ಮೈಸೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ.8ರಂದು ಬೆಳಗ್ಗೆ 11ಕ್ಕೆ ಸುಯೋಗ್ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸುಯೋಗ್ ವುಮೆನ್ಸ್ ಹೆಲ್ತ್ ಕ್ಲಬ್ ಉದ್ಘಾಟನೆ ನಡೆಯಲಿದೆ ಎಂದು ಪದಾಧಿಕಾರಿಗಳಲ್ಲೊಬ್ಬರಾದ ಪದ್ಮಾ ಮಹದೇವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್ ಕ್ಲಬ್ ಹಾಗೂ ವರ್ಷವಿಡೀ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕಿ ಡಾ.ದಾಕ್ಷಾಯಿಣಿ ಅಧ್ಯಕ್ಷತೆ ವಹಿಸುವರು. ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹಿಳಾ ವೈದ್ಯರುಗಳು, ಶುಶ್ರೂಷಕಿಯರು ಹಾಗೂ ಆರೋಗ್ಯ ಸ್ವಚ್ಛತಾ ಕಾರ್ಯ ನಿರ್ವಾಹಕರನ್ನು ಸುಯೋಗ್ ಆಸ್ಪತ್ರೆಯ ನಿರ್ದೇಶಕಿ ಸುಧಾ ಯೋಗಣ್ಣ ಸನ್ಮಾನಿಸಲಿದ್ದಾರೆ ಎಂದು ತಿಳಿಸಿದರು.
ಆಸಕ್ತ ಸ್ತ್ರೀಯರೆಲ್ಲರನ್ನೂ ಉಚಿತವಾಗಿ ಕ್ಲಬ್ನ ಸದಸ್ಯರನ್ನಾಗಿಸುವುದು, ಸ್ತ್ರೀಯರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಪ್ರತಿ ತಿಂಗಳು ಆಯೋಜಿಸುವುದು, ಪ್ರತಿ ತಿಂಗಳು ಎಲ್ಲ ಸದಸ್ಯರ ಸಭೆ ಕರೆದು ಅವರ ಆರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರೊಂದಿಗೆ ಸಮಾಲೋಚಿಸಿ ಉಚಿತ ಸಲಹೆ ನೀಡುವುದು, ಸ್ತ್ರೀಯರಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದು, ಗರ್ಭಕೋಶದ ಸರ್ವಿಕ್ಸ್ ಕ್ಯಾನ್ಸರ್ ತಡೆಗಟ್ಟಲು ಮಹಿಳೆಯರೆಲ್ಲರಿಗೂ ಲಸಿಕೆ ಹಾಕಿಸುವುದು, ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಅಧಿಕ ರಕ್ತದೊತ್ತಡ, ಹೃದಯದ ಕಾಯಿಲೆಗಳು, ಸಕ್ಕರೆಕಾಯಿಲೆ, ಗರ್ಭಿಣಿಯರ ಸಮಸ್ಯೆಗಳು, ಸಂತಾನಾಂಗದ ಕಾಯಿಲೆಗಳು ಇತ್ಯಾದಿ ಸ್ತ್ರೀ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತಚಿಕಿತ್ಸೆ ನೀಡುವುದು, ಸ್ತ್ರೀಯರಲ್ಲಿ ಆರೋಗ್ಯದ ಅರಿವನ್ನು ಮೂಡಿಸುವುದು ಈ ಕ್ಲಬ್ನ ಉದ್ದೇಶವಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಡಾ.ಸೀಮಾ ಯೋಗಣ್ಣ, ಡಾ.ಮಂಜುನಾಥ್, ಪನ್ನಗ ವಿಜಯಕುಮಾರ್, ರಾಜರಾಜೇಶ್ವರಿ ಹಾಜರಿದ್ದರು.