ಪಣಜಿ: ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟ ನಾನಾ ಪಾಟೇಕರ್ (75) ಅವರು ಗುರುವಾರ ಬೆಳಿಗ್ಗೆ ತೀವ್ರ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.

ಗೋವಾದ ತಮ್ಮ ನಿವಾಸದಲ್ಲಿದ್ದಾಗ ಇಂದು ಬೆಳಿಗ್ಗೆ ಸುಮಾರು 5:20ರ ಸುಮಾರಿಗೆ ನಾನಾ ಪಾಟೇಕರ್ ತೀವ್ರ ಹೃದಯ ಸ್ತಂಭನ ಉಂಟಾಗಿದೆ. ತಕ್ಷಣವೇ ಅವರನ್ನು ರಕ್ಷಿಸಲು ವೈದ್ಯರು ಸತತ 45 ನಿಮಿಷಗಳ ಕಾಲ ನಿರಂತರವಾಗಿ ಸಿಪಿಆರ್ ಪ್ರಕ್ರಿಯೆ ನಡೆಸಿದರಾದರೂ, ಯಾವುದೇ ಸ್ಪಂದನೆ ಸಿಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆಯ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಸಾಲ್ಕರ್ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆ ವತಿಯಿಂದ ವೈದ್ಯಕೀಯ-ಕಾನೂನು ಪ್ರಕರಣ ದಾಖಲಿಸಲಾಗಿದ್ದು, ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿದ್ದ ನಾನಾ ಪಾಟೇಕರ್, ತಮ್ಮ ವಿಶಿಷ್ಟ ಸಂಭಾಷಣೆ ಶೈಲಿ ಹಾಗೂ ತೀವ್ರತೆಯುಳ್ಳ ನಟನೆಯಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ‘ಪರಿಂದಾ’, ‘ಕ್ರಾಂತಿವೀರ್’, ‘ಅಗ್ನಿಸಾಕ್ಷಿ’, ‘ತಿರಂಗಾ’, ‘ವೆಲ್‌ಕಮ್’, ‘ನಟಸಾಮ್ರಾಟ್’ ಸೇರಿದಂತೆ ಹಲವು ಸಾರ್ವಕಾಲಿಕ ಹಿಟ್ ಚಿತ್ರಗಳಲ್ಲಿ ಅವಿಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದರು. ಅತ್ಯುತ್ತಮ ನಟನೆಗಾಗಿ ಅವರು ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.