News Karnataka Kannada
Saturday, April 27 2024
ಆರೋಗ್ಯ

ಮೂತ್ರಪಿಂಡಕ್ಕೆ ಹಾನಿ ಮಾಡಬಲ್ಲ ಅಭ್ಯಾಸಗಳು ಯಾವುವು? ಇಲ್ಲಿದೆ ಪರಿಹಾರ

ಮೂತ್ರಪಿಂಡ(ಕಿಡ್ನಿ) ಮತ್ತು ಅದರಿಂದ ನಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಲಭಿಸುವ ಕೊಡುಗೆಯ ಪ್ರಾಮುಖ್ಯತೆ ನೆನಪಿಸಿಕೊಳ್ಳಲು ವಿಶ್ವ ಮೂತ್ರಪಿಂಡ ದಿನ ಸೂಕ್ತ ಸಂದರ್ಭವಾಗಿದೆ. ತ್ಯಾಜ್ಯ ಮತ್ತು ವಿಷಕಾರಿ ವಸ್ತುಗಳನ್ನು ತೆಗೆದುಹಾಕಿ ರಕ್ತ ಸ್ವಚ್ಛಗೊಳಿಸುವ, ರಕ್ತದೊತ್ತಡವನ್ನು ನಿಯಂತ್ರಿಸುವ, ಹಾರ್ಮೋನ್‌ಗಳನ್ನು ಉತ್ಪಾದಿಸುವ, ಎಲೆಕ್ಟೊçಲೈಟ್ ಸಮತೋಲನವನ್ನು ಉಳಿಸುವ ನೈಸರ್ಗಿಕ ಫಿಲ್ಟರ್(ಶೋಧಕ)ಗಳಾಗಿ ಮೂತ್ರಪಿಂಡಗಳು ಸೇವೆ ಸಲ್ಲಿಸುತ್ತವೆ.
Photo Credit : News Kannada

ಮಂಗಳೂರು:  ಮೂತ್ರಪಿಂಡ(ಕಿಡ್ನಿ) ಮತ್ತು ಅದರಿಂದ ನಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಲಭಿಸುವ ಕೊಡುಗೆಯ ಪ್ರಾಮುಖ್ಯತೆ ನೆನಪಿಸಿಕೊಳ್ಳಲು ವಿಶ್ವ ಮೂತ್ರಪಿಂಡ ದಿನ ಸೂಕ್ತ ಸಂದರ್ಭವಾಗಿದೆ. ತ್ಯಾಜ್ಯ ಮತ್ತು ವಿಷಕಾರಿ ವಸ್ತುಗಳನ್ನು ತೆಗೆದುಹಾಕಿ ರಕ್ತ ಸ್ವಚ್ಛಗೊಳಿಸುವ, ರಕ್ತದೊತ್ತಡವನ್ನು ನಿಯಂತ್ರಿಸುವ, ಹಾರ್ಮೋನ್‌ಗಳನ್ನು ಉತ್ಪಾದಿಸುವ, ಎಲೆಕ್ಟ್ರೋಲೈಟ್ ಸಮತೋಲನವನ್ನು ಉಳಿಸುವ ನೈಸರ್ಗಿಕ ಫಿಲ್ಟರ್(ಶೋಧಕ)ಗಳಾಗಿ ಮೂತ್ರಪಿಂಡಗಳು ಸೇವೆ ಸಲ್ಲಿಸುತ್ತವೆ. ದುರದೃಷ್ಟವಶಾತ್ ಮೂತ್ರಪಿಂಡದ ರೋಗ ಆರಂಭ ಹಂತಗಳಲ್ಲಿ ಗಮನಕ್ಕೆ ಬರದೇ ಉಳಿದುಬಿಡಬಹುದಲ್ಲದೇ, ಗಮನಾರ್ಹ ಹಾನಿ ಉಂಟಾದ ನಂತರ ಮಾತ್ರ ಬೆಳಕಿಗೆ ಬರುತ್ತದೆ.

ಮೂತ್ರಪಿಂಡದ ಆರೋಗ್ಯವನ್ನು ಅರ್ಥಮಾಡಿಕೊಳ್ಳುವುದು:

ಮೂತ್ರಪಿಂಡಗಳನ್ನು ಸಂರಕ್ಷಿಸುವಲ್ಲಿ ಜಾಗೃತಿ ಮತ್ತು ರೋಗವನ್ನು ತಡೆಯುವ ಮುಂಜಾಗ್ರತೆಯ ಕ್ರಮಗಳು ಮುಖ್ಯವಾಗಿರುತ್ತವೆ. ಈ ಪ್ರಮುಖ ಅಂಗಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಹ ಅಭ್ಯಾಸಗಳು ಮತ್ತು ಜೀವನಶೈಲಿಯ ಆಯ್ಕೆಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಅವುಗಳನ್ನು ಸರಿಪಡಿಸಿಕೊಂಡು ಮುಂದಾಗುವ ಹಾನಿಯನ್ನು ತಡೆಯಲು ಸಹಾಯವಾಗುತ್ತದೆ.

ನಿಮ್ಮ ರಕ್ತದೊತ್ತಡ, ಸಕ್ಕರೆಯ ಮಟ್ಟಗಳು, ಹೃದಯದ ಸಮಸ್ಯೆಗಳನ್ನು ಕುರಿತು ಎಚ್ಚರಿಕೆಯಿಂದ ಆರೈಕೆ ಮಾಡಿಕೊಳ್ಳುವತ್ತ ಗಮನಹರಿಸುವುದು ಮೂತ್ರಪಿಂಡದ ಕಾರ್ಯವನ್ನು ಮತ್ತಷ್ಟು ಹದಗೆಡಿಸುವಂತಹ ಔಷಧಗಳು ಅಥವಾ ವೈದ್ಯಕೀಯ ಹಸ್ತಕ್ಷೇಪಗಳನ್ನು ತಪ್ಪಿಸುವುದು ಅಗತ್ಯವಿರುತ್ತದೆ ಅಲ್ಲದೆ, ಸಮಯಕ್ಕೆ ಸರಿಯಾಗಿ ನಿಮ್ಮ ಮೂತ್ರಪಿಂಡ ರೋಗತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು.

ಮೂತ್ರಪಿಂಡಗಳಿಗೆ ಹಾನಿವುಂಟು ಮಾಡಬಹುದಾದ ಸಾಮಾನ್ಯ ಅಭ್ಯಾಸಗಳು:

ಕಡಿಮೆ ನೀರು ಸೇವನೆ : ದೇಹಕ್ಕೆ ಬೇಕಾದಷ್ಟು ನೀರನ್ನು ಕುಡಿಯದೆ ಇರುವುದರಿಂದ ಮೂತ್ರಪಿಂಡಗಳಲ್ಲಿ ಕಲ್ಲು ಕಾಣಿಸಿಕೊಳ್ಳಲು ದಾರಿಯಾಗಬಹುದು. ಇದು ಸಾಮಾನ್ಯ ಮೂತ್ರಪಿಂಡ ಕಾರ್ಯದ ಮೇಲೆ ಪರಿಣಾಮ ಉಂಟುಮಾಡಬಹುದು.

ಅನಾರೋಗ್ಯಕರ ಆಹಾರಕ್ರಮ : ಉಪ್ಪು, ಸಕ್ಕರೆ, ಸಂಸ್ಕರಿತ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು ಮತ್ತು ಉನ್ನತ ಪ್ರೋಟೀನ್ ಹೊಂದಿರುವ ಆಹಾರಕ್ರಮದ ಅಭ್ಯಾಸವು ಮೂತ್ರಪಿಂಡದ ಮೇಲೆ ಒತ್ತಡ ಹೇರಬಹುದಲ್ಲದೆ, ಮೂತ್ರಪಿಂಡ ರೋಗ ಕಾಣಿಸಿಕೊಳ್ಳುವಲ್ಲಿ ಕೊಡುಗೆ ನೀಡುತ್ತದೆ.

ಧೂಮಪಾನ ಮತ್ತು ಮದ್ಯಪಾನ: ತಂಬಾಕು ಬಳಕೆ ಮತ್ತು ಅತಿಯಾದ ಮದ್ಯ ಸೇವನೆಗಳು ಮೂತ್ರಪಿಂಡ ರೋಗದ ಅಪಾಯವನ್ನು ಹೆಚ್ಚಿಸಬಹುದು. ಜೊತೆಗೆ ಪ್ರಸ್ತುತ ಇರುವ ಮೂತ್ರಪಿಂಡದ ಸ್ಥಿತಿಯನ್ನು ಹದಗೆಡಿಸಬಹುದು.

ಆಲಸಿ ಜೀವನಶೈಲಿ : ದೈಹಿಕ ಚಟುವಟಿಕೆಯ ಕೊರತೆಯು ಬೊಜ್ಜು ಮೈ ಮತ್ತು ಹೆಚ್ಚಿನ ರಕ್ತದೊತ್ತಡಗಳಿಗೆ ಕೊಡುಗೆ ನೀಡಬಹುದಲ್ಲದೆ, ಇವೆರಡೂ ಕಾರಣಗಳು ಮೂತ್ರಪಿಂಡದ ರೋಗಕ್ಕೆ ಪ್ರಮುಖ ಅಪಾಯದ ಅಂಶಗಳಾಗಿರುತ್ತವೆ.

ವೈದ್ಯಕೀಯ ಸ್ಥಿತಿಗಳನ್ನು ನಿರ್ಲಕ್ಷಿಸುವುದು : ದೀರ್ಘಕಾಲದ ತೊಂದರೆಗಳಾದ ಮಧುಮೇಹ ಮತ್ತು ಅತಿಯಾದ ರಕ್ತದೊತ್ತಡದಂತಹ ಸ್ಥಿತಿಗಳನ್ನು ನಿಯಂತ್ರಣದಲ್ಲಿಡದಿದ್ದಲ್ಲಿ ಕಾಲಕ್ರಮೇಣ ಮೂತ್ರಪಿಂಡಗಳಿಗೆ ತೀವ್ರ ಪ್ರಮಾಣದ ಹಾನಿ ಉಂಟುಮಾಡಬಹುದು.

ಔಷಧಗಳು : ಪದೆಪದೇ ವೈದ್ಯರ ಸಲಹೆಯಿಲ್ಲದೆ, ನೋವಿನ ಮಾತ್ರೆಗಳನ್ನು ನುಂಗುವುದು ಮೂತ್ರಪಿಂಡಗಳ ಹಾನಿ ಉಂಟಾಗುವಲ್ಲಿ ಸಾಮಾನ್ಯ ಕಾರಣವಾಗಿದೆ. ಮೂತ್ರಪಿಂಡ ರೋಗಕ್ಕೆ ತುತ್ತಾಗುವ ಸಾಧ್ಯತೆ ಇರುವ/ಈಗಾಗಲೇ ಮೂತ್ರಪಿಂಡ ರೋಗ ಹೊಂದಿರುವ ಜನರಲ್ಲಿ ಕೆಲವು ನಿರ್ದಿಷ್ಟ ಆ್ಯಂಟಿಬಯಾಟಿಕ್‌ಗಳೂ ಮತ್ತು ಇತರೆ ಔಷಧಗಳನ್ನು ತೆಗೆದುಕೊಳ್ಳುವಲ್ಲಿ ಎಚ್ಚರಿಕೆ ವಹಿಸಬೇಕು. ಯಾರೇ ಆಗಲಿ ನಿಮ್ಮ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಯಾವುದೇ ಔಷಧಗಳ ಸೇವನೆ ಆರಂಭಿಸುವ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಮೂತ್ರಪಿಂಡದ ಆರೋಗ್ಯಕ್ಕಾಗಿ ಕೆಲವು ಕ್ರಮಗಳು :

ಸಾಕಷ್ಟು ನೀರು ಸೇವಿಸಿ : ಮೂತ್ರಪಿಂಡದ ಕಾರ್ಯವನ್ನು ಬೆಂಬಲಿಸಲು ದಿನದುದ್ದಕ್ಕೂ ಸಾಕಷ್ಟು ಸೂಕ್ತ ಪ್ರಮಾಣದ ನೀರು ಸೇವಿಸಿ. ಇದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಕಾಣಿಸಿಕೊಳ್ಳುವುದನ್ನು ತಡೆಯಬಹುದು.

ಸಮತೋಲಿತ ಆಹಾರಕ್ರಮ ಉಳಿಸಿಕೊಳ್ಳಿ : ಹಣ್ಣುಗಳು, ತರಕಾರಿಗಳು, ಸಂಪೂರ್ಣ ಧಾನ್ಯಗಳು ಮತ್ತು ಕಡಿಮೆ ಪ್ರಮಾಣದ ಪ್ರೊಟೀನ್ ಇರುವ ಪದಾರ್ಥಗಳಿಂದ ಸಮೃದ್ಧವಾದ ಆಹಾರಕ್ರಮ ಅಭ್ಯಾಸ ಮಾಡಿಕೊಳ್ಳಿರಿ. ಉಪ್ಪು, ಸಕ್ಕರೆ ಮತ್ತು ಸಂಸ್ಕರಿತ ಆಹಾರ ಪದಾರ್ಥಗಳ ಸೇವನೆ ಮಿತಿಗೊಳಿಸಿ.

ನಿಗದಿತ ವ್ಯಾಯಾಮ : ಒಟ್ಟಾರೆ ಆರೋಗ್ಯವನ್ನು ಪ್ರೋತ್ಸಾಹಿಸುವುದಕ್ಕಾಗಿ ನಿಗದಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿರಿ. ಆರೋಗ್ಯಯುತ ತೂಕವನ್ನು ಉಳಿಸಿಕೊಳ್ಳಿ. ಇದರಿಂದ ಮೂತ್ರಪಿಂಡದ ರೋಗದ ಅಪಾಯವನ್ನು ಕಡಿಮೆ ಮಾಡಿಕೊಳ್ಳಿ.

ಧೂಮಪಾನ ತಪ್ಪಿಸಿ ಮತ್ತು ಮದ್ಯಪಾನ ಮಿತಿಗೊಳಿಸಿ : ಧೂಮಪಾನವನ್ನು ಬಿಟ್ಟುಬಿಡಿ ಮತ್ತು ಹಿತಮಿತವಾಗಿ ಮದ್ಯ ಸೇವಿಸಿ. ಇದರಿಂದ ಮೂತ್ರಪಿಂಡದ ಹಾನಿಯ ಅಪಾಯ ಕಡಿಮೆಯಾಗುವುದಲ್ಲದೆ, ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.

ದೀರ್ಘಕಾಲೀನ ವೈದ್ಯಕೀಯ ಸ್ಥಿತಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ : ವೈದ್ಯರು ಸೂಚಿಸಿರುವಂತೆ ಔಷಧಗಳನ್ನು ಸೇವಿಸಿ. ರಕ್ತದಲ್ಲಿನ ಸಕ್ಕರೆಯ ಮಟ್ಟ ಮತ್ತು ರಕ್ತದೊತ್ತಡದ ಮಟ್ಟಗಳನ್ನು ನಿಗದಿತವಾಗಿ ಪರೀಕ್ಷಿಸಿಕೊಳ್ಳಿ. ದೀರ್ಘಕಾಲದ ರೋಗಗಳನ್ನು ಪರಿಣಾಮಕಾರಿ ರೀತಿಯಲ್ಲಿ ನಿರ್ವಹಿಸಲು ಮೂತ್ರಪಿಂಡ ರೋಗತಜ್ಞರ ಶಿಫಾರಸ್ಸುಗಳನ್ನು ಅನುಸರಿಸಿ.

ಅಂತಿಮ ತೀರ್ಮಾನಗಳು

ನಿಮ್ಮ ಮೂತ್ರಪಿಂಡಗಳ ಸಂರಕ್ಷಣೆಗಾಗಿ ಈ ಬಾರಿಯ ವಿಶ್ವ ಮೂತ್ರಪಿಂಡ ದಿನದಂದು ರೋಗವನ್ನು ತಡೆಯುವುದು ಮತ್ತು ಪೂರ್ವಭಾವಿ ವೈದ್ಯಕೀಯ ಹಸ್ತಕ್ಷೇಪಗಳನ್ನು ಕೈಗೊಳ್ಳುವುದು ನಮ್ಮ ಮಂತ್ರವಾಗಿರಲಿ. ಮುಖ್ಯವಾಗಿ ಮಾಹಿತಿ ಇಲ್ಲದವರು/ಸೌಲಭ್ಯವಂಚಿತರು ಸೇರಿದಂತೆ ಎಲ್ಲರಲ್ಲಿ ಈ ರೋಗ ಕುರಿತ ಜಾಗೃತಿಯನ್ನು ಹರಡುವ ನಿರ್ಧಾರವನ್ನು ನಾವು ಕೈಗೊಳ್ಳೋಣ.

ಇದರೊಂದಿಗೆ ನಾವು ಎಲ್ಲರಿಗೂ ಮೂತ್ರಪಿಂಡ ಆರೋಗ್ಯ-ಸಮಾನ ರೀತಿಯಲ್ಲಿ ವೈದ್ಯಕೀಯ ಆರೈಕೆ ನೀಡುವುದು ಮತ್ತು ಸೂಕ್ತ ವೈದ್ಯಕೀಯ ಅಭ್ಯಾಸಗಳನ್ನು ಕೈಗೊಳ್ಳುವುದು ಎಂಬ ವಿಷಯವನ್ನು ಸಾಧಿಸಬಹುದು.

 

-ಡಾ. ಮಯೂರ್ ಪ್ರಭು, ಹಿರಿಯ ಮೂತ್ರಪಿಂಡಶಾಸ್ತ್ರಜ್ಞ ಸಲಹಾ ತಜ್ಞರು, ಕೆಎಂಸಿ ಆಸ್ಪತ್ರೆ, ಮಂಗಳೂರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು