News Karnataka Kannada
Sunday, April 28 2024
ವಿಶೇಷ

ಸೇನಾ ದಿನದಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ನೆನಪಾಗುತ್ತಾರೆ….

ಇವತ್ತು ಅಂದರೆ ಜನವರಿ 15ನ್ನು ಭಾರತೀಯ ಸೇನಾ ದಿನವನ್ನು ಪ್ರತಿ ವರ್ಷವೂ ಆಚರಿಸುತ್ತಾ ಬರಲಾಗುತ್ತಿದೆ. ಈ ಆಚರಣೆ ಮಾಡುವಾಗಲೆಲ್ಲ ನಮ್ಮ ದೇಶಕ್ಕಾಗಿ ಹೋರಾಡಿದ ವೀರ ಯೋಧರು ನೆನಪಾಗುತ್ತಾರೆ. ಅಷ್ಟೇ ಅಲ್ಲದೆ ಇವತ್ತಿಗೂ ನಮ್ಮ ದೇಶದ ಗಡಿಭಾಗಗಳಲ್ಲಿ ಮಳೆ, ಚಳಿ, ಬಿಸಿಲು ಎನ್ನದೆ ಹಗಲು ರಾತ್ರಿ ಜೀವದ ಹಂಗು ತೊರೆದು ದೇಶ ಕಾಯುವ ಸೈನಿಕರು ಕಣ್ಮುಂದೆ ಹಾದು ಹೋಗುತ್ತಾರೆ.
Photo Credit : By Author

ಇವತ್ತು ಅಂದರೆ ಜನವರಿ 15ನ್ನು ಭಾರತೀಯ ಸೇನಾ ದಿನವನ್ನು ಪ್ರತಿ ವರ್ಷವೂ ಆಚರಿಸುತ್ತಾ ಬರಲಾಗುತ್ತಿದೆ. ಈ ಆಚರಣೆ ಮಾಡುವಾಗಲೆಲ್ಲ ನಮ್ಮ ದೇಶಕ್ಕಾಗಿ ಹೋರಾಡಿದ ವೀರ ಯೋಧರು ನೆನಪಾಗುತ್ತಾರೆ. ಅಷ್ಟೇ ಅಲ್ಲದೆ ಇವತ್ತಿಗೂ ನಮ್ಮ ದೇಶದ ಗಡಿಭಾಗಗಳಲ್ಲಿ ಮಳೆ, ಚಳಿ, ಬಿಸಿಲು ಎನ್ನದೆ ಹಗಲು ರಾತ್ರಿ ಜೀವದ ಹಂಗು ತೊರೆದು ದೇಶ ಕಾಯುವ ಸೈನಿಕರು ಕಣ್ಮುಂದೆ ಹಾದು ಹೋಗುತ್ತಾರೆ.

ಈ ಸೇನಾ ದಿನದಂದು ನಾವೆಲ್ಲರೂ ಅವರಿಗೊಂದು ಗೌರವದ ಸೆಲ್ಯೂಟ್ ಹೊಡೆಯಬೇಕಾಗಿದೆ. ಇನ್ನು ಆ ದಿನಗಳಿಗೆ ಹೋದರೆ ಅವತ್ತು  ಭಾರತೀಯ ಸೇನೆಯು ಬ್ರಿಟಿಷ್ ಸಾಮ್ರಾಜ್ಯದ ಅಡಿಯಲ್ಲಿ ರೂಪುಗೊಂಡಿತು. ಸೇನೆಯಲ್ಲಿ ಹಿರಿಯ ಅಧಿಕಾರಿಗಳು ಬ್ರಿಟಿಷರೇ ಆಗಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಸೇನೆಯಲ್ಲಿದ್ದ ಹಿರಿಯ ಅಧಿಕಾರಿಗಳು ಇಂಗ್ಲೆಂಡ್ ಮೂಲದವರೇ ಆಗಿದ್ದರು. ಅಷ್ಟೇ ಅಲ್ಲದೆ ಜನರಲ್ ಫ್ರಾನ್ಸಿಸ್ ಬುಚರ್ 1949 ರಲ್ಲಿ ಕೊನೆಯ ಬ್ರಿಟಿಷ್ ಕಮಾಂಡರ್ ಆಗಿದ್ದರು. ಅವರ ನಿರ್ಗಮನದ ನಂತರ, ಲೆಫ್ಟಿನೆಂಟ್ ಜನರಲ್ ಕೆಎಂ ಕಾರಿಯಪ್ಪ ಅವರನ್ನು ಸ್ವತಂತ್ರ ಭಾರತದ ಮೊದಲ ಭಾರತೀಯ ಮಿಲಿಟರಿ ಅಧಿಕಾರಿಯನ್ನಾಗಿ ಮಾಡಲಾಯಿತು.

ಜನವರಿ 15 ರಂದು  ಕೆಎಂ ಕಾರ್ಯಪ್ಪ ಅವರು ಜನರಲ್ ಫ್ರಾನ್ಸಿಸ್ ಬುಚರ್ ಅವರಿಂದ ಭಾರತೀಯ ಸೇನೆಯ ಕಮಾಂಡ್ ಅಧಿಕಾರವನ್ನು ಪಡೆದರು. ಈ ಕಾರಣಕ್ಕಾಗಿ, ಭಾರತೀಯ ಸೇನಾ ದಿನವನ್ನು ಪ್ರತಿ ವರ್ಷ ಜನವರಿ 15 ರಂದು ಆಚರಿಸುತ್ತಾ  ಬರಲಾಗುತ್ತಿದೆ. ಈ ವೇಳೆ ಭಾರತದ ಮೊದಲ ದಂಡನಾಯಕನಾಗಿ ಅಧಿಕಾರ ಸ್ವೀಕರಿಸಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಬಗ್ಗೆ ಒಂದಿಷ್ಟು ವಿಚಾರ ಹೇಳಲೇ ಬೇಕಾಗುತ್ತದೆ.

ಕಾರ್ಯಪ್ಪ  ಅವರು 28.1.1900ರಂದು ಉತ್ತರ ಕೊಡಗಿನ ಶನಿವಾರಸಂತೆಯಲ್ಲಿ ಪಾರುಪತ್ಯೆಗಾರರಾಗಿದ್ದ ಕೊಡಂದೇರ ಮಾದಪ್ಪ-ಕಾವೇರಮ್ಮ ದಂಪತಿಗಳ ದ್ವಿತೀಯ ಪುತ್ರನಾಗಿ ಕಾರ್ಯಪ್ಪ ಜನಿಸಿದರು. ಕಾರ್ಯಪ್ಪನವರ ಹಿರಿಯ ಅಣ್ಣ ಕೆ.ಎಂ. ಅಯ್ಯಣ್ಣ, ತಮ್ಮಂದಿರಾದ ಕೆ.ಎಂ ನಂಜಪ್ಪ, ಕೆ.ಎಂ ಬೋಪಯ್ಯ, ಸೋದರಿಯರಾದ ಕೆ.ಎಂ. ಪೂವಮ್ಮ ಹಾಗೂ ಕೆ.ಎಂ. ಬೊಳ್ಳಮ್ಮ.

ಕುಶಾಲನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಮುಂದಿನ ಶಿಕ್ಷಣಕ್ಕಾಗಿ ಮಡಿಕೇರಿಯ  ಸೆಂಟ್ರಲ್ ಹೈ ಸ್ಕೂಲ್‌ಗೆ ಸೇರ್ಪಡೆಗೊಂಡರು. ನಂತರ ಇಂಟರ್‌ಮೀಡಿಯಟ್ ಶಿಕ್ಷಣಕ್ಕಾಗಿ ಮದರಾಸ್ ಪ್ರಸಿಡೆನ್ಸಿ ಕಾಲೇಜಿಗೆ ಸೇರಿದರು.  1937ರಲ್ಲಿ ಮಣಿಯಪ್ಪಂಡ ಮುತ್ತಣ್ಣ ಅವರ ಪುತ್ರಿ ಮುತ್ತಮ್ಮ ಅವರನ್ನು ವಿವಾಹವಾದರು. ಕಾರ್ಯಪ್ಪ ಮುತ್ತಮ್ಮ ದಂಪತಿಗೆ ಇಬ್ಬರು ಮಕ್ಕಳು ಜನಿಸಿದರು. ಒಬ್ಬರು ಇದೀಗ ನಿವೃತ್ತರಾಗಿರುವ ಏರ್ ಮಾರ್ಷಲ್ ಕೆ.ಸಿ. ನಂದ ಕಾರ್ಯಪ್ಪ ಹಾಗೂ ನಳಿನಿ ಕಾರ್ಯಪ್ಪ.

1918ರಲ್ಲಿ ಎರಡನೇ ಮಹಾಯುದ್ಧ ನಡೆದ ಸಂದರ್ಭ ಬ್ರಿಟೀಷ್ ಸರ್ಕಾರ ಭಾರತೀಯರನ್ನು “ಕಿಂಗ್ಸ್ ಕಮಿಷನ್”ಗೆ ಆಯ್ಕೆ  ನಡೆಸಲು ನಿರ್ಧರಿಸಿದಾಗ ಸೈನಿಕನಾಗುವ ಅದಮ್ಯ ಉತ್ಸಾಹ ಹೊಂದಿದ್ದ ಕೆ.ಎಂ. ಕಾರ್ಯಪ್ಪ ಅವರು ತಮ್ಮ 18ನೇ ವಯಸ್ಸಿನಲ್ಲಿ ಶಿಮ್ಲಾದಲ್ಲಿ ಸಂದರ್ಶನ ಎದುರಿಸಿ ನಂತರ ತರಬೇತಿ ಪಡೆದು “ಸೆಕೆಂಡ್ ಲೆಫ್ಟಿನೆಂಟ್”ಆಗಿ ಹೊರಹೊಮ್ಮಿದರು. ಕ್ವೆಟ್ಟಾದಲ್ಲಿದ್ದ ಮಿಲಿಟರಿ ತರಬೇತಿ ಶಿಕ್ಷಣ ಪಡೆದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾದ ಕೆ.ಎಂ. ಕಾರ್ಯಪ್ಪ ಅವರು ಮುಂದಿನ ಸೈನ್ಯದ ಎಲ್ಲಾ ಪದವಿಗಳನ್ನೂ ಪಡೆದ ಪ್ರಥಮ ಭಾರತೀಯರೆನಿಸಿಕೊಂಡಿದ್ದಾರೆ, ಮಾತ್ರವಲ್ಲದೆ 1947ರಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದ ಕಾರ್ಯಪ್ಪನವರು ಈಸ್ಟರ್ನ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆದರು.

15.1.1949 ರಂದು ಜನರಲ್ ಪದವಿಗೆ ಬಾಜನರಾದ ಕೆ. ಎಂ. ಕಾರ್ಯಪ್ಪನವರು ಅಂದಿನ ಜನರಲ್ ಸರ್ ರಾಯ್ ಬುಚರ್  ಅಧಿಕಾರ ದಂಡ ಸ್ವೀಕರಿಸಿ 14.1.1953ರವರೆಗೆ ಮೂರು ರಕ್ಷಣಾ ಪಡೆಗಳ ಪ್ರಥಮ ಮಹಾದಂಡ ನಾಯಕರಾಗಿ ಕರ್ತವ್ಯ ನಿರ್ವಹಿಸಿ “ಭಾರತೀಯ ಸೇನೆಯ ಪಿತಾಮಹ” ಎಂದು ಖ್ಯಾತಿಗೆ ಬಾಜನರಾದರು.

ಮೂರು ದಶಕಗಳ ತಮ್ಮ ಸೈನ್ಯದ ನಿಕಟ ಸಂಬಂಧದಿಂದ ಶಿಸ್ತಿನ ಸಿಪಾಯಿ, ಅಪ್ರತಿಮ ದೇಶ ಭಕ್ತಿ ಹಾಗೂ ಬಲಿಷ್ಠ ಸೈನ್ಯ ಶಕ್ತಿಯಿಂದ ಸದೃಢ ಭಾರತವನ್ನು ಕಟ್ಟ ಬಹುದೆಂಬ ದೂರದರ್ಶಿತ್ವದ ಖಚಿತ ನಿಲುವನ್ನು ಹೊಂದಿದ್ದರು.  ಬಿರುದು, ಬಾವಲಿ ಹಾಗೂ ಪ್ರಶಸ್ತಿಗಳ ಸರಮಾಲೆಯೇ ಇವರನ್ನು ಅಲಂಕರಿಸಿತು. ಮೊದಲು ನಾವು ಭಾರತೀಯರು, ಜೈ ಹಿಂದ್ ಎಂಬ ಘೋಷಣೆಗಳನ್ನು ಚಾಲ್ತಿಗೆ ತಂದಿದ್ದ ಅವರಿಗೆ, ಭಾರತಕ್ಕೆ ಗೌರವ ತಂದ ರೀತಿಯಲ್ಲಿ ಅವರನ್ನು ಗೌರವಿಸಲಾಯಿತು. ಬ್ರಿಟೀಷ್ ಸರ್ಕಾರದ ಒಬಿಇ, ಯುಎಸ್‌ಎ, ದಿ ಲೆಜನ್ ಆಫ್ ಮೆರಿಟ್ ನೇಪಾಳದ ಗೌರವ, ಜನರಲ್ ಪದವಿ, ಹಲವು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್‌ಗಳು, ಪೌರ ಸನ್ಮಾನಗಳು ಸಂದಿವೆ

ಎಲ್ಲಕ್ಕಿಂತ ಮುಕುಟ ಪ್ರಾಯವಾಗಿ 28.4.1986ರಲ್ಲಿ ಅಂದಿನ ರಾಷ್ಟಪತಿ ಗ್ಯಾನಿ ಜೈಲ್‌ಸಿಂಗ್ ಅವರ ಮೂಲಕ ಭಾರತ  ಸರ್ಕಾರವು ಜನರಲ್ ಕಾರ್ಯಪ್ಪ ಅವರನ್ನು ಜೀವತಾವಧಿವರೆಗೆ “ಫೀಲ್ಡ್ ಮಾರ್ಷಲ್” ಎಂದು ಗೌರವಿಸಿತ್ತು. ಕೊಡಗಿನ ಪಾಲಿಗೆ ಸಂದ ಮಹಾನ್ ಗೌರವ ಎನ್ನಬಹುದು. ಸಾರ್ವಜನಿಕ ಬದುಕನ್ನು ಮುಂಬೈಯಲ್ಲಿ ಚುನಾವಣೆಯ ಮೂಲಕ ಪ್ರಯತ್ನಿಸಿ ಜನರಲ್ ಕಾರ್ಯಪ್ಪ ವಿಫಲರಾದರು. ಅದು ಒಳ್ಳೆಯದೆ ಆಯಿತೆನ್ನಬಹುದು. ಕೊನೆಯ ದಿನಗಳಲ್ಲಿ ಮಡಿಕೇರಿಯ ರೋಷನಾರದಲ್ಲಿ ಕಳೆದ ಅವರು 14-5-1993 ರಂದು ಕೀರ್ತಿ ಶೇಷರಾದರು. ಆದರೆ ಅವರ ಹೆಸರು ಇನ್ನೂ ಅಜರಾಮರವಾಗಿಯೇ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು