ಮುಂಬಯಿ: ಹಿರಿಯ ಚಿತ್ರ ನಿರ್ಮಾಪಕ ಹಾಗೂ ಹೃತಿಕ್ ರೋಷನ್ ಅಜ್ಜ ಜೆ ಓಂ ಪ್ರಕಾಶ್ ಅವರು ಬುಧವಾರ ಬೆಳಗ್ಗೆ ನಿಧನರಾದರು.
93ರ ಹರೆಯದ ಓಂ ಪ್ರಕಾಶ್ ಅವರು ತನ್ನ ಸ್ವಗೃಹದಲ್ಲಿ ನಿಧನರಾದರು. ಓಂ ಪ್ರಕಾಶ್ ಸಾವಿಗೆ ಬಾಲಿವುಡ್ ನ ಹಿರಿಯ ಹಾಗೂ ಕಿರಿಯ ನಟ, ನಟಿಯರು ಕಂಬನಿ ಮಿಡಿದಿದ್ದಾರೆ.
ಬಾಲಿವುಡ್ ನ ಹಿರಿಯ ನಟ ಅಮಿತಾಭ್ ಬಚ್ಚನ್, ಪುತ್ರ ಅಭಿಷೇಕ್ ಜತೆಗೆ ಇಂದು ಬೆಳಗ್ಗೆ ಓಂ ಪ್ರಕಾಶ್ ಅಂತಿಮ ದರ್ಶನ ಪಡೆದು ತೆರಳಿದರು.
ಹೃತಿಕ್ ಅವರು ತನ್ನ ಅಜ್ಜನಿಗೆ ತುಂಬಾ ಹತ್ತಿರವಾಗಿದ್ದು, ಬಾಲ್ಯದಲ್ಲಿ ಹಾಗೂ ಜೀವನದ ಏಳುಬೀಳುಗಳಲ್ಲಿ ಅವರು ನನಗೆ ತುಂಬಾ ನೆರವಾಗಿದ್ದರು ಎಂದು ಹೃತಿಕ್ ರೋಷನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಓಂ ಪ್ರಕಾಶ್ ಅವರು 1974ರಲ್ಲಿ ಆಪ್ ಕಿ ಕಸಮ್ ಚಿತ್ರದ ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಇಳಿದಿದ್ದರು. ರಾಜೇಶ್ ಖನ್ನಾ ಮತ್ತು ಮುಮ್ತಾಜ್ ನಟಿಸಿದ್ದ ಈ ಚಿತ್ರವು ಭಾರೀ ಹಿಟ್ ಆಗಿತ್ತು. ಆಖಿರ್ ಕ್ಯೂಂ, ಅಪ್ನಾಪನ್, ಆಶಾ, ಅಪ್ನಾ ಬನಾ ಲೊ, ಅರ್ಪನ್, ಅದ್ಮಿ ಖಿಲೋನಾ ಹೈ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿದ್ದರು.
ಆಸ್ ಕಾ ಪಂಚಿ, ಆಯಿ ಮಿಲನ್ ಕಿ ಬೆಲಾ, ಆಯೆ ದಿನ ಬಹಾರ್ ಕೆ, ಆಯ ಸಾವನ್ ಝಮ್ ಕೆ, ಆಖೋಂ ಆಖೋಂ ಮೇ ಮತ್ತು ಆಖಿರ್ ಕ್ಯೂಂ ಸಿನಿಮಾಗಳನ್ನು ನಿರ್ಮಿಸಿದ್ದರು.