News Karnataka Kannada
Friday, May 10 2024
ಮನರಂಜನೆ

ಕುಸಲ್ದರಸೆ ನವೀನ್ ಡಿ ಪಡೀಲ್ ಗೆ ಅತ್ಯುತ್ತಮ ನಟ ಪ್ರಶಸ್ತಿ

Kuseldarasare Naveen D Padil wins best actor award
Photo Credit : News Kannada

ಮಂಗಳೂರು: ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರ ಅಕಾಡೆಮಿಯ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತುಳುನಾಡ ಅದ್ಭುತ ಕಲಾವಿದ ಕುಸಲ್ದರಸೆ ನವೀನ್ ಡಿ ಪಡೀಲ್ ಇವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರವಾದ “ಜೀಟಿಗೆ” ನಂತರ ಸಂತೋಷ್ ಮಾಡ ಇವರು ನಿರ್ದೇಶಿಸಿದ ಮೊದಲ ಅರೆಭಾಷೆ ಚಿತ್ರವಾದ ಮೂಗಜ್ಜನ ಕೋಳಿ, ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಾದ ಮೂಗಜ್ಜನ ಪಾತ್ರವನ್ನು ನವೀನ್ ಡಿ ಪಡೀಲ್ ಇವರು ನಿರ್ವಹಿಸಿದ್ದಾರೆ. ಇಡೀ ಸಿನಿಮಾದಲ್ಲಿ ಒಂದೇ ಒಂದು ಮಾತಿಲ್ಲದ, ಕೋಳಿಗಳನ್ನು ಪ್ರೀತಿಸುವ ಒರಟು ಮುದುಕನ ಪಾತ್ರವನ್ನುಇವರು ಮನೋಜ್ಞವಾಗಿ ನಿಭಾಯಿಸಿದ್ದಾರೆ.

“ನಮ್ಮಕನಸು ಪ್ರೊಡಕ್ಷನ್ಸ್‌” ಎಂಬ ಬ್ಯಾನರಿನಡಿಯಲ್ಲಿ ಕೆ.ಸುರೇಶ್‌. ಇವರು ನಿರ್ಮಿಸಿರುವ ಚೊಚ್ಚಲ ಚಿತ್ರವೇ ಮೂಗಜ್ಜನ ಕೋಳಿ. ರಾಷ್ಟ್ರಪ್ರಶಸ್ತಿ ವಿಜೇತ, ಖ್ಯಾತ ಸಂಕಲನಕಾರ ಸುರೇಶ್‌ ಅರಸ್ ಇವರು ಚಿತ್ರದ ಸಂಕಲನ ಮಾಡಿದ್ದರೆ, ರಾಷ್ಟ್ರಪ್ರಶಸ್ತಿ ವಿಜೇತ ಕಾಂತಾರ2, ಸಲಾರ್ ನಂತಹ ಬಿಗ್ ಬಜೆಟ್ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಖ್ಯಾತ ಮೇಕಪ್ ಮ್ಯಾನ್‌ ರಂಜಿತ್‌ ಅಂಬಾಡಿ ಮೇಕಪ್‌ ಮಾಡಿದ್ದಾರೆ.

ಖ್ಯಾತ ಸಾಹಿತಿಯಾದ ಸುಬ್ರಾಯ ಚೊಕ್ಕಾಡಿ ಸಾಹಿತ್ಯ ಬರೆದಿದ್ದಾರೆ. ಪಿ.ವಿಷ್ಣುಪ್ರಸಾದ್ ಛಾಯಾಗ್ರಾಹಕರಾಗಿದ್ದಾರೆ. ಕಥಾಕಲ್ಪನೆಯು ವಿನೀತ್‌ ವಟ್ಟಂಕುಳತ್‌ ಅವರದ್ದಾಗಿದ್ದರೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಕಾದಂಬರಿಕಾರ ರಮೇಶ್‌ ಶೆಟ್ಟಿಗಾರ್ ಬರೆದಿದ್ದಾರೆ.

ಈ ಚಿತ್ರಕ್ಕೆ ಸುಳ್ಯದ ಯುವ ಕವಯತ್ರಿ ರಮ್ಯಶ್ರೀ ನಡುಮನೆ ಇವರು ಅರೆಭಾಷೆಯ ಸಹಾಯ ನೀಡಿದ್ದಾರೆ. ಹಿನ್ನಲೆ ಸಂಗೀತ ದೀಪಾಂಕುರನ್, ಹಾಡುಗಳಿಗೆ ಅರುಣ್ ಗೋಪನ್, ಕಲಾ ನಿರ್ದೇಶನವನ್ನು ರಾಜೇಶ್ ಬಂದ್ಯೋಡ್, ವಸ್ತ್ರಾಲಂಕಾರವನ್ನು ಮೀರಾ ಸಂತೋಷ್, ಸಹನಿರ್ದೇಶಕರಾಗಿ ಅವಿನಾಶ್ ರೈ ಕಾಸರಗೋಡು, ಸಹಾಯಕ ನಿರ್ದೇಶಕರಾಗಿ, ರವಿ ವರ್ಕಡಿ, ಗಿರೀಶ್ ಸುಳ್ಯ, ಹಾಗೂ ಕಾರ್ಯ ನಿರ್ವಹಣೆಯನ್ನು ವಿಜಯ್ ಮಯ್ಯ ನಿರ್ವಹಿಸಿದ್ದಾರೆ.

ಈ ಚಿತ್ರಕ್ಕೆ ಹಲವಾರು ಪ್ರಶಸ್ತಿ, ಮನ್ನಣೆಗಳು ದೊರಕಿದ್ದು ಅವುಗಳಲ್ಲಿ 23ನೇ ಯುಫ್ಎಂಸಿ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೇಬಿ ಗೌರಿಕಾಳಿಗೆ ಉತ್ತಮ ಬಾಲನಟಿ ಪ್ರಶಸ್ತಿ, ಜಾಗರಣ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉತ್ತಮ ನಿರ್ದೇಶಕ ಪ್ರಶಸ್ತಿ, ಫ್ರಾನ್ಸಿನ ಫೆಸ್ಟಿವಲ್‌ ಡೆ ಸಿನೇಮ ಡಿ ಸಿಫಾಲು, ಇಟಲಿಯ ಗೋಲ್ಡನ್‌ ಫೆಮಿ ಫಿಲ್ಮ್‌ ಫೆಸ್ಟಿವಲ್‌ 2023, ಜಮ್ಮು ಕಾಶ್ಮೀರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2023, ಸ್ಟೂಡೆಂಟ್‌ ವರ್ಲ್ಡ್‌ಇಂಪಾಕ್ಟ್‌ ಫೀಲ್ಮ್‌ ಫೆಸ್ಟಿವಲ್‌, ಬಿರಿಸಮುಂಡ ಚಿತ್ರೋತ್ಸವ, ತಮೀಝಗಂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೆಸ್ಟ್ ಇಂಟರ್ನ್ಯಾಷನಲ್ ಫಿಲಂ ಅವಾರ್ಡ್, ರೋಹಿಪ್ ಇಂಟರ್ನಲ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ special jury mention, UK ಯ ಲಿಫ್ಟ್ ಆಫ್‌ ಗ್ಲೋಬಲ್‌ ನೆಟ್ವರ್ಕ್‌ ಚಲನಚಿತ್ರೋತ್ಸವ ಹಾಗೂ ಭಾರತದ ಪ್ರತಿಷ್ಠತ ಫಿಲಂ ಫೆಸ್ಟಿವಲ್ ಆದ 29ನೇ ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕೂಡ ಈ ಚಿತ್ರವು ಅಧಿಕೃತವಾಗಿ ಆಯ್ಕೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪರಿಸರ, ಕೊಡಗು ಹಾಗೂ ಕಾಸರಗೋಡಿನ ಕೆಲವು ಪ್ರದೇಶಗಳಲ್ಲಿ ಅರೆಭಾಷೆಯನ್ನು ಮಾತನಾಡುವವರಿದ್ದಾರೆ. ಅರೆಭಾಷೆಗೆ ಅಕಾಡೆಮಿಯೂ ಸ್ಥಾಪನೆಯಾಗಿದೆ. ಕಳೆದ ವರ್ಷ ಅರೆಬಾಷೆಯ ಚೊಚ್ಚಲ ಚಿತ್ರವನ್ನಾಗಿ ಮೂಗಜ್ಜನ ಕೋಳಿ ನಿರ್ಮಿಸುವ ಸಂದರ್ಭದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಇವರ ನೇತೃತ್ವ ಹಾಗೂ ಚಿತ್ರತಂಡದ ಪರಿಶ್ರಮದ ಪ್ರತೀಕವಾಗಿ ಅದೇ ವರ್ಷ ಕರ್ನಾಟಕ ಸರಕಾರವು ಚಲನಚಿತ್ರ ಕ್ಷೇತ್ರದಲ್ಲಿ ಅರೆಭಾಷೆಯನ್ನೂ ಅಧಿಕೃತ ಭಾಷೆಯನ್ನಾಗಿ ಪರಿಗಣನೆ ಮಾಡಿರುವುದು ಈ ಚಿತ್ರಕ್ಕೆ ಸಂದ ಗೌರವವಾಗಿದೆ.

ಈ ಮಕ್ಕಳ ಚಿತ್ರದಲ್ಲಿ ಇನ್ನೊಂದು ಮುಖ್ಯ ಭೂಮಿಕೆಯಾದ ಕನಸು [ಬಾಬೆಕ್ಕ] ಎಂಬ ಮಗುವಿನ ಪಾತ್ರದಲ್ಲಿ ಕುಮಾರಿ ಗೌರಿಕ ಮನೋಜ್ಞವಾಗಿ ನಟಿಸಿದ್ದಾರೆ. ಉಳಿದ ಪಾತ್ರಗಳಲ್ಲಿ ಖ್ಯಾತ ನಟ-ನಟಿಯರಾದ ಪ್ರಕಾಶ್‌ ತೂಮಿನಾಡು, ದೀಪಕ್‌ ರೈ ಪಾಣಾಜೆ, ರೂಪಶ್ರೀ ವರ್ಕಾಡಿ, ಸುಕನ್ಯ, ರಾಘವೇಂದ್ರ ಭಟ್‌, ಡಾ. ಜೀವನ್ ರಾಮ್‌ ಸುಳ್ಯ, ಕುಮಾರಿ ಸಾನಿಧ್ಯ, ಹಾಗೂ ಇತರ ಮಕ್ಕಳು ನಟಿಸಿದ್ದಾರೆ.

ಡಾ. ಜೀವನ್‌ ರಾಮ್‌ ಸುಳ್ಯ ನಿರ್ದೇಶನ ಮಾಡಿದ “ಅಮರಸುಳ್ಯ ಸ್ವಾತಂತ್ರ್ಯ ಹೋರಾಟ 1837” ನಾಟಕದ ದೃಶ್ಯ ತುಣುಕುಗಳು ಕೂಡಾ ಈ ಚಿತ್ರದಲ್ಲಿದೆ. ಸುಳ್ಯ ಪೇಟೆ, ಕೇರ್ಪಳ, ಕುಡೆಕಲ್ಲು, ಪದ್ಮಶ್ರೀ ಗಿರೀಶ್‌ ಭಾರಧ್ವಜ್‌ ಇವರು ನಿರ್ಮಿಸಿದ ತೂಗು ಸೇತುವೆಗಳು, ಹೀಗೆ ಈ ಚಿತ್ರದ ಪೂರ್ತಿ ಚಿತ್ರೀಕರಣವು ಸುಳ್ಯದ ಸುತ್ತಮುತ್ತಲು ನಡೆದಿದೆ.

ಮುಗ್ಧ ಮನಸ್ಸಿನ ಬಾಲಕಿ ಹಾಗೂ ಕೋಳಿಸಾಕುವ ಗೋವಿಂದ ಎಂಬ ಮೂಗಜ್ಜನ ಮಧ್ಯೆ ನಡೆಯುವ ಸಂಘರ್ಷ ಹಾಗೂ ಸಂಬಂಧದ ಕತೆಯೇ ಮೂಗಜ್ಜನ ಕೋಳಿ. ಮೂಗಜ್ಜನ ಕೋಳಿ ಚಿತ್ರವು 2024ರ ಮೊದಲಾರ್ಧದಲ್ಲಿ ತೆರೆಗೆ ಬರಲಿದೆ ಎಂದು ನಿರ್ಮಾಪಕರಾದ ಕೆ. ಸುರೇಶ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು