News Karnataka Kannada
Thursday, May 09 2024
ವಿಶೇಷ

ಫಂಡಿಜೆಯಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆ

Belthangady: There is a shortage of students at the Government Higher Primary School in Fundije
Photo Credit : By Author

ಬೆಳ್ತಂಗಡಿ: ತರಗತಿಗಳಿಗೆ ಬೇಕಾದ ಪೀಠೊಪಕರಣಗಳಿವೆ, ವ್ಯವಸ್ಥಿತ ಗ್ರಂಥಾಲಯವಿದೆ. ಸಾಕಷ್ಟು ದೊಡ್ಡದಾದ ಕಟ್ಟಡವಿದ್ದು, ಕೋಣೆಗಳಿವೆ. ಬಿಸಿಯೂಟದ ವ್ಯವಸ್ಥೆ ಇದೆ. ಪ್ರತಿಭಾನ್ವಿತ ಶಿಕ್ಷಕಿಯರಿದ್ದಾರೆ. ಕಲಿಕಾ ಉಪಕರಣಗಳಿಗೂ ಕೊರತೆಯಿಲ್ಲ. ವಿಶಾಲವಾದ ಆಟದ ಮೈದಾನವಿದೆ. ಶಾಲೆಗೆ ಗಟ್ಟಿಮುಟ್ಟಾದ ಆವರಣವಿದೆ. ಇಷ್ಟೆಲ್ಲಾ ಇದ್ದರೂ ಮಕ್ಕಳು ಬೆರಳಣಿಕೆಯಷ್ಟು ಮಾತ್ರ.

ಇದು ತಾಲೂಕಿನ ನಿಟ್ಟಡೆ ಗ್ರಾಮದ ಫಂಡಿಜೆಯಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿತ್ರಣ. ಏಳು ತರಗತಿಗಳಿಗೆ ಹತ್ತು ಮಂದಿ ಮಕ್ಕಳು!! ಒಂದನೇ ತರಗತಿಯಲ್ಲಿ ಒಂದು ಮಗು (ಸುಮಿತ್), ಎರಡನೇ ತರಗತಿಯಲ್ಲಿ ಯಾರೂ ಇಲ್ಲ. ಮೂರನೇ ತರಗತಿಯಲ್ಲಿ ಎರಡು ಮಕ್ಕಳು (ಸುಪ್ರಿತಾ ಮತ್ತು ಆದರ್ಶ), ನಾಲ್ಕನೇ ತರಗತಿಯಲ್ಲಿ ಇಬ್ಬರು (ಪ್ರಣವ್ ಮತ್ತು ಪ್ರತೀಕ್ಷಾ), ಐದನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ (ಸೃಜನ್), ಆರನೇ ತರಗತಿಯಲ್ಲಿ ಇಬ್ಬರು (ಪವನ್ ಮತ್ತು ಸಾನ್ವಿತಾ), ಏಳನೇ ತರಗತಿಯಲ್ಲಿ ಇಬ್ಬರು ( ಮೇಘಶ್ಯಾಂ ಮತ್ತು ವಿಲಾಸ್) ಇದ್ದಾರೆ. ಹೀಗೆ 7 ಹುಡುಗರು ಮತ್ತು 3 ಹುಡುಗಿಯರಿರುವ ಶಾಲೆ ಫಂಡಿಜೆ ಶಾಲೆ.

ಒಂದಾನೊಂದು ಕಾಲದಲ್ಲಿ ಅತ್ಯುತ್ತಮ ಶಾಲೆಯೆಂದು ಪ್ರಸಿದ್ಧವಾಗಿತ್ತು. ಕಳೆದ ಏಳೆಂಟು ವರ್ಷಗಳಿಂದೀಚೆಗೆ ಆಂಗ್ಲ ಮಾಧ್ಯಮದ ಪ್ರಭಾವದಿಂದ ಮತ್ತು ಎರಡು ಕಿ.ಮೀ. ಅಂತರದಲ್ಲಿ ಇನ್ನೊಂದು ಶಾಲೆ ಇರುವುದರಿಂದ (ಈ ಶಾಲೆ ಪ್ರಾರಂಭಿಸಿದ್ದು ದಶಕದ ಹಿಂದಿನ ಪಕ್ಷ ರಾಜಕೀಯದ ಮೇಲಾಟದಿಂದ) ಮಕ್ಕಳ ಸಂಖ್ಯೆ ಕ್ಷೀಣವಾಗತೊಡಗಿತು. ಅಲ್ಲದೆ ಶಾಲೆ ರಕ್ಷಿತಾರಣ್ಯದ ಮಧ್ಯೆ ಇದೆ. ಜನಸಂಖ್ಯೆ ಕಡಿಮೆ. ಸುತ್ತಲಿನ ಪ್ರದೇಶದಲ್ಲಿ ಈ ಶಾಲೆಗೆ ಬರುವಂತಹ ಮಕ್ಕಳಿಲ್ಲ, ಹೀಗಾಗಿ ನಾಲ್ಕು ವರ್ಷದ ಹಿಂದೆ 29 ಇದ್ದ ಮಕ್ಕಳ ಸಂಖ್ಯೆ ಬರಬರುತ್ತಾ 25, 18, 14ಕ್ಕೆ ಇಳಿದು ಈಗ 10 ಕ್ಕೆ ಬಂದು ನಿಂತಿದೆ. ಪಕ್ಕದಲ್ಲಿರುವ ಅಂಗನವಾಡಿಗೆ ಮೂರು ಮಕ್ಕಳು ಮಾತ್ರ ಲಭ್ಯವಾಗಿವೆ.

ಇದೀಗ 5-9-1960ರಲ್ಲಿ ಪ್ರಾರಂಭವಾದ ಶಾಲೆಯ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಮಕ್ಕಳ ಕೊರತೆಯಿಂದಾಗಿ ವಾರ್ಷಿಕೋತ್ಸವ, ಕ್ರೀಡಾಕೂಟಗಳನ್ನು ಮಾಡುವ ಹಾಗಿಲ್ಲ. ಪ್ರವಾಸಕ್ಕೆ ಆರ್ಥಿಕ ಅಡಚಣೆ. ಬೇರೆ ಯಾವುದೇ ಕಾರ್ಯಕ್ರಮಗಳನ್ನು ಮಾಡದೇ ಇರುವಂತಹ ಸ್ಥಿತಿ. ಇನ್ನೊಂದು ಹತ್ತು ಮಕ್ಕಳು ಈ ಶಾಲೆಗೆ ಸೇರ್ಪಡೆಯಾದರೆ ಒಂದಷ್ಟು ಕಳೆ ಬಂದೀತು ಎನ್ನುತ್ತಾರೆ ಇಲ್ಲಿನ ಮುಖ್ಯ ಶಿಕ್ಷಕಿ ಫ್ಲೇವಿಯಾ ಡಿಸೋಜ. ಪ್ರತಿ ಶನಿವಾರ ಇದ್ದ ಮಕ್ಕಳಿಂದ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಎಲ್ಲವನ್ನೂ ಮಕ್ಕಳೇ ನಿರ್ವಹಿಸುವಂತೆ ಮಾಡಿದ್ದಾರೆ ಡಿಸೋಜ ಅವರು. ಸ್ಥಳೀಯರಾದ ಪೂರ್ಣಿಮಾ ಹೆಬ್ಬಾರ ಅವರು ಅತಿಥಿ ಶಿಕ್ಷಕಿಯಾಗಿ ಕಳೆದೆರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳ ಸಂಖ್ಯೆ ಕಡಿಮೆಯಿದ್ದರೂ ಎಲ್ಲಾ ಪಾಠಗಳನ್ನು ಮಾಡಲೇಬೇಕಾದ ಅನಿವಾರ್ಯತೆ ಇವರಿಗಿದೆ. ಹೀಗಾಗಿ ಒಬ್ಬೊಬ್ಬರಿಗೆ 20 ವಿಷಯಗಳಲ್ಲಿ ಪಾಠ ಮಾಡಬೇಕಾಗುವಂತಹ ಸ್ಥಿತಿ ಇದೆ. ಕನಿಷ್ಠ ಮೂರು ಹುದ್ದೆ ಇಲ್ಲಿ ಬೇಕು. ನಲಿಕಲಿಗೆ ಶಿಕ್ಷಕರೇ ಇಲ್ಲ. ಅಂತೂ ಹಲ್ಲಿದ್ದರೆ ಕಡಲೆ ಇಲ್ಲ. ಕಡಲೆ ಇದ್ದರೆ ಹಲ್ಲಿಲ್ಲ ಎನ್ನುವಂತಹ ಸ್ಥಿತಿ ಫಂಡಿಜೆ ಶಾಲೆಯದು.

ಶಾಲೆಯ ಸ್ಥಿತಿಗತಿ ಹೀಗಿದ್ದರೆ, ಇಲ್ಲಿನ ಟೀಚರ್ ಮಾತ್ರ ಬೆಸ್ಟ್ ಟೀಚರ್ ಎಂದೇ ಪ್ರಸಿದ್ದರಾಗಿದ್ದಾರೆ. ಹೀಗಾಗಿ ಇಲ್ಲಿನ ಶಿಕ್ಷಕಿ ಫ್ಲೇವಿಯಾ ಡಿಸೋಜ ಅವರ ಬಗ್ಗೆ ಹೇಳಲೇಬೇಕಾಗುತ್ತದೆ. ಮಕ್ಕಳ ಅತ್ಯಂತ ಪ್ರೀತಿಯ ಟೀಚರ್ ಆಗಿರುವ ಇವರು ಪ್ರತಿಭಾನ್ವಿತ, ಪಾದರಸದಂತೆ ಚುರುಕಾಗಿರುವ, ಸದಾ ಚಟುವಟಿಕೆಯಿಂದಿರುವ ವ್ಯಕ್ತಿತ್ವದವರು. ಇರುವ ಹತ್ತು ಮಕ್ಕಳನ್ನು ತನ್ನ ಮಕ್ಕಳಂತೆ ನೋಡಿಕೊಂಡು ತಿದ್ದಿ ತೀಡುತ್ತಿದ್ದಾರೆ. ಇವರು ಅತ್ಯುತ್ತಮವಾಗಿ ಆಂಗ್ಲ ಭಾಷಾ ಶಿಕ್ಷಣ ನೀಡಬಲ್ಲರು. ಅಭಿನಯ ಗೀತೆಯಲ್ಲಿ ಸಿದ್ದಹಸ್ತರು. ಕಲಿಕಾ ಚೇತರಿಕೆಯಲ್ಲಿ ಎತ್ತಿದ ಕೈ. ಇವರ ಕೊರೋನಾ ಜಾಗೃತಿ ಹಾಡು ಅತ್ಯಂತ ಪ್ರಸಿದ್ದ. ವಿವಿಧ ಶೈಕ್ಷಣಿಕ ವಿಷಯಗಳಿಗೆ ಸಂಬಂಧ ಪಟ್ಟಂತೆ ಸರಿ ಸುಮಾರು 214 ವಿಡಿಯೋಗಳನ್ನು ಯೂ ಟ್ಯೂಬ್‍ಗೆ ಅಪ್‍ಲೋಡ್ ಮಾಡಿದ್ದಾರೆ. (ವಿಡಿಯೋ ನೋಡಿದರೆ ಇವರ ಪ್ರತಿಭೆ ಅರಿತುಕೊಳ್ಳಬಹುದು) ಒಂದನೇ ತರಗತಿಗೆ ಸೇರಿಕೊಂಡ ಮಗು ಏಳನೇ ತರಗತಿಯಿಂದ ಹೊರ ಬರುವಾಗ ಆಂಗ್ಲ ಭಾಷೆಯನ್ನು ಸರಾಗವಾಗಿ ಮಾತನಾಡುವಂತೆ ಮಾಡಬಲ್ಲ ನಿಪುಣತೆ ಇವರಲ್ಲಿದೆ. ಹತ್ತು ಮಕ್ಕಳು ಮಾತ್ರ ಇರುವುದರಿಂದ ವೈಯಕ್ತಿಕ ಗಮನ ಕೊಡಲು ಸಾಧ್ಯವಾಗುತ್ತಿದೆ. ಸಭಾ ಕಂಪನ ಎಂಬುದು ಇಲ್ಲಿನ ಮಕ್ಕಳಿಗೆ ಗೊತ್ತೇ ಇಲ್ಲ.

ಫ್ಲೇವಿಯಾ ಅವರು ಮಡಂತ್ಯಾರಿನ ಖಾಸಗಿ ದೊಡ್ಡ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ನಾಲ್ಕು ವರ್ಷದ ಹಿಂದೆ ಅವರು ಸರಕಾರಿ ಶಿಕ್ಷಕಿಯಾಗಿ ಫಂಡಿಜೆ ಶಾಲೆಗೆ ಆಯ್ಕೆಯಾದರು. ಸಾವಿರಾರು ಮಕ್ಕಳಿದ್ದಂತಹ ಶಾಲೆಯಿಂದ ಬಂದ ಇವರಿಗೆ ಇಲ್ಲಿ ಏನು ಮಾಡಬೇಕು ಎಂಬುದೇ ತೋಚದಂತಾಗಿತ್ತು. ಆದರೆ ಅವರು ತಮ್ಮ ಎಲ್ಲಾ ಪ್ರತಿಭೆಯನ್ನು ಮಕ್ಕಳಿಗೆ ಧಾರೆಯೆರೆದು ಬೆಸ್ಟ್ ಟೀಚರ್ ಎನಿಸಿಕೊಂಡಿದ್ದಾರೆ. ಈಚೆಗೆ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಇಲ್ಲಿನ ಮಕ್ಕಳು 8 ಸ್ಪರ್ಧೆಗಳಲ್ಲಿ 6 ರಲ್ಲಿ ಬಹುಮಾನ ಪಡೆದಿದ್ದಾರೆ. ನಾಲ್ಕು ಮಕ್ಕಳು ತಾಲೂಕು ಮಟ್ಟಕ್ಕೆ ಸ್ಪರ್ಧಿಸಲಿದ್ದಾರೆ. ನಮ್ಮಲ್ಲಿ ನೂರಾರು ಮಕ್ಕಳಿದ್ದರೂ ಒಂದೇ ಒಂದು ಬಹುಮಾನ ಬರದಿರುವಾಗ ಇವರಿಗೆ ಹೇಗೆ ಸಾಧ್ಯವಾಯಿತು ಎಂದು ಅಕ್ಕ ಪಕ್ಕದ ಶಾಲೆಯವರು ಗೊಣಗುತ್ತಿದ್ದಾರೆ.

ಫ್ಲೇವಿಯಾ ಅವರ ಕರ್ತವ್ಯ ನಿಷ್ಠೆಯನ್ನು ಗಮನಿಸಿದ ಪೋಷಕರೊಬ್ಬರು ಕಳೆದ ಬಾರಿ ತಮ್ಮ ಮಗುವನ್ನು ಇಲ್ಲಿಗೆ ಸೇರಿಸಿದ್ದಾರೆ. ಎರಡು ವರ್ಷ ಶಾಲೆಗೆ ಹೋಗಿ ಬಳಪ ಹಿಡಿಯಲು ಬರದ, ಅಕ್ಷರ ಓದಲು ಬರದ, ಸರಿಯಾಗಿ ಊಟವನ್ನೂ ಮಾಡಲು ಬರದ ಓರ್ವನನ್ನು ಇಲ್ಲಿನ ಮೂರನೇ ತರಗತಿಗೆ ಸೇರಿಸಿದ್ದಾರೆ ಆತನ ಪೋಷಕರು. ಇದೀಗ ಆತ ಫ್ಲೇವಿಯಾ ಅವರ ಗರಡಿಯಲ್ಲಿ ಪಳಗುತ್ತಿರುವುದು ಪೋಷಕರಿಗೆ ಅಚ್ಚರಿ ತಂದಿದೆ. ಗ್ರಂಥಾಲಯದಲ್ಲಿ ಅತ್ಯಮೂಲ್ಯ ಸಾವಿರಾರು ಪುಸ್ತಕಗಳಿವೆ. ಮಕ್ಕಳು ದಿನ ಬಿಟ್ಟು ದಿನ ಇಂಗ್ಲೀಷ್, ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿದ್ದಾರೆ.

ಶಾಲೆಯಲ್ಲಿ ಒಳ್ಳೆಯ ಟೀಚರ್ ಇದ್ದಾರೆ. ಆದರೆ ಮಕ್ಕಳು ಇಲ್ಲದಿರುವುದು ಬೇಸರದ ಸಂಗತಿ. ಫ್ಲೇವಿಯಾ ಅವರ ಕರ್ತವ್ಯ ನಿಷ್ಠೆಯನ್ನು ಗಮನಿಸಿ ಸನಿಹದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಫಂಡಿಜೆ ಶಾಲೆಗೆ ಸೇರಿಸಿದರೆ ಉತ್ತಮ ಶಿಕ್ಷಣವನ್ನೂ ಪಡೆಯಬಹುದು, ಶಾಲೆಯನ್ನೂ ಉಳಿಸಬಹುದು.— ಸ್ವಾತಿ, ಫಂಡಿಜೆ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು