ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಕಿರಿಕ್ ಪಾರ್ಟಿ ನಿರೀಕ್ಷೆಯಂತೆಯೇ ಭರ್ಜರಿ ಯಶಸ್ಸು ಗಳಿಸಿದ್ದು, ಇದೀಗ ಬಿಡುಗಡೆಯಾದ ಮೊದಲ ವಾರದಲ್ಲಿಯೇ ಸಿನೆಮಾ 6.5 ಕೋಟಿ ಗಳಿಕೆ ಮಾಡಿ ಹೊಸ ಇತಿಹಾಸ ಸೃಷ್ಟಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ನಿರ್ಮಾಣದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಭಾಗಿಯಾಗಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳುವಂತೆ ಮುಂದಿನ 5 ವಾರಗಳಲ್ಲಿ ಚಿತ್ರದ ಕಲೆಕ್ಷನ್ 30 ಕೋಟಿ ದಾಟಬಹುದು ಎಂದಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನ ಈ ಚಿತ್ರಕ್ಕಿದ್ದು, ಜಯಣ್ಣ ವಿತರಣೆ ಮಾಡಿದ್ದಾರೆ.
ಮಲಯಾಳಂ ಖ್ಯಾತ ನಟ ನಿವಿನ್ ಪೌಲಿ ‘ರಕ್ಷಿತ್ ಶೆಟ್ಟಿ ಎಲ್ಲರೂ ಎದ್ದು ತನ್ನತ್ತ ಗಮನಹರಿಸುವಂತೆ ಮಾಡಿದ್ದಾನೆ. ರಕ್ಷಿತ್ ಶೆಟ್ಟಿಗೆ ಅಭಿನಂದನೆಗಳು’ ಎಂದು ಟ್ವೀಟ್ ಮಾಡಿ ರಕ್ಷಿತ್ ಶೆಟ್ಟಿಯನ್ನು ಹೊಗಳಿದ್ದಾರೆ.
ಕನ್ನಡ ಚಿತ್ರರಂಗ ನೋಟ್ ಬ್ಯಾನ್ ನಿಂದ ಸಂಕಷ್ಟಕ್ಕೆ ತುತ್ತಾಗಿತ್ತು. ಇದೀಗ ಕಿರಿಕ್ ಪಾರ್ಟಿಯ ಅಭೂತ ಪೂರ್ವ ಯಶಸ್ಸಿನ ನಂತರ ಕನ್ನಡ ಚಿತ್ರರಂಗ ಮತ್ತೆ ಗೆಲುವಿನ ಟ್ರ್ಯಾಕ್ ಗೆ ಮರಳಿದ್ದು, ಈ ಮೂಲಕ ನಟ ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದ ಮುಂದಿನ ಸೂಪರ್ ಸ್ಟಾರ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.