News Karnataka Kannada
Tuesday, May 07 2024
ವಿಶೇಷ

ಓದುಗರನ್ನು ಗಮನಸೆಳೆಯುವ ಕಲಾಕಾರ ಹಾಯ್ ಬೆಂಗಳೂರ್ ಬೆಳೆಗೆರೆ

Untitled 1
Photo Credit : Wikimedia

ವಾರದ ಅಚ್ಚರಿ ನೀಡುತ್ತಿದ್ದ ರವಿ ಅಗಲಿಕೆಯಿಂದ ಬೆಳೆಗೆರೆಯ ಬೆಚ್ಚನೆಯ ಖಾಸ್ ಬಾತ್ ಅಂತ್ಯವಾಗಿದೆ, ಕೊನೆಯ ಬಾಟಂ ಲೈನ್ ಬರೆದು ಎಂದೆಂದು ಬಾರದ ಲೋಕಕ್ಕೆ ಹೋಗಿರುವ ರವಿಯ ಬರವಣಿಗೆ ಮತ್ತು ಬೆಳವಣಿಗೆಯ ಹಾದಿ ರೋಚಕದ ಸಂಗತಿ.

ಆಸೆ, ಸಿಟ್ಟು ಹಾಗೂ ಅಭಿಮಾನ ಈ ಮೂರು ನನ್ನನ್ನು ಸೆಳೆಯುತ್ತೆ. ಕರೆದಾಗ ಬಂದೇ ಬರುತ್ತೇನೆ ಎಂದಿದ್ದ ಅಕ್ಷರ ಮಾಂತ್ರಿಕ ಇನ್ನು ನೆನಪು ಮಾತ್ರ. ಹೇಳಿ ಹೊಗು ಕಾರಣ ಅಂದಿದ್ದ ರವಿ ಬೆಳೆಗೆರೆ ತಾನೇ ಯಾರಿಗೂ ಕಾರಣ ಹೇಳದೇ ಇಹಲೋಕ ತ್ಯಜಿಸಿದ್ದರು. ಕನ್ನಡ ಪತ್ರಿಕೋದ್ಯಮದ ಮಿನುಗುವ ನಕ್ಷತ್ರ ಜಾರಿದೆ, ದಶಕಗಳಿಂದ ಕ್ರೈಂ, ತ್ರಿಲ್ಲರ್, ಹಸಿಬಿಸಿ ಸುದ್ದಿಯ ಜೊತೆಗೆ ಬೆಚ್ಚನೆಯ ಅನುಭವ ನೀಡಿದ ರವಿಯ ಖಾಸ್ ಬಾತ್ ಅಂತ್ಯವಾಗಿದೆ.

ರವಿ ಬೆಳೆಗೆರೆ ಎಂಬ ಅಕ್ಷರ ಬ್ರಹ್ಮ ತಮ್ಮ ಜೀವನದ ಅಂತಿಮ ಬಾಟಂ ಲೈನ್ ಬರೆದು ಅಕ್ಷರ ಲೋಕವನ್ನು ತೊರೆದಿದ್ದಾರೆ. ಹಾಯ್ ಬೆಂಗಳೂರು ಓದುಗರ ದೊರೆಯ ಲವಲವಿಕೆ ಆವಿಯಾಗಿ ಹೋಗಿದೆ, ಓ ಮನಸೇ ಮರುಕ ಪಡೆದಿದೆ. ರವಿ ಬೆಳೆಗೆರೆ ಗಟ್ಟಿ ಗುಂಡಿಗೆಯ ಗಟ್ಟಿಗ. ಭೂಗತ ಲೋಕಕ್ಕೆ ನುಗ್ಗಿ ಮೆರೆದಾಡುತ್ತಿರುವ ಪಾಪಿಗಳ ಪಾಪ-ಪುಣ್ಯವನ್ನು ಲೆಕ್ಕ ಹಾಕಿದ ಚಿತ್ರಗುಪ್ತ. ಭೀಮಾ ತೀರದ ಹಂತಕರ ಅಟ್ಟಹಾಸವನ್ನು ಇಡೀ ಕರುನಾಡಿಗೆ ಇಂಚಿಂಚಾಗಿ ಮುಂದೆ ತೆರೆದಿಟ್ಟ ಏಕೈಕ ಪತ್ರಕರ್ತ.

ಮೆಚ್ಚಬಹುದು – ಮೆಚ್ಚದಿರಬಹುದು, ಆರೋಪಗಳು ನೂರಾರು, ವಿವಾದ ಸಾವಿರಾರು ಇರಬಹುದು. ಆದರೆ, ರವಿ ಬೆಳೆಗೆರೆಯನ್ನ ಪತ್ರಕರ್ತನ ಲೇಖನ ಶಕ್ತಿ ಅದ್ಭುತ ಬರವಣಿಗೆಯನ್ನ ಯಾರೂ ತಳ್ಳಿ ಹಾಕಲು ಸಾಧ್ಯವಿರಲಿಲ್ಲ. ರವಿ ಬರವಣಿಗೆ ವೈರಿಗಳೂ ಮೆಚ್ಚುವಂತಹದ್ದು. ಸತ್ಯ – ಅಸತ್ಯ – ಮಿತ್ಯಗಳ ತರ್ಕ ಹುಡುಕುವ ಗೋಜಿಗೂ ಬಾರದೇ ಓದುಗರನ್ನು ಹಿಡಿದಿಟ್ಟುಕೊಂಡು ಓದಿಸುವ ಕಲೆ ಇದ್ದ ಕಲಾಕಾರ ಈ ಬಳ್ಳಾರಿಯ ಬುಲ್ಲೋಡು ರವಿ ಬೆಳೆಗೆರೆ. ಹಸಿರು ನೆರಿಗೆಯ ಹುಡುಗಿಯಿಂದ ಕಪ್ಪು ಸುಂದರಿಯ ತನಕ, 380 ರೂ. ಇಂದ ಕೋಟಿ ಬೆಲೆ ಬಾಳುವ ಪ್ರಾರ್ಥನಾ ಶಾಲೆಯ ತನಕ ರವಿ ಬೆಳೆಗೆರೆಯ ಜರ್ನಿಯೇ ಅಚ್ಚರಿ. ಆಗರ್ಭ ಈಗರ್ಭ ಅಲ್ಲ ಸ್ವಯಂ ಗರ್ಭ ಅನ್ನೋ ರವಿಯ ಬೆಳವಣಿಗೆ ರೋಚಕ.

ಹುಟ್ಟಿದ್ದು ಮಾರ್ಚಿ 15, 1958ರಂದು ಬಳ್ಳಾರಿಯ ಸತ್ಯನಾರಾಯಣ ಪೇಟೆಯಲ್ಲಿ. ತಾಯಿ ಪಾರ್ವತಮ್ಮ, ತಂದೆಯ ಬಗ್ಗೆ ಎಲ್ಲಿಯೂ ಮಾಹಿತಿ ನೀಡಿಲ್ಲ, ಓರ್ವ ಬರಹಗಾರ ಎಂದು ಸ್ವತಃ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ಅವರದೇ ಊರಿನ ಖ್ಯಾತ ಬರಹಗಾರ ಬೀಚಿ ತಮ್ಮ ಭೌದಿಕ ತಂದೆ ಎಂದು ಸಹ ಹೇಳಿದ್ದಾರೆ. ಕಾಲೇಜು ಮೆಟ್ಟಿಲು ಹತ್ತುವಷ್ಟರಲ್ಲೇ ಬೀಡಿ, ಸಿಗರೇಟು ಹಾಗೂ ಕುಡಿತ ಮೈಗತ್ತಿತ್ತು.

ಕಾಲೇಜಿನಲ್ಲಿರುವಾಗ ಹಸಿರು ನೆರಿಗೆಯ ಹುದುಗಿಯನ್ನು ಭಗ್ನ ಪ್ರೇಮಿಯಂತೆ ಪ್ರೀತಿಸುತ್ತಿದ್ದರು. ಆದರೆ ಮುರಿದ ಕಾರಣ ರವಿಯ ಹೃದಯ ನುಚ್ಚುನೂರಾಗಿ, ವೈರಾಗಿಯಾಗಿ 16 ವರ್ಷಗಳು ಸತತವಾಗಿ ಬಳಲಿ ಆಗದೆ ಹಿಮಾಲಯಕ್ಕೆ ತೆರಳಿದ್ದರು. ಆದರೆ ತಾಯಿಯ ಮೇಲಿದ್ದ ಅಪಾರ ಪ್ರೀತಿ, ಮಮತೆಯ ಕೂಗು ಕೇಳಿ ಓಡೋಡಿ ಬಂದರು.

ತಾಯಿಗಾಗಿ ಓದು ಮುಂದುವರೆಸಿ ಪದವಿ ಮುಗಿಸಿ, ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದಲ್ಲಿ ಸ್ನಾತಕ ಪದವಿ ಪಡೆದರು. ನಂತರದಲ್ಲಿ ಬಳ್ಳಾರಿಯ ಮಹಿಳಾ ಕಾಲೇಜಿನಲ್ಲಿ ಇತಿಹಾಸದ ಪ್ರಾದ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ರವಿ ಅಲ್ಲಿಯೂ ಸಹ ವಿವಾದಕ್ಕೆ ಸಿಲುಕಿ ಮಹಿಳಾ ಪ್ರಾದ್ಯಾಪಕಿಯ ಜೊತೆ ಮಾಡಿಕೊಂಡ ಸಣ್ಣ ಘರ್ಷಣೆಯಿಂದ ಕಾಲೇಜಿನಿಂದ ವಜಾಗೊಂಡಿದ್ದರು.

ಹಣದ ಅವಶ್ಯಕತೆ ಒದಗಿದಾಗ ವೈದ್ಯಕೀಯ ಪ್ರತಿನಿಧಿಯಿಂದ ಹಾಲು ಕರೆಯುವ ತನಕ ಎಲ್ಲಾ ಕೆಲಸ ಮಾಡಿ ಸಕಲಕಲವಲ್ಲಭ ಎಂದು ಕರೆಸಿಕೊಂದ್ದರು. ಬಳಿಕ ರವಿ ಇಳಿದಿದ್ದು ಪತ್ರಿಕೋದ್ಯಮ ಕ್ಷೇತ್ರಕ್ಕೆ. ಅದು ಹೇಳಿ ಕೇಲಿ ಲಂಕೇಶ್ ಪತ್ರಿಕೆ ಹವಾ ಇದ್ದ ಕಾಲ. ಲಂಕೇಶ್ ಪತ್ರಿಕೆ ಓದುಗರಾಗಿದ್ದ ರವಿ ಬೆಳೆಗೆರೆ ಬಳ್ಳಾರಿಯಲ್ಲಿ ಸ್ವಂತ ಪತ್ರಿಕೆಯನ್ನು ಶುರುಮಾಡಿದ್ದರು. ಆದರೆ ಪ್ರಥಮ ಚುಂಬನಂ ದಂತ ಭಗ್ನಂ ಎಂಬಂತೆ ಬಳ್ಳಾರಿ ಪತ್ರಿಕೆ ವಿಫಲವಾಗಿ ನೆಲ ಕಚ್ಚಿತು. ಕೈ ಸುಟ್ಟುಕೊಂಡ ರವಿ ಬೆಂಗಳೂರಿಗೆ ಮುಖ ಮಾಡಿದರು. ಮುದ್ರಣಾಲಯ ತೆರೆದು ಅನುಭವವಿದ್ದ ರವಿಗೆ ಏನಾದರೂ ಮಾಡಬೇಕೆಂಬ ಛಲ. ಆಗ ಜೇಬಿನಲ್ಲಿ ಇದ್ದದ್ದು ಕೇವಲ 380 ರೂ.. ನಂತರದಲ್ಲಿ ಸಂಯುಕ್ತ ಕರ್ನಾಟಕ, ಕರ್ಮವೀರ, ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ನಿಯಮಿತವಾಗಿ ಲಂಕೇಶ್ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದರು. ಆರಂಭದಲ್ಲಿ ಬರುತ್ತಿದ್ದ ಸಂಬಳ ಜೀವನ ನೆಡೆಸಲು ಸಾಕಾಗದೇ ಅಶ್ಲೀಲ ಪತ್ರಿಕೆಗಳಿಗೆ ಅನಾಮಿಕವಾಗಿ ಎಲ್ಲಿಯೂ ಹೆಸರನ್ನು ಸೂಚಿಸದೇ ಬರೆಯುತ್ತಿದ್ದರು.

ಇಂತಹ ಸಮಯದಲ್ಲಿ ಅವರ ಕೈ ಹಿಡಿದಿದ್ದು ಪಾಪಿಗಳ ಲೋಕದ ಪಯಣ ಪಾಪಿಗಳ ಲೋಕದ ಪಯಣ ಆರಂಭವಾಗಿದ್ದು ಶಿವಾಜಿನಗರದಿಂದ ಕೋಳಿ ಫಯಾಜ್ ಸ್ಟೋರಿಯಿಂದ ಕ್ರೈಂ ವರದಿಗಾರರಾಗಿ ಆರಂಭಿಸಿದ ರವಿ ಬೆಳೆಗೆರೆ ಕ್ರೈಂ ಸ್ಟೋರಿಗಳಿಗೆ ಕೇರ್ ಆಫ್ ಅಡ್ರೆಸ್ ಆಗಿದ್ದು ಇತಿಹಾಸ. ಇದರೆಷ್ಟರ ಮಟ್ಟಿಗೆ ಎಂದರೆ ಪಾತಕಿಗಳ ಬಗ್ಗೆ ಪೋಲೀಸರಿಗೂ ಸಿಗದ ಮಾಹಿತಿಯನ್ನೂ ರವಿ ಹೆಕ್ಕಿ ತೆಗೆಯುತ್ತಿದ್ದರು. ಇದರಿಂದ ಪೋಲೀಸ್ ಅಧಿಕಾರಿಗಳಿಗೆ ಆಪ್ತರಾಗಿದ್ದರು.

ಬೆಂಗಳೂರಿನ ಪಾತಕ ಲೋಕದ ಪಯಣ ಆರಂಭಿಸಿದ ರವಿ ಜೀವನವನ್ನು ಬದಲಿಸಿದ್ದು ಒಬ್ಬಳು ಕಪ್ಪು ಸುಂದರಿ. ಆ ಕಪ್ಪು ಸುಂದರಿ ಬೇರೆ ಯಾರೂ ಅಲ್ಲ “ಹಾಯ್ ಬೆಂಗಳೂರು” ಪತ್ರಿಕೆ 1995ರಲ್ಲಿ ಸ್ನೇಹಿತರ ಸಹಾಯದಿಂದ ಪತ್ರಿಕೆ ಆರಂಭ ಮಾಡಿದ್ದರು. ಆನಂತರ ಹಿಂತಿರುಗಿ ನೋಡಲೇ ಇಲ್ಲ. ತಮ್ಮ ಪತ್ರಿಕೆಗೆ ಮೊದಲು ಹಲೋ ಬೆಂಗಳೂರು ಅಂತ ಹೆಸರಿಡಲು ನಿರ್ಧರಿಸಿದ್ದರು. ಆದರೆ ನೋಂದಾಯಿಸಿಕೊಳ್ಳಲು ಆರ್ಥಿಕ ಸಂಕಷ್ಟವಿದ್ದ ಕಾರಣ ಹಾಯ್ ಬೆಂಗಳೂರು ಎಂಬ ಹೆಸರಿನಲ್ಲೇ ವಾರ ಪತ್ರಿಕೆಯನ್ನು ಒಂದು ಸಣ್ಣ ಗ್ಯಾರೇಜಿನಲ್ಲಿ ಪ್ರಾರಂಭಿಸುತ್ತಾರೆ. ಈ ಹಾಯ್ ಬೆಂಗಳೂರು ಪತ್ರಿಕೆ ವಾರದ ಅಚ್ಚರಿಯಾಗಿ ಬೆಳೆದು ನಿಂತಿತ್ತು. ಈ ವಾರದ ಅಚ್ಚರಿ ಬೆಳೆಗೆರೆಯ ಬದುಕನ್ನೇ ಬದಲಾಯಿಸಿಬಿಟ್ಟಿತು. ಟ್ಯಾಬ್ಲಾಯ್ಡ್ ಪತ್ರಿಕೆಗಳು ಎಂದರೆ ಮೂಗು ಮುರಿಯುವ ಕಾಲದಲ್ಲಿ ಹಾಯ್ ಬೆಂಗಳೂರನ್ನ ಬಿಸಿ ಬಿಸಿ ದೋಸೆಯಂತೆ ಮಾರಾಟ ಮಾಡಿ ದಾಖಲೆ ಮಾಡಿಸಿದ್ದು ಇದೇ ರವಿ ಬೆಳೆಗೆರೆಯ ಬೆರವಣಿಗೆ.

‘My dear friend, ಹಣ ಮಾಡಬೇಕೆಂದುಕೊಂಡರೆ ಕೇವಲ ಹಣ ಮಾತ್ರ ಮಾಡುತ್ತೀರ, ಹೆಸರು ಮಾತ್ರ ಮಾಡಬೇಕು ಎಂದು ಅಂದುಕೊಂಡರೆ ಕೇವಲ ಹೆಸರು ಮಾಡುತ್ತೀರಿ. ಆದರೆ ಕೆಲಸ ಮಾಡ್ತೀನಿಮ ಅಂತ ಶುರು ಮಾಡಿದರೆ ಹೆಸರು ಹಾಗೂ ಹಣ ತಾನಾಗೇ ಹುಡುಕಿಕೊಂಡು ಬರುತ್ತೆ’ ಎಂದು ರವಿ ಸದಾ ಹೇಳುತ್ತಿದ್ದ ಮಾತು. ಈ ಮಾತು ರವಿ ಬೆಳೆಗೆರೆಯ ಜೀವನಾನುಭವದ ಮಾತಾಗಿತ್ತು. ಎರಡು ದಶಕದಲ್ಲಿ ನೂರು ಕೋಟಿಯ ಒಡೆಯರಾದರು. ಪತ್ರಿಕೆಯ ಜೊತೆ ಹೇಳಿ ಹೋಗು ಕಾರಣ, ನೀ ಹಿಂಗೆ ನೊಡಬ್ಯಾಡ ನನ್ನ, ಆರುಷಿ ಮರ್ಡರ್, ಅಮ್ಮ ಸಿಕ್ಕಿದ್ಲು, ನಕ್ಷತ್ರ ಜಾರಿದಾಗ, ಭೀಮಾತೀರದ ಹಂತಕರು, ಫಾಪಿಗಳ ಲೋಕದಲ್ಲಿ, ರಾಜ್ ಲೀಲಾ ವಿನೋದ, ಮಾಂಡೋವಿ, ಒಮಾರ್ಟ, ಸಿದ್ದಾರ್ಥ್ ಆ ಮುಖ, ಫ್ರಂ ಪುಲ್ವಾಮ, ದಂಗೆಯ ಆ ದಿನಗಳು, ಇಂದಿರೆಯ ಮಗ ಸಂಜೆಯ ಹೀಗೆ 80ಕ್ಕು ಹೆಚ್ಚು ಪುಸ್ತಕಗಳನ್ನು ಬರೆದು ತಮ್ಮದೇ ಸ್ವಂತವಾಗಿ ಪ್ರಾರಂಭಿಸಿದ “ಭಾವನ ಪ್ರಕಾಶನ” ದಲ್ಲಿ ಮುದ್ರಿಸಿ ಪ್ರಕಟಿಸಿದರು.

ಕ್ರೈಂ ಡೈರಿಯ ಮೂಲಕ ಸಂಚಲನ ಸೃಷ್ಟಿಸಿದ್ದ ರವಿ ‘ಓ ಮನಸೇ’ ಎಂಬ ಪಾಕ್ಷಿಪ ಪತ್ರಿಕೆಯನ್ನು ಆರಂಭಿಸಿದ್ದರು. ಡೆಡ್ಲಿ ಸೋಮಾ, ಮಾದೇಶ, ಗಂಡ-ಹೆಂಡತಿ ಸಿನಿಮಾಗಳಲ್ಲಿ ನಟಿಸಿದ್ದರು. ಟಿ.ಎನ್.ಸೀತಾರಾಂ ಅವರ ಮುಕ್ತ ಮುಕ್ತ ಸೀರಿಯಲ್ನಲ್ಲಿ ನ್ಯಾಯಾಧೀಶನ ಪಾತ್ರ ವಹಿಸಿದ್ದರು. ಖಾಸಗಿ ವಾಹಿನಿಯಲ್ಲಿ ಅಪರಾದ ಜಗತ್ತಿನ ರಕ್ತಸಿಕ್ತ ಕಥೆಯನ್ನು (ಕ್ರೈಂ ಡೈರಿ) ರಸವತ್ತಾಗಿ ಹೇಳುತ್ತಿದ್ದ ರವಿ ಸಾಯುವ ಮುನ್ನ ಸಮಾಜಿಕ ಜಾಲಾತಣವಾದ ಯೂಟ್ಯೂಬ್ ನಲ್ಲಿ ಬಳ್ ಬೆಳಗ್ಗೆ ಬಳೆಗೆರೆ ಕಾರ್ಯಕ್ರಮವನ್ನುಸಹಾ ಮಾಡಿದ್ದರು. ಎಂದೂ ಮರೆಯದ ಹಾಡು ಕಾರ್ಯಕ್ರಮದಲ್ಲಿ ವಿಭಿನ್ನವಾಗಿ ನಿರೂಪಣೆ ಮಾಡಿ ಎಲ್ಲರ ಗಮನ ಸೆಲೆದಿದ್ದಾರೆ.

ಪ್ರತಕೋದ್ಯಮ ಸೇವೆಗಾಗಿ ಶಿವರಾಂ ಕಾರಂತ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಕರ್ನಾಟಕ ಮಾದ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಬೆಳೆಗೆರೆಗೆ ಓದುಗರು ಪ್ರಿತಿಯಿಂದ ಕೊಟ್ಟ ಬರವಣಿಗೆಯ ಒಡೆಯ ಪ್ರಶಸ್ತಿಯೇ ದೊಡ್ಡದಾಗಿತ್ತು. ಅಕ್ಷರ ಒಡೆಯನ ಅಗಲಿಕೆಯಿಂದ ಓದುಗ ಲೋಕಕ್ಕೆ ಸೂತಕದ ಛಾಯೆ ಇನ್ನೂ ಆವರಿಸಿಯೇ ಇದೆ.

– ಮಣಿಕಂಠ ತ್ರಿಶಂಕರ್, ಮೈಸೂರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು