News Karnataka Kannada
Saturday, May 04 2024
ಲೇಖನ

ಜಾಲತಾಣ ನಿಯಂತ್ರಣ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಹುನ್ನಾರ

Website control is a conspiracy to curb freedom of expression
Photo Credit : Pixabay

ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜೆಗಳ ಮೂಲಭೂತ ಹಕ್ಕುಗಳಲ್ಲಿ ಒಂದು. ಜನತಂತ್ರದ ಆರೋಗ್ಯದ ದೃಷ್ಟಿಯಿಂದ ಇದು ಅಗತ್ಯ ಕೂಡ, ತುರ್ತು ಪರಿಸ್ಥಿತಿ ಹೊರತು ಪಡಿಸಿದರೆ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದ ಉದಾಹರಣೆಗಳು ವಿರಳ. ಆದರೆ ಕಳೆದ ಎಂಟು ವರ್ಷಗಳಿಂದ ಮಾಹಿತಿ ಮುಕ್ತ ವಿನಿಮಯಕ್ಕೆ ಉಪಯುಕ್ತವಾದ ಮಾಧ್ಯಮ ಸ್ವಾತಂತ್ರ್ಯಕ್ಕೆ ಪ್ರಭುತ್ವ ಕಡಿವಾಣ ಹಾಕುತ್ತಲೇ ಇದೆ. ಭಾರತದ ಬಹುತೇಕ ಮಾಧ್ಯಮ ಸಂಸ್ಥೆಗಳನ್ನು ಅಡ್ಡದಾರಿಯ ಮೂಲಕ ನಿಯಂತ್ರಿಸುತ್ತಿರುವ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಟೀಕೆ ಮತ್ತು ವಿಮರ್ಶೆಗಳನ್ನು ಇಷ್ಟ ಪಡುವುದಿಲ್ಲ.ಸರಕಾರದ ಲೋಪದೋಷಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಲೇ ಬಾರದು ಎಂಬುದು ಈ ಸರಕಾರದ ನಿಲುವಾಗಿರುವುದು ಸಂದೇಹಾಸ್ಪದವಾಗಿ ಉಳಿದಿಲ್ಲ. ಬಹುತೇಕ ಮುದ್ರಣ ಮತ್ತು ಟಿವಿ ಮಾಧ್ಯಮಗಳನ್ನು ತನ್ನ ತುತ್ತೂರಿಯನ್ನಾಗಿ ಬಳಸಿಕೊಳ್ಳುತ್ತಿರುವ ಸರಕಾರಕ್ಕೆ ಸಾಮಾಜಿಕ ಜಾಲತಾಣ ಬಹುದೊಡ್ಡ ಅಡ್ಡಿಯಾಗಿದೆ. ಹಾಗಾಗಿಯೇ ಜಾಲತಾಣಗಳನ್ನು ನಿಯಂತ್ರಿಸಲು ಈಗ ಮುಂದಾಗಿದೆ.

ಕೇಂದ್ರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮಾಹಿತಿ ತಂತ್ರಜ್ಞಾನದ ಕರಡು ನಿಯಮಾವಳಿಗಳಿಗೆ ತರಲು ಉದ್ದೇಶಿಸಿರುವ ತಿದ್ದುಪಡಿಗಳು ಪ್ರಜೆಗಳ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯಗಳನ್ನು ಹೊಸಕಿ ಹಾಕುವ ಅಂಶಗಳನ್ನು ಒಳಗೊಂಡಿವೆ. ಕೇಂದ್ರ ಸರಕಾರದ ನಿಯಂತ್ರಣದಲ್ಲಿ ಇರುವ ಪ್ರೆಸ್ ಇಂಫಾರ್ಮೇಷನ್ ಬ್ಯೂರೊ(ಪಿಐಬಿ) ಮೂಲಕ ಸಾಮಾಜಿಕ ಜಾಲತಾಣದ ಮೇಲೆ ಹಿಡಿತ ಸಾಧಿಸಲು ಸರಕಾರ ಹೊರಟಿದೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿಗಳನ್ನು ವರ್ಗೀಕರಿಸುವ ಅಧಿಕಾರವನ್ನು ಪಿಐಬಿಗೆ ನೀಡಲಾಗಿದೆ. ಪಿಐಬಿ ಯಾವ ಸುದ್ದಿಯನ್ನು ಸುಳ್ಳು ಎಂದು ಪರಿಗಣಿಸುವುದೋ ಆ ಸುದ್ದಿಗಳನ್ನು ಜಾಲತಾಣ ಸಂಸ್ಥೆಗಳು ತಮ್ಮ ಜಾಲತಾಣದಿಂದ ತಿದ್ದುಪಡಿ ಪ್ರಕಾರ ತೆಗೆದು ಹಾಕಬೇಕಾಗುತ್ತದೆ. ಸರಕಾರದ ಅಧೀನದಲ್ಲಿರುವ ಪಿಐಬಿಯ ಪರಿಶೀಲನಾ ತಂಡವು ‘ಸುಳ್ಳು’ ಎಂದು ನಿರ್ಧರಿಸುವ ಯಾವುದೇ ಸುದ್ದಿಯ, ಬರಹದ ಕೊಂಡಿಯನ್ನು ಹಾಗೂ ಸುದ್ದಿಯ ವೀಡಿಯೊವನ್ನು ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್‌ನಂತಹ ಆನ್‌ ಲೈನ್ ಮಾಧ್ಯಮಗಳಿಂದ ತೆಗೆದು ಹಾಕಬೇಕಾಗುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳು, ಜನರನ್ನು ದಾರಿ ತಪ್ಪಿಸುವ ತಪ್ಪು ಮಾಹಿತಿಗಳು ಮತ್ತು ಉತ್ತರದಾಯಿತ್ವ ಇಲ್ಲದ ಬರಹಗಳು ಸಾಕಷ್ಟು ಬರುತ್ತವೆ ಎಂಬುದು ನಿಜ. ಈಗ ಅಧಿಕಾರದಲ್ಲಿರುವ ಪಕ್ಷ ಮತ್ತು ಪರಿವಾರಕ್ಕೆ ಸೇರಿದವರೇ ದ್ವೇಷದ ಸುದ್ದಿಗಳನ್ನು ಹರಡಲು, ಗಾಂಧಿ ಮತ್ತು ನೆಹರೂ ಅವರಂತಹ ರಾಷ್ಟ್ರೀಯ ನಾಯಕರನ್ನು ಅವಹೇಳನ ಮಾಡಲು ಜಾಲತಾಣಗಳನ್ನು ಬಳಸಿಕೊಳ್ಳುತ್ತಿರುವುದು ಕೂಡ ಸುಳ್ಳಲ್ಲ. ಹಾಗೆಂದು ಮಾಹಿತಿಯ ವಿನಿಮಯಕ್ಕೆ ಕಡಿವಾಣ ಹಾಕುವ ಸರ್ವಾಧಿಕಾರಿ ನೀತಿಗೆ ಸರಕಾರ ಮೊರೆ ಹೋಗಬಾರದು.

ಪಿಐಬಿಗೆ ಅದರದೇ ಆದ ಕರ್ತವ್ಯ ಮತ್ತು ಹೊಣೆಗಾರಿಕೆಗಳು ಇವೆ. ಸರಕಾರದ ನೀತಿ, ಧೋರಣೆಗಳು, ಕಾರ್ಯಕ್ರಮಗಳು ಹಾಗೂ ಸಾಧನೆಗಳ ಬಗ್ಗೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡುವುದು ಅದರ ಕೆಲಸ, ಮಾಹಿತಿಯನ್ನು ನೀಡುವ ಕೆಲಸವನ್ನು ಬಿಟ್ಟು ಯಾವುದೇ ಸುದ್ದಿಯನ್ನು ಪರಿಶೀಲಿಸುವ ಅಥವಾ ಅದರ ಮೌಲ್ಯಮಾಪನ ಮಾಡುವ ಪರಿಣತಿ ಪಿಐಬಿಗೆ ಇಲ್ಲ. ಸರಕಾರಕ್ಕೆ ಸಂಬಂಧಿಸಿದ ವಿಮರ್ಶಾತ್ಮಕ ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪಿಐಬಿಯಲ್ಲಿ ಪ್ರತ್ಯೇಕ ತಂಡವನ್ನು ಈಗಾಗಲೇ ರಚಿಸಲಾಗಿದೆ. ಮೂರು ವರ್ಷಗಳ ಹಿಂದೆ ರಚಿಸಲ್ಪಟ್ಟಿರುವ ಈ ತಂಡಗಳ ಕೆಲಸ ಸಮಾಧಾನಕರವಾಗಿಲ್ಲ. ಸರಕಾರದ ಬಗ್ಗೆ ಯಾವುದೇ ಟೀಕೆ ಹಾಗೂ ವಿಮರ್ಶೆಗಳು ಬರಲಿ ಅವೆಲ್ಲವನ್ನೂ ತಪ್ಪು ಮಾಹಿತಿ ಎಂದು ಪರಿಗಣಿಸಿ ಅವುಗಳನ್ನು ತೆಗೆದುಹಾಕಬೇಕೆಂದು ಇದು ಹೇಳುತ್ತದೆ.

ಸರಕಾರದ ಅಧೀನದಲ್ಲಿರುವ ಸಂಸ್ಥೆಗಳು ಅವುಗಳಿಗೆ ನಿಗದಿ ಮಾಡಲ್ಪಟ್ಟ ನಿಯಮಾವಳಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತವೆ. ಅದರಂತೆ ಸಹಜವಾಗಿ ಯಾವುದೇ ಸುದ್ದಿ ಇಲ್ಲವೇ ಬರಹ ಸುಳ್ಳು ಅಥವಾ ಸತ್ಯ ಎಂಬುದನ್ನು ಪರಿಶೀಲನೆ ಮಾಡುವ ಮತ್ತು ತೀರ್ಮಾನಿಸುವ ಹಾಗೂ ಅವುಗಳ ವಿರುದ್ಧ ಕ್ರಮವನ್ನು ಕೈಗೊಳ್ಳುವ ಅಧಿಕಾರಗಳೆಲ್ಲ ಪರೋಕ್ಷವಾಗಿ ಕೇಂದ್ರ ಸರಕಾರದ ಬಳಿ ಇರುತ್ತವೆ. ಪಿಐಬಿಯಂತಹ ಸಂಸ್ಥೆಗಳ ಮೂಲಕ ಸರಕಾರದ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸಲು ಹೊರಟಿರುವುದು ಸರ್ವಾಧಿಕಾರಿ ಧೋರಣೆಯಲ್ಲದೆ ಬೇರೇನೂ ಅಲ್ಲ. ಹಾಗಾಗಿಯೇ ಭಾರತದ ಸಂಪಾದಕರ ಒಕ್ಕೂಟ ಈ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿ ಸರಕಾರವು ತನ್ನದೇ ಕೆಲಸದ ಬಗ್ಗೆ ಯಾವುದು ಸತ್ಯ ಯಾವುದು ಸುಳ್ಳು ಎಂಬುದನ್ನು ತೀರ್ಮಾನಿಸುವ ಪ್ರಶ್ನಾತೀತ ಅಧಿಕಾರವನ್ನು ತನಗೆ ತಾನೇ ಕೊಟ್ಟುಕೊಂಡಂತಾಗಿದೆ. ಇದು ದೇಶದ ಮೇಲೆ ತುರ್ತುಸ್ಥಿತಿ ಹೇರದೆ ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಹಿತಿ ಸ್ಥಾತಂತ್ರ್ಯವನ್ನು ಹತ್ತಿಕ್ಕುವ ನಾಝಿ ಶಾಹಿ ಹುನ್ನಾರ ಎಂದು ಹೇಳಿರುವುದರಲ್ಲಿ ತಪ್ಪಿಲ್ಲ.

ಭಾರತದ ಈ ವರೆಗಿನ ಸರಕಾರಗಳು ಇಷ್ಟೊಂದು ದಮನಕಾರಿ ನೀತಿಯನ್ನು ಹಿಂದೆಂದೂ ಅನುಸರಿಸಿಲ್ಲ. ಇನ್ನು ಮುಂದೆ ಸರಕಾರದ ಯಾವುದೇ ಲೋಪ ದೋಷಗಳು, ವೈಫಲ್ಯಗಳು ಸಾರ್ವಜನಿಕವಾಗಿ ಚರ್ಚೆಯಾಗಬಾರದು, ಸರಕಾರ ಮಾಡುವುದೆಲ್ಲ ಒಳ್ಳೆಯದು ಎಂಬುದನ್ನು ಪ್ರಜೆಗಳು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ನ್ಯಾಯಾಂಗವನ್ನೇ ನಿಯಂತ್ರಿಸಲು ಹೊರಟವರು ಮಾಧ್ಯಮಗಳನ್ನು ನಿಯಂತ್ರಿಸುವುದು ಅಸಾಮಾನ್ಯ ಸಂಗತಿಯೇನಲ್ಲ. ಇದನ್ನೆಲ್ಲ ಪ್ರಶ್ನಿಸಬೇಕಾದ ಜನರ ಮೆದುಳಲ್ಲಿ ಜನಾಂಗ ದ್ವೇಷದ, ಮೌಡ್ಯದ ವಿಷವನ್ನು ತುಂಬಿ ಅವರನ್ನು ಅಡ್ಡಹಾದಿ ಹಿಡಿಸಿ ತಮ್ಮ ಹಿಡನ್ ಅಜೆಂಡಾವನ್ನು ಜಾರಿಗೆ ತರಲು ಹೊರಟವರು ಮುಂದೊಂದು ದಿನ ಬಹುತ್ವ ಭಾರತದ ಅಡಿಪಾಯವನ್ನೇ ಧ್ವಂಸ ಮಾಡಿದರೆ ಅಚ್ಚರಿ ಪಡಬೇಕಾಗಿಲ್ಲ.
ಈಗ ಅಧಿಕಾರದಲ್ಲಿರುವವರು ಸತ್ಯವನ್ನು ಇಷ್ಟಪಡುವುದಿಲ್ಲ. ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಬಿಬಿಸಿ ಸಿದ್ಧಪಡಿಸಿರುವ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಸಾಕ್ಷಚಿತ್ರವನ್ನು ಭಾರತದಲ್ಲಿ ತಡೆ ಹಿಡಿಯುವ ಮೂಲಕ ಮೋದಿ ಸರಕಾರ ನಿರಂಕುಶವಾಗಿ ವರ್ತಿಸಿದೆ. 2002ರಲ್ಲಿ ಗುಜರಾತಿನಲ್ಲಿ ನಡೆದ ಹಿಂಸಾಚಾರ ಮತ್ತು ಹತ್ಯಾಕಾಂಡದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟರು. ಅನೇಕ ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾದರು. ಇವರಲ್ಲಿ ಹೆಚ್ಚಿನವರು ಮುಸಲ್ಮಾನರು.

ಬಿಬಿಸಿ ಸಾಕ್ಷ್ಯಚಿತ್ರ ಈ ಹತ್ಯಾಕಾಂಡದ ಬಗ್ಗೆ ಇದೆ. ಗುಜರಾತ್ ಹತ್ಯಾಕಾಂಡ ನಡೆದಾಗ ಅಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಹಿಂಸಾಚಾರವನ್ನು ನಿಯಂತ್ರಿಸಲು ಸಕಾಲಿಕ ಕ್ರಮವನ್ನು ಕೈಗೊಳ್ಳಲಿಲ್ಲ ಎಂಬ ಆರೋಪ ಹೊಸದಲ್ಲ. ಬಿಬಿಸಿ ತನಿಖೆ ಮಾಡಿ ಅನೇಕರನ್ನು ಸಂದರ್ಶಿಸಿ ಈ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದೆ. ಮೋದಿಯವರ ಅಥವಾ ಅವರ ಬಿಜೆಪಿಯ ಬೆಂಬಲಿಗರಿಗೆ ಈ ಸಾಕ್ಷ್ಯಚಿತ್ರವನ್ನು ಒಪ್ಪದಿರುವ, ಟೀಕಿಸುವ ಹಾಗೂ ತಮ್ಮ ನಾಯಕನನ್ನು ಸಮರ್ಥಿಸಿಕೊಳ್ಳುವ ಸ್ವಾತಂತ್ರ್ಯ ಇದೆ. ಅದನ್ನು ಬಿಟ್ಟು ಸರಕಾರದ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಸಾಕ್ಷ್ಯಚಿತ್ರವನ್ನು ತಡೆ ಹಿಡಿದಿರುವುದು ಸಲ್ಲದ ಕ್ರಮವಾಗಿದೆ. ಈ ಸರಕಾರ ತನ್ನ ಬಗೆಗಿನ ವಿಮರ್ಶೆ ಮತ್ತು ಟೀಕೆಯನ್ನು ಸಹಿಸುವುದಿಲ್ಲ ಎಂಬುದಕ್ಕೆ ಇದೂ ಒಂದು ಉದಾಹರಣೆಯಾಗಿದೆ.

ಮುಕ್ತ ಮಾಧ್ಯಮ ಆರೋಗ್ಯವಂತ ಪ್ರಜಾಪ್ರಭುತ್ವದ ಲಕ್ಷಣ. ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜೆಗಳ ಮೂಲಭೂತ ಹಕ್ಕು. ಅಧಿಕಾರದಲ್ಲಿರುವವರ ನಡೆ ಪಾರದರ್ಶಕವಾಗಿರಬೇಕು ಎಂದು ಜನ ಬಯಸುತ್ತಾರೆ ಹಾಗಾಗಿಯೇ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವಿದ್ದಾಗ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂತು. ಆದರೆ ಇಂದಿನ ಸರಕಾರ ಜನತೆಯ ಮೂಲಭೂತ ಹಕ್ಕುಗಳನ್ನೇ ಅಪಹರಿಸಲು ಹೊರಟಿದೆ. ಸರಕಾರ ಇನ್ನಾದರೂ ತನ್ನ ಈ ಸರ್ವಾಧಿಕಾರಿ ನೀತಿಯನ್ನು ಕೈ ಬಿಡಬೇಕು.

-ಮಣಿಕಂಠ ತ್ರಿಶಂಕರ್, ಮೈಸೂರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು