ಮಾವಿನ ಕಾಯಿ ಎಲ್ಲೆಂದರಲ್ಲಿ ಸಿಗುತ್ತದೆ. ಹೀಗಾಗಿ ಒಂದಿಷ್ಟು ಹುಳಿ ಮಾವಿನ ಕಾಯಿ ಸೇರಿಸಿ ಚಿತ್ರಾನ್ನ ಮಾಡಿದರೆ ಬೆಳಗ್ಗಿನ ಉಪಹಾರಕ್ಕೆ ಬಾಯಿಗೆ ರುಚಿಯಾಗಿರುತ್ತದೆ. ಎಲ್ಲರ ಮನೆಯಲ್ಲೂ ಚಿತ್ರಾನ್ನ ಮಾಡಿಯೇ ಮಾಡುತ್ತಾರೆ. ಆದರೆ ಆ ಚಿತ್ರಾನ್ನಕ್ಕೆ ಆಗಾಗ್ಗೆ ಒಂದಿಷ್ಟು ಬದಲಾವಣೆ ಮಾಡಿದರೆ ಚಿತ್ರಾನ್ನನಾ ಅಂಥ ಮೂಗು ಮುರಿಯುವರಿಗೆ ಹೊಸ ರುಚಿ ನೀಡಿದಂತಾಗುತ್ತದೆ.
ಮಾವಿನಕಾಯಿ ಚಿತ್ರಾನ್ನ ಯಾರು ಬೇಕಾದರೂ ಮಾಡಬಹುದು ಏಕೆಂದರೆ ಇದನ್ನು ಮಾಡುವುದು ಸುಲಭವಾಗಿದೆ. ಹಾಗಾದರೆ ಹೇಗೆ ಮಾಡುವುದು? ಇಲ್ಲಿದೆ ವಿವರ.
ಬೇಕಾಗುವ ಪದಾರ್ಥಗಳು
ಮಾವಿನಕಾಯಿತುರಿ- ಒಂದು ಕಪ್, ತೆಂಗಿನಕಾಯಿತುರಿ- ಅರ್ಧ ಹೋಳು, ಒಣಮೆಣಸಿನಕಾಯಿ- ನಾಲ್ಕು, ಇಂಗು- ಸ್ವಲ್ಪ, ಸಾಸಿವೆ- ಸ್ವಲ್ಪ, ಅರಿಶಿನಪುಡಿ-ಚಿಟಿಕೆ, ಕೊತ್ತಂಬರಿ ಸೊಪ್ಪು- ಸ್ವಲ್ಪ, ಕರಿಬೇವು-ಸ್ವಲ್ಪ, ರುಚಿಗೆ ತಕ್ಕಂತೆ ಉಪ್ಪು
ಮಾಡುವ ವಿಧಾನ
ಮೊದಲಿಗೆ ಮಾವಿನತುರಿ ಸೇರಿದಂತೆ ಮಸಾಲೆ ಪದಾರ್ಥಗಳನ್ನು ಮಿಕ್ಸಿಯಲ್ಲಿ (ನೀರು ಹಾಕದೆ) ಹಾಕಿ ರುಬ್ಬಬೇಕು. ಮತ್ತೊಂದೆಡೆ ಪಾತ್ರೆಯಲ್ಲಿ ಒಗ್ಗರಣೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಹಾಕಿ ಅದು ಸಿಡಿದ ಬಳಿಕ ಕಡ್ಲೆಬೀಜ, ಕಡ್ಲೆಬೇಳೆ, ಉದ್ದಿನ ಬೇಳೆ ಒಣ ಮೆಣಸು ಹಾಕಿ ಚೆನ್ನಾಗಿ ಹುರಿಯಬೇಕು. ನಂತರ ರುಬ್ಬಿಟ್ಟುಕೊಂಡ ಮಾವಿನ ತುರಿಯ ಮಸಾಲೆಯನ್ನು ಹಾಕಿ ಮಿಶ್ರಮಾಡಬೇಕು. ಈ ಸಂದರ್ಭ ರುಚಿಗೆ ತಕ್ಕಂತೆ ಉಪ್ಪು ಹಾಕಬೇಕು. ಆ ನಂತರ ಇಳಿಸಿ ಅದಕ್ಕೆ ಅನ್ನವನ್ನು ಹಾಕಿ ಕಲೆಸಬೇಕು ಅಲ್ಲಿಗೆ ಮಾವಿನಕಾಯಿ ಚಿತ್ರಾನ್ನ ರೆಡಿ.