News Karnataka Kannada
Thursday, May 02 2024
ವಿಶೇಷ

ಸದಾ ನೆನಪಾಗುವ ಕೊಡಗಿನ ಹೆಮ್ಮೆಯ ಪುತ್ರ ಜನರಲ್ ತಿಮ್ಮಯ್ಯ

General Thimmaiah, the proud son of Kodagu who will always be remembered
Photo Credit : By Author

ಕೊಡಗಿನ ಮುಖ್ಯಪಟ್ಟಣ ಮಡಿಕೇರಿಗೆ ತೆರಳಿದವರಿಗೆ ಹೃದಯಭಾಗದಲ್ಲಿರುವ ಜನರಲ್ ತಿಮ್ಮಯ್ಯ ಅವರ ಶಿಸ್ತಿನ ಪ್ರತಿಮೆ ಗಮನಸೆಳೆಯುತ್ತದೆ. ಅಷ್ಟೇ ಅಲ್ಲದೆ ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲವೂ ಮೂಡುತ್ತದೆ. ಕೊಡಗಿನ ಹೆಮ್ಮೆಯ ವೀರ ಯೋಧ ಜನರಲ್ ತಿಮ್ಮಯ್ಯ ಅವರ ಜನ್ಮ ದಿನಾಚರಣೆ ಯ ಈ ದಿನ(ಮಾ.31) ಅವರನ್ನು ನೆನಪಿಸಿಕೊಳ್ಳುವುದರೊಂದಿಗೆ ಅವರ ಸ್ಮರಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ.

ಇವತ್ತಿಗೂ ದೇಶಕ್ಕಾಗಿ ಲಕ್ಷಾಂತರ ಮಂದಿ ಯೋಧರು ಸೇವೆ ಮಾಡಿದ್ದಾರೆ ಅಷ್ಟೇ ಅಲ್ಲದೆ ಬಲಿದಾನಗೈದಿದ್ದಾರೆ. ಅವರೆಲ್ಲರ ನಡುವೆ ಮೇರು ಶಿಖರದಂತೆ ಜನರಲ್ ತಿಮ್ಮಯ್ಯ ಅವರ ಪ್ರಜ್ವಲಿಸುತ್ತಾರೆ. ಹೀಗಾಗಿ ಅವರ ಬಗ್ಗೆ ಹೇಳಲೇ ಬೇಕಾಗುತ್ತದೆ. ಇನ್ನು ಜನರಲ್ ಎಸ್.ತಿಮ್ಮಯ್ಯ 1906ರ ಮಾರ್ಚ್ 31 ರಂದು ಮಡಿಕೇರಿಯ ಸನ್ನಿಸೈಡ್ ನಿವಾಸದಲ್ಲಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಕೂನೂರಿನ ಸೆಂಟ್ ಜೋಸೆಫ್ ಶಾಲೆ ಮತ್ತು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಪೂರೈಸಿದ ಅವರು 1922 ರಲ್ಲಿ ಡೆಹರಾಡೂನ್‌ನ ಮಿಲಿಟರಿ ಶಾಲೆಗೆ ಸೇರಿದರು.

1926 ರಲ್ಲಿ ರಾಯಲ್ ಇಂಡಿಯನ್ ಆರ್ಮಿಯ ಸೆಕೆಂಡ್ ಲೆಫ್ಟಿನೆಂಟ್ ಆಗಿ ಪದವಿ ಪಡೆದರು. ತದನಂತರ ಸ್ಕಾಟಿಷ್ ಯೂನಿಟ್‌ನ ಐಲ್ಯಾಂಡ್ ಇನ್‌ಫೆಂಟ್ರಿರಲ್ಲಿ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದರು. ಈ ಸಂದರ್ಭ ನೀನಾ ಅವರನ್ನು ಬಾಳ ಸಂಗಾತಿಯನ್ನಾಗಿ ಸ್ಪೀಕರಿಸಿದ ತಿಮ್ಮಯ್ಯ ಅವರು ಕ್ವೇಟಾದಲ್ಲಿ 1935 ರಲ್ಲಿ ಸಂಭವಿಸಿದ ಭೂಕಂಪದ ಸಂದರ್ಭ ಪತ್ನಿಯೊಡಗೂಡಿ ಸಲ್ಲಿಸಿದ ಸೇವೆಗಾಗಿ “ಕೈಸರ್-ಇ-ಹಿಂದ್” ಪ್ರಶಸ್ತಿಗೆ ಭಾಜನರಾದರು. 1944ರ ಮಾರ್ಚ್ ನಲ್ಲಿ ಹೈದಾರಬಾದ್ ರೆಜಿಮೆಂಟಿನ ಕಮಾಡಿಂಗ್ ಆಫೀಸರ್ ಆಗಿ 1946 ರಲ್ಲಿ ಜಪಾನಿನಲ್ಲಿ ಭಾರತೀಯ ಇನ್‌ಫೆಂಟ್ರಿ ಬ್ರಿಗೆಡನ್ನು ಮುನ್ನಡೆಸಿದರು.

ಭೂ ಸೇನೆಯ ಪುನರಚನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ ತಿಮ್ಮಯ್ಯ ಅವರು, 1948 ರಲ್ಲಿ 19ನೇ ಭಾರತೀಯ ಡಿವಿಜನ್ ಕಮಾಂಡ್‌ನ ನೇತೃತ್ವ ವಹಿಸಿಕೊಂಡ ಸಂದರ್ಭ ಜಮ್ಮು -ಕಾಶ್ಮೀರದಲ್ಲಿ ತೋರಿದ ಪರಾಕ್ರಮ ಭಾರತೀಯ ಸೇನಾ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿಯಿತು. ಸುಮಾರು 12 ಸಾವಿರ ಅಡಿ ಎತ್ತರದ ಹಿಮಚ್ಛಾದಿತ ಶಿಖರದ ಮೇಲೆ ಸೈನಿಕರ ಜೊತೆಯಲ್ಲಿ ಸಮರ ಟ್ಯಾಂಕ್‌ಗಳನ್ನು ಸಾಗಿಸಿ ಪಾಕಿಸ್ತಾನದ ಹಿಡಿತದಲ್ಲಿದ್ದ ಭೂ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡಿದ್ದರು.

ಮುಂದುವರಿದು ಪಾಕಿಸ್ತಾನದ ಅಧೀನದಲ್ಲಿದ್ದ ಭೂಮಿಯನ್ನು ಭಾರತದ ಸುಪರ್ದಿಗೆ ತೆಗೆದುಕೊಳ್ಳುವ ಹಂತದಲ್ಲಿದ್ದಾಗ ಯುದ್ಧ ವಿರಾಮ ಘೋಷಿಸಿದ್ದರಿಂದಾಗಿ ಆ ಪ್ರಯತ್ನ ಕೈಗೂಡಲಿಲ್ಲ. ಜನರಲ್ ತಿಮ್ಮಯ್ಯ ಅವರ ಪ್ರಯತ್ನಕ್ಕೆ ತಣ್ಣೀರರೆಚದೆ ಪ್ರೋತ್ಸಾಹಿಸಿದ್ದಲ್ಲಿ ಇಂದು ಕಾಶ್ಮೀರ ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ, ರಾಜಕೀಯ ಇಚ್ಚಾಸಕ್ತಿ , ದೂರದೃಷ್ಟಿಯ ಕೊರತೆ ಈ ಸಮಸ್ಯೆಯನ್ನು ಜೀವಂತವಾಗಿ ಉಳಿಯುವಂತೆ ಮಾಡಿತು.

ಬಳಿಕ 1950 ರಲ್ಲಿ ದೇಶದ ಖ್ಯಾತ ಮಿಲಿಟರಿ ಅಕಾಡೆಮಿ ಮತ್ತು ಮಿಲಿಟರಿ ಕಾಲೇಜಿನ ಜವಾಬ್ದಾರಿ ಹೊತ್ತುಕೊಂಡ ಜನರಲ್ ತಿಮ್ಮಯ್ಯ ಅವರು ಹಲವಾರು ದೇಶಭಕ್ತ ಸೈನಿಕರಿಗೆ ಮಾರ್ಗದರ್ಶನ ಮಾಡಿದರು. 1953 ರಲ್ಲಿ ವೆಸ್ಟನ್ ಕಮಾಂಡಿನ ಅಧಿಕಾರ ವಹಿಸಿಕೊಂಡರು, 1957 ರಲ್ಲಿ ಸೇನಾಪಡೆಯ ಮುಖ್ಯಸ್ಥರಾಗಿ ಸೈನಿರಲ್ಲಿ ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡಿದರು.

1964 ರಲ್ಲಿ ವಿಶ್ವಸಂಸ್ಥೆಯ ಶಾಂತಿಪಡೆಯ ಕಮಾಂಡರ್ ಆಗಿ ಸೈಪ್ರಸ್ ನಲ್ಲಿ ನಿಯೋಜಿತಗೊಂಡು ಅಲ್ಲಿನ ಜನರ ವಿಶ್ವಾಸ ಗಳಿಸಿದರು. 1965ರ ಡಿಸೆಂಬರ್ 18 ರಂದು ಹೃದಯಾಘಾತದಿಂದ ನಿಧನರಾದರು. ಆದರೆ ಅವರ ಸಾಹಸ, ಸೇನಾಪಡೆಗೆ ನೀಡಿದ ಕೊಡುಗೆ ಇಂದಿಗೂ ಸ್ಮರಣೀಯವಾಗಿ ಉಳಿದಿದೆ. ಅವರ ಸ್ಮರಣಾರ್ಥ ಅವರು ಜನಿಸಿದ ಮಡಿಕೇರಿ ನಗರದ ಸನ್ನಿಸೈಡ್ ಮನೆಯನ್ನು ಮೂಸಿಯಂ ಮಾಡಲಾಗಿದ್ದು, ಅಲ್ಲಿ ಯುದ್ಧ ಟ್ಯಾಂಕರ್, ಯುದ್ಧ ವಿಮಾನ ಸೇರಿದಂತೆ ಹಲವು ಮಹತ್ವದ ಯುದ್ಧೋಪಕರಣಗಳನ್ನು ಇಡಲಾಗಿದೆ. ಒಟ್ಟಾರೆ ಈ ಮ್ಯೂಸಿಯಂಗೆ ತೆರಳಿದವರಿಗೆ ಜನರಲ್ ತಿಮ್ಮಯ್ಯ ಅವರು ದೇಶಕ್ಕೆ ನೀಡಿದ ಸೇವೆ ಸುಲಭವಾಗಿ ಅರ್ಥವಾಗುತ್ತದೆ. ಅಷ್ಟೇ ಅಲ್ಲದೆ ಮನಸ್ಸಿಗೂ ಹತ್ತಿರವಾಗುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು