ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಎಂದಿಗೂ ಅಳಿಸಲಾಗದ ಇತಿಹಾಸ ನಿರ್ಮಿಸಿದ ಚಿತ್ರಗಳ ಪೈಕಿ ಓಂ ಸಿನಿಮಾ ಕೂಡ ಒಂದು. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ನಟಿಸಿದ್ದ ಈ ಸಿನಿಮಾ ಇಂದಿಗೂ ಅಷ್ಟೇ ಕ್ರೇಜ್ ಕಾಪಾಡಿಕೊಂಡಿರುವ ಚಿತ್ರ. ಕೇವಲ ಕನ್ನಡ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲೇ ತನ್ನದೇ ಛಾಪು ಮೂಡಿಸಿದೆ.
ಈ ಮಾಸ್ಟರ್ ಪೀಸ್ ಸಿನಿಮಾ ಮತ್ತೊಮ್ಮೆ ಬೆಳ್ಳಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಈ ಬಗ್ಗೆ ಖುದ್ದು ಶಿವಣ್ಣ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಓಂ ಸಿನಿಮಾದ ಹೇ ದಿನಕರ.. ಶುಭಕರ ಹಾಡಿನಲ್ಲಿ, ಸೂರ್ಯೋದಯದ ವೇಳೆ ಕಲ್ಯಾಣಿಯಿಂದ ಶಿವಣ್ಣ ಎದ್ದು ಬರುವ ದೃಶ್ಯ ಇಂದಿಗೂ ಅಷ್ಟೇ ಸುಪ್ರಸಿದ್ಧ. ಇದೇ ದೃಶ್ಯದ ಅನುಕರಣೆ ಮಾಡಿರುವ ನಟ ಶಿವಣ್ಣ ರೀಲ್ಸ್ ಒಂದನ್ನು ಮಾಡಿ ತಮ್ಮ ಇನ್ಸ್ ಟಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದು, ಓಂ ಸದ್ಯದಲ್ಲೇ ರೀ ರಿಲೀಸ್ ಆಗಲಿದೆ ಎಂದು ಬರೆದುಕೊಂಡಿದ್ದಾರೆ.
ಯಾವಾಗ ಮತ್ತು ಎಷ್ಟು ಚಿತ್ರಮಂದಿರಗಳಲ್ಲಿ ಈ ಚಿತ್ರ ಮತ್ತೊಮ್ಮೆ ರೀ ರಿಲೀಸ್ ಆಗಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಇದುವರೆಗೂ ಈ ಚಿತ್ರ ಬಹುತೇಕ 550 ರಿಂದ 600 ಬಾರಿ ರೀ ರಿಲೀಸ್ ಆಗಿದ್ದು, ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಬಾರಿ ರಿಲೀಸ್ ಆಗಿರುವ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿದೆ.

