News Karnataka Kannada
Sunday, May 12 2024
ಮಂಗಳೂರು

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

77th Independence Day celebrations by Ambika Group of Educational Institutions
Photo Credit : News Kannada

ಪುತ್ತೂರು: ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಕೇವಲ 1857ರಿಂದ ಆರಂಭವಾದುದ್ದಲ್ಲ. ಅದಕ್ಕಿಂತಲೂ ಪೂರ್ವದಿಂದಲೇ ವಿವಿಧ ಪ್ರದೇಶಗಳಲ್ಲಿ ವೀರ ಯೋಧರು ಶಸ್ತ್ರಾಸ್ತ್ರಗಳನ್ನು ಹಿಡಿದು ಪ್ರಾಣಾರ್ಪಣೆಗೆ ಸಿದ್ಧರಾಗಿ ಹೋರಾಟಕ್ಕಿಳಿದ ಅವೆಷ್ಟೋ ಉದಾಹರಣೆಗಳಿವೆ. ಸತ್ಯಾಗ್ರಹಗಳು, ಅಸಹಕಾರ ನಡೆಗಳು ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದದ್ದು ಹೌದಾದರೂ ಅದರಿಂದಲೇ ಸ್ವಾತಂತ್ರ್ಯ ಬಂತು ಎಂಬುದು ತಪ್ಪುಕಲ್ಪನೆ. ಕ್ರಾಂತಿಕಾರಿಗಳ ಬದುಕಿನ ಪುಟಗಳನ್ನು ತೆರೆದರೆ ಸ್ವಾತಂತ್ರ್ಯಕ್ಕಾಗಿ ನಡೆದ ತ್ಯಾಗಗಳು ಕಣ್ಣಮುಂದೆ ಕಟ್ಟಿಕೊಳ್ಳುತ್ತವೆ ಎಂದು ಉಡುಪಿಯ ವಾಗ್ಮಿ ಶ್ರೀಕಾಂತ ಶೆಟ್ಟಿ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಲಾದ ಸ್ವಾತಂತ್ರೋತ್ಸವ ಆಚರಣೆಯ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಂಗಳವಾರ ಮಾತನಾಡಿದರು.

ಪ್ರಪಂಚದ ಇತಿಹಾಸದಲ್ಲಿ ಅನೇಕ ರಾಷ್ಟ್ರಗಳ ಮೇಲೆ ಅನ್ಯಧರ್ಮಿಯರ ದಾಳಿಗಳಾಗಿವೆ. ಪರಿಣಾಮ ಒಂದೆರಡು ದಶಕಗಳ ಒಳಗಾಗಿ ದಾಳಿಗೊಳಗಾದ ದೇಶಗಳ ಮೂಲ ಸಂಸ್ಕೃತಿ, ಧರ್ಮ, ಆಚರಣೆಗಳು ನಾಮಾವಶೇಷಗೊಂಡಿವೆ. ಆದರೆ ಭಾರತ ಮಾತ್ರ ಏಕಮೇವಾದ್ವಿತೀಯವಾಗಿ ದಾಳಿಯ ಅನಂತರವೂ ತನ್ನ ಮೂಲಸತ್ವವನ್ನು ಉಳಿಸಿಕೊಂಡಿದೆ. ಹೀಗೆ ನಮ್ಮತನದ ಉಳಿವಿನ ಹಿಂದೆ ಅನೇಕ ಬಲಿದಾನಗಳಾಗಿವೆ ಎಂಬುದನ್ನು ಮರೆಯಬಾರದು. ಹಿರಿಯರ ತ್ಯಾಗದ ಫಲವನ್ನು ನಾವಿಂದು ಉಣ್ಣುತ್ತಿದ್ದೇವೆ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ತುಳುನಾಡು ಕೂಡ ಹಿಂದೆ ಬಿದ್ದಿಲ್ಲ. ಕೆದಂಬಾಡಿ ರಾಮಯ್ಯ ಗೌಡರಂತಹ ಮಹಾನ್ ಹೋರಾಟಗಾರರು ಬಂಗರಸನನ್ನು ಪೀಠದಲ್ಲಿ ಕೂರಿಸಿ ನಡೆಸಿದ ಹೋರಾಟಕ್ಕೆ ಬ್ರಿಟೀಷರು ಬೆರಗಾಗಿಹೋಗಿದ್ದರು. ಉಪ್ಪಿನಂಗಡಿ, ಪುತ್ತೂರು ಮಾತ್ರವಲ್ಲದೆ ಮಂಗಳೂರನ್ನು 72 ಗಂಟೆಗಳ ಕಾಲ ತುಳುನಾಡಿನ ವೀರಯೋಧರು ಬ್ರಿಟೀಷರಿಂದ ಮುಕ್ತಗೊಳಿಸಿ ತುಳು ಬಾವುಟವನ್ನು ಹಾರಿಸಿದ ವೀರ ಕಥಾನಕ ನಮ್ಮ ನೆಲದ್ದು ಎಂಬುದು ಗರ್ವಪಡಬೇಕಾದ ಸಂಗತಿ. ಇಂತಹ ಅನೇಕ ಸ್ವಾತಂತ್ರ್ಯ ವೀರರ ಇತಿಹಾಸಗಳು ಪಠ್ಯದಲ್ಲಿ ದಾಖಲಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ದೇಶಕ್ಕೆ ಸ್ವಾತಂತ್ಯ ಬರಬರುತ್ತಲೇ ದೇಶವನ್ನು ಭಾರತ, ಪಾಕಿಸ್ಥಾನ ಹಾಗೂ ಬಾಂಗ್ಲಾ ಎಂಬ ಮೂರು ಭಾಗಗಳನ್ನಾಗಿ ವಿಂಗಡಿಸಲಾಯಿತು. ತದನಂತರ ಭಾರತದಲ್ಲಿರುವ ಮುಸಲ್ಮಾನರನ್ನು ಹಾಗೂ ಪಾಕಿಸ್ಥಾನದಲ್ಲಿರುವ ಹಿಂದೂಗಳನ್ನು ಗೌರವಯುತವಾಗಿ ನಡೆಸಬೇಕೆಂಬ ಒಪ್ಪಂದ ಮಾಡಿಕೊಳ್ಳಲಾಯಿತು. ನಮ್ಮ ದೇಶ ಒಪ್ಪಂದಕ್ಕಿಂತಲೂ ಅಧಿಕವಾಗಿಯೇ ಆ ಧರ್ಮಿಯರನ್ನು ನಡೆಸಿಕೊಂಡರೆ ಪಾಕಿಸ್ಥಾನದಲ್ಲಿ ಹಿಂದೂಗಳ ಕಥೆ ಏನಾಗಿದೆ ಎಂಬುದರ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ. ಅವರ ಸಂಕಷ್ಟಕ್ಕೆ ಮರುಗಿ ಸಿಎಎ ಎಂಬ ಕಾನೂನು ತರಲು ಹೊರಟರೆ ಇಲ್ಲಿಯ ಮುಸಲ್ಮಾನರು ಅದಕ್ಕೆ ವಿರೋಧ ಮಾಡುತ್ತಿರುವುದು ವಿಪರ್ಯಾಸ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ದೇಶಕ್ಕೆ ಸ್ಪಂದಿಸುವ, ದೇಶದ ಹಿತಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳುವ ಸಮರ್ಥ ಯುವಸಮೂಹ ತಯಾರಾಗಬೇಕಿದೆ. ದೇಶಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ನಮ್ಮ ವೀರಪರಂಪರೆ, ಕ್ಷಾತ್ರ ತೇಜಸ್ಸಿನ ಇತಿಹಾಸವನ್ನು ಅರಿತು ಮುನ್ನುಗ್ಗಬೇಕು ಎಂದು ಕರೆನೀಡಿದರು.

ಈ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅಂಬಿಕಾ ವಿದ್ಯಾಸಂಸ್ಥೆಗಳಲ್ಲಿ ನಡೆಸಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಸುರೇಶ ಶೆಟ್ಟಿ, ಪ್ರಸನ್ನ ಭಟ್, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ. ಕ್ಯಾಂಪಸ್ ನಿದೇಶಕ ರಾಜೇಂದ್ರ ಪ್ರಸಾದ್, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ ಉಪಸ್ಥಿತರಿದ್ದರು.

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿದರು. ಬಪ್ಪಳಿಗೆ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ ಕಮ್ಮಜೆ ವಂದಿಸಿದರು. ವಿದ್ಯಾರ್ಥಿನಿಯರಾದ ಮಹತಿ ಬಿ, ಪ್ರಣತಿ ಕಲ್ಲೂರಾಯ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿಯರಾದ ಕಾವ್ಯಾ ಭಟ್, ಚೈತ್ರಿಕಾ ಹಾಗೂ ಗೌರಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.

ಇದಕ್ಕೂ ಪೂರ್ವದಲ್ಲಿ ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ದ್ವಜಾರೋಹಣ ನಡೆಯಿತು. ತದನಂತರ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಿಂದ ಏಕಕಾಲಕ್ಕೆ ಕಿಲ್ಲೆ ಮೈದಾನದ ಅಮರ್ ಜವಾನ್ ಜ್ಯೋತಿ ಸ್ಮಾರಕದೆಡೆಗೆ ಅಂಬಿಕಾ ಪರಿವಾರದ ವತಿಯಿಂದ ಬೃಹತ್ ಮೆರವಣಿಗೆ, ಜಾಥಾ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು