News Karnataka Kannada
Thursday, May 02 2024
ಲೇಖನ

ಡಾ.ಎಪಿಜೆ ಅಬ್ದುಲ್ ಕಲಾಂರವರ ಜನ್ಮ ದಿನ: ಕ್ಷಿಪಣಿ ಬ್ರಹ್ಮ, ಮಾಜಿ ರಾಷ್ಟ್ರಪತಿಗೆ ಶತ ನಮನಗಳು

Dr APJ Abdul Kalam's birth anniversary: Missile Brahma pays homage to former President
Photo Credit : Wikimedia

ಭಾರತದಲ್ಲಿ ‘ಕ್ಷಿಪಣಿ ಬ್ರಹ್ಮ’ ಎಂದೇ ಖ್ಯಾತರಾದವರು ಎಪಿಜೆ ಅಬ್ದುಲ್ ಕಲಾಂ. ಮಕ್ಕಳ ನೆಚ್ಚಿನ ಮೇಷ್ಟ್ರಾಗಿ, ಜನರ ಅಚ್ಚುಮೆಚ್ಚಿನ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ವಿಜ್ಞಾನಿ ಅಬ್ದುಲ್ ಕಲಾಂ. ಮಕ್ಕಳಿಗೆ ಸ್ಫೂರ್ತಿಯ ಚಿಲುಮೆ ಆಗಿರುವ ಅಬ್ದುಲ್ ಕಲಾಂ ಭಾರತಕ್ಕೆ ನೀಡಿರುವ ಕೊಡುಗೆ ಒಂದೆರಡಲ್ಲ.

ಎಪಿಜೆ ಅಬ್ದುಲ್ ಕಲಾಂ ಬಾಲ್ಯ
ಎಪಿಜೆ ಅಬ್ದುಲ್ ಕಲಾಂ ಪೂರ್ಣ ಹೆಸರು ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ. ಇವರು ಹುಟ್ಟಿದ್ದು 15 ಅಕ್ಟೋಬರ್ 1931 ರಂದು. ತಮಿಳುನಾಡಿನ ರಾಮೇಶ್ವರಂನಲ್ಲಿ ತಮಿಳಿನ ಮುಸ್ಲಿಂ ಕುಟುಂಬದಲ್ಲಿ ಅಬ್ದುಲ್ ಕಲಾಂ ಜನಿಸಿದರು. ಇವರ ತಂದೆ ಜೈನುಲಬ್ದೀನ್ ದೋಣಿಯೊಂದರ ಮಾಲೀಕರಾಗಿದ್ದರು. ಹಾಗೇ, ಸ್ಥಳೀಯ ಮಸೀದಿಯ ಇಮಾಮ್ ಕೂಡ ಆಗಿದ್ದರು. ಅಬ್ದುಲ್ ಕಲಾಂ ತಾಯಿ ಗೃಹಿಣಿಯಾಗಿದ್ದರು.

ಧನುಷ್ಕೋಡಿ ಮತ್ತು ರಾಮೇಶ್ವರಂ ನಡುವೆ ತಮ್ಮ ದೋಣಿಯಲ್ಲಿ ಹಿಂದು ಭಕ್ತಾದಿಗಳನ್ನು ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದರು ಅಬ್ದುಲ್ ಕಲಾಂ ತಂದೆ ಜೈನುಲಬ್ದೀನ್. ನಾಲ್ವರು ಸಹೋದರರು ಹಾಗೂ ಓರ್ವ ಸಹೋದರಿಗೆ ಕಿರಿಯನಾಗಿ ಹುಟ್ಟಿದ ಅಬ್ದುಲ್ ಕಲಾಂ ಬಡತನದಲ್ಲೇ ಬೆಳೆದವರು.

ತಮ್ಮ ದೊಡ್ಡ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡುವ ಸಲುವಾಗಿ ಅಬ್ದುಲ್ ಕಲಾಂ ಚಿಕ್ಕವಯಸ್ಸಿನಲ್ಲೇ ಕೆಲಸ ಮಾಡಲು ಆರಂಭಿಸಿದರು. ಶಾಲೆಗೆ ಹೋಗುವ ಮುನ್ನ ದಿನಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದರು. ಕುಟುಂಬದ ಬಡತನ ಅಬ್ದುಲ್ ಕಲಾಂ ವಿದ್ಯಾಭ್ಯಾಸಕ್ಕೆ ಅಡ್ಡಿ ಆಗಲಿಲ್ಲ. ಶಾಲೆಯಲ್ಲಿ ಅಬ್ದುಲ್ ಕಲಾಂ ಉತ್ತಮ ವಿದ್ಯಾರ್ಥಿಯಾಗಿದ್ದರು. ಶ್ರದ್ಧೆಯಿಂದ ಪಾಠ ಕೇಳುತ್ತಿದ್ದರು. ಅದರಲ್ಲೂ ಗಣಿತ ಅಂದ್ರೆ ಅಬ್ದುಲ್ ಕಲಾಂಗೆ ಅಚ್ಚುಮೆಚ್ಚಿನ ವಿಷಯವಾಗಿತ್ತು.

ರಾಮನಾಥಪುರಂನಲ್ಲಿನ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ತಿರುಚಿನಾಪಳ್ಳಿಯಲ್ಲಿ ಸೇಂಟ್ ಜೋಸೆಫ್ ಕಾಲೇಜಿಗೆ ಸೇರಿದರು. ಅಲ್ಲಿ ಫಿಸಿಕ್ಸ್ (ಭೌತಶಾಸ್ತ್ರ) ವಿಷಯದಲ್ಲಿ 1954 ರಂದು ಪದವಿ ಪಡೆದರು. 1955 ರಲ್ಲಿ ಮದ್ರಾಸ್ ಗೆ ಬಂದ ಅಬ್ದುಲ್ ಕಲಾಂ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರೋ ಸ್ಪೇಸ್ ಇಂಜಿನಿಯರಿಂಗ್ ಓದಲು ಆರಂಭಿಸಿದರು.

ಮೊದಲ ಸೋಲು.!
ಅಬ್ದುಲ್ ಕಲಾಂಗೆ ಫೈಟರ್ ಪೈಲಟ್ ಆಗಬೇಕು ಎಂಬ ಕನಸಿತ್ತು. ಆದರೆ, ಅರ್ಹತಾ ಪರೀಕ್ಷೆಯಲ್ಲಿ ಅವರಿಗೆ ಒಂಬತ್ತನೇ ಸ್ಥಾನ ಲಭಿಸಿತ್ತು. ಐ.ಎ.ಎಫ್ ನಲ್ಲಿ ಎಂಟು ಸ್ಥಾನಗಳು ಮಾತ್ರ ಖಾಲಿ ಇದ್ದಿದ್ದರಿಂದ ಕೊಂಚ ಅಂತರದಲ್ಲಿ ಅಬ್ದುಲ್ ಕಲಾಂಗೆ ಅವಕಾಶ ಕೈತಪ್ಪಿತು. ಆದರೂ ಅಬ್ದುಲ್ ಕಲಾಂ ಎದೆಗುಂದಲಿಲ್ಲ.

ವಿಜ್ಞಾನಿಯಾಗಿ ಅಬ್ದುಲ್ ಕಲಾಂ
* 1960 ರಲ್ಲಿ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದ ಅಬ್ದುಲ್ ಕಲಾಂ ಡಿ.ಆರ್.ಡಿ.ಓ ನಲ್ಲಿ ವಾಯುಯಾನ ವಿಜ್ಞಾನ ಅಭಿವೃದ್ಧಿ ವಿಭಾಗಕ್ಕೆ ವಿಜ್ಞಾನಿಯಾಗಿ ಕಾರ್ಯಾರಂಭಿಸಿದರು. ಮೊದಮೊದಲು ಹೋವರ್ ಕ್ರಾಫ್ಟ್ ಗಳನ್ನು ಅಬ್ದುಲ್ ಕಲಾಂ ವಿನ್ಯಾಸ ಮಾಡುತ್ತಿದ್ದರು. ಆದರೆ ಈ ಕೆಲಸ ಅವರಿಗೆ ತೃಪ್ತಿ ನೀಡಲಿಲ್ಲ.
* ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿ ವಿಕ್ರಂ ಸಾರಾಭಾಯ್ ಜೊತೆ INCOSPAR ಸಮಿತಿಯ ಭಾಗವಾಗಿದ್ದರು ಅಬ್ದುಲ್ ಕಲಾಂ. 1969 ರಲ್ಲಿ ಅಬ್ದುಲ್ ಕಲಾಂ ರನ್ನು ಇಸ್ರೋಗೆ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ವರ್ಗಾವಣೆ ಮಾಡಲಾಯಿತು. ಅಲ್ಲಿ ಅವರು ಭಾರತದ ಮೊದಲ ಸ್ಯಾಟೆಲೈಟ್ ಲಾಂಚ್ ವೆಹಿಕಲ್ (SLV-III) ಯೋಜನೆಯ ನಿರ್ದೇಶಕರಾದರು. ಆ ಮೂಲಕ 1980 ರಲ್ಲಿ ಭೂಮಿಯ ಕಕ್ಷೆಗೆ ರೋಹಿಣಿ ಉಪಗ್ರಹವನ್ನು ಸೇರಿಸುವಲ್ಲಿ ಸಫಲರಾದರು. ಹಾಗ್ನೋಡಿದ್ರೆ, 1965 ರಲ್ಲೇ ಡಿ.ಆರ್.ಡಿ.ಓ ನಲ್ಲಿ ಅಬ್ದುಲ್ ಕಲಾಂ ಎಕ್ಸ್ಪಾಂಡಬಲ್ ರಾಕೆಟ್ ಪ್ರಾಜೆಕ್ಟ್ ಗೆ ಸ್ವತಂತ್ರವಾಗಿ ಕಾರ್ಯಾರಂಭಿಸಿದ್ದರು. ಇದಕ್ಕೆ 1969 ರಲ್ಲಿ ಸರ್ಕಾರ ಸಮ್ಮತಿ ನೀಡಿತು.
* 1963-1964 ಸಮಯದಲ್ಲಿ ಅಬ್ದುಲ್ ಕಲಾಂ ವರ್ಜಿನಿಯಾದ ಹ್ಯಾಂಪ್ಟನ್ ನಲ್ಲಿರುವ ನಾಸಾದ ಲ್ಯಾಂಗ್ಲೆ ಸಂಶೋಧನಾ ಕೇಂದ್ರ, ಮೇರಿಲ್ಯಾಂಡ್ ನ ಗ್ರೀನ್ ಬೆಲ್ಟ್ ನಲ್ಲಿರುವ ಗೊಡ್ಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರ ಮತ್ತು ವಾಲೋಪ್ಸ್ ಫ್ಲೈಟ್ ಫೆಸಿಲಿಟಿ ಕೇಂದ್ರಗಳಿಗೆ ಭೇಟಿ ನೀಡಿದರು.
* 1970-1990 ಸಮಯದಲ್ಲಿ ಪೋಲಾರ್ ಸ್ಯಾಟೆಲೈಟ್ ಲಾಂಚ್ ವೆಹಿಕಲ್ (PSLV) ಮತ್ತು SLV-III ಯೋಜನೆಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡಿದರು. ಇವರೆಡನ್ನೂ ಯಶಸ್ವಿಯಾಗಿಸುವಲ್ಲಿ ಅಬ್ದುಲ್ ಕಲಾಂ ಸಫಲರಾದರು.
* ದೇಶದ ಮೊದಲ ಪರಮಾಣು ಪರೀಕ್ಷೆ ‘ಸ್ಮೈಲಿಂಗ್ ಬುದ್ಧ’ನನ್ನು TBRL ಪ್ರತಿನಿಧಿಯಾಗಿ ವೀಕ್ಷಿಸಲು ಅಬ್ದುಲ್ ಕಲಾಂ ರವರನ್ನು ರಾಜಾ ರಾಮಣ್ಣ ಆಹ್ವಾನಿಸಿದರು. ಆದರೆ ಅದರ ಅಭಿವೃದ್ಧಿಯಲ್ಲಿ ಅಬ್ದುಲ್ ಕಲಾಂ ಭಾಗವಹಿಸಿರಲಿಲ್ಲ.
* SLV ಯೋಜನೆಯ ತಂತ್ರಜ್ಞಾನದಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸಲು 1970 ದಶಕದಲ್ಲಿ ‘ಪ್ರಾಜೆಕ್ಟ್ ಡೆವಿಲ್’ ಮತ್ತು ‘ಪ್ರಾಜೆಕ್ಟ್ ವೇಲಿಯಂಟ್’ ಎಂಬ ಎರಡು ಯೋಜನೆಗಳಿಗೆ ಅಬ್ದುಲ್ ಕಲಾಂ ನಿರ್ದೇಶಕರಾದರು.
* ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ‘ಅಗ್ನಿ’ ಮತ್ತು ಯುದ್ಧತಂತ್ರದ ಕ್ಷಿಪಣಿ ಪೃಥ್ವಿ ಸೇರಿದಂತೆ ಅನೇಕ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಅಬ್ದುಲ್ ಕಲಾಂ ಪ್ರಮುಖ ಪಾತ್ರ ವಹಿಸಿದರು.
* ಪ್ರಧಾನ ಮಂತ್ರಿಯ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿಯಾಗಿ 1992-1999 ವರೆಗೆ ಸೇವೆ ಸಲ್ಲಿಸಿದರು. ಪೋಖ್ರಾನ್-II ಪರಮಾಣು ಪರೀಕ್ಷೆಗಳನ್ನು ಈ ಅವಧಿಯಲ್ಲಿ ನಡೆಸಲಾಯಿತು. ಪರಮಾಣು ಪರೀಕ್ಷೆಗಳ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತವರು ಅಬ್ದುಲ್ ಕಲಾಂ. ಪರೀಕ್ಷಾ ಹಂತದಲ್ಲಿ ರಾಜಗೋಪಾಲ ಚಿದಂಬರಂ ಅವರೊಂದಿಗೆ ಅಬ್ದುಲ್ ಕಲಾಂ ಮುಖ್ಯ ಯೋಜನಾ ಸಂಯೋಜಕರಾಗಿ ಸೇವೆ ಸಲ್ಲಿಸಿದರು. ಇದೇ ವೇಳೆ ದೇಶದಲ್ಲಿ ಪರಮಾಣು ವಿಜ್ಞಾನಿಯಾಗಿ ಅಬ್ದುಲ್ ಕಲಾಂ ಪ್ರಸಿದ್ಧಿ ಪಡೆದರು.
* 1998 ರಲ್ಲಿ ಹೃದ್ರೋಗ ತಜ್ಞ ಸೋಮಾ ರಾಜು ಅವರೊಂದಿಗೆ ಅಬ್ದುಲ್ ಕಲಾಂ ಕಡಿಮೆ ವೆಚ್ಚದ ಕೊರೊನರಿ ಸ್ಟೆಂಟ್ ಅನ್ನು ಅಭಿವೃದ್ಧಿ ಪಡಿಸಿದರು. ಇದು ‘ಕಲಾಂ-ರಾಜು ಸ್ಟೆಂಟ್’ ಎಂದೇ ಖ್ಯಾತಿ ಪಡೆಯಿತು.
* 2012 ರಲ್ಲಿ ಅಬ್ದುಲ್ ಕಲಾಂ ಮತ್ತು ಸೋಮಾ ರಾಜು ಜೊತೆಗೂಡಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ರಕ್ಷಣೆಗಾಗಿ ಟ್ಯಾಬ್ಲೆಟ್ ಕಂಪ್ಯೂಟರ್ ವಿನ್ಯಾಸಗೊಳಿಸಿದರು. ಇದಕ್ಕೆ ‘ಕಲಾಂ-ರಾಜು ಟ್ಯಾಬ್ಲೆಟ್’ ಎಂದು ಹೆಸರಿಸಲಾಗಿದೆ.

ರಾಷ್ಟ್ರಪತಿಯಾಗಿ ಅಬ್ದುಲ್ ಕಲಾಂ
ಕೆ.ಆರ್.ನಾರಾಯಣನ್ ಬಳಿಕ ಭಾರತದ 11ನೇ ರಾಷ್ಟ್ರಪತಿಯಾಗಿ ಎಪಿಜೆ ಅಬ್ದುಲ್ ಕಲಾಂ ಆಯ್ಕೆಯಾದರು. 2002 ರ ರಾಷ್ಟ್ರಪತಿ ಚುನಾವಣೆಯಲ್ಲಿ ಲಕ್ಷ್ಮೀ ಸಹಗಲ್ ವಿರುದ್ಧ 107,366 ಮತಗಳ ಅಂತರದಲ್ಲಿ ಅಬ್ದುಲ್ ಕಲಾಂ ವಿಜಯಿಯಾದರು. ಜುಲೈ 25, 2002 ರಿಂದ ಜುಲೈ 25, 2007 ರವರೆಗೆ ರಾಷ್ಟ್ರಪತಿಯಾಗಿ ಅಬ್ದುಲ್ ಕಲಾಂ ಸೇವೆ ಸಲ್ಲಿಸಿದರು.ಸರಳತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ಅಬ್ದುಲ್ ಕಲಾಂ ‘ಪೀಪಲ್ಸ್ ಪ್ರೆಸಿಡೆಂಟ್’ ಎಂದೇ ಖ್ಯಾತಿ ಪಡೆದರು.

ನಿಧನ
2015 ಜುಲೈ 27 ರಂದು ಐಐಎಂ ಶಿಲ್ಲಾಂಗ್ ನಲ್ಲಿ ‘ಕ್ರಿಯೇಟಿಂಗ್ ಎ ಲಿವಬಲ್ ಪ್ರಾನೆಟ್ ಅರ್ಥ್’ ಕುರಿತು ಲೆಕ್ಚರ್ ನೀಡುತ್ತಿದ್ದಾಗಲೇ ಕುಸಿದು ಬಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೃದಯ ಸ್ತಂಬನದಿಂದಾಗಿ ಅಬ್ದುಲ್ ಕಲಾಂ ಕೊನೆಯುಸಿರೆಳೆದರು.ಹುಟ್ಟೂರು ರಾಮೇಶ್ವರಂ ನಲ್ಲೇ ಜುಲೈ 30, 2015 ರಂದು ಅಬ್ದುಲ್ ಕಲಾಂ ರವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ವೈಯುಕ್ತಿಕ ಬದುಕು
ದೊಡ್ಡ ಕುಟುಂಬ ಇದ್ದರೂ, ಅಬ್ದುಲ್ ಕಲಾಂ ಮಾತ್ರ ಜೀವನ ಪರ್ಯಂತ ಬ್ರಹ್ಮಚಾರಿಯಾಗಿಯೇ ಉಳಿದರು. ಸಹೋದರರು ಮತ್ತು ಸಹೋದರಿಯನ್ನ ಸದಾ ಪ್ರೀತಿಯಿಂದಲೇ ಅಬ್ದುಲ್ ಕಲಾಂ ಕಾಣುತ್ತಿದ್ದರು ಪುಸ್ತಕಗಳನ್ನು ಓದುತ್ತಿದ್ದ ಕಲಾಂ ಮಧ್ಯರಾತ್ರಿ 2 ಗಂಟೆಗೆ ನಿದ್ದೆ ಮಾಡಿದರೆ, ಬೆಳಗ್ಗೆ 7 ಗಂಟೆಗೆ ಎಚ್ಚರಗೊಳ್ಳುತ್ತಿದ್ದರು. ವೀಣೆ ನುಡಿಸುವುದು ಅವರ ನೆಚ್ಚಿನ ಅಭ್ಯಾಸವಾಗಿತ್ತು.

ಅಬ್ದುಲ್ ಕಲಾಂಗೆ ಸಿಕ್ಕಿರುವ ಪ್ರಶಸ್ತಿ-ಪುರಸ್ಕಾರಗಳು
ಹಾನರರಿ ಪ್ರೊಫೆಸರ್ – ಬೀಜಿಂಗ್ ವಿಶ್ವವಿದ್ಯಾಲಯ, ಚೀನಾ
ಡಾಕ್ಟರ್ ಆಫ್ ಸೈನ್ಸ್ – ಎಡಿನ್ ಬರ್ಗ್ ವಿಶ್ವವಿದ್ಯಾಲಯ, ಯುಕೆ
ಡಾಕ್ಟರ್ ಆಫ್ ಇಂಜಿನಿಯರರಲ್ಲಿ – ವಾಟರ್ ಲೂ ವಿಶ್ವವಿದ್ಯಾಲಯ
ಗೌರವ ಡಾಕ್ಟರೇಟ್ – ಓಕ್ ಲ್ಯಾಂಡ್ ವಿಶ್ವವಿದ್ಯಾಲಯ
ಡಾಕ್ಟರ್ ಆಫ್ ಸೈನ್ಸ್ – ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ
ಕಿಂಗ್ ಚಾರ್ಲ್ಸ್ II ಮೆಡಲ್ – ರಾಯಲ್ ಸೊಸೈಟಿ, ಯುಕೆ
ರಾಮಾನುಜನ್ ಅವಾರ್ಡ್ – ಅಳ್ವಾರ್ಸ್ ರಿಸರ್ಚ್ ಸೆಂಟರ್, ಚೆನ್ನೈ
ವೀರ್ ಸಾವರ್ಕರ್ ಅವಾರ್ಡ್ – ಭಾರತ ಸರ್ಕಾರ
ಭಾರತ್ ರತ್ನ – ಭಾರತ ಸರ್ಕಾರ
ಪದ್ಮವಿಭೂಷಣ – ಭಾರತ ಸರ್ಕಾರ
ಪದ್ಮಭೂಷಣ – ಭಾರತ ಸರ್ಕಾರ

ಅಬ್ದುಲ್ ಕಲಾಂ ಬರೆದ ಪುಸ್ತಕಗಳು
* ಇಂಡಿಯ 2020
* ವಿಂಗ್ಸ್ ಆಫ್ ಫೈಯರ್ (ಆತ್ಮಚರಿತ್ರೆ)
* ಇಗ್ನೈಟೆಡ್ ಮೈಂಡ್ಸ್
* ದಿ ಲ್ಯುಮಿನಸ್ ಸ್ಪಾರ್ಕ್ಸ್
* ಮಿಷನ್ ಇಂಡಿಯಾ
* ಇನ್ಸ್ ಪೈರಿಂಗ್ ಥಾಟ್ಸ್
* ಯು ಆರ್ ಬಾರ್ನ್ ಟು ಬ್ಲಾಸಮ್: ಟೇಕ್ ಮೈ ಜರ್ನಿ ಬಿಯಾಂಡ್
* ಟರ್ನಿಂಗ್ ಪಾಯಿಂಟ್ಸ್
* ಟಾರ್ಗೆಟ್ 3 ಬಿಲಿಯನ್
* ಮೈ ಜರ್ನಿ
* ದಿ ಲೈಫ್ ಟ್ರೀ
* ಚಿಲ್ಡ್ರೆನ್ ಆಸ್ಕ್ ಕಲಾಂ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34915
ವೈಶಾಕ್ ಬಿ ಆರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು