News Karnataka Kannada
Sunday, May 12 2024
ಮಂಗಳೂರು

ಮಂಗಳೂರು ವಿವಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

Inauguration of National Seminar at Mangalore University
Photo Credit : News Kannada

ಮಂಗಳೂರು: ದೇಶದೆಲ್ಲೆಡೆ ಏಕಕಾಲದಲ್ಲಿ ನಡೆದ ಕ್ರಾಂತಿಕಾರಕ, ಅಹಿಂಸಾತ್ಮಕ, ಸಾಹಿತ್ಯಾತ್ಮಕ ಹೋರಾಟ, ಸಮಾಜ ಸುಧಾರಣೆ, ಸಂತ ಮಹನೀಯರ ಮಾರ್ಗದರ್ಶನ – ಹೀಗೆ ವಿವಿಧ ಆಯಾಮಗಳಲ್ಲಿ ನಡೆದ ಹೋರಾಟದ ಫಲವಾಗಿ ದೇಶ ಬ್ರಿಟೀಷರಿಂದ ಮುಕ್ತವಾಗಲು ಸಾಧ್ಯವಾಯಿತು, ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್ . ಯಡಪಡಿತ್ತಾಯ ಹೇಳಿದರು.

ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಮಂಗಳೂರು ವಿವಿ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ‘ಕಡಲತಡಿಯಲ್ಲಿ ಸ್ವಾತಂತ್ರ್ಯದ ತೆರೆ’ ಎಂಬ ಸ್ವಾತಂತ್ರ್ಯ ಚಳುವಳಿಗೆ ಕರಾವಳಿಯ ಸ್ಪಂದನ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಗುರುವಾರ ಮಂಗಳಗಂಗೋತ್ರಿಯ ಕನ್ನಡ ವಿಭಾಗದ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಕರಾವಳಿಯಲ್ಲಿ ರಾಣಿ ಅಬ್ಬಕ್ಕ ನಿಂದ ಆರಂಭಗೊಂಡು ಕಾರ್ನಾಡ್ ಸದಾಶಿವರಾವ್, ಕಮಲಾದೇವಿ ಚಟ್ಟೋಪಾಧ್ಯಾಯ, ಕುದ್ಮುಲ್ ರಂಗರಾಯರು, ಅಮ್ಮೆಂಬಳ ಬಾಳಪ್ಪ ಸೇರಿದಂತೆ ಅನೇಕ ಮಹನೀಯರು ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಇಂತಹ ಮಹಾತ್ಮರ ನೆನಪಿನೊಂದಿಗೆ ಸ್ವಾತಂತ್ರ್ಯ ಉತ್ಸವವನ್ನು ಆಚರಿಸುವುದರೊಂದಿಗೆ ಭಾರತವನ್ನು ವಿಶ್ವಗುರುವನ್ನಾಗಿಸಲು ಶ್ರಮಿಸೋಣ, ಎಂದರು.

ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡಿದ ಮಂಗಳೂರು ವಿವಿ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಎಂ.ಲೋಕೇಶ್, ಸ್ವಾತಂತ್ರ್ಯದ ಇತಿಹಾಸ ಮತ್ತು ಸಾಹಿತ್ಯದ ನಡುವೆ ಒಂದಕ್ಕೊಂದು ಸಂಬಂಧ ಇದೆ. ಆ ಕಾಲದಲ್ಲಿ ಸಾಹಿತಿಗಳು ಬ್ರಿಟೀಷರನ್ನು ನೇರವಾಗಿ ಎದುರಿಸಲು ಸಾಧ್ಯವಾಗದೇ ಇದ್ದರೂ ಬ್ರಿಟೀಷ್ ದಬ್ಬಾಳಿಕೆ, ನೀತಿಗಳ ವಿರುದ್ದ ಮೊನಚಾದ ಭಾಷೆಯ ಬರವಣಿಗೆಯ ಮೂಲಕ ಟೀಕಿಸುವ ಕೆಲಸ ಮಾಡುತ್ತಿದ್ದರು, ಎಂದರು. “ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ನೆಲೆ ವಿಸ್ತರಿಸುತ್ತಾ ಹೋದಂತೆ ದೇಶದ ಜನ ಮತ್ತೆ ಒಗ್ಗಟ್ಟಾಗಿ ಹೋರಾಡುವ ಪಣ ತೊಟ್ಟರು. ಗಾಂಧೀಜಿ ಅಹಿಂಸಾತ್ಮಕ ಹೋರಾಟ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೆಚ್ಚಿನ ಬಲ ನೀಡಿತು,” ಎಂದು ಅವರು ವಿವರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ.ಸೋಮಣ್ಣ ಹೊಂಗಳ್ಳಿ, ಅಂದು ಹೋರಾಟ ನಡೆಸಿದ ಮಹಾತ್ಮರ ತ್ಯಾಗ, ಪರಿಶ್ರಮ, ಬಲಿದಾನದ ಫಲವಾಗಿ ನಾವಿಂದು ಸ್ವಾತಂತ್ರ್ಯ ಪಡೆದುಕೊಂಡಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿ ಜನರ ಪಾತ್ರವು ಕೂಡಾ ಮಹತ್ತರವಾದುದು ಎಂದರು.

ಕಾರ್ಯಕ್ರಮದಲ್ಲಿ ಪ್ರೊ.ಕೆ.ಅಭಯ್ ಕುಮಾರ್ ಉಪಸ್ಥಿತರಿದ್ದರು. ವಿಚಾರ ಸಂಕಿರಣದ ಸಂಚಾಲಕ ಡಾ.ಧನಂಜಯ ಕುಂಬ್ಳೆ ಸ್ಬಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಡಾ.ಯಶುಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು.
ವಿಚಾರಗೋಷ್ಠಿ

ವಿಚಾರ ಗೋಷ್ಠಿಯಲ್ಲಿ ಕರಾವಳಿ ಸಾಹಿತ್ಯದಲ್ಲಿ ಸ್ವಾತಂತ್ರ್ಯದ ಕುರಿತು ಡಾ.ಬಿ ಜನಾರ್ದನ ಭಟ್ ಬೆಳ್ಮಣ್ಣು, ಡಾ.ರಾಜಶೇಖರ ಹಳೆಮನೆ ಉಜಿರೆ, ಡಾ. ಮೀನಾಕ್ಷಿ ರಾಮಚಂದ್ರ, ಮಂಗಳೂರು, ಐ ಕೆ ಬೊಳುವಾರ್ ಪುತ್ತೂರು ಇವರು ಕ್ರಮವಾಗಿ ಸಣ್ಣಕತೆ, ಕಾವ್ಯ, ಕಾದಂಬರಿ ಮತ್ತು ನಾಟಕಗಳಲ್ಲಿ ಸ್ವಾತಂತ್ರ್ಯದ ಸ್ಪಂದನದ ಕುರಿತು ಮಾತನಾಡಿದರು.

ಆ.12 ರಂದು ಹೋರಾಟದ ಅಂಗಳದಲ್ಲಿ ವ್ಯಕ್ತಿ ವಿಶೇಷ ಗೋಷ್ಠಿಯಲ್ಲಿ ರಾಣಿ ಅಬ್ಬಕ್ಕ ಕುರಿತು ಡಾ.ಗಣೇಶ್ ಅಮೀನ್ ಸಂಕಮಾರ್,ಕಾರ್ನಾಡು ಸದಾಶಿವರಾಯರ ಕುರಿತು ಅರವಿಂದ ಚೊಕ್ಕಾಡಿ, ಕಮಲಾದೇವಿ ಚಟ್ಟೋಪಾಧ್ಯಾಯ ಕುರಿತು ಪ್ರೊ.ಉಷಾರಾಣಿ ಶರ್ಮ ಹೊಸಪೇಟೆ, ಕುದ್ಮಲ್ ರಂಗರಾಯರ ಕುರಿತು ಡಾ.ವಾಸುದೇವ ಬೆಳ್ಳೆ, ಅಮ್ಮೆಂಬಳ ಬಾಳಪ್ಪರ ಕುರಿತು ಡಾ. ತುಕಾರಾಮ ಪೂಜಾರಿ ಮಾತನಾಡಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು