ಮಂಗಳೂರು: “ಉತ್ತಮ ಸಾಹಿತ್ಯವನ್ನು ಪರಿಗಣಿಸಲು ವೈಜ್ಞಾನಿಕ ಮಾನದಂಡಗಳನ್ನು ಬಳಸಬೇಕು. ವೃತ್ತಿಪರ ಸ್ಪರ್ಧೆಗಳಲ್ಲಿ ಹೇಗೆ ಆಯಾ ವೃತ್ತಿ, ಕ್ಷೇತ್ರಗಳ ನಿಪುಣರಷ್ಟೇ ಮೌಲ್ಯಮಾಪಕರಾಗಿರುತ್ತಾರೋ ಹಾಗೆಯೇ ಸಾಹಿತ್ಯದ ಮೌಲ್ಯಮಾಪನವನ್ನೂ ಪರಿಣತರೇ ನಡೆಸಬೇಕು. ಪೂರ್ವಗ್ರಹ ಪೀಡಿತ ಮನೋಭಾವ ಮತ್ತು ಪಕ್ಷಪಾತಿತನ ಒಳ್ಳೆಯದಲ್ಲ” ಎಂದು ಕೊಂಕಣಿ ಸಾಹಿತಿ, ‘ಬುಡ್ಕುಲೊ’ ಇಪತ್ರಿಕೆಯ ಸಂಪಾದಕ ಡೊನಾಲ್ಡ್ ಪಿರೇರಾ ಹೇಳಿದರು.

ಅವರು ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾನಿಲಯದ ಕೊಂಕಣಿ ಸಂಸ್ಥೆಯಲ್ಲಿ ಭಾನುವಾರದಂದು ಅಕ್ತೋಬರ್ ತಿಂಗಳ ‘ಬೊಲ್ಕಾಂವ್’ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊಂಕಣಿಯ ಉತ್ಕೃಷ್ಟ ಕತೆ, ಕಾದಂಬರಿಗಳನ್ನು ಪರಿಚಯಿಸಿದ ಅವರು ಅವುಗಳ ಶ್ರೇಷ್ಠತೆಯನ್ನು ವಿವರಿಸಿದರು.

ವಿ.ಜೆ.ಪಿ ಸಲ್ಟಾನ್ಹಾ ಬರೆದ ‘ದೆವಾಚ್ಯೆ ಕುರ್ಪೆನ್’ ಮತ್ತು ‘ಸಾಯ್ಬಾ ಭೊಗೊಸ್’, ಎ.ಟಿ. ಲೋಬೊ ಬರೆದ ‘ವೇಳ್-ಘಡಿ’, ‘ತುಂ ಬರೊ ಜಾ’ ಮತ್ತು ‘ಹರ್ದ್ಯಾರ್ ಖುರಿಸ್’, ಐರಿನ್ ಪಿಂಟೊ ಅವರ ‘ಮ್ಹಜೆಂ ಅಂತಸ್ಕರ್ನ್ ವಿಸರ‍್ಚೆಂ ನಾ’, ಡಾ. ಎಡ್ವರ್ಡ್ ನಜ್ರೆತ್ ಅವರ ‘ನಿರ್ಮೊಣೆಂ’ ಹಾಗೂ ವಿಲ್ಪಿ ರೆಬಿಂಬಸ್ ಅವರ ‘ಫಾತಿಮಾಚೆಂ ಕಾಜಾರ್’ ಮತ್ತು ‘ತಿಸ್ರಿ ಚೀಟ್’ ಕೃತಿಗಳನ್ನು ಪರಿಚಯಿಸಿ ಅವುಗಳ ಮಹತ್ವವನ್ನು ಬಣ್ಣಿಸಿದರು.

ಕೊಂಕಣಿ ಸಂಸ್ಥೆಯ ನಿರ್ದೇಶಕ ಫಾ| ಪ್ರಶಾಂತ್ ಮಾಡ್ತ ಸಂಸ್ಥೆಯ ಕಾರ್ಯೋದ್ದೇಶಗಳನ್ನು ವಿವರಿಸಿದರು. ಈ ಸಂದರ್ಭ 2026-28ನೇ ಸಾಲಿಗೆ ಕ್ಯಾಥೋಲಿಕ್ ಅಸೋಸಿಯೇಷನ್ ಆಫ್ ಸೌತ್ ಕೆನರಾ (ಕಾಸ್ಕ್) ಸಂಘಟನೆಯ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಡಾ. ಎರಿಕ್ ಲೋಬೊ, ಕೊಂಕಣಿಯಲ್ಲಿ ಪಿಎಚ್.ಡಿ. ಗಳಿಸಿದ ಡಾ. ಪ್ರೇಮ್ ಮೋರಾಸ್ ಮತ್ತವರ ಪತ್ನಿ ಡಾ. ವಿಲ್ಮಾ ಫೆರ್ನಾಂಡಿಸ್ ಅವರನ್ನು ಅಭಿನಂದಿಸಲಾಯಿತು. ಕೊಂಕಣಿ ಸಂಸ್ಥೆಯ ವತಿಯಿಂದ ಕೊಂಕಣಿಯಲ್ಲಿ ಎಂ.ಎ. ಪ್ರಾರಂಭಿಸುವ ಯೋಜನೆಯನ್ನು ಘೋಷಿಸಲಾಯಿತು. ನಿಧನರಾಗಿರುವ ಹಿರಿಯ ಸಾಹಿತಿಗಳ ಭಾವಚಿತ್ರವನ್ನು ಸಂಸ್ಥೆಯಲ್ಲಿ ಅಳವಡಿಸುವ ಕುರಿತು ಮಾಹಿತಿ ನೀಡಲಾಯಿತು.

ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯದ ಕೊಂಕಣಿ ವಿಭಾಗದ ಮುಖ್ಯಸ್ಥೆ ಪ್ಲೋರಾ ಕ್ಯಾಸ್ತೆಲಿನೊ ಅತಿಥಿಯ ಪರಿಚಯ ವಾಚಿಸಿ, ಕಾರ್ಯ ನಿರ್ವಹಣೆ ಮಾಡಿ ವಂದಿಸಿದರು. ಕು| ವನಿತಾ ಬ್ಲೆಸಿಲ್ಲಾ ಸಿಕ್ವೇರಾ ಸಹಕರಿಸಿದರು.


