ಭೋಪಾಲ್: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯನ್ನು ಫೇಸ್ಬುಕ್ ಸ್ನೇಹಿತ ಮತ್ತು ಇತರ ಇಬ್ಬರು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಆರೋಪಿ ರಾಮು ಕುಶ್ವಾಹಾ ಜೊತೆ ಅಪ್ರಾಪ್ತೆ ಫೇಸ್ಬುಕ್ ಮೂಲಕ ಸಂಪರ್ಕಕ್ಕೆ ಬಂದಿದ್ದು, ನವೆಂಬರ್ 21 ರಂದು ಕುಶ್ವಾಹಾ ಬಾಲಕಿಯನ್ನು ಭೇಟಿಯಾಗಲು ತನ್ನಿಬ್ಬರು ಸ್ನೇಹಿತರಾದ ಅರವಿಂದ್ ಮತ್ತು ಛೋಟೆ ಖಾನ್ ಅವರೊಂದಿಗೆ ಎಸ್ಯುವಿ ಕಾರಿನಲ್ಲಿ ಬಂದಿದ್ದು, ಕಾರು ಹತ್ತುವಂತೆ ಒತ್ತಾಯ ಮಾಡಿದ್ದಾರೆ. ಈ ವೇಳೆ ಬಾಲಕಿ ನಿರಾಕರಿಸಿದ್ದಾಳೆ.
ಆದರೆ ಒತ್ತಾಯಪೂರ್ವಕವಾಗಿ ಕಾರಿಗೆ ಹತ್ತಿಸಿಕೊಂಡು ದೂರದ ಸ್ಥಳಕ್ಕೆ ಕರೆದುಕೊಂಡು ಹೋಗಿ ಸರಣಿಯಾಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆ ಪ್ರಜ್ಞಾಹೀನಳಾಗಿದ್ದು, ಆಕೆಯನ್ನು ಅಲ್ಲಿಂದ ಬಿಟ್ಟು ಪರಾರಿಯಾಗಿದ್ದರು.