ಮೈದಾ ಹಿಟ್ಟಿನಿಂದ ತಯಾರು ಮಾಡುವ ಪರೋಟವು ಆರೋಗ್ಯಕ್ಕೆ ಹಿತ ನೀಡುವುದಿಲ್ಲ. ಹೀಗಾಗಿ ಮೈದಾದ ಬದಲಿಗೆ ಗೋಧಿ ಹಿಟ್ಟಿನೊಂದಿಗೆ ಇನ್ನೊಂದಷ್ಟು ತರಕಾರಿ ಸೇರಿದಂತೆ ಬೇರೆ ಬೇರೆ ಪದಾರ್ಥಗಳನ್ನು ಸೇರಿಸಿ ವೆಜ್ ಮಿಕ್ಸ್ ಪರೋಟ ತಯಾರು ಮಾಡಿದರೆ ನಾಲಿಗೆಗೆ ಮಾತ್ರ ರುಚಿಯಾಗಿರದೆ ಆರೋಗ್ಯ ಕಾಪಾಡುವಲ್ಲಿಯೂ ಸಹಕಾರಿಯಾಗಲಿದೆ.
ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು- ಒಂದೂವರೆ ಕಪ್, ಕಡ್ಲೆಬೇಳೆ ಹಿಟ್ಟು- ಕಾಲು ಕಪ್, ಆಲೂಗೆಡ್ಡೆ- ಮುಕ್ಕಾಲು ಕಪ್, ಪಾಲಕ್ ಸೊಪ್ಪು- ಒಂದು ಕಪ್, ಹಸಿಮೆಣಸಿಕ ಕಾಯಿ- ಐದರಿಂದ ಆರು, ಕ್ಯಾರೆಟ್ ತುರಿ- ಕಾಲು ಕಪ್,ಮೊಸರು- ನಾಲ್ಕೈದು ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- ಬೇಯಿಸಲು ಅಗತ್ಯವಿರುವಷ್ಟು.
ಮಾಡುವ ವಿಧಾನ: ಮೊದಲಿಗೆ ಆಲೂಗೆಡ್ಡೆಯನ್ನು ಬೇಯಿಸಿಟ್ಟುಕೊಳ್ಳಬೇಕು, ಆ ನಂತರ ಪಾಲಕ್ ಸೊಪ್ಪು, ಹಸಿಮೆಣಸು, ಕ್ಯಾರೆಟ್ ಸೇರಿಸಿ ಮಿಕ್ಸಿ ಮಾಡಿಟ್ಟುಕೊಳ್ಳಬೇಕು. ಬಳಿಕ ಗೋಧಿ ಮತ್ತು ಕಡ್ಲೆ ಹಿಟ್ಟಿಗೆ ಎಲ್ಲ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಕಲೆಸಬೇಕು. ಹದಕ್ಕೆ ಬಂದ ಬಳಿಕ ಚಿಕ್ಕದಾಗಿ ಪರೋಟ ತಯಾರಿಸಿ ಬಳಿಕ ತಾವಾದಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು ಎರಡು ಬದಿಯೂ ಚೆನ್ನಾಗಿ ಕಾಯಿಸಿ ತೆಗೆದರೆ ವೆಜ್ ಮಿಕ್ಸ್ ಪರೋಟ ಸೇವಿಸಲು ಸಿದ್ಧವಾದಂತೆಯೇ..