ಖಾರ ಅಕ್ಕಿರೊಟ್ಟಿ ಎಂದಾಕ್ಷಣ ಇದೇನಪ್ಪಾ? ಎಂಬ ಪ್ರಶ್ನೆ ಕಾಡಬಹುದು. ಆದರೆ ಸುಲಭವಾಗಿ ರುಚಿಯಾಗಿ ಮಾಡಬಹುದಾದ ಈ ರೊಟ್ಟಿಯನ್ನು ಹೇಗೆ ಮಾಡಬಹುದು ಎಂಬುದನ್ನು ನೋಡೋಣ.
ಬೇಕಾಗುವ ಪದಾರ್ಥಗಳು: ಅಕ್ಕಿ ಹಿಟ್ಟು- ಒಂದು ಕಪ್, ಈರುಳ್ಳಿ- ಹಚ್ಚಿದ್ದು ಅರ್ಧ ಕಪ್, ಮೆಣಸಿನಕಾಯಿ- ಮೂರು, ತೆಂಗಿನಕಾಯಿ ತುರಿ- ಕಾಲು ಕಪ್, ಕೊತ್ತಂಬರಿ ಸೊಪ್ಪು- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ: ಈರುಳ್ಳಿ ಮತ್ತು ಮೆಣಸಿನ ಕಾಯಿಯನ್ನು ಚಿಕ್ಕದಾಗಿ ಹಚ್ಚಿಟ್ಟುಕೊಂಡು ಬಳಿಕ ಕಾಯಿತುರಿಯನ್ನು ಸಿದ್ಧ ಮಾಡಿಕೊಳ್ಳಬೇಕು. ಇದಾದ ನಂತರ ಅಗಲವಾದ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಅಕ್ಕಿ ಹಿಟ್ಟು, ಉಪ್ಪು, ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಕಲೆಸಬೇಕು. ಅದು ಚಪಾತಿ ಹಿಟ್ಟಿನಂತೆ ಕಲೆಸಿಕೊಂಡು ಬಳಿಕ ಸ್ವಲ್ಪ ಹೊತ್ತು ಹಾಗೆಯೇ ಬಿಡಬೇಕು.
ಇನ್ನೊಂದೆಡೆ ಕಾವಲಿಯನ್ನು ಒಲೆಯ ಮೇಲಿಟ್ಟು ಅದು ಕಾದ ನಂತರ ಒಂದು ಚಮಚ ಎಣ್ಣೆಯನ್ನು ಕಾವಲಿಗೆ ಹಚ್ಚಬೇಕು. ಬಳಿಕ ಮುಷ್ಟಿಯಷ್ಟು ಹಿಟ್ಟನ್ನು ತೆಗೆದುಕೊಂಡು ಉಂಡೆ ಮಾಡಿ ಕಾವಲಿ ಮೇಲಿಟ್ಟು ಅಗಲವಾಗಿ ತಟ್ಟಿ ಎಣ್ಣೆ ಹಾಕಿ ಎರಡು ಬದಿಯೂ ಚೆನ್ನಾಗಿ ಬೇಯಿಸಿ ತೆಗೆಯಬೇಕು. ಹೀಗೆ ಮಾಡಿದರೆ ಖಾರ ರೊಟ್ಟಿ ತಯಾರಾದಂತೆಯೇ.. ಚಟ್ನಿಯೊಂದಿಗೆ ಸೇವಿಸಿದರೆ ಮಜಾ ಎನಿಸುತ್ತದೆ.