News Karnataka Kannada
Monday, April 29 2024
ವಿಶೇಷ

ಶ್ರೇಷ್ಠ ಕವಿ ಕುವೆಂಪು ಅಧ್ಯಾತ್ಮ ತತ್ತ್ವದ ವ್ಯಕ್ತಿ

Great poet Kuvempu was a man of spiritual philosophy
Photo Credit : Wikimedia

ಕುವೆಂಪು ಮೂಲತಃ ಒಬ್ಬ ಕವಿ, ಶ್ರೇಷ್ಠ ಕವಿ. ‘ನಾನೃಷಿಃ ಕುರುತೇ ಕಾವ್ಯಂ’ ಎಂಬ ಮಾತಿದೆ. ಋಷಿ ಎಂಬುದಕ್ಕೆ ದ್ರಷ್ಟಾರ ಎಂಬ ಅರ್ಥವಿದೆ. ಅಧ್ಯಾತ್ಮದ ಒಂದು ಮಜಲನ್ನು ದಾಟದಿದ್ದರೆ ದ್ರಷ್ಟಾರನಾಗುವುದು ಸಾಧ್ಯವಿಲ್ಲ. ಅಧ್ಯಾತ್ಮ ಎಂದರೆ ಭಗವಂತನೊಂದಿಗೆ ಆತ್ಮದ ಐಕ್ಯತೆಯ ತತ್ ಕ್ಷಣದ ಭಾವನೆ’ ಎಂಬ ವ್ಯಾಖ್ಯೆಯನ್ನು ನೀಡಲಾಗಿದೆ. ದೇವರದೊಂದಿಗಿನ ಆತ್ಮದ ಐಕ್ಯವೇ ಅಧ್ಯಾತ್ಮ. ಕಾಯಕ, ನಿಸರ್ಗ, ಅಣುಜೀವ ಪ್ರೇಮ, ಹೀಗೆ ಯಾವುದೇ ಶಾಶ್ವತ ಮೌಲ್ಯವೂ ದೇವರಾಗಬಹುದು. ಇವು ವ್ಯಕ್ತಿಯಲ್ಲಿ ಲೀನವಾಗುವ ಬಗೆ ಅಧ್ಯಾತ್ಮದ ಹಂತಕ್ಕೆ ಒಯ್ಯುತ್ತದೆ.

ಯಾವುದೇ ಅಧ್ಯಾತ್ಮ ತತ್ತ್ವದ ಅಂತಿಮ ಬಿಂದು ವ್ಯಕ್ತಿ ನಿಷ್ಠತೆ, ವ್ಯಕ್ತಿ ಉದ್ಧಾರ. ಸಮೂಹವನ್ನು ಇಡಿಯಾಗಿ ಉದ್ಧರಿಸುವ ಆಧ್ಯಾತ್ಮಿಕ ಸೂತ್ರ ಇಲ್ಲವೇ ಇಲ್ಲ. ಭಗವದ್ಗೀತೆಯಲ್ಲಿ ಹೇಳುವ “ಉದ್ಧರೇದಾತ್ಮನಾತ್ಮನಂ ಎಂಬ ಮಾತು ಅಕ್ಷರಶಃ ನಿಜ. ವ್ಯಕ್ತಿ ಸ್ವತಃ ಉದ್ಧಾರವಾಗಬೇಕು. ವ್ಯಕ್ತಿ ವ್ಯಕ್ತಿಗಳು ಕೂಡಿ ಒಂದು ಸಮಾಜ. ವ್ಯಕ್ತಿಗಳ ಉದ್ಧಾರವೇ ಸಮಾಜದ ಉದ್ಧಾರ. ಕುವೆಂಪು ಅವರ ಕಾವ್ಯ, ಸಾಹಿತ್ಯ ಸೃಷ್ಟಿಯ ಮುಖ್ಯ ಸೂತ್ರವೂ ವ್ಯಕ್ತಿಯ ಆತ್ಮ ಸ್ವಾತಂತ್ರ್ಯಕ್ಕಾಗಿ ತುಡಿಯುವುದೇ ಆಗಿದೆ. ನಮ್ಮ ಉದ್ಧಾರಕ್ಕಾಗಿ ಯಾರೋ ಒಬ್ಬರು ದುಡಿಯುತ್ತಾರೆ ಎಂದು ಬಯಸುವಂತಿಲ್ಲ, ಎಲ್ಲರೂ ದುಡಿಯುತ್ತಲೇ ಅವರವರ ಹಾದಿಯಲ್ಲಿ ನಡೆದು, ಉದ್ಧಾರ ಕಂಡುಕೊಳ್ಳಬೇಕೆಂಬುದು ಅವರ ಕಾಣೆ. ಹಾಗಾಗಿಯೇ ಅವರ ಸಾಹಿತ್ಯ ಸರ್ವಸ್ವದ ಸಾರವೇ ಆಗಿರುವ ಸಪ್ತ ಸೂತ್ರಗಳಲ್ಲಿ, ‘ಮತ ತೊಲಗಿ ಅಧ್ಯಾತ್ಮ ಮಾತ್ರ ವೈಜ್ಞಾನಿಕ ತತ್ತ್ವವಾಗಿ ಮಾನ್ಯತೆ ಪಡೆಯಬೇಕು ಹಾಗೂ ಯಾವ ಒಂದು ಗ್ರಂಥವೂ ‘ಏಕೈಕ ಪರಮಪೂಜ್ಯ’ ಧರ್ಮಗ್ರಂಥವಾಗಬಾರದು, ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾಗುವ ಎಲ್ಲವನ್ನೂ ಓದಿ ತಿಳಿದು ತನ್ನ ‘ದರ್ಶನ’ವನ್ನು ತಾನೇ ಪಡೆಯಬೇಕು’ ಎಂದಿದ್ದಾರೆ.

ಅಧ್ಯಾತ್ಮವೆಂದರೆ ವೈಚಾರಿಕತೆಗೆ ವಿರುದ್ಧವಾದುದೆಂದು ಸಾಮಾನ್ಯವಾಗಿ ತಿಳಿಯಲಾಗುತ್ತದೆ. ಆಧ್ಯಾತ್ಮಿಕತೆಯನ್ನು ವಿರೋಧಿಸುವಿಕೆಯೇ ವಿಚಾರವಾದವೆಂದು ಬಗೆಯಲಾಗುತ್ತದೆ, ಆದರೆ ವಿಚಾರ ತರ್ಕಗಳಿಗೆ ಮೀರಿದ ನಿತ್ಯ ಸತ್ಯಗಳು ಎದುರಾದಾಗ ಇಂಥ ತಿಳಿವಳಿಕೆ ತಬ್ಬಿಬ್ಬಾಗುತ್ತದೆ. ಆದರೆ ಕುವೆಂಪು ಅವರು ವಿಚಾರವಾದಿಗಳು ಹೌದಾದರೂ ಅವರು ಆಧ್ಯಾತ್ಮಿಕ ಶ್ರದ್ಧಾಳು, ಅವರೊಬ್ಬ ಅನುಭಾವಿ, ಆದುದರಿಂದಲೇ ಅವರ ವಿಚಾರಗಳಲ್ಲಿ ಗೊಂದಲವಿಲ್ಲ. ಧರ್ಮ, ಸಂಪ್ರದಾಯ- ವೈಚಾರಿಕತೆಗಳಲ್ಲಿ ಅವರಿಗೆ ಯಾವ ದ್ವಂದ್ವ ನಿಲುವೂ ಗೋಚರಿಸುವುದಿಲ್ಲ. ಪರಂಪರೆಯ ಭವ್ಯತೆ, ಎತ್ತಿ ಹಿಡಿಯುವ ಅವರು ಅದರ ಮೇಲೆ ಮುಸುಕಿದ ಮೌಡ್ಯದ ಮಂಜನ್ನು ಕರಗಿಸುವ ಪ್ರಭೆಯಾಗಿ ಬೆಳಗುತ್ತಾರೆ. ಕುವೆಂಪು ಅವರು ಭಾರತೀಯ ಸಮಾಜದ ಜಾತಿ ಪದ್ಧತಿ, ವರ್ಣಾಶ್ರಮ ಧರ್ಮವನ್ನು ಉಗ್ರವಾಗಿ ಖಂಡಿಸುವಂತೆ, ಈ ಅರ್ಥಹೀನ ಹೊರೆಗಳ ಆಚೆ ಇರುವ ಶಾಶ್ವತ ಮೌಲ್ಯಗಳನ್ನು ಸ್ವಾನುಭವವಾಗಿ ಮಾಡಿಕೊಳ್ಳುತ್ತಾರೆ. ಮತ, ಜಾತಿಗಳಿಂದಲೂ ಧರ್ಮ ಬೇರೆಯಾದುದು.

ಆಧ್ಯಾತ್ಮ ಇವೆಲ್ಲವನ್ನು ಮೀರಿದ್ದು ಎಂಬ ಸತ್ಯ ಅವರಿಗೆ ಸ್ಪಷ್ಟವಾಗಿದೆ. ಇದೆಲ್ಲ ಅರ್ಥವಾಗದ ಭೌತ ವಿಚಾರವಾದಿ ಅವರನ್ನು ಅನುಮಾನಿಸಬಹುದು; ಶ್ರದ್ಧಾವಂತ ಅವರನ್ನು ಖಂಡಿಸಬಹುದು; ಇವರಿಬ್ಬರ ನಡುವೆ ಕುವೆಂಪು ಇದ್ದಾರೆ. ಕೆಲವು ಕಾರಣಗಳಿಗಾಗಿ ಕುವೆಂಪು ಅವರಲ್ಲಿ ಕೇವಲ ವಿಚಾರವಾದವನ್ನು ಮಾತ್ರ ಹುಡುಕುವವರು ಅಥವಾ ಅವರಲ್ಲಿ ಕೇವಲ ಸಂಪ್ರದಾಯ ವಿರೋಧಿತ್ವವಿದೆ ಎಂದು ಭಾವುಕ ದೃಷ್ಟಿಯಲ್ಲಿ ನೋಡುವವರು- ಈ ಎರಡು ಬಗೆಯ ಓದುಗರು ಅವರ ಸಾಹಿತ್ಯಕ್ಕೆ ಅಪಾಯಕಾರಿಗಳು, ಇಂಥವರಿಂದ ಅವರ ಸಾಹಿತ್ಯ ಅಸಡ್ಡೆಗೆ ಒಳಗಾದುದೇ ಹೆಚ್ಚು. ಕುವೆಂಪು ಅವರನ್ನು ಯಾವುದೇ ಪೂರ್ವ ನಿಶ್ಚಿತ ಅಪೇಕ್ಷೆ, ಗ್ರಹಿಕೆಗಳಿಲ್ಲದೇ ಓದಿದರೆ ಅವರ ದರ್ಶನ ಅಪೂರ್ವವೆನಿಸುತ್ತದೆ. ಆರಾಧನೆ ಅಥವಾ ನಿರಾಕರಣೆಗಳಿಗೆ ಹೊರತಾದ ಸ್ಥಿತಿಪ್ರಜ್ಞ, ನಿಷ್ಕಲ್ಮಷ ಓದುಗನೊಡನೆ ಅವರ ಸಾಹಿತ್ಯ, ಸಂವಾದ ನಡೆಸುವ ಪರಿಯೇ ಅನನ್ಯ.

ಕುವೆಂಪು ಅವರನ್ನು ಓದುವ ಮುಂಚೆ ಕೆಲವು ಪೂರ್ವ ತಯಾರಿಗಳು, ಅದರಲ್ಲೂ ಸ್ವಲ್ಪ ತತ್ವಜ್ಞಾನದ ಅರಿವು ಅತ್ಯಗತ್ಯ. ಕುವೆಂಪು ಯಾವುದೇ ತತ್ತ್ವ ಸಿದ್ಧಾಂತಗಳನ್ನು ಹುಟ್ಟಿನಿಂದ ಬಳುವಳಿ ಪಡೆದವರಲ್ಲ. ಅಗಾಧವಾದ ಓದು ಹಾಗೂ ಅನುಭವದ ಮೂಸೆಯಲ್ಲಿ ಅದನ್ನು ಹಿಡಿದು ನೋಡಿದ ಕಾರಣ ಅವರಿಗೆ ಅವರದೇ ಆದ ದರ್ಶನ ದ್ವಾರ ತೆರೆದುಕೊಂಡಿತು. ಸ್ವಯಾರ್ಜಿತ ಓದು ಮತ್ತು ಸ್ವಾನುಭವಗಳ ಸಂಗಮ ಅವರಲ್ಲಿದೆ. ರಾಮಕೃಷ್ಣ ಪರಮಹಂಸರ ಸಿದ್ಧಿ, ಸ್ವಾಮಿ ವಿವೇಕಾನಂದರ ಬುದ್ಧಿ, ಶ್ರೀ ಅರವಿಂದರ ಪೂರ್ಣ ದೃಷ್ಟಿ ಹಾಗೂ ಗಾಂಧೀಜಿಯವರ ಸರ್ವೋದಯ ಸೂತ್ರಗಳನ್ನು ಮೇಲೈಸಿಕೊಂಡ ವಿಶಿಷ್ಟ ಪ್ರತಿಭೆ ಅದು. ಹಾಗಾಗಿ ಕುವೆಂಪು ಅವರನ್ನು ರೊಮ್ಯಾಂಟಿಕ್ ಕವಿ, ನಿಸರ್ಗ ಕವಿ, ತೀವ್ರ ವಿಚಾರವಾದಿ, ವಿಚಾರ ಶೀಲ ಸಂಪ್ರದಾಯವಾದಿ, ವಾಸ್ತವವಾದಿ, ಅಧ್ಯಾತ್ಮವಾದಿ ಎಂದು ಮುಂತಾಗಿ ಪ್ರಪ್ರತ್ಯೇಕವಾಗಿ ಕರೆಯುವಂತಿಲ್ಲ.

ಕುವೆಂಪು ಅವರ ಕವಿತೆಗಳಲ್ಲಿ ಆದರ್ಶೀಕೃತ ಮಾನವನಿದ್ದರೆ, ಕಥೆ ಕಾದಂಬರಿಗಳಲ್ಲಿ ಮಾನವ ಸ್ವಭಾವ ಅನುಭವಗಳ ನಿಷ್ಟುರ ಚಿತ್ರಣವಿದೆ. ಕುವೆಂಪು ಅವರು ನಿಸರ್ಗದ ಶಿಶು. ಪ್ರಕೃತಿಯ ಮಾಯೆ, ಭವ್ಯತೆ, ರುದ್ರ ರಮಣೀಯತೆ ಅವರನ್ನು ಕಾಡಿದ ಬಗೆ ಹಲವು. ಅವರ ಆಧ್ಯಾತ್ಮಿಕ ನಿಲುವು ನಿಸರ್ಗದಷ್ಟೇ ಸರಳ, ಸಂಕೀರ್ಣ ಮತ್ತು ನಿಚ್ಚಳ. ಸಾಮಾನ್ಯ ತಾತ್ವಿಕರಿಗೆ ಪ್ರಕೃತಿ ಜಡವಾದುದಾಗಿ ಕಂಡರೆ, ಅದು ಕುವೆಂಪು ಅವರಿಗೆ ‘ಜಡವೆಂಬುದಲ್ಲ ಚೇತನದ ನಟನೆಯ ಲೀಲೆ’ಯಾಗಿ ಕಾಣುತ್ತದೆ.

ಭಗವದ್ಗೀತೆಯ ಕರ್ಮಯೋಗದ ಸಾರ ಅವರ ಕೃತಿಗಳಲ್ಲಿ ಕಾಣಿಸುತ್ತದೆ. ಜೀವ ಪ್ರೇಮ, ಜೀವ ಗೌರವ ಅಲ್ಲಿ ಢಾಳಾಗಿ ಕಾಣುತ್ತದೆ. ಆದುದರಿಂದಲೇ ಅವರು ‘ಜೀವ ರಥೋತ್ಸವವಿದನಣಕಿಸದಿರು ಎಲೈ ಸಂನ್ಯಾಸಿ’ ಅನ್ನುತ್ತಾರೆ. ಪ್ರಕೃತಿ ಪುರುಷರಲ್ಲಿ, ಜೀವ ಜಗತ್ತಿನ ಆಗುಹೋಗುಗಳಲ್ಲಿ ಕರ್ಮ ವ್ಯಾಪಾರವಿದೆ ಎಂಬುದರ ಅವರ ನಂಬಿಕೆ, ಬೆರಳ್ಗೆ ಕೊರಳ್ ನಾಟಕದಲ್ಲಿ `ಕರ್ಮದ ಸಾಂಗು, ಮರಿಗೆ ಮರಿ, ಮರಿಗೆ ಮರಿ, ಬೆರಳ್ಗೆ ಕೊರಳ್’ ಅನ್ನುತ್ತಾರೆ. ಏಕಲವ್ಯನ ಬೆರಳು ಕೇಳಬೇಕಾದ ಧರ್ಮ ಸಂಕಟ ದ್ರೋಣನನ್ನು ಕಾಡುತ್ತದೆ. ಆತ, ‘ಕೊಳ ಮಿಣಿಯ ಪಿಡದಿರ್ಮದಾ ಬದಿಯ ಕಯ್ ನೂಂಕುತಿಹುದನಿಬರಂ ತನ್ನ ಲೀಲಾರ್ಥಂ, ಅಂತಲ್ಲದಿರೆ, ನಮ್ಮ ನೆತ್ತಲಿಂದಲೋ ಕರೆದು ಒಯ್ದು ತಂದೀನ್ಯಪಾಲರೂಳಿಗಕೆ ತಳ್ಳು ತಿರ್ದುದೆ ಈಶ್ವರೇಚ್ಛಾರೂಪದೆಮ್ಮ ಕರ್ಮ ಎಂದು ಹಳಹಳಿಸುತ್ತಾನೆ.

ಜನಾಂತರ ಪರಿಕಲ್ಪನೆಯನ್ನು ಕುವೆಂಪು ನಿರಾಕರಿಸುವುದಿಲ್ಲ. ಅವರ ‘ಯಾವ ಜನ್ಮದ ಮೈತ್ರಿ’ ಸಾಲುಗಳಲ್ಲಿ, ಬೆರಳ್ಗೆ ಕೊರಳ್ ನಾಟಕದಲ್ಲಿ ದ್ರೋಣರು ಅರ್ಜುನನ ಹೆಸರಾಸೆಯನ್ನು ಹೆಕ್ಕುತ್ತ, ‘ಈ ಜನ್ಮದೊಳ್’ ಈ ಪೆಸರ್ ಮರುವುಟೊಳಿನ್ನೊಂದು ಪೆಸರ್, ಭರತ ಖಂಡದೊಳಿಂದು ದ್ರೋಣನ್! ಬರ್ಪ ಜನ್ಮದೊಳಾವ ದೇಶದೊಳ ಅದಾವ ಹೆಸರೊ’ ಎಂದು ಹೇಳಿರುವಲ್ಲಿ. ಶ್ರೀ ರಾಮಾಯಣದರ್ಶನಂ ಕಾವ್ಯದಲ್ಲಿ ರಾವಣ-ಕುಂಭಕರ್ಣರು ಈ ಜನ್ಮದಲ್ಲಿ ಗೆಲ್ಲಲಾಗದ ರಾಮನನ್ನು ಲವ-ಕುಶರಾಗಿ ಮುಂದಿನ ಜನ್ಮದಲ್ಲಿ ಗೆಲ್ಲುವುದು, ಸೀತೆಯ ಪ್ರೇಮವನ್ನು ಶಿಶುಗಳಾಗಿ ಪಡೆಯುವುದು ಚಿತ್ರಿತಗೊಂಡಿರುವಲ್ಲಿ ಕುವೆಂಪು ಅವರ ಜನ್ಮಾಂತರ ಪರಿಕಲ್ಪನೆ ಗೋಚರಿಸುತ್ತದೆ. ‘ಆಲ್ ಲೈಫ್ ಇಸ್ ಯೋಗ’ ಎಂಬ ಮಾತು ಕುವೆಂಪು ಅವರಲ್ಲಿ ಅಖಂಡವಾಗಿದೆ, ನಿಷ್ಕಾಮ ಕರ್ಮಗಳೆಲ್ಲವೂ ಯೋಗವೇ ಎಂಬುದು ಅವರ ‘ಉಳುವಾ ಯೋಗಿಯ ನೋಡಲ್ಲಿ’ ಕವಿತೆಯಲ್ಲಿ ಒಡಮೂಡಿರುವುದನ್ನು ಗುರುತಿಸಬಹುದು.

ವ್ಯಕ್ತಿಯ ಯೌಗಿಕ ಸ್ಥಿತಿಯ ಬಗ್ಗೆ ‘ವಿಭೂತಿ ಪೂಜೆ’ಯಲ್ಲಿ ಅವರು ವಿವರಿಸಿದ್ದಾರೆ. ‘ಸಚ್ಚಿದಾನಂದ ಲೀಲಾರ್ಥವಾಗಿ ಮಾಯೆಗವತರಿಸಿದ ಜೀವ, ತನ್ನ ಸ್ವಸ್ಥಾನ ಸಂಸ್ಥಾಪನ ಸಾಧನೆಯಲ್ಲಿ ತೊಡಗುತ್ತದೆ- ಸ್ವಾಭಾವಿಕವಾಗಿ, ಪ್ರಕೃತಿ ಸಿದ್ಧವಾಗಿ, ಆ ಸಾಧನೆ ಬೇರೆ ಬೇರೆಯ ಕೋಶಗಳಲ್ಲಿ ಆಯಾ ಕೋಶಗಳಿಗೆ ಅನುಗುಣವಾದ ರೀತಿಗಳಲ್ಲಿ, ರೂಪಗಳಲ್ಲಿ ಸಾಗುತ್ತದೆ. ಆದು ಅನ್ನಮಯದಲ್ಲಿ ವಿಕಾಸಗೊಳ್ಳುವಾಗ ನಿದ್ರಿತವೆಂಬಂತೆ ಸಾಗುತ್ತದೆ, ಪ್ರಾಣಮಯದಲ್ಲಿ ಸ್ವಪ್ನಮಯವೆಂಬಂತೆ, ಮನೋಮಯದಲ್ಲಿ ಜಾಗೃತವಾಗಿ, ಪ್ರಜ್ಞಾಪೂರ್ವಕವಾಗಿ, ಸ್ವ- ಸ್ವಪ್ರಯತ್ನಶೀಲವಾಗಿ, ತನ್ನರಿವಿಗೆ ತಾನೇ ವಿಷಯವಾಗಿ, ಆರಾಧ್ಯವಾಗಿ, ಆದರ್ಶವಾಗಿ, ಕರೆಯಾಗಿ, ಕೋರಿಕೆಯಾಗಿ, ಪ್ರಿಯವಾಗಿ, ಪೂಜ್ಯವಾಗಿ ಗೋಚರವಾಗುತ್ತದೆ. ಹಾಗೆಯೇ ತಾನಿರುವ ಮಟ್ಟಕ್ಕೆ ಆ ಮೇಲಿರುವ ಮಟ್ಟ ವಿಭೂತಿ ಸ್ಥಾನವಾಗಿ ಪರಿಣಮಿಸುತ್ತದೆ’, ವ್ಯಕ್ತಿಯು ತನ್ನ ಮುಕ್ತಿಯನ್ನು ತನ್ನ ಜೀವಿತೋದ್ದೇಶದ ಮೂಲಕವೇ ಸಾಧಿಸಿಕೊಳ್ಳಬೇಕೆಂಬ ಕಾಣೆಯನ್ನು ತೋರಿಸುವ ಆಂಜನೇಯನ ಪರ್ವತ ಯಾತ್ರೆಯ ಸಂದರ್ಭದಲ್ಲಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಈ ಯೌಗಿಕ ದರ್ಶನವನ್ನು ಅವರು ಮಾಡಿಸಿದ್ದಾರೆ.

ಕುವೆಂಪು ಅವರ ದಾಂಪತ ಗೀತೆಗಳಲ್ಲಿಯೂ ಸಂಕೀರ್ಣವಾದ ಅಧ್ಯಾತ್ಮದ ಎಳೆಯಿದೆ. ವಾಸ್ತವ ಬದುಕಿನ ಚಿತ್ರಣ ನೀಡುವ ‘ಮಲೆಗಳಲ್ಲಿ `ಮದುಮಗಳು’ ಕಾದಂಬರಿಯಲ್ಲಿ ಆತೀಂದ್ರಿಯ ಜಗತ್ತಿನ ಹೊಳಹುಗಳಿವೆ. ಗಡ್ಡದಯ್ಯ ಆದರ ಪ್ರತಿನಿಧಿಯಾಗಿದ್ದಾನೆ. ಇಲ್ಲಿನ ಯಾವ ಪಾತ್ರವೂ ತಾನು ವಿಶೇಷವಾದುದಾಗಬೇಕೆಂದು ತುಡಿಯುವುದಿಲ್ಲ. ಇದ್ದುದನ್ನು ಇರುವ ಹಾಗೆ ನೇರವಾಗಿ ಅವು ಅನುಭವಿಸುತ್ತವೆ. ಕುವೆಂಪು ಅವರ ಕಾವ್ಯಧೋರಣೆ ಆಧ್ಯಾತ್ಮಿಕ ನೆಲೆಯುಳ್ಳದ್ದು. ಅವರ ದೃಷ್ಟಿಯಲ್ಲಿ ಆತ್ಮಸಂಸ್ಕಾರ ಹಾಗೂ ಸಾಕ್ಷಾತ್ಕಾರಗಳಿಗಾಗಿ ಕಾವ್ಯ ಕಲೆ ಇದೆ. ಜೀವನದ ಉನ್ನತಿಗೆ ಅದೊಂದು ಸಾಧನ.

ಆಧ್ಯಾತ್ಮ ಜೀವಿಯಾದ ಕುವೆಂಪು, ವಾಸ್ತವ ಬದುಕಿನ ಕರ್ತವ್ಯ ಪ್ರಜ್ಞೆಯಿಂದ ಪಲಾಯನ ಮಾಡುವ ಸಂನ್ಯಾಸಿಯಾಗುವುದಿಲ್ಲ. ಯಾವ ಯಾವ ಸಂದರ್ಭಗಳಲ್ಲಿ ಆತ್ಮಘಾತುಕ ಪರಿಸ್ಥಿತಿ ಉಂಟಾಗುತ್ತದೆಯೋ ಅಂಥ ಕಡೆ ಧ್ಯಾನ ತಪಸ್ತುಗಳ ಭಂಗಿ ಭಂಡತನವಾಗುತ್ತದೆ. ಕರ್ತವ್ಯ ಪಾರಾಯಣವೇ ಆ ಕ್ಷಣದ ತಪಸ್ಸು, ಇದಕ್ಕೊಂದು ಸನ್ನಿವೇಶವನ್ನು ಅವರು ‘ದ್ರಾಂದ್ರೀಂದ್ರಂ’ ಕವಿತೆಯಲ್ಲಿ ನಿದರ್ಶನವಾಗಿ ನೀಡಿದ್ದಾರೆ. ಪರಕೀಯರ ಆಕ್ರಮಣ, ಸನಾತನ ಪರಂಪರೆಯ ಮೇಲೆ ನಡೆಯುತ್ತಿದ್ದಾಗ ಜಪ ಮಾಡುತ್ತ ನಿಂತವರು ಅಸಂಖ್ಯ ಜನ, ದಾಳಿ ಮಾಡಿದವರು ಬೆರಳೆಣಿಕೆ ಜನ, ಜಪ ಮಾಡುತ್ತಿದ್ದ ಜನರ ನಿಜವಾದ ತಪಸ್ಸು, ಆಗ ಕರ್ತವ್ಯಕ್ಕಾಗಿ ಹೋರಾಡುವುದು ಆಗಬೇಕಾಗಿತ್ತು. ಹೀಗಾಗಲಿಲ್ಲ. ಜಪ ಮಾಡಿದರೂ ಲೂಟಿ ಆಗಿ ಹೋಯಿತೆಂಬುದು ಮೌಡ್ಯದ ಪರಮಾವಧಿ, ಸ್ವಂತಿಕೆ, ಸ್ವಧರ್ಮ, ಸ್ವಾತಂತ್ರ್ಯಗಳಿಗೆ ಧಕ್ಕೆ ಒದಗಿದಾಗ ಕೈಕಟ್ಟಿ ಕೂತು ಧ್ಯಾನ ಮಾಡಬೇಕೆಂದು ಯಾವ ಧರ್ಮವೂ ಬೋಧಿಸಿಲ್ಲ. ಈ ಸತ್ಯವನ್ನು ಕುವೆಂಪು ದರ್ಶಿಸಿದ್ದಾರೆ. ಇಂಥ ಸಂದರ್ಭಗಳಲ್ಲಿ ಅವರು ಸನಾತನ ಮೌಡ್ಯಗಳ ಮೇಲೆ ಗದಾಪ್ರಹಾರ ಮಾಡುತ್ತಾರೆ. ಆದರೆ ಅದೇ ಸಂದರ್ಭದಲ್ಲಿ ಶಾಶ್ವತಾಂಶಗಳನ್ನು ಉಳಿಸುವ ಕಾಳಜಿ, ಕಳಕಳಿ, ಅವರ ವಿನೂತನಗೊಳಿಸುವ ಕಲಾಶಕ್ತಿಯಲ್ಲಿ ಅಡಗಿರುತ್ತದೆ.

ತೀವ್ರ ವಿಚಾರವಾದಿ, ಅಧ್ಯಾತ್ಮವಾದಿ, ಅಧ್ಯಾತ್ಮ ಜೀವಿಯಾದ ಕುವೆಂಪು ಸುಲಭಗ್ರಾಹ್ಯರಲ್ಲ, ಅವರು ವಿಚಾರವಾದಿ ನಿಜ, ಆದರೆ ಕೇವಲ ಭೌತವಾದಿಯಲ್ಲ. ಅಧ್ಯಾತ್ಮವಾದಿ. ನಿಜ, ಆದರೆ ಕರ್ಮಠರಲ್ಲ. ಅಧ್ಯಾತ್ಮ ಜೀವಿ ನಿಜ, ಆದರೆ ಸಂನ್ಯಾಸಿಯಲ್ಲ. ನಿರಂಕುಶಮತಿಗಾಗಿ ಅವರು ನೀಡುವ ಕರೆ, ಅತ್ಮಶ್ರೀಗಾಗಿಯೇ ಏನಾ ಭೌತಿಕ ರುಚಿಗಳ ಆರೈಕೆ, ಪೂರೈಕೆಗಾಗಿ ಅಲ್ಲ.

ಮೇಲ್ನೋಟದಲ್ಲಿ ಗೊಡ್ಡು ಸಂಪ್ರದಾಯ, ಮೌಡ್ಯಗಳ ಮೇಲೆ ಕುವೆಂಪು ಅವರು ತೀವ್ರವಾಗಿ ಮಾಡುವ ದಾಳಿಯನ್ನು ಮಾತ್ರ ಗಮನಿಸುವ ವಿಚಾರವಾದಿಗಳಿಗೆ ಅಂತರ್ಯದ ಕಾಳಜಿ ಕಾಣಿಸುವುದಿಲ್ಲ. ತಲೆಮಾರುಗಳಿಂದ ಹರಿದು ಬಂದ ಜಾಡ್ಯಗಳನ್ನೂ ‘ಪರಂಪರೆ’ ಎಂದು ತಿಳಿದ ತಿಳಿಗೇಡಿ ಕರ್ಮಠರಿಗೆ ಮತ- ಜಾತಿ-ಧರ್ಮಗಳ ಒಳಗಿರುವ ಸಣ್ಣತನವನ್ನು ಅವರು ಖಂಡಿಸುವ ಪರಿ ಅಪಥ್ಯವಾಗುತ್ತದೆ. “ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಎಂದು ಅವರು ಹೇಳದ ಮಾತುಗಳು, “ಶಾಸ್ತ್ರವನ್ನೇ ಪ್ರಶ್ನಿಸುತ್ತಾರಲ್ಲ’ ಎಂಬ ಕಾರಣಕ್ಕೆ ಕರ್ಮಠರಿಗೆ ಅಹಿತವಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು