News Karnataka Kannada
Saturday, April 13 2024
Cricket
ಸಮುದಾಯ

ಯೋಗ – ಯೋಗ್ಯತೆಯಿಂದ ವ್ಯಕ್ತಿತ್ವ ಉನ್ನತಿ: ರಾಘವೇಶ್ವರ ಶ್ರೀ

Yoga - Personality is uplifted by merit: Raghaveswara Sri
Photo Credit : By Author

ಗೋಕರ್ಣ: ಯೋಗ್ಯತೆ ಸಾಧನೆಯಿಂದ ಬರುವಂಥದ್ದು, ಯೋಗ್ಯತೆ ಸಂಪಾದಿಸಬೇಕಾದರೆ ಸತತ ಪರಿಶ್ರಮ ಬೇಕು. ಕೇವಲ ಯೋಗ್ಯತೆ ಇದ್ದರೆ ಸಾಲದು, ಇದರ ಜತೆಗೆ ಯೋಗ ಕೂಡಿ ಬರಲು ಕಾಲವನ್ನು ಕಾಯಬೇಕು. ಆ ತಾಳ್ಮೆ, ಸಂಯಯ, ವಿವೇಕ, ವ್ಯಕ್ತಿಯನ್ನು ಉನ್ನತಿಗೆ ಏರಿಸುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ಅಶೋಕೆಯ ವಿವಿವಿ ಆವರಣದಲ್ಲಿ ಕೈಗೊಂಡಿರುವ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಶನಿವಾರ ಶ್ರೀಸಂದೇಶ ನೀಡಿದ ಸ್ವಾಮೀಜಿ, “ಯೋಗ- ಯೋಗ್ಯತೆ ಎರಡೂ ಭಿನ್ನ. ಯೋಗ್ಯತೆ ಇಲ್ಲದೆ ಲಭಿಸುವ ಯೋಗ ವಿನಾಶಕ್ಕೆ ಕಾರಣವಾದೀತು. ಯೋಗ್ಯತೆಯ ಅರಿವು ಇರುವವರು ಜೀವನದಲ್ಲಿ ಎಂದಿಗೂ ಎಡವಿ ಬೀಳುವುದಿಲ್ಲ. ಪ್ರತಿಯೊಬ್ಬರ ಯೋಗ್ಯತೆಯೂ ಬೇರೆ ಬೇರೆ ಕ್ಷೇತ್ರದಲ್ಲಿ ಇರುತ್ತದೆ. ಅವರವರ ಯೋಗ್ಯತೆಯನ್ನು ಅವರೇ ಗುರುತಿಸಿಕೊಳ್ಳುವ ವಿವೇಕ ಇರಬೇಕು” ಎಂದು ವಿಶ್ಲೇಷಿಸಿದರು.

ಯೋಗ್ಯತೆ ಇಲ್ಲದೇ ಒತ್ತಾಯಪೂರ್ವಕವಾಗಿ ಪಡೆಯುವ ಪ್ರಯತ್ನ ಮಾಡಿದರೆ ವಿನಾಶಕ್ಕೆ ದಾರಿಯಾಗುತ್ತದೆ ಎನ್ನುವುದಕ್ಕೆ ರಾವಣನೇ ನಿದರ್ಶನ. ನಮ್ಮದಲ್ಲ, ಬೇಡ, ಸಾಕು ಎನ್ನುವ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ. ಈ ಪಾಠ ರಾಮಾಯಣದಲ್ಲಿ ಹೆಜ್ಜೆ ಹೆಜ್ಜೆಗೂ ಸಿಗುತ್ತದೆ ಎಂದು ಹೇಳಿದರು.

ತ್ರೇತಾಯುಗದ ದೃಷ್ಟಾಂತವೊಂದರ ಮೂಲಕ ಯೋಗ- ಯೋಗ್ಯತೆಯ ಮಹತ್ವವನ್ನು ಬಣ್ಣಿಸಿದ ಸ್ವಾಮೀಜಿ, “ದಶರಥ ಸಂತಾನ ಪ್ರಾಪ್ತಿಗಾಗಿ ಅಶ್ವಮೇಧ ಯಾಗ ಕೈಗೊಂಡು ಹೋತೃ, ಅಧ್ವರ್ಯ, ಉದ್ಘಾತ ಮತ್ತು ಬ್ರಹ್ಮನಿಗೆ ನಾಲ್ಕೂ ದಿಕ್ಕುಗಳನ್ನು ದಕ್ಷಿಣೆಯಾಗಿ ನೀಡುತ್ತಾನೆ. ಆದರೆ ರಾಜ ನೀಡಿದ ದಾನವನ್ನು ನಯವಾಗಿ ತಿರಸ್ಕರಿಸಿದ ಮುನಿಗಳು ನಮ್ಮ ಯೋಗ್ಯತೆ ಇರುವುದು ತಪಃಶಕ್ತಿ, ಅಧ್ಯಾಪನ, ಯಜ್ಞ ಯಾಗಾದಿಗಳಲ್ಲೇ ಹೊರತು ರಾಜ್ಯಭಾರದಲ್ಲಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಈ ರಾಜ್ಯವನ್ನು ನೀನೇ ಇಟ್ಟುಕೊಂಡು ನಮ್ಮ ಆಶ್ರಮ, ಗುರುಕುಲಕ್ಕಾಗಿ ಕಿಂಚಿತ್ ಮೌಲ್ಯ ನೀಡುವಂತೆ ಕೋರುತ್ತಾರೆ” ಎಂದು ವಿವರಿಸಿದರು.

“ದಶರಥ ಅವರಿಗೆ 10 ಕೋಟಿ ಚಿನ್ನದ ನಾಣ್ಯ, 40 ಕೋಟಿ ಬೆಳ್ಳಿ ನಾಣ್ಯ, 10 ಲಕ್ಷ ಗೋವುಗಳನ್ನು ನೀಡಿದಾಗ ಅವರೆಲ್ಲರೂ ದೇವರ್ಷಿ ವಸಿಷ್ಠರ ಬಳಿ ನೀಡುತ್ತಾರೆ. ಯಾರಿಗೆ ನ್ಯಾಯಬದ್ಧವಾಗಿ ಏನು ಸಲ್ಲಬೇಕೋ ಅದನ್ನು ವಸಿಷ್ಠರು ಹಂಚುತ್ತಾರೆ. ರಾಜ ಇಡೀ ರಾಜ್ಯವನ್ನೇ ದಾನವಾಗಿ ನೀಡಿದರೂ, ತಮಗೆ ಬೇಕಾದ್ದಷ್ಟನ್ನೇ ಸ್ವೀಕರಿಸುವ ಉದಾತ್ತ ಮನೋಭಾವವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಎಲ್ಲವನ್ನೂ ದಾನ ಮಾಡಿದ ದಶರಥನ ಬರಿಗೈ ಕೂಡಾ ಶೋಭಾಯಮಾನವಾಗಿತ್ತು. ದಾನದಿಂದ ಹಸ್ತಕ್ಕೆ ಶೋಭೆಯೇ ಹೊರತು ಬಂಗಾರದ ಆಭರಣಗಳಿಂದ ಅಲ್ಲ. ಇದುವೇ ರಾಮಾಯಣ ನಮಗೆ ಕಲಿಸುವ ಪಾಠ ಎಂದು ಅಭಿಪ್ರಾಯಪಟ್ಟರು.

ಚಾತುರ್ಮಾಸ್ಯ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೆರವೇರಿಸಲಾಗುತ್ತಿದ್ದು, ಪಿಯುಸಿ ಪರೀಕ್ಷೆ ಮತ್ತು ಬಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ದಕ್ಷಿಣ ಕನ್ನಡ ಜಿಲ್ಲೆ ಕಬಕದ ಕ್ಷಿತಿ ಕಶ್ಯಪ್ ಹಾಗೂ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಎಚ್.ವಿ.ವಿಶಾಲ್ ಅವರನ್ನು ಶ್ರೀಗಳು ಪುರಸ್ಕರಿಸಿದರು.

ಮಂಗಳೂರಿನ ಖ್ಯಾತ ವೈದ್ಯ ಡಾ.ವೇಣುಗೋಪಾಲ ಡಿ ದಂಪತಿ ಇದೇ ಸಂದರ್ಭದಲ್ಲಿ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಒಂದು ಲಕ್ಷ ರೂಪಾಯಿಗಳ ದೇಣಿಗೆ ಸಮರ್ಪಿಸಿದರು. ಯಲ್ಲಾಪುರ ಸಂಕಲ್ಪ ಟ್ರಸ್ಟ್‍ನ ಪ್ರಮೋದ್ ಹೆಗಡೆ, ಭಾರತ ಪರಿಕ್ರಮ ಪಾದಯಾತ್ರೆ ನಡೆಸಿದ ಸೀತಾರಾಮ ಕೆದಿಲಾಯ ಅವರು ಈ ಸಂದರ್ಭದಲ್ಲಿ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಶ್ರೀಮಠದ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ್ ಮತ್ತಿತರರು ಉಪಸ್ಥಿತರಿದ್ದರು. ಸುಬ್ರಾಯ ಅಗ್ನಿಹೋತ್ರಿಗಳು ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು