News Karnataka Kannada
Monday, May 06 2024
ವಿಶೇಷ

ಬರೀ 28 ಸೆ.ಮೀ. ಮಳೆಗೆ ಸುಬ್ರಹ್ಮಣ್ಯದಲ್ಲಿ ಜಲಸ್ಫೋಟ, ಆತಂಕದಲ್ಲಿ ಜನ ಜೀವನ

Only 28 cm. Water explodes in Subramanya due to rain, people live in panic
Photo Credit : By Author

ಬರೀ 28 ಸೆ.ಮೀ. ಮಳೆ ; ಇಷ್ಟಕ್ಕೇ ಪ್ರಕೃತಿ ಮುನಿದಿದ್ದು ಯಾಕೆ ? ಯಾರೋ ಮಾಡಿದ ಕರ್ಮಕ್ಕೆ ಇನ್ಯಾರೋ ಬಲಿಪಶು !! ಪಶ್ಚಿಮ ಘಟ್ಟಗಳಲ್ಲಿ ಬಿರುಕು, ಗೀರು ಗಾಯಕ್ಕೆ ಹೊಣೆ ಯಾರು ? ರಾಜಕಾರಣಿಗಳ ತೀಟೆಗೆ ಜನಸಾಮಾನ್ಯರ ಬಲಿಯೇ?

ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಇತಿಹಾಸ ಕಂಡು ಕೇಳರಿಯದ ರೀತಿ ಮಳೆಯಾಗಿದೆ ಅಂದ್ರೆ ತಪ್ಪು ಹೇಳಿದಂತಾಗುತ್ತದೆ. ಆಗಸ್ಟ್ 1ರ ಸೋಮವಾರ ಒಂದೇ ದಿನ ಬಿದ್ದ ಮಳೆ 28 ಸೆಂಟಿ ಮೀಟರ್. ಆದರೆ ಅಷ್ಟಕ್ಕೇ ಸುಬ್ರಹ್ಮಣ್ಯ ಆಸುಪಾಸಿನ ಗ್ರಾಮಗಳಲ್ಲಿ ಅನಾಹುತವನ್ನೇ ಸೃಷ್ಟಿಸಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಸುಬ್ರಹ್ಮಣ್ಯ ಆಸುಪಾಸಿನಲ್ಲಿ 28 ಸೆಂಟಿ ಮೀಟರ್ ಮಳೆಯಾಗಿದ್ದರೆ, ಸಂಪಾಜೆ, ಕಲ್ಲುಗುಂಡಿ ಆಸುಪಾಸಿನಲ್ಲಿ 140 ಸೆಂಟಿ ಮೀಟರ್ ಮಳೆ ಬಿದ್ದಿದೆ. ಇದೇ ವೇಳೆ, ಭಟ್ಕಳ ಆಸುಪಾಸಿನಲ್ಲಿ 50 ಸೆಂಟಿ ಮೀಟರ್ ಮಳೆಯಾಗಿದೆ. ಸುಬ್ರಹ್ಮಣ್ಯದಲ್ಲಿ ಜಲಸ್ಫೋಟ ಉಂಟಾಗಿ, ಪಶ್ಚಿಮ ಘಟ್ಟಗಳು ಬಾಯ್ದೆರೆದು ನಿಂತಿದ್ದರೆ, ಭಟ್ಕಳದಲ್ಲಿ ಅದರ ಎರಡು ಪಟ್ಟು ಮಳೆಯಾಗಿದ್ದರೂ ಅಂತಹ ತೊಂದರೆ ಆಗಿಲ್ಲ.

ಭಟ್ಕಳದ ಮುತ್ತತ್ತಿಯಲ್ಲಿ 53 ಸೆಂಟಿ ಮೀಟರ್, ಮುಂಡಳ್ಳಿ 52 ಸೆಮೀ, ಭಟ್ಕಳದಲ್ಲಿ 51 ಸೆಮೀ, ಮಾವಿನಕುರ್ವೆ- 49 ಸೆಮೀ, ಭಟ್ಕಳ ಕೊಪ್ಪದಲ್ಲಿ 48 ಸೆಮೀ, ಭಟ್ಕಳ ಬೆಂಗ್ರೆ-45 ಸೆಮೀ, ಮಾರುಕೇರಿ- 38 ಸೆ.ಮೀ, ಕಾಯ್ಕಿಣಿ- 35 ಸೆಮೀ, ಭಟ್ಕಳ ಮಾವಳ್ಳಿ -22 ಸೆಮೀ ಮಳೆಯಾಗಿದ್ದರೆ, ಕುಂದಾಪುರದ ಶಿರೂರಿನಲ್ಲಿ 47 ಸೆಮೀ, ಪಡುವರಿ- 39 ಸೆಮೀ, ಯಡ್ತರೆ- 35 ಸೆಮೀ, ಕಾಲ್ತೋಡು- 23, ಬಿಜೂರು- 21 ಸೆಮೀ, ಉಪ್ಪುಂದ – 27 ಸೆಮೀ ಮಳೆಯಾಗಿದೆ ಅಂತ ಹವಾಮಾನ ಇಲಾಖೆ ಅಂಕಿ ಅಂಶ.

ಕರಾವಳಿಯಲ್ಲಿ ಮಳೆಗಾಲದಲ್ಲಿ ಮಳೆ ಹೊಸತಲ್ಲ. ಹಿಂದಿನಿಂದಲೂ ಇದೇ ರೀತಿ ಮಳೆ ಬೀಳುತ್ತಿದ್ದ ಅಂಕಿ ಅಂಶಗಳಿವೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಒಂದೇ ದಿನ 28 ಸೆಮೀ ಮಳೆಯಾಗಿದ್ದರೆ, ಮೊನ್ನೆ ಜುಲೈ ಮೊದಲ ವಾರದದಲ್ಲಿ ಮಂಗಳೂರಿನಲ್ಲಿ ಇದಕ್ಕಿಂತ ಹೆಚ್ಚು ಮಳೆಯಾಗಿತ್ತು. ಪುಷ್ಪಗಿರಿ ಬೆಟ್ಟಗಳ ಸಾಲು ಸುಬ್ರಹ್ಮಣ್ಯ, ಸಂಪಾಜೆ ಆಸುಪಾಸಿನಲ್ಲಿ ಮಾತ್ರ ವಿಪರೀತ ಎನ್ನುವ ರೀತಿ ದುರಂತಗಳು ಸಂಭವಿಸಿದ್ದನ್ನು ಯಾಕೆಂದು ಕೆದಕುತ್ತಾ ಹೋದರೆ ಅಚ್ಚರಿಯ ಮಾಹಿತಿಗಳು ಸಿಗುತ್ತವೆ.

ಜೋಡುಪಾಲ ಮಾದರಿ ದುರಂತ !

ಕಳೆದ ಬಾರಿ ಸಂಪಾಜೆ, ಮಡಿಕೇರಿ ವ್ಯಾಪ್ತಿಯ ಜೋಡುಪಾಲ, ಮದೆನಾಡು, ಮೊಣ್ಣಂಗೇರಿ, ನಾಪೋಕ್ಲು ಭಾಗದಲ್ಲಿ ಆಗಿರುವ ರೀತಿಯಲ್ಲೇ ಈ ಬಾರಿಯೂ ಅದರ ಇನ್ನೊಂದು ಭಾಗದ ಬೆಟ್ಟಗಳ ಸಾಲಿನಲ್ಲಿ ಸ್ಫೋಟಗಳಾಗಿದ್ದು, ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರ, ಹರಿಹರ, ಸುಬ್ರಹ್ಮಣ್ಯ ಗ್ರಾಮಗಳು ಅಕ್ಷರಶಃ ನಲುಗಿ ಹೋಗಿವೆ. ಬೆಟ್ಟಗಳ ನಡುವೆ ಭೀಕರ ಸ್ಫೋಟಗಳಾಗಿ ಗೀರು ಗಾಯಗಳಾಗಿರುವುದು ದೂರಕ್ಕೇ ಬರಿಕಣ್ಣಿಗೆ ಕಾಣುತ್ತಿದೆ. ಭಾರೀ ಪ್ರಮಾಣದ ನೀರು ಜಲಾಶಯದ ಸಾವಿರ ಪಟ್ಟು ವೇಗದಲ್ಲಿ ಬೆಟ್ಟಗಳ ಎಡೆಯಿಂದ ಒಡೆದು ಹೊರ ಬರುತ್ತಿದ್ದು ಅಲ್ಲಿದ್ದ ಬೃಹತ್ ಮರಗಳು ಛಿದ್ರಗೊಂಡು ಬಿದ್ದಿವೆ. ಬಂಡೆ ಕಲ್ಲುಗಳು, ಮಣ್ಣು ದೂರಕ್ಕೆ ಅಪ್ಪಳಿಸಿದಂತೆ ಬಿದ್ದಿದೆ. ಮಣ್ಣು ಕೆಸರು, ಮರಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದಿದ್ದನ್ನು ನೋಡಿದರೆ ಏನೋ ಬಾಂಬ್ ಸ್ಪೋಟ ಆಗಿದೆಯೋ ಅನ್ನುವಂತಿದೆ. ದಿಢೀರ್ ಆಗಿ ಬರುತ್ತಿರುವ ಪ್ರವಾಹ ತಪ್ಪಲು ಭಾಗದಲ್ಲಿ ಜನರು ವಸತಿಯ ಗ್ರಾಮಗಳನ್ನು ಸಪಾಟಾಗಿಸಿದೆ. ಗುಡ್ಡ ಕುಸಿದು ಹಲವಾರು ಮನೆಗಳಿಗೆ ಆಪತ್ತು ಎದುರಾಗಿದೆ. ಹಿಂದೆಲ್ಲ ಎಷ್ಟೇ ಮಳೆ ಬಂದರೂ, ಈ ರೀತಿಯ ಘಟನೆ ಆಗಿದ್ದ ಉದಾಹರಣೆಯೇ ಇಲ್ಲ. ಆ ಭಾಗದ ಜನರು ಕೂಡ ಇಂಥ ವೈರುಧ್ಯಗಳನ್ನು ಕಂಡಿಲ್ಲ.‌

ಇತಿಹಾಸದಲ್ಲಿ ಕಂಡರಿಯದ ಜಲಸ್ಫೋಟ ಈಗ ಯಾಕೆ ?

ಕಳೆದ ಐದಾರು ವರ್ಷಗಳಲ್ಲಿ ಕಡೂರು, ಬೆಳ್ತಂಗಡಿ, ಸುಳ್ಯ, ಸಕಲೇಶಪುರ, ಸಂಪಾಜೆ, ಮಡಿಕೇರಿ ವ್ಯಾಪ್ತಿಯಲ್ಲಿ ಇಂಥಹದ್ದೇ ಜಲ ಸ್ಫೋಟ ಘಟನೆಗಳು ಮರುಕಳಿಸುತ್ತಿವೆ. ಇದಕ್ಕೂ ಮೊದಲು ಇತಿಹಾಸದಲ್ಲಿ ಈ ರೀತಿಯ ದುರಂತ ಎದುರಾಗಿದ್ದೇ ಇಲ್ಲ. ಬೆಟ್ಟಗಳು ಭೀಕರವಾಗಿ ಸ್ಫೋಟಗೊಂಡು ಜನ ಕಂಡುಕೇಳರಿಯದ ರೀತಿ ಜಲಪ್ರವಾಹಗಳು ಎದುರಾಗುತ್ತಿವೆ. ಆಗಸ್ಟ್ ಒಂದರ ರಾತ್ರಿ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಎದುರಲ್ಲಿ ಹರಿಯುವ ದರ್ಪಣ ತೀರ್ಥದಲ್ಲಿ ಅಲ್ಲಿನ ಜನ ಹಿಂದೆಂದೂ ಕಂಡರಿಯದ ರೀತಿ ಕೆಸರು ಮಣ್ಣಿನೊಂದಿಗೆ ಪ್ರವಾಹ ಬಂದಿತ್ತು. ಮರಗಳ ದಿಮ್ಮಿಗಳು ಛಿದ್ರಗೊಂಡು ಬಂದು ದೇವಸ್ಥಾನದ ಮುಂದೆ ಬಿದ್ದಿವೆ.

ಕಲ್ಮಕಾರಿನ ಕಾಡಿನ ಮಧ್ಯೆ ಬೆಟ್ಟಗಳೇ ಛಿದ್ರಗೊಂಡು ಬಿದ್ದಿವೆ. ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರ ಗ್ರಾಮದಲ್ಲು ಇಂಥದ್ದೇ ಸ್ಫೋಟಗಳು ನಡೆದಿವೆ. ಒಂದೇ ದಿನ ಬೆಟ್ಟಗಳ ಮೇಲೆ ಗೀರು ಬಿದ್ದ ರೀತಿ ಗಾಯದ ಗುರುತು ಕಂಡುಬಂದಿದೆ. ಪ್ರತಿ ಬಾರಿ ಇದೇ ರೀತಿಯ ಅನಾಹುತ ಇಲ್ಲಿ ಯಾಕೆ ಸಂಭವಿಸುತ್ತಿದೆ ಅನ್ನುವ ಬಗ್ಗೆ ಸರಕಾರದ ಭೂಗರ್ಭ ಶಾಸ್ತ್ರಜ್ಞರು ನಿಖರವಾಗಿ ಹೇಳುತ್ತಿಲ್ಲ. ಮಾನವ ನಿರ್ಮಿತ ವೈಪರೀತ್ಯಗಳ ಪರಿಣಾಮ ಎಂದಷ್ಟೇ ಹೇಳುತ್ತಾರೆ. ಆದರೆ ಇದೇ ಪರಿಸರದ ನಡುವೆ ಇರುವ ಸಕಲೇಶಪುರದ ಎತ್ತಿನಹೊಳೆ ಯೋಜನೆಯ ಕಾರಣಕ್ಕೆ ಎಂದು ಹೇಳಲು ಅವರಲ್ಲಿ ಗುಂಡಿಗೆ ಇಲ್ಲ.

ಪಶ್ಚಿಮ ಘಟ್ಟದ ತುದಿಯನ್ನು ಅಗೆದು ಸಮತಟ್ಟು ಮಾಡಿರುವುದು, ನಿಧಾನಕ್ಕೆ ಮಳೆನೀರು ಇಂಗುತ್ತಿದ್ದ ಜಾಗವನ್ನು ಅಗೆದಿದ್ದರಿಂದ ಅಲ್ಲಿ ಮಳೆಯಾದಾಗ ನೀರು ಒಳಗಡೆ ಇಳಿದು, ಅದೇ ನೀರು ತಳಭಾಗದ ಬೆಟ್ಟಗಳೆಡೆಯಲ್ಲಿ ಬಂದು ಸಡಿಲ ಇರುವಲ್ಲಿ ಸ್ಫೋಟಗೊಂಡು ಹೊರಬರುತ್ತದೆ ಎನ್ನುತ್ತಾರೆ, ಪರಿಸರ ತಜ್ಞರು. ಮೇಲಿನಿಂದ ಇಳಿದ ನೀರು ಹೊರಗೆ ಬರಲೇಬೇಕು, ಅದು ಪ್ರಕೃತಿ ನಿಯಮ. ಬ್ಲಾಸ್ಟ್ ಆಗುವಾಗಿನ ತೀವ್ರತೆ ಎಷ್ಟಿರಬಹುದು ಅನ್ನೋದನ್ನು ಅಲ್ಲಿನ ಸ್ಥಿತಿಯನ್ನು ನೋಡಿದರೆ ತಿಳಿಯುತ್ತದೆ.‌

ದಾರಿ ತಪ್ಪಿಸುವ ಸರಕಾರಿ ಅಧಿಕಾರಿಗಳು

ಆದರೆ ಈ ದುರಂತಗಳ ಬಗ್ಗೆ ತಿಳಿದಿದ್ದರೂ, ನೈಜ ಕಾರಣವನ್ನು ಪ್ರಾಕೃತಿಕ ವಿಕೋಪ ಇಲಾಖೆಯ ತಜ್ಞರು ಸರಕಾರದ ಮುಂದಿಡುವುದಿಲ್ಲ. ಪ್ರತಿ ಬಾರಿ ಅಧ್ಯಯನಕ್ಕೆ ಬಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟ ರೀತಿ ಏನೋ ವರದಿ ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ಸರಕಾರದ ಅವೈಜ್ಞಾನಿಕ ಯೋಜನೆಗಳಿಂದಾಗಿಯೇ ಯಾರೋ ಅಮಾಯಕರು ಬಲಿಪಶು ಆಗುತ್ತಿದ್ದಾರೆ ಎನ್ನುವುದನ್ನು ವರದಿಯಲ್ಲಿ ತೋರಿಸುತ್ತಿಲ್ಲ. ಇದರಿಂದಾಗಿ ಯಾರೋ ಮಾಡಿದ ಕರ್ಮಕ್ಕೆ ಅಮಾಯಕ ಜನರು ಪ್ರತಿಬಾರಿ ಬಲಿಯಾಗುತ್ತಿದ್ದಾರೆ. ಕಳೆದ ಬಾರಿ ಮಡಿಕೇರಿ, ಸಂಪಾಜೆ ಆಸುಪಾಸಿನಲ್ಲಿ ದುರಂತ ಎದುರಾಗಿತ್ತು. ಆನಂತರದ ವರ್ಷಗಳಲ್ಲಿ ಬೆಳ್ತಂಗಡಿಯ ಮಲವಂತಿಗೆ, ದಿಡುಪೆ ಆಸುಪಾಸಿನಲ್ಲಿ ಇದೇ ಮಾದರಿ ದುರಂತ ಉಂಟಾಗಿತ್ತು. ದಿಢೀರ್ ಆಗಿ ಎಲ್ಲೋ ಒಂದ್ಕಡೆ ಬೆಟ್ಟಗಳು ಸ್ಫೋಟಗೊಂಡು ಕೆಸರು ನೀರಿನ ಪ್ರವಾಹ ಉಂಟಾಗಿ ಜನರನ್ನು ಚಕಿತಗೊಳಿಸುವ ಘಟನೆಗಳು ನಡೆದಿವೆ. ಇವೆಲ್ಲವನ್ನು ನೋಡಿದ ಜನಸಾಮಾನ್ಯ ಏನೋ ಪ್ರಳಯ ಆಗ್ತಿದೆಯಾ ಎಂದು ತಲೆ ಚಚ್ಚಿಕೊಂಡಿದ್ದಾನೆ. ಚಾಂಡಾಲ ರಾಜಕಾರಣಿಗಳು ಮತ್ತು ಪಾಪಿಷ್ಠ ಅಧಿಕಾರಿ ವರ್ಗ ಮಾಡ್ತಿರುವ ಯೋಜನೆಯ ಪರಿಣಾಮ ಅನ್ನುವ ಪರಿಜ್ಞಾನ ಇನ್ನೂ ಬಂದಿಲ್ಲ.

ಕಸ್ತೂರಿರಂಗನ್ ವರದಿಯಾದ್ರೂ ಜಾರಿಯಾಗಲಿ

ಇದೇ ವೇಳೆ, ಸರಕಾರದ ಅವೈಜ್ಞಾನಿಕ ಯೋಜನೆಗಳಿಗೆ ಶಾಶ್ವತವಾಗಿ ಇತಿಶ್ರೀ ಹಾಕಬಲ್ಲ ಪಶ್ಚಿಮ ಘಟ್ಟಗಳ ಉಳಿವಿಗಾಗಿ ಕೊಟ್ಟಿರುವ ಕಸ್ತೂರಿ ರಂಗನ್ ವರದಿ, ಮಾಧವ ಗಾಡ್ಗೀಳ್ ವರದಿಗಳನ್ನು ಸರಕಾರಿ ಪ್ರಾಯೋಜಿತ ಎಸ್ಟೇಟ್ ಮಾಫಿಯಾಗಳು, ರಾಜಕಾರಣಿಗಳು ನಿರಾಕರಣೆ ಮಾಡುತ್ತಲೇ ಬಂದಿದ್ದಾರೆ. ಇಂಥ ವರದಿಗಳಿಂದ ಅಲ್ಲಿರುವ ಮೂಲ ನಿವಾಸಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಹೊಸತಾಗಿ ಬಂದು ಅರಣ್ಯ ಅತಿಕ್ರಿಮಿಸಿ ಎಸ್ಟೇಟ್ ಮಾಡಲಾಗದು ಅಷ್ಟೇ. ದೊಡ್ಡ ರೀತಿಯ ಅಭಿವೃದ್ಧಿ ಯೋಜನೆಗಳು, ಹೊಸತಾಗಿ ಅಣೆಕಟ್ಟುಗಳು, ಜಲವಿದ್ಯುತ್ ಸ್ಥಾವರಗಳನ್ನು ಮಾಡುವಂತಿಲ್ಲ. ಇದರಿಂದ ಸಾಮಾನ್ಯ ಜನರಿಗಂತೂ ದೊಡ್ಡ ಸಮಸ್ಯೆ ಆಗುವುದಿಲ್ಲ. ಸ್ಥಳೀಯ ಗ್ರಾಮ ಪಂಚಾಯತಿ ಮೂಲಕ ಅಷ್ಟಿಷ್ಟು ಕೆಲಸವನ್ನಾದ್ರೂ ಮಾಡ್ಕೋಬಹುದು. ಬೆಟ್ಟದ ಮೇಲೆ ಜೆಸಿಬಿ ಘರ್ಜನೆಯಾದ್ರೂ ನಿಲ್ಲಬಹುದು. ಸೇತುವೆ, ಮನೆ ಕಟ್ಟಲು ಕಷ್ಟ ಆಗಲ್ಲ. ಆದರೆ ಸ್ಥಾಪಿತ ಹಿತಾಸಕ್ತಿಗಳು ಜನರನ್ನೇ ಗೊಂದಲಕ್ಕೆ ನೂಕಿ ದುರ್ಲಾಭ ಪಡೆಯುತ್ತಿದ್ದಾರೆ. (ಸಾಮಾನ್ಯ ಜನರನ್ನು ಎಬ್ಬಿಸುವ ಬದಲು ಯೇನಪೋಯದವರು ಘಟ್ಟಗಳ ಮಧ್ಯೆ ಮಾಡಿಕೊಂಡ, ಕಲ್ಮಕಾರಿನಲ್ಲಿ ಕೇರಳದ ರಾಜಕಾರಣಿಗಳು ಮಾಡಿರುವ ಏಳೆಂಟು ಸಾವಿರ ಅಕ್ರಮ ಎಕ್ರೆ ಎಸ್ಟೇಟನ್ನು ಮೊದಲು ಖಾಲಿ ಮಾಡಿಸಲಿ. ಅದು ಇವರಿಂದ ಆಗಲ್ಲ)

ವಿನಾಕಾರಣ ವದಂತಿ ಎಬ್ಬಿಸುವ ಯತ್ನ

ವಾಸ್ತವ ಹೀಗಿದ್ದರೂ, ಸಾಮಾನ್ಯ ಜನರನ್ನು ಒಕ್ಕಲೆಬ್ಬಿಸುತ್ತಾರೆ ಎಂದು ಗುಲ್ಲು ಎಬ್ಬಿಸಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಬೇಕಾದ ವರದಿಗಳನ್ನೇ ನಿರಾಕರಿಸಲು ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಸರಕಾರಕ್ಕೆ ಒತ್ತಡ ಹೇರುವಂತೆ ಮಾಡುತ್ತಿದ್ದಾರೆ. ಕಸ್ತೂರಿರಂಗನ್ ವರದಿಯಲ್ಲಿ ಮಲವಂತಿಗೆ ಆಸುಪಾಸಿನ ಗ್ರಾಮಗಳು, ಸುಬ್ರಹ್ಮಣ್ಯ ಆಸುಪಾಸಿನ ಕಲ್ಮಕಾರು, ಬಾಳುಗೋಡು, ಹರಿಹರ ಗ್ರಾಮಗಳು, ಸಂಪಾಜೆ ಆಸುಪಾಸಿನ ಗ್ರಾಮಗಳು ಸೇರ್ಪಡೆಯಾಗಿದ್ದು, ಅಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಅವಕಾಶ ನೀಡಬಾರದು ಎಂದಷ್ಟೇ ಹೇಳಿದೆ. ಅಷ್ಟು ಮಾತ್ರಕ್ಕೆ ಅಲ್ಲಿ ಸೇತುವೆ ಕಟ್ಟಬಾರದು ಎಂದೇನಿಲ್ಲ. ಅಲ್ಲಿರುವ ಮೂಲ ನಿವಾಸಿಗಳನ್ನು ಬಿಟ್ಟು ಬೇರೆಯವರು ಅಲ್ಲಿ ಬಂದು ನೆಲೆಸುವಂತಿಲ್ಲ ಎಂದಷ್ಟೇ ಇದೆ. ಇದರಿಂದ ಆಪತ್ತು ಬರುತ್ತದೆ ಎನ್ನುವುದು ಸಾಮಾನ್ಯ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಅಷ್ಟೇ.

ಕಸ್ತೂರಿರಂಗನ್ ವರದಿ ಯಥಾವತ್ತಾಗಿ ಜಾರಿಯಾದಲ್ಲಿ ಎತ್ತಿನಹೊಳೆ ಯೋಜನೆಗೂ ಕುತ್ತು ಬರುತ್ತದೆ. ಸಂರಕ್ಷಿತ ಪ್ರದೇಶ ಎಂದು ಗುರುತಿಸಲ್ಪಡುವ ಪಶ್ಚಿಮ ಘಟ್ಟಗಳಲ್ಲಿ ಜೆಸಿಬಿ ಮೊರೆತವೂ ನಿಲ್ಲುತ್ತದೆ. ಭವಿಷ್ಯದಲ್ಲಿ ಈ ರೀತಿಯ ದುರಂತಗಳಿಗೂ ಕಡಿವಾಣ ಬೀಳಬಹುದು. ಇದಕ್ಕಾಗಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಕಸ್ತೂರಿರಂಗನ್ ವರದಿ ಜಾರಿಗಾಗಿ ಜನರೇ ಒತ್ತಡ ಹೇರಬೇಕಾಗಿದೆ. ವರದಿ ಜಾರಿಯಾದರೆ, ಅಲ್ಲಿನ ನಿವಾಸಿಗಳು, ಪಶ್ಚಿಮಘಟ್ಟಗಳಿಗೆ ಲಾಭ ಹೊರತು ಸರಕಾರಕ್ಕೇನು ಲಾಭ ಇಲ್ಲ.

20 ವರ್ಷಗಳ ಹಿಂದೆ ಘಟ್ಟಗಳ ಸಂರಕ್ಷಣೆಗಾಗಿ ದನಿ ಎತ್ತುವ ಮಂದಿ ಇದ್ದರು. ಈಗ ಸ್ವಾರ್ಥ ಮಾತ್ರ ಅಡಗಿರುವುದರಿಂದ ಘಟ್ಟಗಳು ಉಳಿದರೇನು, ಬಿಟ್ಟರೇನು ಎನ್ನುವಂತಾಗಿದೆ. ಹೀಗಾಗಿ ಪ್ರತಿ ವರ್ಷ ಮಳೆಗಾಲದಲ್ಲಿ ಪಶ್ಚಿಮ ಘಟ್ಟಗಳಲ್ಲಿ ಗೀರು ಗಾಯಗಳಾಗುತ್ತವೆ. ಬೆಟ್ಟಗಳು ಬಿರುಕು ಬಿಟ್ಟು ಬಾಯ್ದೆರೆದು ನಿಂತು ಬಿಡುತ್ತವೆ. ಅಲ್ಲಿಗೆ ಬೆಟ್ಟಗಳ ನೀರನ್ನು ಹಿಡಿದಿಡುವ ಸಾಮರ್ಥ್ಯವೂ ಕುಂದುತ್ತದೆ. ಹೀಗೆ ಬಾಯಿ ಬಿಟ್ಟ ಪ್ರದೇಶದಲ್ಲಿ ಎರಡೇ ವಾರದಲ್ಲಿ ನದಿಗಳು ಬರಡಾಗುವಷ್ಟು ನೀರು ಖಾಲಿಯಾಗುವುದನ್ನು ನಾವು ಕಾಣಬಹುದು. ಈಗೆಲ್ಲ ನವೆಂಬರ್ ವರೆಗೆ ಮಳೆ ಬಿದ್ದರೂ, ಜನವರಿ ವೇಳೆಗೆ ನದಿಯಲ್ಲಿ ನೀರು ಇರುವುದಿಲ್ಲ. ಉಕ್ಕಿ ಹರಿಯುವ ನದಿಗಳು ಬರಡಾಗುತ್ತಿವೆ. ಇದು ಪ್ರಕೃತಿ ಮುನಿಯುತ್ತಿರುವ ಆರಂಭದ ಹಂತ. ಇದೇ ರೀತಿ ಛಿದ್ರಗೊಂಡು ಬೆಟ್ಟಗಳ ಮೇಲಿನ ಕಾಡೇ ಬರಿದಾದರೆ, ಕರಾವಳಿಯ ಸ್ಥಿತಿ ಘೋರವಾದೀತು.

Author: ಗಿರಿಧರ್ ಶೆಟ್ಟಿ, ಮಂಗಳೂರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು