News Karnataka Kannada
Sunday, May 05 2024
ಕ್ಯಾಂಪಸ್

ಉಜಿರೆ: ಸಾಹಿತ್ಯದಿಂದ ವಿಭಿನ್ನ ಸಾಮಾಜಿಕ ಗ್ರಹಿಕೆಯ ಕೊಡುಗೆ- ಸೋನಿಯಾ ವರ್ಮಾ

Ujire: Contribution of different social perception from literature- Sonia Verma
Photo Credit : News Kannada

ಉಜಿರೆ: ಪ್ರತಿಭಾನ್ವಿತ ಬರಹಗಾರರು ತಮ್ಮ ವಿಶಿಷ್ಟ ದೃಷ್ಟಿಕೋನಗಳಿಂದ ಸಮಾಜವನ್ನು ಭಿನ್ನವಾಗಿ ಗ್ರಹಿಸುವ ಮಾದರಿಗಳನ್ನು ಕೊಡುಗೆಗಳನ್ನಾಗಿ ನೀಡುತ್ತಾರೆ ಎಂದು ಸೋನಿಯಾ ವರ್ಮಾ ಅಭಿಪ್ರಾಯಪಟ್ಟರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಸಮ್ಯಗ್ದರ್ಶನ ಸಭಾ ಭವನದಲ್ಲಿ ಪತ್ರಿಕೋದ್ಯಮ ವಿಭಾಗದಿಂದ ಆಯೋಜಿಸಲಾಗಿದ್ದ ಸದಾನಂದ.ಬಿ ಮುಂಡಾಜೆಯವರ ‘ಜಲ್ಲಿ ಕಲ್ಲುಗಳು’ ಕವನ ಸಂಕಲನ ಬಿಡುಗಡೆ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಒಬ್ಬೊಬ್ಬರಿಗೆ ಒಂದೊಂದಕ್ಕೆ ಆದ್ಯತೆ ನೀಡುವ ಗುಣವಿರುತ್ತದೆ. ಸಾಹಿತಿಗೆ ತಾನು ಸೃಷ್ಟಿಸುವ ಸಾಹಿತ್ಯವೇ ಮುಖ್ಯವಾಗುತ್ತದೆ. ಸಮಾಜಕ್ಕೆ ದಿಗ್ದರ್ಶನ ತೋರುವ ಹಾಗೆ ಸಾಹಿತ್ಯವನ್ನು ರೂಪಿಸುವ ಹೊಣೆಗಾರಿಕೆಯನ್ನು ಸಾಹಿತಿಗಳು ನಿಭಾಯಿಸುತ್ತಾರೆ. ಭಾವನೆಗಳೊಂದಿಗಿನ ಬದುಕನ್ನು ವಿಭಿನ್ನವಾಗಿ ನೋಡಿ ಸಮಾಜಕ್ಕೆ ದಿಗ್ದರ್ಶನ ತೋರುವ ರೀತಿಯಲ್ಲಿ ಕಾವ್ಯ, ಕಥನವನ್ನು ಕಟ್ಟುವ ಶಕ್ತಿ ಅವರೊಳಗಿರುತ್ತದೆ ಎಂದು ಹೇಳಿದರು.

ಯಾರ ಹೃದಯದಲ್ಲಿ ಪ್ರೀತಿ, ಒಲವು ಇರುತ್ತದೋ ಅಂಥವರ ಸಾಹಿತ್ಯ ಹಿತ ನೀಡುತ್ತದೆ. ಬದುಕಿನ ತರಹೇವಾರಿ ಬಿಂಬಗಳನ್ನು ಅವರು ತಮ್ಮ ಕವಿತೆಗಳು, ಕಥೆಗಳ ಮೂಲಕ ಕಾಣಿಸುತ್ತಾರೆ. ಬದುಕಿನ ಮೌಲಿಕತೆಯು ಅಂಥವರ ಸಾಹಿತ್ಯದ ಮೂಲಕ ಬಿಂಬಿತವಾಗುತ್ತದೆ. ಬದುಕು ಮತ್ತು ಸಾಹಿತ್ಯ ಎರಡನ್ನೂ ಸಂಯೋಜಿತಗೊಳಿಸಿ ಹೊಸ ಕಾಣ್ಕೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ನುಡಿದರು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ.ಎಸ್ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸಾಹಿತ್ಯ ಓದುಗನ ಭಾವನೆ ಮತ್ತು ಯೋಚನೆಗಳಿಗೆ ತಕ್ಕಂತೆ ಹೊಸ ಅರ್ಥಗಳನ್ನು ಹುಟ್ಟಿಸುವಷ್ಟು ಪ್ರಬುದ್ಧವಾಗಿರುತ್ತದೆ. ಈ ಕಾರಣಕ್ಕಾಗಿಯೇ ಓದುಗರೊಳಗೆ ಹಿತದ ಭಾವವನ್ನು ಮೂಡಿಸುತ್ತದೆ. ತನ್ನ ಸತ್ವದ ಮೂಲಕ ಸೆಳೆದುಕೊಳ್ಳುತ್ತದೆ. ಹೀಗಾಗಿಯೇ ಸಾಹಿತ್ಯವು ಓದುಗರೊಳಗೆ ಜೀವನಪ್ರೀತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಬೌದ್ಧಿಕ ಹಸಿವು ಇದ್ದವರು ಸಾಹಿತ್ಯ ಸೃಷ್ಟಿಸುವ ಶಕ್ತಿಯನ್ನು ಪಡೆಯುತ್ತಾರೆ. ತಮ್ಮ ಸಾಹಿತ್ಯದ ಮೂಲಕ ಹೊಸದನ್ನು ನೀಡುತ್ತಾರೆ. ಈ ಕಾರಣಕ್ಕಾಗಿಯೇ ಅವರ ಬೆಳವಣಿಗೆಯು ಉಳಿದೆಲ್ಲರಿಗಿಂತ ಪ್ರಖರವಾಗಿರುತ್ತದೆ. ಸದಾನಂದ ಬಿ ಮುಂಡಾಜೆ ಅವರೊಳಗೆ ಬೌದ್ಧಿಕ ಹಸಿವು ಇದ್ದುದರಿಂದಲೇ ವಿನೂತನ ಕಾವ್ಯ ಶಕ್ತಿ ಸಿದ್ಧಿಸಿದೆ. ಈ ಕಾವ್ಯಶಕ್ತಿಯ ವಿಶೇಷತೆಯು ಅವರ ಕವನ ಸಂಕಲನದ ಮೂಲಕ ನಿರೂಪಿತವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಎ. ಜಯಕುಮಾರ್ ಶೆಟ್ಟಿ ಮಾತನಾಡಿ, ಸೃಜನಶೀಲ ಪ್ರತಿಭೆಗಳು ತಾವು ಪ್ರತಿನಿಧಿಸುವ ಶಿಕ್ಷಣ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸುತ್ತಾರೆ ಎಂದರು. ಸದಾನಂದ ಬಿ.ಮುಂಡಾಜೆ ಅವರ ಬಹುಮುಖಿ ಪ್ರತಿಭಾನ್ವಿತ ವ್ಯಕ್ತಿತ್ವವು ಸಂಸ್ಥೆಯ ಮಹತ್ವದ ಮೌಲಿಕ ಸಂಪನ್ಮೂಲ ಎಂದು ಹೇಳಿದರು.

‘ಜಲ್ಲಿಕಲ್ಲುಗಳು’ ಕವನ ಸಂಕಲನವನ್ನು ಬೆಳಾಲು ಎಸ್.ಡಿ.ಎಂ ಪ್ರೌಢಶಾಲೆಯ ರಾಮಕೃಷ್ಣ ಭಟ್‌ಚೊಕ್ಕಾಡಿ ಪರಿಚಯಿಸಿದರು. ನಮ್ಮ ಜೀವನದಲ್ಲಿ ಕಷ್ಟ, ಸವಾಲುಗಳು, ಏರಿಳಿತಗಳು ಬರದೇ ಹೋದಲ್ಲಿ ಸೋಲುತ್ತೇವೆ. ಸಾಧನೆಗೈಯುವ ಪ್ರತಿಯೊಬ್ಬರು ದಿನಂಪ್ರತಿ ಶೋಧನೆಯಲ್ಲಿ ತೊಡಗಿಕೊಂಡಾಗ ಸೃಜನಶೀಲ ವ್ಯಕ್ತಿತ್ವದ ಜೊತೆಗೆ ಪ್ರತಿಭೆ ರೂಪುಗೊಳ್ಳುತ್ತದೆ. ಈ ಮೂಲಕ ಸದಾನಂದ.ಬಿ ಮುಂಡಾಜೆ ನಯವಾಗಿ ನೇರವಾಗಿ ಕುಸುಮ ಕಾವ್ಯದ ಸುಂದರ ಮಾಲೆಯನ್ನು ಹೆಣೆದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸದಾನಂದ ಬಿ ಮುಂಡಾಜೆ ಮಾತನಾಡಿದರು. ಜೀವನಾನುಭವದ ವಿವಿಧ ಭಾವಗಳೇ ಕವನ ಸಂಕಲನದ ರೂಪ ತಳೆದಿವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗ್ಡೆ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಜಯ್ ನಿರೂಪಿದರು. ವಿದ್ಯಾರ್ಥಿನಿ ಜಯಶ್ರೀ ಸ್ವಾಗತಿಸಿದರೆ, ದಿವ್ಯಶ್ರೀ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು