News Karnataka Kannada
Friday, May 03 2024
ವಿಶೇಷ

ಮೈಸೂರು: ಮೈಸೂರಿನ ಮನೆಗಳಲ್ಲಿ ಬೊಂಬೆಗಳ ದರ್ಬಾರ್!

Mysore/ Mysuru: The dolls' durbar of mysore's houses!
Photo Credit : By Author

ಮೈಸೂರು: ಜಗವೇ ಒಂದು ಬೊಂಬೆಯಾಟ. ಆ ವಿಧಿ ಸೂತ್ರಧಾರ. ಅವನಾಡಿಸಿದಂತೆ ನಾವಾಡುವವಯ್ಯಾ. ಎಂಬುವುದು ಜನಜನಿತ ಮಾತು.ಅದಕ್ಕಾಗಿಯೇ ಏನೋ ಮೈಸೂರನ್ನಾಳಿದ ರಾಜಒಡೆಯರು ತಮ್ಮ ಆರಾಧನೆಯಲ್ಲಿ ಗೊಂಬೆಗೂ ಒಂದು ಮಹತ್ವದ ಸ್ಥಾನ ನೀಡಿ ನಾಡಹಬ್ಬ ನವರಾತ್ರಿಯಲ್ಲಿ ದಸರಾ ಮೆರವಣಿಗೆಯಂತೆಯೇ ಬೊಂಬೆಗೂ ವಿಶೇಷ ಸ್ಥಾನ ಕಲ್ಪಿಸಿದರು. ನವರಾತ್ರಿಯ ಒಂಬತ್ತು ದಿನವೂ ಅರಮನೆಯಲ್ಲಿ ವಿವಿಧ ಬೊಂಬೆಗಳನ್ನು ಸಾಲಾಂಕೃತವಾಗಿ ಜೋಡಿಸಿ, ಪೂಜಿಸಿ ಪ್ರದರ್ಶಿಸುವುದು ರಾಜಒಡೆಯರ ಆಡಳಿತದ ಆರಂಭದಿಂದಲೂ ಬಂದಿದೆ.

ಅರಮನೆಯಲ್ಲಿ ದರ್ಬಾರ್ ಹಾಲ್, ಚಿತ್ರಶಾಲೆ, ವಿವಾಹ ಮಂಟಪ, ಭೋಜನ ಶಾಲೆ, ಶಸ್ತ್ರಗಾರವಿರುವಂತೆ ಬೊಂಬೆಗಳ ಪ್ರದರ್ಶನಕ್ಕೂ ಒಂದು ಪ್ರತ್ಯೇಕ ಸ್ಥಳವನ್ನು ಮೀಸಲಿರಿಸಿದರು.ಅದೇ ’ತೊಟ್ಟಿಮನೆ’. ಈ ತೊಟ್ಟಿಮನೆಯಲ್ಲಿ ಗತಕಾಲದ ಕಲಾತ್ಮಕತೆಯನ್ನು ಸಾರುವ ದಂತ, ಶ್ರೀಗಂಧದ ಮರ ಸೇರಿದಂತೆ ಬೆಲೆಬಾಳುವ ಮರಗಳಿಂದ ಕೆತ್ತಿದ ಅಪೂರ್ವ ಬೊಂಬೆಗಳನ್ನು ಕಾಣಬಹುದು. ಕಲಾಪೋಷಕರಾಗಿದ್ದ ರಾಜಒಡೆಯರು ಕಲಾತ್ಮಕ ಬೊಂಬೆಗಳ ಕೆತ್ತನೆಯನ್ನೇ ತಮ್ಮ ಬದುಕಾಗಿಸಿಕೊಂಡ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಬದುಕಲು ಅವಕಾಶ ಮಾಡಿಕೊಟ್ಟರು. ಇವರ ಪ್ರೋತ್ಸಾಹದಿಂದ ಹಲವು ಕಲಾಕಾರರು ಬೆಳಕಿಗೆ ಬಂದರು ಎಂಬುವುದರಲ್ಲಿ ಎರಡು ಮಾತಿಲ್ಲ.

ದಸರೆಯ ಸಂದರ್ಭ ಮನೆಮನೆಗಳಲ್ಲಿ ಬೊಂಬೆ ಕೂರಿಸಿ ಪೂಜಿಸುವ ಸಂಪ್ರದಾಯ ಕೇವಲ ಮೈಸೂರಿನಲ್ಲಿ ಮಾತ್ರವಲ್ಲ ರಾಜ್ಯದ ಇತರ ಕಡೆಗಳಲ್ಲಿಯೂ ಇರುವುದನ್ನು ನಾವು ಕಾಣಬಹುದು. ಆದರೆ ಮೈಸೂರಿನಲ್ಲಿ ಮಾತ್ರ ಬೊಂಬೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದನ್ನು ನಾವು ಕಾಣಬಹುದು.ಮೈಸೂರಿನ ಹಲವು ಮನೆಗಳಲ್ಲಿ ಬೊಂಬೆಗಳನ್ನು ಕೂರಿಸಲಾಗುತ್ತಿದ್ದು ಕೆಲವರು ಸಾರ್ವಜನಿಕರಿಗೂ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇನ್ನು ಮೃಗಾಲಯದ ಎದುರು ಇರುವ ರಾಮ್‌ಸನ್ ಪ್ರತಿಷ್ಠಾನದಲ್ಲಿ ಪ್ರತೀ ವರ್ಷ ಬೊಂಬೆಗಳ ಪ್ರದರ್ಶನ ಏರ್ಪಡಿಸಲಾಗುತ್ತಿದ್ದು, ಇಲ್ಲಿರುವ ಬೊಂಬೆಗಳು ವೀಕ್ಷಕರ ಮನಸ್ಸೆಳೆಯುತ್ತವೆ.

ಸಾಮಾನ್ಯವಾಗಿ ಬೊಂಬೆ ಪ್ರದರ್ಶನದಲ್ಲಿ ರಾಜ-ರಾಣಿಯರದ್ದೇ ದರ್ಬಾರು. ಮೈಸೂರು ರಾಜಒಡೆಯರ ಪ್ರತೀಕವೆಂಬಂತೆ ಅವರಿಗೆ ಗೌರವ ಸೂಚಕವಾಗಿ ಪ್ರತಿ ಮನೆಮನೆಯ ಬೊಂಬೆಗಳ ಸಾಲಿನಲ್ಲಿ ರಾಜರಾಣಿ ಬೊಂಬೆ ಮೇಲ್ಪಂಕ್ತಿಯಲ್ಲಿ ಸ್ಥಾನಪಡೆದಿರುತ್ತವೆ. ಈ ಬೊಂಬೆಗಳನ್ನು ಪಟ್ಟದ ಬೊಂಬೆಗಳೆಂದು ಕರೆಯಲಾಗುತ್ತದೆ. ಉಳಿದಂತೆ ಅಂಬಾರಿ ಹೊತ್ತ ಆನೆ, ಪದಾತಿದಳ, ಕುದುರೆ, ಒಂಟೆಗಳ ಸಾಲು, ಮೈಸೂರು ಅರಮನೆ ಸೇರಿದಂತೆ ಹಲವು ಬೊಂಬೆಗಳು ಪ್ರದರ್ಶನದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುತ್ತವೆ. ಇತ್ತೀಚೆಗೆ ಕೆಲವು ಆಧುನಿಕ ರೀತಿಯ ಬೊಂಬೆಗಳು ಕೂಡ ಪ್ರದರ್ಶನದಲ್ಲಿ ಕಂಡುಬರುತ್ತಿವೆ.

ಹಾಗೆ ನೋಡಿದರೆ ದಸರಾ ಹಬ್ಬಕ್ಕೆ ಮೈಸೂರು ಸಜ್ಜಾಗುತ್ತಿದ್ದಂತೆಯೇ ಇಲ್ಲಿನ ಸಂಸ್ಕೃತಿ, ಪರಂಪರೆಗಳನ್ನೊಳಗೊಂಡ ಆಚರಣೆಗಳು ಕೂಡ ಸದ್ದಿಲ್ಲದೆ ಗರಿಬಿಚ್ಚಿಕೊಳ್ಳುತ್ತವೆ. ಒಂಬತ್ತು ದಿನಗಳ ಕಾಲವೂ ವಿವಿಧ ಆಚರಣೆಗಳು ನಡೆಯುತ್ತವೆ. ಆ ಪೈಕಿ ಮನೆಮನೆಗಳಲ್ಲಿ ಬೊಂಬೆಗಳನ್ನು ಕೂರಿಸುವುದು ಕೂಡ ಒಂದಾಗಿದೆ.

ನವರಾತ್ರಿ ಆಚರಣೆಯೆಂದರೆ ದುಷ್ಟ ಶಿಕ್ಷಕ, ಶಿಷ್ಟರಕ್ಷಕವಾಗಿದ್ದು, ದುಷ್ಟ ಶಕ್ತಿಗಳನ್ನು ಸಂಹರಿಸಿ ಆಚರಿಸಿದ ವಿಜಯವೇ ವಿಜಯದಶಮಿಯಾಗಿದೆ. ಪುರಾಣ ಪ್ರಕಾರ ಆದಿಶಕ್ತಿ ಸ್ವರೂಪಿಣಿಯಾದ ಚಾಮುಂಡೇಶ್ವರಿಯು ದುಷ್ಟ ರಾಕ್ಷಸರ ವಿರುದ್ಧ ಒಂಬತ್ತು ದಿನಗಳ ಕಾಲ ಹೋರಾಡಿ ಹತ್ತನೇ ದಿನದಲ್ಲಿ ಮಹಿಷಾ ರೂಪದಲ್ಲಿದ್ದ ರಾಕ್ಷಸನನ್ನು ಸಂಹರಿಸಿದಳೆಂದೂ ಇದುವೇ ದಸರಾ ಆಚರಣೆಗೆ ಪ್ರೇರಕವಾಯಿತೆಂದು ಹೇಳಲಾಗಿದೆ.

ವಿಜಯನಗರ ಅರಸರ ಕಾಲದಲ್ಲಿ ವಿಜಯದಶಮಿಯನ್ನು ಆಚರಿಸಲಾಗುತ್ತಿತ್ತೆಂದೂ, ವಿಜಯನಗರ ಸಾಮ್ರಾಜ್ಯ ಪತನಗೊಂಡ ಬಳಿಕ ಅದೇ ಉತ್ಸವವನ್ನು ಮುಂದೆ ಮೈಸೂರು ಒಡೆಯರು ಅಳವಡಿಸಿಕೊಂಡು ಆಚರಣೆ ಮಾಡುತ್ತಿದ್ದರೆಂದೂ 1610ರಲ್ಲಿ ರಾಜಒಡೆಯರು ದಸರಾ ಉತ್ಸವಕ್ಕೊಂದು ಕ್ರಮಬದ್ಧತೆ ನೀಡುವುದರೊಂದಿಗೆ ವೈಭವದ ಆಚರಣೆಯನ್ನು ಜಾರಿಗೆ ತಂದರೆಂದೂ ಹೇಳಲಾಗಿದೆ. ನವರಾತ್ರಿಯಲ್ಲಿ ನಡೆದ ಕಾರ್ಯಕ್ರಮಗಳು ವಿಜಯದಶಮಿಯಂದು ಮುಕ್ತಾಯವಾಗುತ್ತಿತ್ತು. ಈ ಸಂದರ್ಭ ಬೊಂಬೆಗಳನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಆಚರಣೆಯಿತ್ತು ಎನ್ನಲಾಗಿದೆ.

ಆಶ್ವೀಜ ಮಾಸದ ಶುಕ್ಲಪಕ್ಷದ ಪ್ರಥಮ ದಿವಸ ನವರಾತ್ರಿ ಆರಂಭವಾಗುತ್ತದೆ. ಈ ಸಂದರ್ಭವೇ ಮನೆಮನೆಗಳಲ್ಲಿ ವಿವಿಧ ಬಣ್ಣದ ವಿವಿಧ ನಮೂನೆಯ ಗೊಂಬೆಗಳನ್ನಿರಿಸಲಾಗುತ್ತದೆ. ಅಲ್ಲದೆ ಅವುಗಳನ್ನು ಅಲಂಕರಿಸಿ ಮುತೈದೆಯರು ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸುತ್ತಾರೆ. ಇದು ಪಾಡ್ಯದಿಂದ ಆರಂಭವಾಗಿ ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ,ಅಷ್ಠಮಿ, ನವಮಿ ತನಕ ಒಂಬತ್ತು ದಿನಗಳ ಕಾಲ ನಡೆಯುತ್ತದೆ.

ಇತರೆ ದಿನಗಳಲ್ಲಿ ಮನೆಯ ಶೋಕೇಶ್‌ನಲ್ಲಿಟ್ಟ ಗೊಂಬೆಗಳಿಗೆ ನವರಾತ್ರಿ ಬರುತ್ತಿದ್ದಂತೆಯೇ ದೇವರಕೋಣೆಯಲ್ಲಿ ಪೂಜ್ಯ ಸ್ಥಾನ ದೊರೆಯುತ್ತದೆ. ಮನೆಯಲ್ಲಿರುವ ಗೃಹಿಣಿಯರಿಗೆ ಬೊಂಬೆಗಳನ್ನು ಕೂರಿಸುವ ಸಂಭ್ರಮ ಪ್ರಾರಂಭವಾಗುತ್ತದೆ. ಕೆಲವರು ಮಣ್ಣು, ಗಾಜು, ಉಲ್ಲಾನ್, ಪ್ಲಾಸ್ಟಿಕ್, ಪಿಂಗಾಣಿ, ಇನ್ನಿತರೆ ವಸ್ತುಗಳಿಂದ ತಯಾರಿಸಿದ ಗೊಂಬೆಗಳನ್ನು ಮನೆಯಲ್ಲಿ ಕೂರಿಸಿದರೆ ಮತ್ತೆ ಕೆಲವರು ಮಣ್ಣಿನಿಂದಲೇ ಮಾಡಿದ ಗೊಂಬೆಗಳನ್ನು ಕೂರಿಸುತ್ತಾರೆ.

ಈ ಗೊಂಬೆಗಳು ಸಾಮಾನ್ಯವಾಗಿ ಪುರಾಣದ ಕಥೆಗಳನ್ನು, ನಾಡಿನ ಪರಂಪರೆಯನ್ನು ಸಾರುತ್ತಿರುತ್ತವೆ. ಈಶ್ವರ, ಗಣಪತಿ, ಲಕ್ಷ್ಮಿ, ಸರಸ್ವತಿ, ದುರ್ಗಿ ಮೊದಲಾದ ದೇವರ ಮೂರ್ತಿಗಳನ್ನೂ, ದುಷ್ಟ ಸಂಹಾರಕ್ಕೆ ಸಂಬಂಧಿಸಿದ ಕಥಾ ಹಿನ್ನಲೆಗಳನ್ನು ಹೊಂದಿರುವ ಗೊಂಬೆಗಳನ್ನು ಇಲ್ಲಿ ಪ್ರತಿಷ್ಠಾಪಿಸುವುದನ್ನು ಮತ್ತು ಪ್ರತಿದಿನ ಆರತಿ ಬೆಳಗಿ ಪೂಜಿಸುವುದನ್ನು ನಾವು ಕಾಣಬಹುದಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು