News Karnataka Kannada
Wednesday, May 01 2024
ಆರೋಗ್ಯ

ಮೂತ್ರಾಂಗ ರೋಗದತ್ತ ಎಚ್ಚರಿಕೆ ಇರಲಿ: ನಿರ್ಲಕ್ಷ್ಯದಿಂದ ಕಾಯಿಲೆಗಳು ಉಲ್ಬಣ

ಈಗೀಗ ಮೂತ್ರಾಂಗದ ಅರ್ಥಾತ್ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಾರಣ ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದು, ಸಮರ್ಪಕವಾಗಿ ನೀರನ್ನು ಸೇವಿಸದಿರುವುದು, ದುಶ್ಚಟಗಳು ಕಾಯಿಲೆಗೆ ಆಹ್ವಾನ ನೀಡುತ್ತಿವೆ. ಮನುಷ್ಯನ ದೇಹದ ಪ್ರತಿ ಅಂಗವೂ ಮುಖ್ಯವೇ ಹೀಗಾಗಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಬಹಳಷ್ಟು ಸಾರಿ ನಿರ್ಲಕ್ಷ್ಯದಿಂದಲೇ ಕಾಯಿಲೆಗಳು ಉಲ್ಭಣಗೊಳ್ಳುತ್ತವೆ. ಇದಕ್ಕೆ ನಾವೇ ಕಾರಣರಾಗುತ್ತಿದ್ದೇವೆ.
Photo Credit : Pixabay

ಈಗೀಗ ಮೂತ್ರಾಂಗದ ಅರ್ಥಾತ್ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಾರಣ ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದು, ಸಮರ್ಪಕವಾಗಿ ನೀರನ್ನು ಸೇವಿಸದಿರುವುದು, ದುಶ್ಚಟಗಳು ಕಾಯಿಲೆಗೆ ಆಹ್ವಾನ ನೀಡುತ್ತಿವೆ. ಮನುಷ್ಯನ ದೇಹದ ಪ್ರತಿ ಅಂಗವೂ ಮುಖ್ಯವೇ ಹೀಗಾಗಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಬಹಳಷ್ಟು ಸಾರಿ ನಿರ್ಲಕ್ಷ್ಯದಿಂದಲೇ ಕಾಯಿಲೆಗಳು ಉಲ್ಬಣಗೊಳ್ಳುತ್ತವೆ. ಇದಕ್ಕೆ ನಾವೇ ಕಾರಣರಾಗುತ್ತಿದ್ದೇವೆ.

ಮೂತ್ರಾಂಗದ ಕಾಯಿಲೆ ಹಲವರನ್ನು ಕಾಡುತ್ತಿದೆ. ಅದು ಏನು ಎಂಬುದು ಗೊತ್ತಾಗುವ ವೇಳೆಗೆ ಕಾಯಿಲೆ ಉಲ್ಭಣಗೊಂಡು ಸಮಸ್ಯೆ ಎದುರಿಸುವಂತಾಗುತ್ತಿದೆ. ಹೀಗಾಗಿ ಚಿಕ್ಕಪುಟ್ಟ ಸಮಸ್ಯೆಗಳು ಕಂಡು ಬಂದಾಗಲೇ ತಜ್ಞ ವೈದ್ಯರಿಗೆ ತೋರಿಸಿ ಅದಕ್ಕೆ ತಕ್ಕಂತೆ ಔಷಧೋಪಚಾರಗಳನ್ನು ಮಾಡಿದರೆ ಆರೋಗ್ಯವಂತ ಜೀವನಕ್ಕೆ ದಾರಿಯಾಗುತ್ತದೆ.

ಇನ್ನು ಮೂತ್ರಾಂಗದ ರೋಗದ ಬಗ್ಗೆ ಹೇಳಬೇಕೆಂದರೆ, ಕಾಲು ಮತ್ತಿತರ ಶರೀರದ ಭಾಗಗಳು ಊದಿಕೊಳ್ಳುವುದು, ವಿಪರೀತ ರಕ್ತದೊತ್ತಡ, ರಕ್ತಹೀನತೆಯಿಂದ ಬಿಳಿಚಿಕೊಳ್ಳುವುದು, ದುರ್ಬಲತೆ, ಕಡಿಮೆ ಅಥವಾ ಸಾಮಾನ್ಯ ಪ್ರಮಾಣದ ಮೂತ್ರ, ವಾಕರಿಕೆ, ಒಣಗಿದ ನವೆಯಾದ ಚರ್ಮ, ಹಸಿವಿಲ್ಲದಿರುವಿಕೆ, ಪಾದಗಳಲ್ಲಿ ಹೆಚ್ಚು ಬಿರುಕು, ಮುಖದಲ್ಲಿ ಅದರಲ್ಲೂ ಕಣ್ಣುರೆಪ್ಪೆಯ ಕೆಳಭಾಗದಲ್ಲಿ ಊದಿಕೊಳ್ಳುವುದು ರೋಗದ ಲಕ್ಷಣವಾಗಿವೆ

ಒಂದು ವೇಳೆ ಇಂತಹ ಲಕ್ಷಣಗಳು ಮನುಷ್ಯನಲ್ಲಿ ಕಂಡು ಬಂದರೆ ಆತ ಮೂತ್ರಾಂಗದ ಸಮಸ್ಯೆಯಿಂದ ಬಳಲುತ್ತಿದ್ದಾನೆ  ಎಂಬುದನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಬೆನ್ನುಹುರಿಯ ಅಕ್ಕಪಕ್ಕದಲ್ಲಿ ಎರಡು ಹುರುಳಿಕಾಳಿನಾಕಾರದ ಮುಷ್ಠಿಗಾತ್ರದ ಮೂತ್ರಪಿಂಡಗಳಿರುತ್ತವೆ ಈ ಮೂತ್ರಪಿಂಡಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಮಾತ್ರ ಮನುಷ್ಯ ಆರೋಗ್ಯವಂತನಾಗಿ ಬದುಕಲು ಸಾಧ್ಯವಾಗುತ್ತದೆ.

ನಮ್ಮ ಶರೀರಕ್ಕೆ ಆಹಾರದ ಮೂಲಕ ಬಂದಿರುವ ವ್ಯರ್ಥ ಪದಾರ್ಥಗಳನ್ನು ಶೋಧಿಸಿ ಅವುಗಳನ್ನು ಶರೀರದಿಂದ ಮೂತ್ರದ ಮೂಲಕ ಉತ್ಪಾದಿಸಿ ಹೊರಹಾಕುವ ಕೆಲಸವನ್ನು ಮಾಡುತ್ತಿರುತ್ತವೆ. ಅಷ್ಟೇ ಅಲ್ಲದೆ ಶರೀರಕ್ಕೆ ಅಗತ್ಯ ಪ್ರಮಾಣದಲ್ಲಿ ಬೇಕಾಗುವ ಸೋಡಿಯಂ, ಪೊಟ್ಯಾಸಿಯಂ ಮತ್ತು ನೀರಿನಾಂಶವನ್ನು ಕಾಪಾಡುವ ಕೆಲಸವನ್ನು ಕೂಡ ಮೂತ್ರಪಿಂಡಗಳು ಮಾಡುತ್ತಿರುತ್ತವೆ. ರಕ್ತದ ಒತ್ತಡವನ್ನು ಸಮತೋಲನವಾಗಿರಿಸುವುದು, ಕೆಂಪು ರಕ್ತಕಣಗಳನ್ನು ನಿರ್ಮಾಣ ಮಾಡುವುದು, ಮೂಳೆಗಳನ್ನು ಗಟ್ಟಿಗೊಳಿಸುವ ಕಾರ್ಯವನ್ನು ಮಾಡುತ್ತವೆ.

ಇವೆಲ್ಲವೂ ಮೂತ್ರಪಿಂಡಗಳ ಕೆಲಸವಾಗಿದ್ದು, ಇಲ್ಲಿ ಒಂದೇ ಒಂದು ಹೆಚ್ಚುಕಮ್ಮಿಯಾದರೂ ಅದರ ಪರಿಣಾಮ ಶರೀರದ ಮೇಲೆ ಬೀಳುತ್ತದೆ. ಒಂದು ವೇಳೆ ಮೂತ್ರಪಿಂಡದಲ್ಲಿ ದೋಷ(ಕಾಯಿಲೆ) ಕಂಡುಬಂದರೆ ರಕ್ತದಿಂದ ಸಾಕಷ್ಟು ಪ್ರಮಾಣದಲ್ಲಿ ವ್ಯರ್ಥ ಪದಾರ್ಥಗಳನ್ನು ಶೋಧಿಸಲು ಸಾಧ್ಯವಾಗದೆ ವ್ಯರ್ಥ ಪದಾರ್ಥಗಳು ಮತ್ತು ಎಲೆಕ್ಟ್ರೋಲೈಟ್(ಸೋಡಿಯಂ ಮತ್ತು ಪೊಟ್ಯಾಸಿಯಂ)ಗಳು ರಕ್ತದಲ್ಲಿ ಶೇಖರಣೆಗೊಳ್ಳುತ್ತವೆ. ಇದರಿಂದ ಆರೋಗ್ಯ ಹದಗೆಡುತ್ತದೆ.

ಇತ್ತೀಚೆಗಿನ ದಿನಗಳಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಬಹಳಷ್ಟು ಜನಕ್ಕೆ ಮೂತ್ರಪಿಂಡದ ಕಾಯಿಲೆ ತಮಗಿದೆ ಎಂಬ ಕನಿಷ್ಠ ಜ್ಞಾನವೂ ಇರುವುದಿಲ್ಲ. ಸಾಮಾನ್ಯವಾಗಿ ರಕ್ತದಿಂದ ಸಾಕಷ್ಟು ಪ್ರಮಾಣದಲ್ಲಿ ವ್ಯರ್ಥ ಪದಾರ್ಥಗಳನ್ನು ಮೂತ್ರಪಿಂಡಕ್ಕೆ ಬೇರ್ಪಡಿಸಲು ಸಾಧ್ಯವಾಗುವುದಿಲ್ಲ ಎಂಬುದು ಗೊತ್ತಾದರೆ ಆ ವ್ಯಕ್ತಿ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದರ್ಥ. ಮೂತ್ರಪಿಂಡದ ಕಾಯಿಲೆ ಮೊದಲಿನಿಂದಲೂ ಇದ್ದು ಯಾವುದೋ ಕಾರಣಕ್ಕೆ ರಕ್ತದ ಪರೀಕ್ಷೆಗಳನ್ನು ಮಾಡಿಸುವಾಗ ಗೊತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮೂತ್ರಪಿಂಡದ ಕಾಯಿಲೆ ಯಾವಾಗ ಹೇಗೆ ಬರುತ್ತದೆ ಎಂಬುದನ್ನು ಕೆಲವೊಮ್ಮೆ ಹೇಳಲಾಗುವುದಿಲ್ಲ ಆದರೂ ವೈದ್ಯರು ಕೆಲವೊಂದು ಕಾರಣಗಳನ್ನು ನೀಡುತ್ತಾರೆ.

ಇನ್ನು ಮೂತ್ರಪಿಂಡದ ಕಾಯಿಲೆಗಳನ್ನು ಅಲ್ಪಕಾಲೀನ ಮೂತ್ರಪಿಂಡದ ವಿಫಲತೆ ಮತ್ತು ದೀರ್ಘಕಾಲೀನ ಮೂತ್ರಪಿಂಡದ ವಿಫಲತೆ ಎಂದು ಹೇಳುತ್ತಾರೆ. ಅಲ್ಪಕಾಲೀನ ಮೂತ್ರಪಿಂಡದ ವಿಫಲತೆಗೆ ವಿಪರೀತ ರಕ್ತನಷ್ಟ, ತೀವ್ರತರಹದ ಸುಟ್ಟಗಾಯಗಳು, ವಿಷಪ್ರವೇಶ, ಗಂಭೀರವಾದ ಗಾಯ, ಮೂತ್ರಾಂಗದಲ್ಲಿ ಕಲ್ಲು ಸೇರುವಿಕೆ ಕಾರಣವಾದರೆ ದೀರ್ಘಕಾಲೀನ ಮೂತ್ರಪಿಂಡದ ವಿಫಲತೆಯಲ್ಲಿ ಮಧುಮೇಹ, ಹೆಚ್ಚಿನ ರಕ್ತದೊತ್ತಡ, ಅನುವಂಶೀಯವಾಗಿ ಬಂದ ಮೂತ್ರಪಿಂಡ ಕಾಯಿಲೆ, ಔಷಧಿ ಸೇವನೆ, ಔಷಧಿ ಸೇವನೆಯ ಪಾರ್ಶ್ವಪರಿಣಾಮಗಳು ಕಾರಣವಾಗುತ್ತವೆ.

ಅಲ್ಪಕಾಲದ ಮೂತ್ರಪಿಂಡದ ಕಾಯಿಲೆಗಳನ್ನು ಗುಣಪಡಿಸಬಹುದು ಆದರೆ ದೀರ್ಘಕಾಲೀನ ಮೂತ್ರಾಂಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಹಾಗಾಗಿ ಒಮ್ಮೆ ಕಾಣಿಸಿಕೊಂಡರೆ ಮತ್ತೆ ಅದು ಆತನ ಸಂಗಾತಿಯಾಗಿ ಬಿಡುತ್ತದೆ. ಆಗ ಅದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಇರುವುದೊಂದೇ ಮಾರ್ಗ ಅದೇನೆಂದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು, ವೈದ್ಯರು ಶಿಫಾರಸ್ಸು ಮಾಡಿದ ಔಷಧಿಯನ್ನು ಸೇವಿಸುವುದು ಮತ್ತು ಆಹಾರದಲ್ಲಿ ಪಥ್ಯವನ್ನು ಆಚರಿಸುವುದಾಗಿದೆ.

ನಾವು ಎಷ್ಟೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೂ ಕಾಯಿಲೆಗಳು ಒಂದಲ್ಲ ಒಂದು ರೀತಿಯಿಂದ ಬಂದೇ ಬರುತ್ತವೆ. ಕಾಯಿಲೆಯನ್ನು ವೈದ್ಯರ ಸೂಚನೆಯಂತೆ ಚಿಕಿತ್ಸೆಪಡೆದುಕೊಳ್ಳುವ ಮೂಲಕ ಹೋಗಲಾಡಿಸಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು