News Karnataka Kannada
Saturday, May 04 2024
ವಿಶೇಷ

ದೇಶದ ಬೆನ್ನೆಲುಬು ರೈತ: ಇಂದು ರೈತ ದಿನಾಚರಣೆ

Farmer is the backbone of the country: Today is Farmer's Day
Photo Credit : Pixabay

ಅನ್ನದಾತ ಸುಖೀಭವ’ ಎನ್ನುವ ಸಂಸ್ಕೃತಿ ನಮ್ಮದು. ಅನ್ನದಾತ ಎಂದರೆ `ನಮಗೆ ಆಹಾರವನ್ನು ನೀಡುವವರು. ಆಹಾರವನ್ನು ಯಾರೇ ಉಣಬಡಿಸಲಿ ಅದರ ಶ್ರೇಯಸ್ಸು ದೊರಕಬೇಕಾದದ್ದು ರೈತನಿಗೆ ಅಲ್ಲವೇ? ನಾವು ರೈತನನ್ನು ನೇಗಿಲ ಯೋಗಿ ಎನ್ನುತ್ತೇವೆ. ಒಂದು ಬಾರಿ ಆಲೋಚಿಸಿ ನೋಡಿ 30 ದಿನಗಳ ಕಾಲ ದುಡಿದು ತಿಂಗಳ ಕೊನೆಯಲ್ಲಿ ಸಂಬಳ ಕೈ ಸೇರದಿದ್ದಾಗ ನಮ್ಮ ಮನಸ್ಸಿನಲ್ಲಿ ಅದೆಷ್ಟು ತಳಮಳ ಉಂಟಾಗುತ್ತದೆ. ಆದರೆ ರೈತನ ಜೀವನ ? ಬಿತ್ತಿದ ಬೀಜ ಮೊಳಕೆ ಒಡೆದು, ಚಿಗುರಿ ಗಿಡವಾಗಿ ಫಲವು ಅರಳುವವರೆಗೂ ರೈತನು ಆದೆಷ್ಟು ಶ್ರಮ ವಹಿಸಬೇಕು. ಅದೆಷ್ಟು ಕಷ್ಟಪಟ್ಟರೂ ಅನೇಕ ಬಾರಿ ರೈತನ ಲೆಕ್ಕಚಾರಗಳೆಲ್ಲವೂ ತಲೆಕೆಳಗಾಗುವುದು ಕೂಡಾ ಸಾಧ್ಯವಿದೆ.

ತನ್ನ ಅಷ್ಟೂ ಕೃಷಿಯನ್ನು ಗಮನವಿರಿಸಿ ನೋಡುವ ಶ್ರದ್ಧೆ ರೈತನಲ್ಲಲ್ಲದೆ ಮತ್ಯಾರಲ್ಲಿ ಕಾಣಸಿಗಬಹುದು? ರೈತನಷ್ಟು ಕರುಣಾಮಯಿ ಕೂಡ ಮತ್ಯಾರೂ ಇರಲು ಸಾಧ್ಯವಿಲ್ಲ. ಕೃಷಿಯೊಂದಿಗೆ ಪಶು ಪಾಲನೆಯಲ್ಲೂ ತೊಡಗುವ ರೈತ ಅಷ್ಟೂ ಗೋವುಗಳನ್ನು ತನ್ನ ಕುಟುಂಬದ ಸದಸ್ಯರಂತೆಯೇ ಪ್ರೀತಿಸುತ್ತಾನೆ. ತಾನು ಒಂದು ದಿನ ಉಪವಾಸ ಇದ್ದರೂ ಸರಿ ತನ್ನ ಹಸುವನ್ನಾಗಲೀ ಕರುವನ್ನಾಗಲೀ ರೈತ ಉಪವಾಸ ಕೆಡವಲಾರ. ತನ್ನ ಕಾವಲು ನಾಯಿ, ಉಳಿದ ಧಾನ್ಯಗಳನ್ನು ಹೆಕ್ಕಲು ಬರುವ ಪಕ್ಷಿಗಳನ್ನೂ ರೈತ ಸಮಾನವಾಗಿ ಪ್ರೀತಿಸುತ್ತಾನೆ.

ಕೃಷಿ ಇದ್ದಲ್ಲಿ ದುರ್ಭಿಕ್ಷ ಇರಲಾರದು. ಬ್ಯಾಂಕ್ ಖಾತೆಯಲ್ಲಿ ಅದೆಷ್ಟು ಹಣವಿದ್ದರೇನು ಫಲ? ಹೊಟ್ಟೆಗೆ ಅನ್ನವನ್ನಲ್ಲದೆ ನೋಟನ್ನು ನಾಣ್ಯವನ್ನು ತಿನ್ನಲು ಸಾಧ್ಯವೇ? ಇದೆಲ್ಲಾ ನಮಗೆ ತಿಳಿಯದ ವಿಚಾರವಲ್ಲ. ಆದರೂ ನಮ್ಮಲ್ಲಿ ಅನೇಕರಿಗೆ ಕೃಷಿ, ರೈತ ಎಂದರೆ ತಾತ್ಸಾರ. ತಾವು ಕಲಿತವರು, ಅವರು ಏನೂ ಆರಿಯದವರು ಎಂಬ ಒಣ ಹಮ್ಮು ಒಂದು ಭಾರಿ ಯೋಚಿಸಿ ನೋಡಿ, ರೈತರಿಲ್ಲದೆ ಜಗವು ಉಳಿಯಬಹುದೇ? ಬಹಳಷ್ಟನ್ನು ಓದಿ, ಅನೇಕ ಪದವಿಗಳಿದ್ದೂ ಕೃಷಿಯತ್ತ ಮುಖಮಾಡಿ ಜೀವನ ನಡೆಸುವ ಅದೆಷ್ಟು ಜನರ ಉದಾಹರಣೆ ಬೇಕು? ರೈತರು ಹಳ್ಳಿಯ ಮುಗ್ಧರು, ಆದರೆ ಅಜ್ಞಾನಿಗಳಲ್ಲ. ಅವರು ಇನ್ನೂ ಮಾನವೀಯತೆ ಕರುಣೆ, ನಿಷ್ಠೆ ಮತ್ತು ಶ್ರಮ ಜೀವನದಲ್ಲಿ ನಂಬಿಕೆ ಇರಿಸಿ ಬದುಕುತ್ತಿದ್ದಾರೆ. ಯಾವುದೇ ಹೊತ್ತಲ್ಲಿ ನೀವು ರೈತನ ಮನೆಗೆ ಭೇಟಿ ನೀಡಿದರೂ ನಿಮ್ಮ ಹೊಟ್ಟೆ ತುಂಬಿಸದೆ ರೈತ ನಿಮ್ಮನ್ನು ಕಳುಹಿಸಲಾರ.

ಹಾಗೆ ವಿಜ್ಞಾನಿಗಳಷ್ಟೇ ಕರಾರುವಕ್ಕಾದ ಹಲವು ವಿಚಾರಗಳನ್ನು ರೈತ ತನ್ನ ಅನುಭವದಿಂದ ಕಲಿತಿರುತ್ತಾನೆ. ಯಾವ ಬೆಳೆಗೆ ಎಷ್ಟು ಪ್ರಮಾಣದ ನೀರು ಹಾಯಿಸಬೇಕು, ಯಾವ ಹವಾಮಾನಕ್ಕೆ ಯಾವ ಬೆಳೆ ಸೂಕ್ತವಾದದ್ದು ಎಂಬುದರಿಂದ ಹಿಡಿದು ಗಿಡಗಳಿಗೆ ರೋಗ ಬಂದಾಗ ಯಾವ ರೀತಿಯಲ್ಲಿ ಔಷಧವನ್ನು ಬಳಸಬೇಕು ಎಂಬುದನ್ನೂ ರೈತ ಅರಿತಿರುತ್ತಾನೆ. ಬೇವಿನ ಸೊಪ್ಪು, ಅರಸಿನ, ಶುಂಠಿ ಇತ್ಯಾದಿಗಳಲ್ಲಿನ ಔಷಧೀಯ ಗುಣಗಳ ಕುರಿತಾಗಿ ರೈತ ಯಾವುದೇ ವೈಜ್ಞಾನಿಕ ಪ್ರಯೋಗಗಳ ಹೊರತಾಗಿಯೂ ಹೇಳಬಲ್ಲ.

ಹವಾಮಾನ ವೈಪರೀತ್ಯ, ಪ್ರಾಕೃತಿಕ ವಿಕೋಪಗಳು ಎಲ್ಲಕ್ಕೂ ಹೆಚ್ಚಾಗಿ ಕಾಡುವುದು ರೈತನನ್ನು ತಿಂಗಳುಗಳ ಕಾಲ ಮಗುವಿನಂತೆ ಜೋಪಾನ ಮಾಡಿ ಬೆಳೆಸಿದ ಬೆಳೆ ಇನ್ನೇನು ಕೈಸೇರಿ ಮಾರಾಟ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೂ ಮದುವೆಗೂ ದಾರಿ ಮಾಡೋಣ ಎನ್ನುವಷ್ಟರಲ್ಲೇ ಅತಿವೃಷ್ಟಿಯಾಗಿ ಬೆಳೆದ ಬೆಳೆ ನೀರು ಪಾಲಾದರೆ ರೈತ ಏನು ಮಾಡಬೇಕು? ಈರುಳ್ಳಿಯ ಬೆಲೆ ಏರಿಕೆಯಾಗಿದೆ, ಟೊಮೇಟೊ ಕೈಗೆಟಕುವುದಿಲ್ಲ ಎಂದು ಗೊಣಗಾಡುವ ನಾವು ಬೆಲೆಯು ಕುಸಿದು ಪಾತಾಳಕ್ಕಿಳಿದಾಗ ರೈತನ ಪರಿಸ್ಥಿತಿಯ ಬಗ್ಗೆ ಯಾವತ್ತಾದರೂ ಆಲೋಚಿಸುತ್ತೇವೆಯೇ? ಅಕ್ಕಿ ಅಂಗಡಿಯಿಂದ, ಹಾಲು ಪ್ಯಾಕೆಟ್‌ನಿಂದ ದೊರಕುತ್ತದೆ ಎನ್ನುವ ಮಕ್ಕಳ ಸಂಖ್ಯೆಯೇ ಹೆಚ್ಚಾಗುತ್ತಿರುವಾಗ ಮುಂದೆ ಪರಿಸ್ಥಿತಿ ಎತ್ತ ಸಾಗಬಹುದು ಎಂದು ನಾವು ಗಂಭೀರವಾಗಿ ಆಲೋಚಿಸಬೇಕಲ್ಲವೇ? ವೈದ್ಯರ ಮಕ್ಕಳು ವೈದ್ಯರಾಗಲೀ, ರಾಜಕಾರಣಿಯ ಮಕ್ಕಳು ರಾಜಕಾರಣಿಗಳಾಗಲಿ ಎಂದೇ ಪಾಲಕರು ಬಯಸುತ್ತಾರೆ. ಆದರೆ ರೈತನೊಬ್ಬ ನನ್ನ ಮಕ್ಕಳು ಪಟ್ಟಣ ಸೇರಲಿ ಎಂದು ಬಯಸುವ ಪರಿಸ್ಥಿತಿ ಬಂದಿದೆ.

ಬ್ಯಾಂಕ್‌ನಿಂದ ಪಡೆದ ಸಾಲವನ್ನು ತೀರಿಸುವ ವೇಳೆಗೆ ಕೈಗೆ ಬಂದಿದ್ದ ಬೆಳೆಯ ಬೆಲೆ ಪಾತಾಳಕ್ಕೆ ಇಳಿದರೆ, ರೈತ ಅಸಲು ಬಡ್ಡಿಗಳನ್ನು ಹೇಗೆ ತೀರಿಸಬಹುದು? ತಾನು ಬೆಳೆದ ಬೆಳೆಯನ್ನು ಇನ್ನೊಬ್ಬ ನಿರ್ಧರಿಸಿದ ಬೆಲೆಗೆ ಮಾರಬೇಕಾಗಿ ಬಂದಾಗ ರೈತನು ಅದೆಷ್ಟು ವ್ಯಥೆಪಡಬಹುದು. ಸರಕಾರ ನೀಡಿದ ಸವಲತ್ತುಗಳೆಲ್ಲಾ ಮಧ್ಯವರ್ತಿಗಳ, ಅಧಿಕಾರಿಗಳ ಪಾಲಾದಾಗ ಉಳಿದು ಕೈ ಸೇರಿದ ಹಣದಲ್ಲಿ ರೈತ ಯಾವ ರೀತಿ ರಾಷ್ಟ್ರದ ಭವಿಷ್ಯ ನಿರ್ಮಾಣ ಮಾಡಬಹುದು? ತನಗೆ ನ್ಯಾಯವಾಗಿ ದೊರೆಯಬೇಕಾದ ಹಕ್ಕು ಮತ್ತು ಸವಲತ್ತುಗಳಿಗಾಗಿ, ಬೆಂಬಲ ಬೆಲೆ ಮತ್ತು ಸಬ್ಸಿಡಿಗಳಿಗಾಗಿ ಕಚೇರಿ ಮತ್ತು ಮಧ್ಯವರ್ತಿಗಳ ಹಿಂದೆ ಕೈಚಾಚುವ ಅನ್ನದಾತನ ಮಾನಸಿಕ ತುಮುಲಗಳ ಬಗ್ಗೆ ನಾವು ಎಂದಾದರೂ ಆಲೋಚಿಸಿದ್ದೇವೆಯೇ? ನಮ್ಮೆಲ್ಲರಿಗೂ ಅನ್ನ ನೀಡುವ ಕೈಗಳು ದೈನ್ಯದಿಂದ ಬೇಡಬೇಕಾಗಿ ಬಂದಾಗ, ಕೈ ಮುಗಿದು ವಿನಂತಿಸಬೇಕಾಗಿ ಬಂದಾಗ, ರೈತನ ಸ್ವಾಭಿಮಾನ, ಆತ್ಮವಿಶ್ವಾಸ ಅದೆಷ್ಟು ಬಾರಿ ಒಡೆದು ಚೂರಾಗಿರಬೇಕು. ರೈತನ ಕಷ್ಟ ಸುಖಗಳ ಬಗ್ಗೆ ನಮಗೂ ತಿಳಿದಿರಲಿ, ರೈತನ ಶ್ರಮದ ಬಗ್ಗೆ ಗೌರವವಿರಲಿ, ಅನ್ನದಾತ ಸುಖೀಭವ ಎಂಬ ಹಾರೈಕೆ ಎಲ್ಲಾ ಕಾಲದಲ್ಲೂ ನಿಜವಾಗಲಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು