News Karnataka Kannada
Wednesday, May 08 2024
ವಿಶೇಷ

ಮೈಸೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಸಕಾಲ!

It's time to visit the tourist spots in Mysuru!
Photo Credit : By Author

ಮೈಸೂರು: ಇದೀಗ ಮೈಸೂರು ಪ್ರವಾಸಿಗರಿಗೆ ಸ್ವರ್ಗವಾಗಿ ಗಮನಸೆಳೆಯುತ್ತಿದೆ. ದೂರದ ಊರುಗಳಿಂದ ಆಗಮಿಸಿರುವ ಪ್ರವಾಸಿಗರು ಎಲ್ಲೆಂದರಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.

ಮೈಸೂರು ಪ್ರವಾಸಿಗರ ಸ್ವರ್ಗ.. ಸದಾ ಪ್ರವಾಸಿಗರ ದಂಡು ಇಲ್ಲಿಗೆ ಆಗಮಿಸುತ್ತಲೇ ಇರುತ್ತದೆ. ಟ್ರಾಫಿಕ್ ಕಿರಿಕಿರಿಯಿಲ್ಲದೆ ಎಲ್ಲರೂ ಖುಷಿಯಾಗಿ ಅಡ್ಡಾಡುವ ನಗರವಾಗಿದ್ದು, ತಿಂಡಿ ತಿನಿಸುಗಳಿಂದ ಆರಂಭವಾಗಿ ಎಲ್ಲ ಬಗೆಯ ಪ್ರದಾರ್ಥಗಳು ಇಲ್ಲಿ ಲಭ್ಯ.. ಸದಾ ವಾಹನಗಳಲ್ಲಿ ಓಡಾಡಿ ಬೇಸತ್ತವರಿಗೆ ಟಾಂಗಾ ಗಾಡಿಯಿದೆ.. ಒತ್ತಡ ತಣಿಸಲು ಚಾಮುಂಡಿಬೆಟ್ಟ, ಪಾರ್ಕ್, ಮೃಗಾಲಯ, ಕಾರಂಜಿಕೆರೆ ಹೀಗೆ ಸುಂದರ, ಪ್ರಶಾಂತ ತಾಣಗಳಿವೆ.

ಈಗಂತು ನಗರದಲ್ಲಿ ಹೆಜ್ಜೆ ಹಾಕಿದರೆ ನೋಡಲು ಇಂದ್ರನ ಅಮರಾವತಿಯೇ ಧರೆಗಿಳಿದಂತಿರುವ ಭವ್ಯ ಅರಮನೆಯಿದೆ. ಅದರಾಚೆಗೆ ಮೈಸೂರು ಮಹಾರಾಜರು ನಿರ್ಮಿಸಿದ ಇನ್ನಷ್ಟು ಅರಮನೆಗಳಿವೆ. ಗಿಡಮರಗಳ ನಡುವೆ ಆನಂದಿಸಬೇಕೆಂದರೆ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕುಬ್ಜ ವೃಕ್ಷಲೋಕವಿದೆ. ಅಲ್ಲಿಯೇ ಶುಕವನವಿದೆ.

ಇನ್ನು ಮೈಸೂರಿನ ಮುಕುಟಮಣಿಯಂತಿರುವ ಚಾಮುಂಡಿಬೆಟ್ಟವಂತೂ ಆಸ್ತಿಕ-ನಾಸ್ತಿಕ ಎನ್ನದೆ ಎಲ್ಲರನ್ನು ಸೆಳೆಯುತ್ತದೆ. ಇದು ಮೈಸೂರಿನ ಅಧಿದೇವತೆ, ಯದುವಂಶದ ಕುಲದೈವ ಶ್ರೀ ಚಾಮುಂಡೇಶ್ವರಿಯ ನೆಲೆವೀಡು ಆಗಿದೆ. ಮೈಸೂರಿನ ಆಕರ್ಷಣೀಯ ಧಾರ್ಮಿಕ ಕ್ಷೇತ್ರ ಮತ್ತು ಹಸಿರಿನ ಸಿರಿಯಲ್ಲಿರುವ ಪ್ರೇಕ್ಷಣೀಯ ತಾಣ.

ಈ ಬೆಟ್ಟದಲ್ಲಿ ಮತ್ತೊಂದು ಆಕರ್ಷಣೀಯ ಸ್ಥಳವೆಂದರೆ ಸಮ್ಮರ್ ಪ್ಯಾಲೇಸ್ ಎಂದು ಕರೆಯಲ್ಪಡುವ ರಾಜೇಂದ್ರ ವಿಲಾಸ ಅರಮನೆ. ಹಾಗೆಯೇ ಬೆಟ್ಟದ 700 ಮೆಟ್ಟಿಲುಗಳ ಬಳಿ ದೊಡ್ಡದೇವರಾಜ ಒಡೆಯರ್ ಅವರಿಂದ ನಿರ್ಮಿಸಲ್ಪಟ್ಟಿರುವ 16 ಅಡಿ ಎತ್ತರ 26 ಅಡಿ ಉದ್ದದ ಕಲ್ಲಿನ ಬೃಹತ್ ನಂದಿ ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಇನ್ನು ನಗರದತ್ತ ಬಂದರೆಗಗನವನ್ನು ಚುಂಬಿಸಿ ಬಿಡುತ್ತವೇನೋ ಎಂಬಂತಿರುವ ಎರಡು ಬೃಹತ್ ಗೋಪುರಗಳುಳ್ಳ ಗಾಥಿಕ್ ಮಾದರಿಯಲ್ಲಿ ನಿರ್ಮಿಸಲ್ಪಟ್ಟ ಕಲಾನೈಪುಣ್ಯದ ಕಟ್ಟಡ ಮೈಸೂರಿನ ಸಂತ ಫಿಲೋಮಿನಾ ಚರ್ಚ್. 1933ರಲ್ಲಿ ಈ ಕ್ರೈಸ್ತ ದೇವಾಲಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಶಂಕುಸ್ಥಾಪನೆ ಮಾಡಿದ್ದರು. ಇಲ್ಲಿನ ಬೋಧನಾ ಮಂದಿರದಲ್ಲಿರುವ ಸಂತ ಫಿಲೋಮಿನಾಳ ವಿಗ್ರಹ ಅತ್ಯಂತ ಆಕರ್ಷಣೀಯವಾಗಿದೆ. ಈ ಚರ್ಚ್ ತನ್ನ ಕಲಾತ್ಮಕ ಚೆಂದದಿಂದಲೇ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪ್ರಾಣಿ-ಪಕ್ಷಿಗಳ ವೀಕ್ಷಣೆಗೆ ಕರ್ನಾಟಕದಲ್ಲೇ ಅತಿದೊಡ್ಡದೆನಿಸಿರುವ ಚಾಮರಾಜೇಂದ್ರ ಮೃಗಾಲಯವಿದೆ. ದೋಣಿ ವಿಹಾರಕ್ಕೆ ಕಾರಂಜಿ ಕೆರೆ ಇದೆ. ವಾಯುವಿಹಾರಕ್ಕೆ ಕುಕ್ಕರಹಳ್ಳಿ ಕೆರೆ ಏರಿ ಇದೆ. ಮಕ್ಕಳ ಮನೋರಂಜನೆಗೆ ರೈಲ್ ಮ್ಯೂಸಿಯಂ ಮತ್ತು ಜವಾಹರ್ ಬಾಲಭವನ, ಗಾಂಧಿವನ ಇದೆ. ರುಚಿ ರುಚಿ ತಿನಿಸು, ಜೊತೆ ಜೊತೆಯಲ್ಲಿ ನಲಿವಿನ ಆಟ, ಸೊಗಸಿನ ನೋಟಕ್ಕೆ ಹಲವು ತಾಣಗಳಿವೆ. ವ್ಯಾಕ್ಸ್ ಮ್ಯೂಸಿಯಂ, ಕುಕ್ಕರಳ್ಳಿ ಕೆರೆಯಿದೆ. ಅಲ್ಲಿಂದಾಚೆಗೆ ಹೋಗಿ ನೋಡುತ್ತೇನೆಂದರೆ ಅಂದದ ಅಣೆಕಟ್ಟು ಕೆ.ಆರ್.ಎಸ್ ಜಲಾಶಯವಿದೆ.

ದಕ್ಷಿಣದ ಶ್ರೀಶೈಲ ಮುಡುಕುತೊರೆ ಬೆಟ್ಟ, ದಕ್ಷಿಣಕಾಶಿ ನಂಜನಗೂಡು ನಂಜುಂಡೇಶ್ವರ, ಇತಿಹಾಸ ಪ್ರಸಿದ್ಧ ಸೋಮನಾಥಪುರದ ಶ್ರೀ ಚನ್ನಕೇಶವ, ತಲಕಾಡು ಪಂಚಲಿಂಗೇಶ್ವರ, ತಿರುಮಕೂಡಲಿನ ತ್ರಿವೇಣಿ ಸಂಗಮ, ಶ್ರೀರಂಗಪಟ್ಟಣದ ಪಕ್ಷಿಧಾಮ, ಶ್ರೀರಂಗನಾಥ ದೇಗುಲ, ದರಿಯಾದೌಲತ್, ಗಂಜಾಂನ ನಿಮಿಷಾಂಬ ದೇವಿ, ಬೆಳಗೊಳದ ಬಲಮುರಿ ಹಾಗೂ ಎಡಮುರಿ ಇಷ್ಟೇ ಅಲ್ಲದೆ ನಿಸರ್ಗ ಪ್ರಿಯರಿಗೆ ನಾಗರಹೊಳೆ ಉದ್ಯಾನವಿದೆ. ಕಬಿನಿ ಜಲಾಶಯವಿದೆ. ಹೀಗೆ ಒಂದಲ್ಲ ಎರಡಲ್ಲ ಹತ್ತಾರು ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ದಸರಾ ನಂತರವೂ ಮೈಸೂರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಲೇ ಇರುತ್ತದೆ. ಪ್ರವಾಸಿಗರ ಅನುಕೂಲಕ್ಕಾಗಿಯೇ ಸರ್ಕಾರ ಕೆಎಸ್ ಆರ್ ಟಿಸಿ ಬಸ್ ಸೌಲಭ್ಯ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು