News Karnataka Kannada
Monday, April 29 2024
ಅಂಕಣ

ಕೌಟುಂಬಿಕ ಜೀವನಧಾರಿತ ವ್ಯಕ್ತಿಯ ಏಳು-ಬೀಳಿನ ಕಥೆ “ನಿರಾಕರಣ”

Sneha Kannada 04122021
Photo Credit : Wikipedia

“ನಿರಾಕರಣ” ಇದು  ಕೌಟುಂಬಿಕ ಜೀವನ ಮತ್ತು ಪರಿತ್ಯಾಗದ ನಡುವೆ ಸಿಲುಕಿಕೊಂಡ ವ್ಯಕ್ತಿಯ ಏಳು-ಬೀಳಿನ ಸವಾರಿಯನ್ನು ಸೆರೆಹಿಡಿಯುವ ಕಿರು ಪುಸ್ತಕವಾಗಿದೆ. ಡಾ.ಎಸ್.ಎಲ್.ಭೈರಪ್ಪ ನವರು ಒಬ್ಬ ಮನುಷ್ಯನ ಮನಸ್ಸಿನೊಳಗೆ ಹೋಗಿ ಆ ಮನುಷ್ಯನ ಜೀವನದ ಕಥೆಯನ್ನು ಹೇಳುವಂತೆ ಈ ಕಾದಂಬರಿಯನ್ನು ಬರೆದಿದ್ದಾರೆ.

ಕಥೆ ಆರಂಭದಲ್ಲಿ ತುಂಬಾ ಸರಳವಾಗಿದೆ. ಕಾದಂಬರಿಯ ನಾಯಕ “ನರಹರಿ” ವಿದ್ಯಾವಂತ ವ್ಯಕ್ತಿ. ಎರಡು ಬಾರಿ ವಿವಾಹವಾಗಿದ್ದ, ಆದರೆ ಅವನ ಇಬ್ಬರು ಹೆಂಡತಿಯರು ಬಹಳ ಬೇಗನೆ ತೀರಿಕೊಂಡರು. ಆ ಎರಡು ಹೆಂಡತಿಯರಿಗೆ ಒಟ್ಟು ೫ ಮಕ್ಕಳು. ಅವರೊಂದಿಗೆ ನರಹರಿ ತನ್ನ ಜೀವನವನ್ನು ನಡೆಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದ. ಅವನು ಊರಿನ ಪ್ರಮುಖ ಆಂಗ್ಲ ದಿನಪತ್ರಿಕೆಯಲ್ಲಿ ಲಿಪಿಕಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಆದರೆ ತನ್ನ ಕಡಿಮೆ ಸಂಬಳ ಮತ್ತು ಅತಿಯಾದ ಕೆಲಸದಿಂದ ಸಮಯ ಸಿಗದೆ ತನ್ನ ಮಕ್ಕಳನ್ನು ನೋಡಿಕೊಳ್ಳಲು ಪ್ರತಿದಿನ ಹೆಣಗಾಡುತ್ತಿದ್ದನು.

ಆದ್ದರಿಂದ, ಅವನು ತನ್ನ ಮಕ್ಕಳನ್ನು ದತ್ತು ಕೊಡಲು ನಿರ್ಧರಿಸಿ, ಅವನು ಕಾರ್ಯನಿರ್ವಹಿಸುತ್ತಿದ್ದ ದಿನಪತ್ರಿಕೆಯ ಸಂಪಾದಕರ ಸಹಾಯದಿಂದ ತನ್ನ ಪತ್ರಿಕೆಯಲ್ಲಿ ಜಾಹೀರಾತನ್ನು ಪ್ರಕಟಿಸುತ್ತಾನೆ. ಆ ನಿರ್ಧಾರ ಅವನನ್ನು ಒಮ್ಮೊಮ್ಮೆ ತಾನು ತಪ್ಪು ಮಾಡುತ್ತಿದ್ದೇನೋ ಅನ್ನೋ ಪಾಪ ಪ್ರಜ್ಞೆ ಕಾಡುತ್ತಿತ್ತು. ಅವನು ನೀಡಿರುವ ಪ್ರಕಟಣೆಯ ಜಾಹೀರಾತಿನ ೬ ತಿಂಗಳೊಳಗೆ, ದೇಶದ ವಿವಿಧ ನಗರಗಳಿಂದ ವಿವಿಧ ಕುಟುಂಬಗಳು ಅವನನ್ನು ಸಂಪರ್ಕಿಸಿದವು. ೧ ವರ್ಷದೊಳಗೆ ಅವನು ತನ್ನ ಎಲ್ಲಾ ಮಕ್ಕಳನ್ನು ವಿವಿಧ ಕುಟುಂಬಗಳಿಗೆ ದತ್ತು ನೀಡಿದ.

ತನ್ನ ಮಕ್ಕಳನ್ನು ದತ್ತು ನೀಡಿದ ನಂತರ, ಅವನು ತನ್ನ ಕೆಲಸದ ಜೀವನವನ್ನು ತ್ಯಜಿಸಿ, ಸನ್ಯಾಸಿಯಾಗಲು ನಿರ್ಧರಿಸುತ್ತಾನೆ. ಅವನು ತನ್ನ ನಿರ್ಧಾರದ ಬಗ್ಗೆ ತನ್ನ ಸಂಪಾದಕರಿಗೆ ತಿಳಿಸಿ ನಗರವನ್ನು ಶಾಶ್ವತವಾಗಿ ಬಿಡುತ್ತಾನೆ. ಆರಂಭದಲ್ಲಿ ಅವನು ಅನೇಕ ಪವಿತ್ರ ಸ್ಥಳಗಳನ್ನು ಸುತ್ತುತ್ತಾನೆ ಮತ್ತು ಅನೇಕ ಋಷಿಗಳು ಮತ್ತು ಸಂತರನ್ನು ಭೇಟಿಯಾಗುತ್ತಾನೆ.

ತದ ನಂತರ ಧ್ಯಾನವನ್ನು ಕಲಿಯಲು ಪ್ರಾರಂಭಿಸುತ್ತಾನೆ, ಅದೇ ಸಮಯದಲ್ಲಿ ಅವನು ಹಿಮಾಲಯಕ್ಕೆ ಹೋಗಲು ನಿರ್ಧರಿಸುತ್ತಾನೆ. ಅಲ್ಲಿ ಅವನು ಬಟ್ಟೆ ಧರಿಸದ, ಏನೂ ಮಾತನಾಡದ ಮತ್ತು ಒಂದು ದಿನ ಆಲೂಗಡ್ಡೆ ಹೊರತುಪಡಿಸಿ ಏನನ್ನೂ ತಿನ್ನದ ಋಷಿಯನ್ನು ಭೇಟಿಯಾಗುತ್ತಾನೆ.

ಅವರು ಜಗತ್ತನ್ನು ತ್ಯಜಿಸುವ ರೀತಿಯನ್ನು ನೋಡಿ ಆಕರ್ಷಿತನಾಗಿ ಆ ಋಷಿಯ ಹೆಜ್ಜೆಗಳನ್ನು ಅನುಸರಿಸಲು ಪ್ರಯತ್ನಿಸುತ್ತಾನೆ, ಆದರೆ ಆ ಕಠಿಣ ಮಾರ್ಗವನ್ನು ನಿಭಾಯಿಸಲು ಅವನು ವಿಫಲನಾಗಿ ಮುಂದೆ ಆ ರೀತಿಯಲ್ಲಿ ಜೀವನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ನಂತರ ಅವನು ನಗರಕ್ಕೆ ಹಿಂತಿರುಗಲು ನಿರ್ಧರಿಸಿದ. ನಗರಕ್ಕೆ ಬಂದು ಸ್ಥಳೀಯ ಅನಾಥಾಶ್ರಮದಲ್ಲಿ ವಾರ್ಡನ್ ಕೆಲಸವನ್ನು ಮಾಡುತ್ತಾನೆ. ಅಲ್ಲಿ ಅಕೌಂಟಂಟ್ ಹುದ್ದೆಯಲ್ಲಿರುವವನ ಸ್ನೇಹ ಬೆಳೆಸುತ್ತಾನೆ ಮತ್ತು ಅವನೊಂದಿಗೆ ತನ್ನ ಇಡೀ ಜೀವನದಲ್ಲಿ ನಡೆದ ಏಳು-ಬೀಳಿನ ಕಥೆಯನ್ನು ಹಂಚಿಕೊಳ್ಳುತ್ತಾನೆ.

ಕಥೆಯು ಮುಂದುವರೆದಂತೆ, ಅಕೌಂಟಂಟ್ ಸ್ನೇಹಿತ ನರಹರಿಯು ದತ್ತುಕೊಟ್ಟ ಮಕ್ಕಳ ಪರಿಸ್ಥಿತಿಗಳನ್ನು ನೋಡಲು ಹೋಗುವುದಾಗಿ ತಿಳಿಸುತ್ತಾನೆ. ಈ ಅಕೌಂಟಂಟ್ ಹಿಂತಿರುಗಿದ ನಂತರ, ನರಹರಿಯ ೨ ಮಕ್ಕಳು ಸಂತೋಷದ ಜೀವನವನ್ನು ನಡೆಸುತ್ತಿಲ್ಲ ಎಂದು ತಿಳಿದು ಆಶ್ಚರ್ಯಕರವಾಗಿ, ಈ ಲೆಕ್ಕಪರಿಶೋಧಕನು ತನ್ನೊಂದಿಗೆ ಮಗುವನ್ನು ಕರೆತರುತ್ತಾನೆ. ಮತ್ತು ಈ ಮಗು ನರಹರಿಯ ಮಗನೆಂದು ತಿಳಿಸುತ್ತಾನೆ. ದತ್ತು ಪಡೆದ ಮನೆಯಲ್ಲಿ ಮಗುವಿನ ಶೋಚನೀಯ ಜೀವನವನ್ನು ಉಳಿಸಲು ಅವನು ಆ ಮಗುವನ್ನು ತಂದಿದ್ದನು. ಆರಂಭದಲ್ಲಿ, ನರಹರಿಯು ತನ್ನ ಮಗು ತನ್ನ ಬಳಿಗೆ ಹಿಂತಿರುಗುವುದನ್ನು ನೋಡಿ ಸಂತೋಷಪಡಲಿಲ್ಲ. ನಂತರ, ಅವನು ಈ ಹುಡುಗನನ್ನು ಇಷ್ಟಪಡಲು ಪ್ರಾರಂಭಿಸುತ್ತಾನೆ.

ಕಥೆಯು ಕೊನೆಯ ಹಂತಕ್ಕೆ ಬರುತ್ತಿದ್ದಂತೆ, ಚಿಕ್ಕ ಹುಡುಗಿಯೊಬ್ಬಳು ಈ ಅನಾಥಾಶ್ರಮಕ್ಕೆ ಬರುತ್ತಾಳೆ ಮತ್ತು ಅವಳು ನರಹರಿಯನ್ನು ತನ್ನ ತಂದೆ ಎಂದು ಗುರುತಿಸುತ್ತಾಳೆ. ಅವರ ಸುದೀರ್ಘ ಚರ್ಚೆಯ ನಂತರ ಮುಂದಿನದು ಕಾದಂಬರಿಯ ಸಂಪೂರ್ಣ ಚಿತ್ರವನ್ನು ನೀಡುತ್ತದೆ.

ಕಾದಂಬರಿಯಲ್ಲಿ ಇಷ್ಟವಾದದ್ದು ನರಹರಿಯ ಪರಿತ್ಯಾಗದ ಜೀವನದ ವಿವರವಾದ ಪ್ರಸ್ತುತಿ. ಇದು ಕೇವಲ ನರಹರಿಯ ಬಗ್ಗೆ ಅಲ್ಲ, ಈ ಕಥೆಯು ಜೀವನದಲ್ಲಿ ಬರಬಹುದಾದ ಕಷ್ಟದ ಸಮಯಗಳನ್ನು ಮತ್ತು ನಮ್ಮ ಜವಾಬ್ದಾರಿಗಳನ್ನು ತ್ಯಜಿಸುವ ಮತ್ತು ತಳ್ಳಿ ಹಾಕುವ ಬದಲು ಅದನ್ನು ಹೇಗೆ ನಿಭಾಹಿಸ ಬೇಕು ಎಂಬುದನ್ನು ತಿಳಿಸಿ ಕೊಡುವಂತಿದೆ. ಕಷ್ಟಗಳು ಎಲ್ಲವೂ ಜೀವನದ ಭಾಗ. ಅದರಿಂದ ನಿರಾಶೆಗೊಳ್ಳಬಾರದು ಬದಲಿಗೆ, ಪ್ರತಿಯೊಬ್ಬರು ಅದನ್ನು ತನ್ನಶಕ್ತಿಯಿಂದ ಎದುರಿಸಬೇಕು ಮತ್ತು ಪರಿಹಾರವನ್ನು ಹೊರತರಲು ಪ್ರಯತ್ನಿಸಬೇಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4383

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು