ಹೈದರಾಬಾದ್: ಹಿಟ್ ಚಿತ್ರದ ಬಹು ನಿರೀಕ್ಷಿತ ‘ಪುಷ್ಪ 2 ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು ಚಿತ್ರದಲ್ಲಿ ಅಲ್ಲು ಅರ್ಜುನ್ ಸೀರೆ ಉಟ್ಟು, ಚಿನ್ನಾಭರಣಗಳನ್ನು ಧರಿಸಿರುವ ಪೋಸ್ಟರ್ ಹಂಚಿಕೊಂಡಿದ್ದಾರೆ.
ನಿರ್ಮಾಪಕರು ಟೀಸರ್ ವಿಡಿಯೋ ಜೊತೆಗೆ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಮುನ್ನಾದಿನದಂದು ನಿರ್ದೇಶಕರು 3 ನಿಮಿಷಗಳ ವಿಡಿಯೋ ಬಿಡುಗಡೆ ಮಾಡಿದ್ದಾರೆ. ‘ಪುಷ್ಪ: ದಿ ರೈಸ್’ ಹಿಟ್ ಆಗಿದ್ದು, 2 ಅವತರಣಿಕೆಯೂ ದೊಡ್ಡ ನಿರೀಕ್ಷೆ ಹುಟ್ಟು ಹಾಕಿದೆ. ಗುಂಡೇಟಿನಿಂದ ಗಾಯಾಳುವಾಗಿದ್ದ ಪುಷ್ಪಾ ತಿರುಪತಿ ಜೈಲಿನಿಂದ ಪರಾರಿಯಾಗಿದ್ದಾರೆ ಎಂಬ ಸುದ್ದಿಯೊಂದಿಗೆ ವಿಡಿಯೋ ಆರಂಭವಾಗುತ್ತದೆ. ಪರಾರಿಯಾದ ಪುಷ್ಪಾನನ್ನು ಅರಣ್ಯದಲ್ಲಿ ಎನ್ಕೌಂಟರ್ ಮಾಡಲು ಪೊಲೀಸರು ವಿಶೇಷ ಘಟಕವನ್ನು ನಿಯೋಜಿಸುತ್ತಾರೆ. ಇದರಿಂದ ರೊಚ್ಚಿಗೆದ್ದ ಪುಷ್ಪಾ ಬೆಂಬಲಿಗರು ಬೀದಿಗಿಳಿದು ಹಿಂಸಾಚಾರ ನಡೆಸುತ್ತಾರೆ. ಪುಷ್ಪಾ ಸಾವಿನ ವದಂತಿ, ಬೇರೆ ದೇಶಕ್ಕೆ ಪರಾರಿಯಾಗಿರುವ ಸುದ್ದಿಗಳು ಹರಿದಾಡುವುದು ವಿಡಿಯೋದಲ್ಲಿದೆ. ಬಹುನಿರೀಕ್ಷಿತ ಪುಷ್ಪಾ 2 ಚಿತ್ರ 2024 ರ ಬೇಸಿಗೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.