ಬಾಲಿವುಡ್ ಹೆಸರಾಂತ ನಟ ಅಕ್ಷಯ್ ಕುಮಾರ್ ನಟನೆಯ ‘ಓ ಮೈ ಗಾಡ್ 2’ ಸಿನಿಮಾಗೆ ಈವರೆಗೂ ಸೆನ್ಸಾರ್ ಮಂಡಳಿಯು ಪ್ರಮಾಣ ಪತ್ರ ನೀಡಿಲ್ಲ. ಹೀಗಾಗಿ ಸಹಜವಾಗಿಯೇ ಚಿತ್ರತಂಡಕ್ಕೆ ಆತಂಕ ಎದುರಾಗಿದೆ. ಆಗಸ್ಟ್ 11 ರಂದು ‘ಓ ಮೈಗಾಡ್ 2’ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಆದರೆ, ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿ (ಸಿ.ಬಿ.ಎಫ್.ಸಿ) ಸೆನ್ಸಾರ್ ಪತ್ರವನ್ನು ಕೊಡಲು ನಿರಾಕರಿಸಿದೆ. ಜೊತೆಗೆ ಈ ಸಿನಿಮಾವನ್ನು ಪರಿಶೀಲನಾ ಸಮಿತಿಗೆ ಕಳುಹಿಸಿ ಕೊಡಲಾಗಿದೆ.
ಅಕ್ಷಯ್ ಕುಮಾರ್ ಈ ಸಿನಿಮಾದಲ್ಲಿ ಶಿವನ ಪಾತ್ರ ಮಾಡಿದ್ದಾರೆ. ಈ ಪಾತ್ರದ ಮೂಲಕ ಲೈಂಗಿಕ ಶಿಕ್ಷಣವನ್ನು ಹೇಳಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಸೆನ್ಸಾರ್ ಪತ್ರವನ್ನು ನೀಡಲು ನಿರಾಕರಿಸಲಾಗಿದೆಯಂತೆ. ಆದರೆ, ಈ ಹಿಂದೆ ರಿಲೀಸ್ ಆಗಿರುವ ಟೀಸರ್ ಗೆ ಸೆನ್ಸಾರ್ ಪತ್ರ ಸಿಕ್ಕಿದೆ.
2012ರಲ್ಲಿ ಈ ಸಿನಿಮಾದ ಮೊದಲ ಭಾಗ ಬಿಡುಗಡೆಯಾಗಿತ್ತು. ಇದೀಗ ಪಾರ್ಟ್ 2 ಸಿದ್ಧವಾಗಿದ್ದು ಅಕ್ಷಯ್ ಪಾತ್ರ ಕೂಡ ಬದಲಾಗಿದೆ. ಹತ್ತು ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಓ ಮೈ ಗಾಡ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಕೃಷ್ಣನಾಗಿ ಕಾಣಿಸಿಕೊಂಡಿದ್ದರು. ಈ ಬಾರಿ ಅವರು ಶಿವನ ಅವತಾರವೆತ್ತಿದ್ದಾರೆ.