News Karnataka Kannada
Monday, April 22 2024
Cricket
ವಿಶೇಷ

“ಪ್ರತಿ ಹೃದಯ ನೀವು ಇಲ್ಲದೆ ಅಪೂರ್ಣ”: ಇಂದು ಅಂತರಾಷ್ಟ್ರೀಯ ಮಹಿಳಾ ದಿನ

Womens Day
Photo Credit : News Kannada

“ಪ್ರತಿ ಮನೆ, ಪ್ರತಿ ಹೃದಯ, ಪ್ರತಿ ಭಾವನೆ, ಸಂತೋಷದ ಪ್ರತಿ ಕ್ಷಣವೂ ನೀವು ಇಲ್ಲದೆ ಅಪೂರ್ಣ. ನೀವು ಮಾತ್ರ ಈ ಜಗತ್ತನ್ನು ಪೂರ್ಣಗೊಳಿಸಬಹುದು”. . ಹೌದು. . ಅಮ್ಮನಾಗಿ ಉಸಿರು ನೀಡುತ್ತಾಳೆ… ಸಹೋದರಿಯಾಗಿ ಪ್ರೀತಿ ಕೊಡುತ್ತಾಳೆ… ಅಜ್ಜಿಯಾಗಿ ಮುದ್ದಿಸುತ್ತಾಳೆ… ಗೆಳತಿಯಾಗಿ ಧೈರ್ಯ ತುಂಬುತ್ತಾಳೆ… ಮಡದಿಯಾಗಿ ಬದುಕು ನೀಡುತ್ತಾಳೆ… ಗುರುವಾಗಿ ದಾರಿ ತೋರುತ್ತಾಳೆ… ಧಣಿಯಾಗಿ ಬದುಕಿಗೆ ಭದ್ರತೆ ಕೊಡುತ್ತಾಳೆ. . ಹೀಗೆ ಹೇಳುತ್ತಾ ಹೋದರೆ ದಿನ ಸಾಲದು.

ಹೆಣ್ಣೆಂದರೇನೇ ಹಾಗೆ. ಹೆಣ್ತನದಲ್ಲೇ ಏನೋ ಶಕ್ತಿಯಡಗಿದೆ. ಅದೊಂದು ಬಣ್ಣಿಸಲು ಅಸಾಧ್ಯವಾದ ಶಕ್ತಿ… ಮಹಿಳೆ ಇಲ್ಲದೆ ಈ ಜಗವೇ ಇಲ್ಲ. ಮಹಿಳೆ ಇಲ್ಲದೆ ಬದುಕೇ ಇಲ್ಲ… ಪ್ರತಿಯೊಬ್ಬರ ಬದುಕಿನಲ್ಲಿ ಹೆಣ್ಣು ನಿರ್ವಹಿಸದ ಪಾತ್ರವಿಲ್ಲ. ಅದೇ ಕಾರಣಕ್ಕೆ ಮಹಿಳೆಯ ಈ ದಣಿವರಿಯದ ಕೆಲಸ, ನಿಸ್ವಾರ್ಥ ಶ್ರಮವನ್ನು ಗೌರವಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್ 8ನ್ನು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ.

ಅಂತರಾಷ್ಟ್ರೀಯ ಮಹಿಳೆಯರ ದಿನ’ವನ್ನು ಪ್ರಥಮ ಬಾರಿಗೆ ಕೂಲಿ ಚಳುವಳಿಯ ಮೂಲಕ ಉತ್ತರ ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ಪ್ರಾರಂಭಿಸಲಾಯಿತು. ಮಹಿಳಾ ದಿನಾಚರಣೆ ಮೂಲಕ ಲಿಂಗ ಸಮಾನತೆ ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂಬ ಅಂಶವನ್ನು ಬಲವಾಗಿ ಸಾರಲು ಈ ದಿನ ಒಂದು ದೊಡ್ಡ ವೇದಿಕೆ ಆಗಿರುತ್ತದೆ. ಅಲ್ಲದೇ ದೇಶಕ್ಕೆ, ಪ್ರಪಂಚಕ್ಕೆ ಮಹಿಳಾ ಸಾಧಕರ ಕೊಡುಗೆಗಳನ್ನು ನೆನೆದು ಸಾರುವ ದಿನವಿದು ಸಹ. 1975 ರ ಮಾರ್ಚ್ 8 ರ ‘ಅಂತರರಾಷ್ಟ್ರೀಯ ಮಹಿಳಾ ದಿನ’ದಿಂದ ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನ ಆಚರಿಸಲು ಆರಂಭಿಸಿದವು.

ಇನ್ನು 18 ಮತ್ತು 19 ನೇ ಶತಮಾನದಲ್ಲಿ ಹಲವು ಮಹಿಳೆಯರು ಲಿಂಗ ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ. ಮತದಾನಕ್ಕೆ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಸರ್ಕಾರಿ ವಲಯದಲ್ಲಿಯೂ ‘ಜೆಂಡರ್ ಪೇ ಗ್ಯಾಪ್‌’ ಬಗ್ಗೆ ಧ್ವನಿ ಎತ್ತಲಾಗಿದೆ. ಸಮಾನತೆಗಾಗಿ ಹಲವು ಮಹಿಳಾವಾದಿಗಳು 1970-80 ರ ದಶಕದಲ್ಲೂ ಹೆಚ್ಚು ಹೋರಾಟ ನಡೆಸಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನದ ಮಹತ್ವ:
ಅಂತಾರಾಷ್ಟ್ರೀಯ ಮಹಿಳಾ ದಿನವು ಲಿಂಗ ಸಮಾನತೆ ಮತ್ತು ಮಹಿಳಾ ಹಕ್ಕುಗಳ ಕುರಿತಾಗಿ ಹೆಚ್ಚು ಮಹತ್ವ ಹೊಂದಿದೆ. ವಿಶ್ವಾದ್ಯಂತ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಲು ಇದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚುವರಿಯಾಗಿ, ಲಿಂಗ-ಆಧಾರಿತ ತಾರತಮ್ಯ, ಹಿಂಸೆ ಮತ್ತು ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೆ ಅಸಮಾನ ಪ್ರವೇಶ ಸೇರಿದಂತೆ ಮಹಿಳೆಯರು ಎದುರಿಸುತ್ತಿರುವ ನಿರಂತರ ಸವಾಲುಗಳು ಮತ್ತು ಅಡೆತಡೆಗಳನ್ನು ಹೈಲೈಟ್ ಮಾಡಲು ಈ ದಿನವು ಅವಕಾಶವನ್ನು ಒದಗಿಸುತ್ತದೆ.

ಈ ವರ್ಷದ ಥೀಮ್ ಏನು?
ವಿಶ್ವಸಂಸ್ಥೆಯ 2024 ರ ಧ್ಯೇಯವಾಕ್ಯ “ಮಹಿಳೆಯರಲ್ಲಿ ಹೂಡಿಕೆ ಮಾಡಿ: ಪ್ರಗತಿಯನ್ನು ವೇಗಗೊಳಿಸಿ”  (Invest in Women: Accelerate Progress) ಎಂಬುದಾಗಿದೆ. ಆದರೆ ಈ ವರ್ಷದ ಅಭಿಯಾನದ ಥೀಮ್ ‘ಇನ್‌ಸ್ಪೈರ್ ಇನ್‌ಕ್ಲೂಷನ್’ ಆಗಿದೆ. ಇದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ವೈವಿಧ್ಯತೆ ಮತ್ತು ಸಬಲೀಕರಣದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ಅಭಿಯಾನದ ಮೂಲಕ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಲಿಂಗ ಸಮಾನತೆಯತ್ತ ಪ್ರಗತಿಯನ್ನು ವೇಗಗೊಳಿಸಲು ಮಹಿಳಾ ಶಿಕ್ಷಣ, ಆರೋಗ್ಯ, ಆರ್ಥಿಕ ಸಬಲೀಕರಣ ಮತ್ತು ನಾಯಕತ್ವದ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುತ್ತದೆ.

ಈಗ ದೇಶದಲ್ಲಿ ಮಹಿಳೆಯರ ಸ್ಥಿತಿ ಏನು?

ಜನಸಂಖ್ಯೆ: ಸಾಂಖ್ಯಿಕ ಸಚಿವಾಲಯದ ವರದಿಯ ಪ್ರಕಾರ, 2021 ರ ವೇಳೆಗೆ ದೇಶದ ಜನಸಂಖ್ಯೆಯು ಸುಮಾರು 136 ಕೋಟಿ ಎಂದು ಅಂದಾಜಿಸಲಾಗಿದೆ. ಇವರಲ್ಲಿ 48.6% ಮಹಿಳೆಯರು. ಈಗ ದೇಶದಲ್ಲಿ ಮಹಿಳೆಯರ ಜನಸಂಖ್ಯೆಯ ಬೆಳವಣಿಗೆಯ ದರವು ಪುರುಷರಿಗಿಂತ ಹೆಚ್ಚಾಗಿದೆ. 2021 ರಲ್ಲಿ, ಮಹಿಳಾ ಜನಸಂಖ್ಯೆಯ ಬೆಳವಣಿಗೆಯ ದರವು 1.10% ಆಗಿದ್ದರೆ, ಪುರುಷರದ್ದು 1.07% ಆಗಿತ್ತು.

ಶಿಕ್ಷಣ: ವರದಿಯ ಪ್ರಕಾರ, ಪುರುಷರ ಸಾಕ್ಷರತೆಯ ಪ್ರಮಾಣವು 1951 ರಲ್ಲಿ 27.2% ರಷ್ಟಿತ್ತು, ಇದು 2017 ರ ವೇಳೆಗೆ 84.7% ಕ್ಕೆ ಏರಿತು. ಅದೇ ಸಮಯದಲ್ಲಿ, ಮಹಿಳೆಯರ ಸಾಕ್ಷರತೆಯ ಪ್ರಮಾಣವು 1951 ರಲ್ಲಿ 8.9% ರಷ್ಟಿತ್ತು, ಇದು 2017 ರ ವೇಳೆಗೆ 70.3% ಕ್ಕೆ ಏರಿದೆ. 2011ಕ್ಕೆ ಹೋಲಿಸಿದರೆ 2017ರಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ.8.8ರಷ್ಟು ಹೆಚ್ಚಾಗಿದೆ ಎಂದು ವರದಿ ಹೇಳುತ್ತದೆ.

ಉದ್ಯೋಗ: ಈ ವಿಷಯದಲ್ಲಿ ಮಹಿಳೆಯರ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ವಿಶ್ವ ಬ್ಯಾಂಕ್ ವರದಿಯ ಪ್ರಕಾರ, 2019 ರಲ್ಲಿ, ಭಾರತದಲ್ಲಿ ಕಾರ್ಮಿಕ ಬಲದಲ್ಲಿ ಮಹಿಳೆಯರ ಪಾಲು 21% ಕ್ಕಿಂತ ಕಡಿಮೆಯಿತ್ತು. ಅಂದರೆ, 79% ಮಹಿಳೆಯರು ಉದ್ಯೋಗಕ್ಕೆ ಅರ್ಹರಾಗಿದ್ದರು, ಆದರೆ ಕೆಲಸ ಹುಡುಕುತ್ತಿಲ್ಲ. ಅಂಕಿಅಂಶ ಸಚಿವಾಲಯದ ವರದಿಯು ದೇಶದಲ್ಲಿ 35% ಮಹಿಳೆಯರು ಮನೆಗಳಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತೋರಿಸುತ್ತದೆ, ಆದರೆ ಅಂತಹ ಕೆಲಸ ಮಾಡುವ ಪುರುಷರ ಸಂಖ್ಯೆ 9% ಕ್ಕಿಂತ ಕಡಿಮೆ. ಇದು ಪುರುಷಪ್ರಧಾನ ಸಮಾಜಕ್ಕೆ ಹಿಡಿದ ಕೈಗನ್ನಡಿ.

ನ್ಯಾಯಾಲಯ: ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್ ಪ್ರಕಾರ, ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಒಟ್ಟು 31 ನ್ಯಾಯಾಧೀಶರಿದ್ದಾರೆ. ಆದರೆ ಕೇವಲ ಇಬ್ಬರು ಮಹಿಳಾ ನ್ಯಾಯಾಧೀಶರಿದ್ದಾರೆ. ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಬೇಲಾ ತ್ರಿವೇದಿ. ದೇಶಾದ್ಯಂತ ಹೈಕೋರ್ಟ್‌ಗಳಲ್ಲಿ ಮಹಿಳಾ ನ್ಯಾಯಮೂರ್ತಿಗಳ ಪಾಲು ತೀರಾ ಕಡಿಮೆ. ತೆಲಂಗಾಣ ಮತ್ತು ಸಿಕ್ಕಿಂ ಹೈಕೋರ್ಟ್‌ಗಳಲ್ಲಿ 30% ಕ್ಕಿಂತ ಹೆಚ್ಚು ಮಹಿಳಾ ನ್ಯಾಯಾಧೀಶರಿದ್ದಾರೆ. ಮಣಿಪುರ, ಮೇಘಾಲಯ, ಪಾಟ್ನಾ, ತ್ರಿಪುರ ಮತ್ತು ಉತ್ತರಾಖಂಡ ಹೈಕೋರ್ಟ್‌ಗಳಲ್ಲಿ ಒಬ್ಬರೇ ಒಬ್ಬ ಮಹಿಳಾ ನ್ಯಾಯಾಧೀಶರಿಲ್ಲ. ದೇಶಾದ್ಯಂತ ನ್ಯಾಯಾಲಯಗಳಲ್ಲಿ ಮಹಿಳಾ ವಕೀಲರ ಸಂಖ್ಯೆ ಕೇವಲ 15% ರಷ್ಟಿದೆ.

ಸೇನೆ: ರಕ್ಷಣಾ ಸಚಿವಾಲಯವು ಆಗಸ್ಟ್ 2023 ರಲ್ಲಿ ನೀಡಿದ ಮಾಹಿತಿಯ ಪ್ರಕಾರ, ಮೂರು ಸೇನೆಗಳಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆ ತೀರಾ ಕಡಿಮೆ. ಆದಾಗ್ಯೂ, ವೈದ್ಯಕೀಯ ಮತ್ತು ದಂತ ಶಾಖೆಗಳಲ್ಲಿ ಅವರ ಸಂಖ್ಯೆ ಸ್ವಲ್ಪ ಹೆಚ್ಚಾಗಿದೆ. ಮೂರು ಸೇನೆಗಳಲ್ಲಿ 11,414 ಮಹಿಳೆಯರಿದ್ದಾರೆ. ಇವರಲ್ಲಿ 7,054 ಮಹಿಳಾ ಸೇನಾ ಸಿಬ್ಬಂದಿ ಇದ್ದಾರೆ. ಆದರೆ, ವಾಯುಪಡೆಯಲ್ಲಿ 2,513 ಮಹಿಳೆಯರು ಮತ್ತು ನೌಕಾಪಡೆಯಲ್ಲಿ 1,847 ಮಹಿಳೆಯರು ಇದ್ದಾರೆ.

ಪೊಲೀಸ್ ಮತ್ತು ಅರೆಸೈನಿಕ ಪಡೆಗಳಲ್ಲಿ: ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ (ಬಿಪಿಆರ್‌ಡಿ) ದ ಮಾಹಿತಿಯ ಪ್ರಕಾರ, ಜನವರಿ 1, 2022 ರಂತೆ, ದೇಶಾದ್ಯಂತ ಮಹಿಳಾ ಪೊಲೀಸ್ ಸಿಬ್ಬಂದಿಗಳ ಸಂಖ್ಯೆ 11.75%. ಅದೇ ಸಮಯದಲ್ಲಿ, 6 ಫೆಬ್ರವರಿ 2024 ರಂದು, ಐದು ಕೇಂದ್ರೀಯ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ 41,605 ಮಹಿಳೆಯರಿದ್ದಾರೆ ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿತ್ತು.

ಇನ್ನು ಲಿಂಗ ಸಮಾನತೆಯನ್ನು ಸಾಧಿಸಲು ಪುರುಷರ ಸಂಪೂರ್ಣ ಬೆಂಬಲದ ಅಗತ್ಯವಿದೆ. ಈ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಪುರುಷರು ಪಿತೃಪ್ರಭುತ್ವದ ವ್ಯವಸ್ಥೆಯನ್ನು ಕೆಡವಲು ಸಹಾಯ ಮಾಡಬಹುದು.

ಮಹಿಳೆಯರಿಗೆ ಅಭಿವೃದ್ಧಿ ಹೊಂದಲು ಅವಕಾಶ ನೀಡಬಹುದು. ಪುರುಷರು ಮಹಿಳೆಯರ ಅನುಭವಗಳನ್ನು ಆಲಿಸುವುದು, ಅವರಿಗೆ ಬೆಂಬಲ ನೀಡುವ ಮೂಲಕ ಸಮಾನ ಸಮಾಜವನ್ನು ರಚಿಸಲು ಕೆಲಸ ಮಾಡುವುದು ಅತ್ಯಗತ್ಯ.

ಪುರುಷರು ಮತ್ತು ಮಹಿಳೆಯರು ಒಟ್ಟಾಗಿ ಪ್ರತಿಯೊಬ್ಬರೂ ತಾರತಮ್ಯದಿಂದ ಮುಕ್ತವಾಗಿ ಬದುಕುವ ಮತ್ತು ಸಮಾನ ಅವಕಾಶಗಳನ್ನು ಆನಂದಿಸುವಂತಹ ಭವಿಷ್ಯವನ್ನು ನಿರ್ಮಿಸಬಹುದು.ಆದ್ದರಿಂದ ಲಿಂಗ ಸಮಾನತೆಯಲ್ಲಿ ಪುರುಷರ ಬೆಂಬಲ ಅತ್ಯಗತ್ಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು