News Karnataka Kannada
Sunday, May 12 2024
ಲೇಖನ

ನಿಸರ್ಗ ಪ್ರೇಮಿಗಳನ್ನು ಸೆಳೆಯುವ ಮೈಸೂರಿನ ಚಾಮುಂಡಿಬೆಟ್ಟ

Chamundi Betta
Photo Credit : News Kannada

ಮೈಸೂರಿನ ಮುಕುಟಮಣಿಯಾಗಿರುವ ಚಾಮುಂಡಿಬೆಟ್ಟ ಇದೀಗ ಹಸಿರು ಹಚ್ಚಡದೊಂದಿಗೆ ಕಂಗೊಳಿಸುತ್ತಾ ನಿಸರ್ಗ ಪ್ರಿಯರನ್ನು ತನ್ನಡೆಗೆ ಸೆಳೆಯುತ್ತಿದೆ. ತಣ್ಣಗೆ ಬೀಸುವ ತಂಗಾಳಿ, ಮುತ್ತಿಕ್ಕುವ ಮಂಜು, ಚಿಲಿಪಿಲಿ ಗುಟ್ಟುವ ಹಕ್ಕಿಗಳು. ಕಣ್ಣು ಹಾಯಿಸಿದುದ್ದಕ್ಕೂ ಹಸಿರ ನೋಟ ಮೈಮನವನ್ನು ಪುಳಕಗೊಳಿಸುತ್ತಿದೆ.

ಮುಂಜಾನೆಯಂತು ಮಂಜಿನಿಂದ ಆವರಿಸುವ ಬೆಟ್ಟದ ಹಾದಿಯಲ್ಲಿ ನಡೆಯುವುದೇ ಒಂದು ರೀತಿಯ ಮಜಾ.. ಈ ಸುಂದರ ಕ್ಷಣಗಳನ್ನು ಅನುಭವಿಸಲೆಂದೇ ಪ್ರವಾಸಿಗರು ಮುಂಜಾನೆ ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಿದ್ದು, ಕಾನನದ ನಡುವಿನ ಮೆಟ್ಟಿಲ ಮೇಲೆ ಒಂದೊಂದೇ ಹೆಜ್ಜೆಯಿಡುತ್ತಾ ನಿಸರ್ಗದ ನೋಟವನ್ನು ಸವಿಯುತ್ತಾ ಖುಷಿಪಡುತ್ತಾರೆ.

ಬೆಟ್ಟದ ಮೇಲಿನ ವೀಕ್ಷಣಾ ತಾಣ(ವ್ಯೂಪಾಯಿಂಟ್) ನಿಂದ ನಿಂತು ಒಮ್ಮೆ ಕಣ್ಣು ಹಾಯಿಸಿದರೆ ಕಾಣಸಿಗುವ ಮೈಸೂರು ನಗರದ ನೋಟ ಮುದನೀಡುತ್ತದೆ. ನಿಸರ್ಗದ ನಡುವೆ ಪ್ರಶಾಂತ ವಾತಾವರಣದಲ್ಲಿ ಒಂದಷ್ಟು ಹೊತ್ತು ಕಳೆದು ಹೋದರೆ ನಿತ್ಯದ ಜಂಜಾಟಗಳ ನಡುವೆಯೂ ಮನಸ್ಸು ಹಗುರವಾಗುತ್ತದೆ. ಬಹಳಷ್ಟು ಜನ ಪ್ರಕೃತಿಯ ನಡುವೆ ಒಂದಷ್ಟು ಹೊತ್ತನ್ನು ಕಳೆಯುವ ಮೂಲಕ ಒಂದೊಳ್ಳೆಯ ಗಾಳಿ ಬೆಳಕಿಗೆ ಮೈಯೊಡ್ಡಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ.

ದೂರದಿಂದಲೇ ಹಚ್ಚಹಸಿರು ಹೊದ್ದು ಮಲಗಿದಂತೆ ಕಾಣುವ ಚಾಮುಂಡಿ ಬೆಟ್ಟದ ವಿಹಂಗಮ ನೋಟ ಅದರ ಮೇಲೆ ಮಂಜಿನ ತೆರೆಯ ನಾಗಾಲೋಟ ಬೆಟ್ಟದತ್ತ ಹೆಜ್ಜೆ ಹಾಕುವಂತೆ ಮಾಡುತ್ತಿದೆ. ಸಮುದ್ರ ಮಟ್ಟಕ್ಕಿಂತ 3489 ಅಡಿ ಎತ್ತರದಲ್ಲಿರುವ ಬೆಟ್ಟದಲ್ಲಿ ಪಾದದಿಂದ ದೇವಾಲಯಕ್ಕೆ ಹತ್ತಿಕೊಂಡು ಹೋಗಲು ದೊಡ್ಡದೇವರಾಜ ಒಡೆಯರ್ ಒಂದು ಸಾವಿರ ಮೆಟ್ಟಿಲುಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಸುಮಾರು 700 ಮೆಟ್ಟಿಲುಗಳನ್ನೇರಿದಾಗ ಸಮತಟ್ಟಾದ ಸ್ಥಳ ಸಿಗುತ್ತದೆ. ಮೆಟ್ಟಿಲೇರಿ ಬಂದವರಿಗೆ ಇಲ್ಲೊಂದಿಷ್ಟು ವಿಶ್ರಾಂತಿ ಸಿಗುತ್ತದೆ. ಜತೆಗೆ ಬೀಸಿ ಬರುವ ತಂಗಾಳಿ ಸುಸ್ತಾದ ಮನಕ್ಕೆ ಉಲ್ಲಾಸವನ್ನು ನೀಡುತ್ತದೆ. ಇಲ್ಲಿ ಕೆತ್ತಲಾಗಿರುವ ಸುಮಾರು 16 ಅಡಿ ಎತ್ತರ 26 ಅಡಿ ಉದ್ದದ ಈ ಶಿಲಾಮೂರ್ತಿ ನಂದಿ ಬಹು ಅಪರೂಪದ್ದಾಗಿದೆ.

ಅಲ್ಲಿಂದ ಮುಂದೆ ಮೆಟ್ಟಿಲೇರುತ್ತಾ ಹೋದರೆ ಹಾಸುಬಂಡೆಯ ಒಂದಷ್ಟು ವಿಶಾಲ ಜಾಗ ಕಾಣಿಸುತ್ತದೆ. ಇದೊಂದು ವೀಕ್ಷಣತಾಣವಾಗಿದ್ದು, ಇಲ್ಲಿಂದ ನಿಂತು ನೋಡಿದರೆ ಮೈಸೂರು ನಗರದ ಸುಂದರ ನೋಟ ಲಭ್ಯವಾಗುತ್ತದೆ. ಜೊತೆಗೆ ದೂರದ ಕೃಷ್ಣರಾಜಸಾಗರ ಜಲಾಶಯದ ಅಲೆಯಾಡುವ ನೀರಿನ ನೋಟವೂ ಲಭ್ಯವಾಗುತ್ತದೆ.

ಇದೆಲ್ಲದರ ನಡುವೆ ರಸ್ತೆ ಮೂಲಕ ವಾಹನಗಳಲ್ಲಿ ತೆರಳಿದರೆ ಹಲವು ಕಡೆ ವ್ಯೂ ಪಾಯಿಂಟ್‌ಗಳಿದ್ದು ಅಲ್ಲಿಂದರೂ ಚಾಮುಂಡಿಬೆಟ್ಟದ ನಿಸರ್ಗ ಸೌಂದರ್ಯ ಮಾತ್ರವಲ್ಲದೆ, ಮೈಸೂರು ನಗರ ಹಾಗೂ ಗ್ರಾಮೀಣ ಪ್ರದೇಶಗಳ ನೈಜ ಸುಂದರತೆ ಕಣ್ತುಂಬಿ ಬರುತ್ತದೆ. ಸದಾ ಕೆಲಸ ಮತ್ತು ಇತರೆ ಒತ್ತಡದಲ್ಲಿ ಸಿಲುಕಿ ನಲುಗಿದವರು ತಮ್ಮ ಜಂಜಾಟವನ್ನೆಲ್ಲ ಬದಿಗೊತ್ತಿ ಒಂದಷ್ಟು ಸಮಯವನ್ನು ಪ್ರಕೃತಿ ಮಡಿಲಲ್ಲಿ ಕಳೆಯಬೇಕೆಂಬ ಮನಸಿದ್ದರೆ ಮುಂಜಾನೆ ಚಾಮುಂಡಿಬೆಟ್ಟದತ್ತ ಬಂದರೆ ನಿಸರ್ಗದ ಒಡನಾಟದಲ್ಲಿ ನಮ್ಮ ಒತ್ತಡಗಳು ಪರಿಹಾರವಾಗಿ ಮನಶಾಂತಿ ಸಿಗಲು ಸಾಧ್ಯವಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು