News Karnataka Kannada
Sunday, April 28 2024
ಪರಿಸರ

ಸುಂದರ ಪರಿಸರ ನಿರ್ಮಾಣಕ್ಕೆ ಕೈಜೋಡಿಸೋಣ 

Untitled 2
Photo Credit :

ಜೂನ್ 5 ನ್ನು ಪರಿಸರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ಪರಿಸರದ ಬಗ್ಗೆ ಬಹಳಷ್ಟು ಮಾತನಾಡುತ್ತೇವೆ. ಒಂದಷ್ಟು ಗಿಡಗಳನ್ನು ನೆಟ್ಟು ಪರಿಸರ ಉಳಿಸಿ ಬಿಟ್ಟಿದ್ದೇವೆ ಎಂಬಂತೆ ಬೀಗುತ್ತೇವೆ.

ಹಾಗಾದರೆ ಪರಿಸರ ದಿನ ಅಂದರೆ ಇಷ್ಟೆನಾ? ಇಂತಹ ಪ್ರಶ್ನೆಗಳು ಮೂಡುವುದು ಸಹಜ ಏಕೆಂದರೆ ಪರಿಸರ ದಿನ ಎನ್ನುವುದು ಒಂದು ದಿನಕ್ಕೆ ಸೀಮಿತವಾದುದಲ್ಲ. ಅದು ವರ್ಷದ ಮೂನ್ನೂರ ಅರುವತೈದು ದಿನವೂ ನಮ್ಮ ಮನದಂಗಳದಲ್ಲಿ ಉಳಿಯ ಬೇಕು. ಪ್ರತಿದಿನವೂ ಪರಿಸರಕ್ಕೆ ಪೂರಕವಾದ ಒಂದೇ ಒಂದು ಕೆಲಸ ಮಾಡಿದರೆ ಸಾಕು. ಒಂದೊಳ್ಳೆಯ ಪರಿಸರವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.

ಕಳೆದ ಕೆಲವು ದಶಕಗಳಿಂದೀಚೆಗೆ ಪರಿಸರದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಜನ ಸಂಖ್ಯೆ ಹೆಚ್ಚುತ್ತಿದ್ದಂತೆಯೇ  ಜನವಸತಿ ಪ್ರದೇಶಗಳು ಹೆಚ್ಚಾಗಿವೆ. ಹೀಗಾಗಿ ಕೋಟ್ಯಾಂತರ ಎಕರೆ ಕೃಷಿ ಭೂಮಿಗಳು ಜನವಸತಿ ಪ್ರದೇಶಗಳಾಗಿ ಬದಲಾಗಿವೆ. ಅಲ್ಲಿದ್ದ ಗಿಡಮರಗಳು ನಾಶವಾಗಿವೆ.

ಇನ್ನು ನಮ್ಮ ಬೆಳವಣಿಗೆಗೆ ತಕ್ಕಂತೆ ಹೆದ್ದಾರಿ, ಕಟ್ಟಡಗಳು, ಕಾರ್ಖಾನೆಗಳು, ಹೀಗೆ ಹಲವು ಅಭಿವೃದ್ಧಿ ಕೆಲಸಗಳಾಗಿವೆ. ಅದು ಸಾಧ್ಯವಾಗಿದ್ದರಿಂದ ಪರಿಸರದ ಮೇಲೆ ಪರಿಣಾಮವಾಗಿದೆ. ಆದರೆ ಹೆಚ್ಚುತ್ತಿರುವ ಕಲುಷಿತ ವಾತಾವರಣವನ್ನು ತಡೆಯುವ ಕೆಲಸವನ್ನು ಮಾಡಲು ಪ್ರತಿಯೊಬ್ಬ ನಾಗರಿಕರಿಗೂ ಅವಕಾಶವಿದೆ.

ಪರಿಸರವನ್ನು ಕಾಪಾಡುವುದು ಅಂದರೆ ಗಿಡಗಳನ್ನು ನೆಟ್ಟು ಬಿಡುವುದಷ್ಟೇ ಅಲ್ಲ. ನೆಟ್ಟ ಗಿಡವನ್ನು ನೀರು ಗೊಬ್ಬರ ಹಾಕಿ ಬೆಳೆಸುವುದು ಮತ್ತು ಸುತ್ತಮುತ್ತಲ ಪರಿಸರವನ್ನು ಶುಚಿಯಾಗಿಟ್ಟುಕೊಂಡು, ರೋಗರುಜಿನಗಳು ಬಾರದಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ.

ವಾತಾವರಣದಲ್ಲಿ ಏರುಪೇರುಗಳನ್ನು ಇತ್ತೀಚೆಗಿನ ದಿನಗಳಲ್ಲಿ ನಾವು ನೋಡುತ್ತಿದ್ದೇವೆ. ವಾಡಿಕೆಯಂತೆ ಮಳೆ, ಬಿಸಿಲು, ಚಳಿ ಯಾವುದೂ ನಡೆಯುತ್ತಿಲ್ಲ. ವಿಕೋಪಗಳು ಜಾಸ್ತಿಯಾಗುತ್ತಿವೆ.

ಗ್ರಾಮೀಣ ಪ್ರದೇಶಗಳಲ್ಲಿನ ಕಾಡುಗಳು ನಾಶವಾಗಿ ತೋಟಗಳಾಗಿವೆ. ಗದ್ದೆಗಳು ನಿವೇಶನಗಳಾಗಿ ಕಾಂಕ್ರಿಟ್ ಕಾಡಾಗಿ ಮಾರ್ಪಟ್ಟಿದೆ. ಮಾವು, ಹಲಸು, ನೇರಳೆ ಸೇರಿದಂತೆ ಹಲವು ರೀತಿಯ ಪರಿಸರ ಸ್ನೇಹಿ ಗಿಡನೆಟ್ಟು ಅದರಿಂದ ಒಂದಷ್ಟು ಜೀವಿಗಳಿಗೆ ಬದುಕಲು ಅವಕಾಶ ಮಾಡಿಕೊಡುವ ಮನೋಭಾವವಿಲ್ಲ. ಇವತ್ತು ಗಿಡನೆಟ್ಟರೆ ಇನ್ನೊಂದು ಹತ್ತು ವರ್ಷ ಬಿಟ್ಟು ಕಡಿದರೆ ಅದರಿಂದ ಎಷ್ಟು ಆದಾಯ ಬರಬಹುದು ಎಂದು ಆಲೋಚಿಸುತ್ತಿದ್ದೇವೆ.

ಆದಾಯ ತಂದು ಕೊಡುವ ನೀಲಗಿರಿ, ಸಿಲ್ವರ್‌ಓಕ್, ತೇಗದ ಮರಗಳನ್ನು ನೆಡುತ್ತೇವೆ. ಅವುಗಳಿಂದ ಹಸಿರುವ ಪ್ರಪಂಚವನ್ನು ಸೃಷ್ಠಿ ಮಾಡುತ್ತಿದ್ದೇವೆ. ಮುಂದೆ ಆದಾಯವನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ ಪರಿಸರ ಸ್ನೇಹಿ ಅರಣ್ಯವನ್ನು ಪಡೆಯಲು ಸಾಧ್ಯನಾ ಎಂದು ನಾವ್ಯಾರು ಯೋಚಿಸುತ್ತಲೇ ಇಲ್ಲ.

ನೀಲಗಿರಿ ಮರದಡಿಯಲ್ಲಿ ಹುಲ್ಲು ಕೂಡ ಹುಟ್ಟುವುದಿಲ್ಲ. ಅವುಗಳಿಂದ ಪ್ರಾಣಿಪಕ್ಷಿ ಭೂಮಿಗೂ ಒಳಿತಾಗುವುದಿಲ್ಲ. ಅವು ಹಣ ತಂದು ಕೊಡುತ್ತವೆ ಎಂಬ ಉದ್ದೇಶಕ್ಕಷ್ಟೆ ನಾವು ಅವುಗಳನ್ನು ಬೆಳೆಯುತ್ತಿದ್ದೇವೆ. ನಮಗೆ ಪರಿಸರ ಸ್ನೇಹಿ ಅರಣ್ಯ ಬೇಕಾಗಿಲ್ಲ. ಇದರ ಪರಿಣಾಮವೇ ಇವತ್ತು ವನ್ಯಪ್ರಾಣಿಗಳು ಕಾಡು ಬಿಟ್ಟು ನಾಡಿನತ್ತ ಬರುವಂತಾಗಿದೆ.

ಪ್ರತಿವರ್ಷ ಪರಿಸರ ದಿನಾಚರಣೆಯನ್ನು ಗಿಡನೆಡುವುದರ ಮೂಲಕ ಆಚರಿಸುತ್ತಿದ್ದೇವೆ. ಸಾವಿರಾರು ಗಿಡಗಳನ್ನು ನೆಡುತ್ತಿದ್ದೇವೆ. ಇವತ್ತಿನ ಪರಿಸ್ಥಿತಿಯಲ್ಲಿ ಗಿಡವನ್ನು  ನೆಡುವುದಕ್ಕಿಂತ ನೆಟ್ಟ ಗಿಡವನ್ನು ಸಂರಕ್ಷಿಸುವುದು ಅಗತ್ಯವಾಗಿದೆ. ಹಾಗೆ ಮಾಡಿದರೆ ಮಾತ್ರ ಪರಿಸರ ದಿನಾಚರಣೆಗೆ ಅರ್ಥ ಬರುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು