕೂರು ರಸ್ತೆ ಮಾರ್ಗದಲ್ಲಿ ನೆಲಮಂಗಲಕ್ಕೆ ಹೋಗಿ, ಅಲ್ಲಿಂದ ಹಾಸನ ರೋಡ್‌ಗೆ ತಿರುಗಿದರೆ ಸೋಲೂರ ಬಳಿಕ ಸಿಗುವುದೇ ಶಿವಗಂಗೆ.


ಇತಿಹಾಸ:
16ನೇ ಶತಮಾನದಲ್ಲಿ ಈ ಗುಡ್ಡವು ಶಿವಪ್ಪ ನಾಯಕ ಕೋಟೆಯಾಯಿತು. ಮುಂದೆ ಬೆಂಗಳೂರಿನ ಸಂಸ್ಥಾಪಕ, ಮಾಗಡಿ ಕೆಂಪೇಗೌಡ ಕೋಟೆಯನ್ನು ಸುಧಾರಿಸಿದರು ಮತ್ತು ಈ ಕೋಟೆಯಲ್ಲಿ ತನ್ನ ನಿಧಿಯ ಭಾಗವನ್ನು ಉಳಿಸಿಕೊಂಡರು ಎನ್ನಲಾಗುತ್ತದೆ.

ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಿಂದ 6 ಕಿ.ಮೀ ದೂರದಲ್ಲಿ ಶಿವಗಂಗೆ ಬೆಟ್ಟ ಕಾಣಿಸುತ್ತದೆ. ಪಶ್ಚಿಮದಿಂದ ನೋಡಿದರೆ ಇಡೀ ಬೆಟ್ಟವೇ ಶಿವಲಿಂಗದ ಆಕಾರದಲ್ಲಿ ಕಾಣಿಸುತ್ತದೆ. ಪೂರ್ವದಿಂದ ನೋಡಿದರೆ ಹೋರಿಯಂತೆಯೂ, ಉತ್ತರದಿಂದ ಸರ್ಪದಂತೆಯೂ ಹಾಗೂ ದಕ್ಷಿಣದಿಂದ ಗಣೇಶನಂತೆಯೂ ಕಾಣಿಸುತ್ತದೆ. ಈ ಬೆಟ್ಟದ ಮೇಲೆ ಗಂಗಾಧರೇಶ್ವರ ಹಾಗೂ ಹೊನ್ನಮ್ಮದೇವಿ ದೇವಾಲಯಗಳಿವೆ.

ಈ ಬೆಟ್ಟದ ಮೇಲೆ ನೀರಿನ ಮೂಲಗಳಿದ್ದು, ಪುರಾಣಗಳ ಪ್ರಕಾರ ಈ ನೀರು ಗಂಗೆಯ ಸ್ವರೂಪ. ಅದೇ ಕಾರಣಕ್ಕೆ ಈ ಸ್ಥಳಕ್ಕೆ ಶಿವಗಂಗೆ ಎಂಬ ಹೆಸರು ಬಂದಿದೆ. ಗಂಗೆಯೂ ಇದ್ದು, ಹಲವು ಪುಟ್ಟ ಪುಟ್ಟ ದೇವಾಲಯಗಳೂ ಇರುವುದರಿಂದ ಈ ಸ್ಥಳಕ್ಕೆ ದಕ್ಷಿಣಕಾಶಿ ಎಂಬ ಉಪಮೆಯೂ ಸೇರಿಕೊಂಡಿದೆ.

ಶಿವಗಂಗೆ ಬೆಟ್ಟದ ತುದಿಯಲ್ಲಿ ಏಕಶಿಲೆಯಿಂದ ನಿರ್ಮಿಸಲಾದ ಬೃಹತ್ ನಂದಿ ವಿಗ್ರಹವಿದೆ. ಇದರಿಂದ ಮುಂದೆ ಸಾಗಿದರೆ ಪಾತಾಳಗಂಗೆ ದೇವಾಲಯ ಸಿಗುತ್ತದೆ. ಇಲ್ಲಿ ದೇವಾಲಯದ ಕೆಳಗೆ ಜಲ ಹರಿಯುತ್ತದೆ. ಇದಲ್ಲದೆ ಒಳಕಲ್ ತೀರ್ಥ ಕೂಡಾ ಜನರನ್ನು ಆಕರ್ಷಿಸುವ ಕೇಂದ್ರ. ಇಲ್ಲಿ ಸಣ್ಣದೊಂದು ಬಿಲದಂಥ ರಚನೆಯಲ್ಲಿ ಕೈ ಹಾಕಬೇಕು. ಯಾರ ಕೈಗೆ ನೀರು ತಾಕುತ್ತದೋ ಅವರು ಪುಣ್ಯ ಮಾಡಿದ್ದಾರೆ ಹಾಗೂ ನೀರು ತಾಕದವರು ಪಾಪಾತ್ಮರು ಎಂಬ ನಂಬಿಕೆ ಇದೆ.

ಇಲ್ಲಿ ಪ್ರಪಂಚದ ಅದ್ಭುತವೊಂದು ನಡೆಯುತ್ತೆ. ನಾವೆಲ್ಲ ನೋಡಿರೋದು ಬೆಣ್ಣೆಯಿಂದ ತುಪ್ಪ ಬರುತ್ತೆ ಅಂತಾ. ಆದ್ರೆ, ಇಲ್ಲಿ ಶಿವ ಲಿಂಗದ ಮೇಲೆ ತುಪ್ಪವನ್ನ ಹಾಕಿದರೆ ಅದು ಬೆಣ್ಣೆಯಾಗಿ ಪರಿವರ್ತನೆ ಆಗುತ್ತೆ. ಇದೊಂದು ನಿಜಕ್ಕೂ ಅಸಕ್ತಿದಾಯಕ ಪವಾಡ. ಅದರಲ್ಲೂ ಅಭಿಷೇಕದ ಸಮಯದಲ್ಲಿ ಭಕ್ತರು ಈ ಪವಾಡವನ್ನು ನೋಡಬಹುದು. ಅಷ್ಟೇ ಅಲ್ಲ ಬೆಣ್ಣೆಯಾಗುವ ಈ ತುಪ್ಪಕ್ಕೆ ಔಷಧೀಯ ಶಕ್ತಿ ಇದೆ ಮತ್ತು ಅನೇಕ ಖಾಯಿಲೆಗಳನ್ನು ಗುಣಪಡಿಸಬಹುದು ಎಂಬುದು ಇಲ್ಲಿ ನಂಬಿಕೆ.

ಈ ಸ್ಥಳದ ಗುಡ್ಡಗಾಡು ವೈಶಿಷ್ಟ್ಯವು ಸಾಕಷ್ಟು ಚಾರಣಿಗರನ್ನು ಸೆಳೆಯುತ್ತದೆ. ಇಲ್ಲಿ ರಾಕ್ ಕ್ಲೈಂಬಿಂಗ್‌ಗೆ ಕೂಡಾ ಅವಕಾಶವಿದ್ದು, ಇದರಿಂದ ಚಾರಣಿಗರ ಉತ್ಸಾಹ ದುಪ್ಪಟ್ಟಾಗಲಿದೆ. ಬೆಟ್ಟದ ಬುಡದಿಂದ ಸುಮಾರು 2 ಕಿಲೋಮೀಟರ್‌ನಷ್ಟು ಮೇಲಕ್ಕೆ ಚಾರಣ ಮಾಡಲು ಅವಕಾಶವಿದ್ದು, ಶೇ.80ರಷ್ಟು ಚಾರಣ ಸುಲಭವಾಗಿದ್ದರೆ, ಉಳಿದ 20 ಭಾಗ ಸ್ವಲ್ಪ ಸವಾಲಿನದಾಗಿದೆ. ಇಲ್ಲಿ ಚಾರಣಿಗರು ಎದುರಿಸುವ ಮತ್ತೊಂದು ಸವಾಲು ಮಂಗಗಳದ್ದು. ಅವು ನಿಮ್ಮಲ್ಲಿ ತಿನ್ನಲು ಏನಾದರೂ ಸಿಗಬಹುದೇ ಎಂಬ ಆಸೆಯಿಂದ ಹಿಂಬಾಲಿಸುವ ಜೊತೆಗೆ ದಾಳಿಯೂ ಮಾಡುತ್ತವೆ.

ಬೆಟ್ಟದ ಮೇಲೆ ನೋಡಬೇಕಾದ ಮತ್ತೊಂದು ಜಾಗ ನಾಟ್ಯ ರಾಣಿ ಶಾಂತಲೆಯು ಕೆಳಗೆ ಬಿದ್ದ ಜಾಗ. ಹಿಂದೆ ಈ ಸ್ಥಳವು ಹೊಯ್ಸಳ ರಾಜರ ನಿಯಂತ್ರಣದಲ್ಲಿತ್ತು ಮತ್ತು ವಿಷ್ಣುವರ್ಧನನ ಪತ್ನಿ ರಾಣಿ ಶಾಂತಲಾ, ಮಗನಿಗೆ ಜನ್ಮ ನೀಡಲಿಲ್ಲ ಎಂಬ ಖಿನ್ನತೆಯಿಂದ, ಈ ಬೆಟ್ಟದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡರು ಎಂಬ ನಂಬಿಕೆ ಇದೆ. ಹಾಗಾಗಿ ಶಾಂತಲಾ ಬಿದ್ದ ಆ ಸ್ಥಳವನ್ನು ಶಾಂತಲಾ ಡ್ರಾಪ್ ಅಂತಾನೆ ಕರೆಯುತ್ತಾರೆ. ಈ ಜಾಗ ಅಷ್ಟೇ ಭಯಾನಕವಾಗಿದೆ, ಹಾಗೂ ನೋಡಲು ಅದ್ಭುತವಾಗಿದೆ. ಈಗ ಕಂಬಿಗಳನ್ನ ಹಾಕಿದ್ದಾರೆ.

ಇನ್ನೂ ಇಲ್ಲಿ ಶಂಕರಾಚಾರ್ಯರ ಶಾಖಾ ಮಠವಿದೆ. ಅಷ್ಟೆ ಅಲ್ಲ ಶಾರದಾಂಬೆಯ ದೇವಸ್ಥಾನವೂ ಇದೆ. 108 ಲಿಂಗಗಳನ್ನುಳ್ಳ ಅಗಸ್ತ್ಯರ ದೇವಸ್ಥಾನವೂ ಇದೆ. ಇಲ್ಲೊಂದು ಪಾತಾಳ ಗಂಗೆ ಇದ್ದು ಸದಾ ನೀರಿನಿಂದ ತುಂಬಿರುತ್ತೆ. ವಿಚಿತ್ರವೆಂದರೆ ಇಲ್ಲಿ ಮಳೆಗಾಲದಲ್ಲಿ ನೀರು ಆಳಕ್ಕೆ ಹೋಗಿರುತ್ತೆ. ಬೇಸಿಗೆಯಲ್ಲಿ ನೀರು ಹೆಚ್ಚಾಗಿ ಮೇಲಕ್ಕೆ ಬರುತ್ತೆ. ಬೆಟ್ಟದ ಮೇಲಿದ್ದರು ಸಹ ಬೇಸಿಗೆಯಲ್ಲೂ ಸಹ ಇಲ್ಲಿ ನೀರು ಕಡಿಮೆ ಆಗುವುದೇ ಇಲ್ಲ.

ಇಲ್ಲೇ ಹತ್ತಿರದಲ್ಲಿ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯವಿದೆ. ತನ್ನ ವಾಸ್ತುಕಲೆಯಿಂದ ಪ್ರಸಿದ್ಧವಾಗಿರುವ ಈ ಹಳೆಯ ದೇವಾಲಯವು ಕೊರಟಗೆರೆಯ ಪ್ರಮುಖ ದೇವಾಲಯವಾಗಿದೆ. ಇದಲ್ಲದೆ, ಶಿವಗಂಗೆಯಿಂದ 30 ಕಿಲೋಮೀಟರ್ ದೂರದಲ್ಲಿ ಸಿದ್ಧರ ಬೆಟ್ಟವಿದೆ. ಈ ಸ್ಥಳದಲ್ಲಿ 9000 ಶಿವನ ಭಕ್ತರು ಶಿವಾರಾಧನೆಯಲ್ಲಿ ತೊಡಗಿ ಮೋಕ್ಷ ಪಡೆದರು ಎಂಬ ಕತೆಯಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು