ಯಾದಗಿರಿ: ಜಿಲ್ಲೆಯ ಗುರುಮಿಟ್ಕಲ್ ಮತಕ್ಷೇತ್ರದ ಹೊನಗೇರಾ ಗ್ರಾಮದೊಳಗಿನ ರಸ್ತೆಗಳು ತಗ್ಗು ದಿನ್ನೆಗಳಿಂದ ಕೂಡಿದ್ದು ಸಂಚಾರ ನರಕ ಸದೃಶ್ಯವಾಗಿದ್ದು ಗ್ರಾಮ ಪಂಚಾಯಿತಿಯವರು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಕರವೇ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ವಿಶ್ವರಾಜ ಪಾಟೀಲ್, ಸುಮಾರು ವರ್ಷಗಳಿಂದ ಗ್ರಾಮದ ಎಲ್ಲ ಬೀದಿ, ಒಳ ರಸ್ತೆಗಳು ಅಧ್ವಾನವಾಗಿದ್ದು, ಸಂಚಾರ ನರಕ ದರ್ಶನ ಮಾಡಿಸುತ್ತಿದೆ ಎಂದು ಅವರು ದೂರಿದ್ದಾರೆ.
ಗರ್ಭಿಣಿ ಸ್ತ್ರೀಯರು ಆಸ್ಪತ್ರೆಗೆ ತೆರಳಲು ಮುಂದಾಗಿ ಈ ರಸ್ತೆಯನ್ನು ದಾಟುವುದರೊಳಗಾಗಿ ಹೆರಿಗೆ ಆಗುತ್ತದೆ ಎಂಬಷ್ಟರ ಮಟ್ಟಿಗೆ ರಸ್ತೆಯಲ್ಲಿ ತಗ್ಗು ಗುಂಡಿಗಳ ಮಯವಾಗಿದೆ. ರಸ್ತೆಯಲ್ಲಿ ಶಾಲಾ ವಾಹನಗಳು, ಆಟೋಗಳು ಸಂಚರಿಸುವುದು ಅತ್ಯಂತ ದುಸ್ತರವಾಗಿದೆ. ಸ್ಪಲ್ಪ ಯಾಮಾರಿದರೂ ಮಕ್ಕಳು, ವೃದ್ಧರು, ಮಹಿಳೆಯರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.
ರಸ್ತೆಯಲ್ಲಿ ಗುಂಡಿಗಳು ಇವೆಯೋ ಅಥವಾ ಗುಂಡಿಯಲ್ಲಿಯೇ ರಸ್ತೆ ಇದೆಯೋ ಎಂಬ ಅನುಮಾನ ಈ ರಸ್ತೆಯ ಮೇಲೆ ಸಂಚರಿಸಿದವರಿಗೆ ಸಹಜವಾಗಿ ಅನ್ನಿಸುವಷ್ಟು ಅಧ್ವಾನವಾಗಿದೆ. ಗ್ರಾಮದಲ್ಲಿಯೇ ಗ್ರಾಮ ಪಂಚಾಯಿತಿ ಕೇಂದ್ರವಿದ್ದು, ಹಲವಾರು ವರ್ಷಗಳಿಂದ ಇಲ್ಲಿಯವರೇ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರುಗಳಾಗಿದ್ದರೂ ಇದೇ ಪರಿಸ್ಥಿತಿ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಪಂ ನಿಂದ ಮೊದಲುಗೊಂಡು ಯಾವುದೇ ಕಡೆಗೆ ಹೋಗಬೇಕೆಂದರೆ ಉದಾ: ಶಾಲೆಗೆ, ಆಂಜನೇಯ ದೇವಸ್ಥಾನಕ್ಕೆ, ಹೊಸಳ್ಳಿ ರಸ್ತೆಯ ಮಾರ್ಗ, ನಿಂಗಯ್ಯ ಮುತ್ಯಾನ ಗುಡಿಯವರೆಗೆ ಸೇರಿದಂತೆ ಎಲ್ಲ ರಸ್ತೆಗಳು ಅಯೋಮಯವಾಗಿವೆ. ರಸ್ತೆಯ ತುಂಬ ತಗ್ಗುಗಳಿರುವುದರಿಂದ ಈದೀಗ ಬಿಟ್ಟುಬಿಡದೇ ಮಳೆ ಸುರಿಯುತ್ತಿರುವುದರಿಂದ ತಗ್ಗುಗಳು ಇನ್ನಷ್ಟು ರಕ್ಕಸ ಗಾತ್ರದವಾಗಿದ್ದು, ಇದರಲ್ಲಿ ವಾಹನ ಸವಾರರು ಬಿದ್ದರೂ ಸಹ ಪ್ರಾಣಕ್ಕೆ ಅಪಾಯವಾಗುವಷ್ಟು ಭೀಕರವಾಗಿವೆ ಆದರೆ ಈ ತಗ್ಗುಗಳಿಗೆ ಹಿಡಿ ಪುಟ್ಟಿ ಮಣ್ಣು ಹಾಕಲು ಸಂಬAಧಪಟ್ಟವರು ಆಲೋಚನೆ ಮಾಡದೇ ಇರುವುದಕ್ಕೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಗ್ಗು ದಿಣ್ಣೆಗಳಲ್ಲಿ ಮಳೆ ನೀರು ನಿಂತ ಪರಿಣಾಮ ಮಲೀನಗೊಂಡಿದ್ದು, ನೀರು ಗಬ್ಬೆದ್ದು ನಾರುತ್ತಾ ರೋಗ ರುಜಿನಗಳು ಹರಡುವ ತಾಣಗಳಾಗಿ ರಸ್ತೆ ಗುಂಡಿಗಳು ನಿಂತಿವೆ. ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲದಂತಾಗಿದ್ದು, ನೀರು ರಸ್ತೆಯ ಮೇಲೆ ಹರಿದ ಪರಿಣಾಮ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಜನತೆ ಜೀವನ ನಡೆಸುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಸುತ್ತಮುತ್ತಲ ಆವರಣದಲ್ಲಿ ಕಸದ ಕೊಂಪೆಯೇ ಬಿದ್ದಿದ್ದರೂ ಕ್ಯಾರೆ ಎನ್ನದ ಗ್ರಾಪಂ ಮುಂದೆಯೇ ಹಳೆ ಬಾವಿಯಲ್ಲಿ ಮಲೀನ ನೀರು ತುಂಬಿಕೊಂಡು ವರ್ಷಗಳೇ ಕಳೆದಿದ್ದರೂ ಇದನ್ನು ಮುಚ್ಚುವ ಕೆಲಸವನ್ನೂ ಸಹ ಮಾಡದೇ ನಿನಿರ್ಲಕ್ಷ್ಯ ವಹಿಸಿರುವುದಕ್ಕೆ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ತಕ್ಷಣ ಕ್ರಮ ಕೈಗೊಂಡು ಜನತೆಗೆ ಆಗುತ್ತಿರುವ ಸಂಕಷ್ಟ ಪರಿಹರಿಸಬೇಕು ಇಲ್ಲವಾದಲ್ಲಿ ಕರವೇಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

