ಮಂಗಳೂರು: ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಎಸ್‌ ಜೆಇಸಿ) ಆಯೋಜಿಸಿದ್ದ ಎರಡು ದಿನಗಳ ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವ ‘ಟಿಯಾರಾ 2026’ ಕಾಲೇಜಿನ ಬಾಸ್ಕೆಟ್ಬಾಲ್ ಮೈದಾನದಲ್ಲಿ ವರ್ಣರಂಜಿತ ಬಹುಮಾನ ವಿತರಣಾ ಸಮಾರಂಭ ಮತ್ತು ಪ್ರಸಿದ್ಧ ಡಿಜೆ ನೀಲ್ ಛಾಬ್ರಾ ನಡೆಸಿಕೊಟ್ಟ ಡಿಜೆ ನೈಟ್ನೊಂದಿಗೆ ವಿಜೃಂಭಣೆಯಿಂದ ಮುಕ್ತಾಯಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ನಿರ್ದೇಶಕರಾದ ವಂ.ಫಾ.ಕೆನೆತ್ ಆರ್. ಕ್ರಾಸ್ಟಾ ಹಾಗೂ ಪ್ರಾಂಶುಪಾಲರಾದ ಡಾ.ರಿಯೋ ಡಿ’ಸೋಜಾ ಉಪಸ್ಥಿತರಿದ್ದರು. ಉತ್ಸವದ ಸಿಬ್ಬಂದಿ ಸಂಯೋಜಕರಾದ ಸಚಿನ್ ಯು ಮತ್ತು ಹಿಮಾನಿ ಆರ್ ಹಾಗೂ ವಿದ್ಯಾರ್ಥಿ ಸಂಯೋಜಕರಾದ ಪ್ರತೀಕ್ ಮೋರಸ್ ಮತ್ತು ನಾಜ್ಮಿನ್ ಝಿಯಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಎರಡು ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ಮಂಗಳೂರು ಮತ್ತು ಸುತ್ತಮುತ್ತಲಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ತಾಂತ್ರಿಕ, ತಾಂತ್ರಿಕೇತರ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಮೊದಲನೇ ದಿನ ನಡೆದ ರೋಮಾಂಚಕ ರೋಬೋಟ್ ಕದನ “ರೋಬೋವಾರ್”, ಬಾನಂಗಳದ ಸಾಹಸ “ಫ್ಲೈಟ್ಫ್ಯೂರಿ”, ನೃತ್ಯ-ಸಂಗೀತದ ವೈಭವ “ಗ್ರೂವ್”, ಶಕ್ತಿಪೂರ್ಣ “ಸ್ಪಿನ್ ದಿ ಡಿಸ್ಕ್” ಮತ್ತು “ಆರ್ಸಿ ಬ್ಲೇಜ್” ಮುಖ್ಯ ಆಕರ್ಷಣೆಯಾಗಿದ್ದವು.

ಎರಡನೇ ದಿನ ರ್ಯಾಂಪ್ ವಾಕ್ “ಫ್ಯಾಷನ್ ಫ್ಲೇರ್”, ನಗೆಯ ಕಡಲಲ್ಲಿ ತೇಲಿಸಿದ “ಲೇಟೆಂಟ್ ಟಿಯಾರಾ”, “ಹೈಡ್ರೋಡೈನಾಮಿಕ್ಸ್”, “ಡ್ರೋನ್ ಝೋನ್” ಪ್ರದರ್ಶನ ಮತ್ತು ಬುದ್ಧಿಮತ್ತೆಗೆ ಸವಾಲೆಸೆದ “ಕ್ವಿಜ್ವಿಜ್” ಸ್ಪರ್ಧೆಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.

ಅಂತಿಮ ದಿನದ ಬಹುಮಾನ ವಿತರಣಾ ಸಮಾರಂಭದಲ್ಲಿ, ಎಂಜಿನಿಯರಿಂಗ್ ವಿಭಾಗದಲ್ಲಿ ತಮಿಳುನಾಡಿನ ಕೆಪಿಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರನ್ನರ್-ಅಪ್ ಪ್ರಶಸ್ತಿ ಪಡೆಯಿತು. ನಿಟ್ಟೆಯ ಎನ್ಎಂಎಎಮ್ಐಟಿ ಕಾಲೇಜು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು.

ತಾಂತ್ರಿಕೇತರ ವಿಭಾಗದಲ್ಲಿ ಮಂಗಳೂರಿನ ಎಸ್ಡಿಎಮ್ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ರನ್ನರ್-ಅಪ್ ಸ್ಥಾನ ಪಡೆದರೆ, ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು ಚಾಂಪಿಯನ್ ಶಿಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಎಸ್‌ ಜೆಇಸಿ ಆಡಳಿತ ಮಂಡಳಿಯು ವಿಜೇತರೆಲ್ಲರಿಗೂ ಅಭಿನಂದನೆ ಸಲ್ಲಿಸಿತು ಹಾಗೂ ‘ಟಿಯಾರಾ 2026’ ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ ಆಯೋಜಕ ಸಮಿತಿಯ ಶ್ರಮವನ್ನು ಶ್ಲಾಘಿಸಿತು.

ಉತ್ಸವ ಯಶಸ್ವಿಯಾಗಿ ಮುಕ್ತಾಯಗೊಳ್ಳುತ್ತಿದ್ದಂತೆ, ಭಾಗವಹಿಸಿದ ವಿದ್ಯಾರ್ಥಿಗಳು ಮುಂಬರುವ ವರ್ಷದ ಆವೃತ್ತಿಗಾಗಿ ಮತ್ತು ಮತ್ತೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ಸುಕರಾಗಿ ಕಾಲೇಜಿನಿಂದ ನಿರ್ಗಮಿಸಿದರು.