ಯಾದಗಿರಿ: ಜೆಜೆಎಂ ಯೋಜನೆಯ ಮಾಹಿತಿ ನೀಡುವ ನಾಮಫಲಕ ಅಳವಡಿಕೆ ಹೆಸರಲ್ಲಿ ಜಿಲ್ಲೆಯ ಶಹಾಪುರ ವ್ಯಾಪ್ತಿಯಲ್ಲಿ 36 ಲಕ್ಷ ಅನುದಾನ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿ ಲೂಟಿ ಮಾಡಿ ಸಾರ್ವಜನಿಕರ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ.
ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಹಾಗೂ ಪೂರ್ಣಗೊಂಡ ಜಲ ಜೀವನ್ ಮಷಿನ್ (ಜೆಜೆಎಂ) ಯೋಜನೆಯ 2021 ರಿಂದ 2025 ರವೆರೆಗೆ ಒಟ್ಟು 144 ಕಾಮಗಾರಿಗಳಿವೆ. ಒಂದು ನಾಮಫಲಕ ಅಳವಡಿಕೆ ಮಾಡಲು ಅಂದಾಜು ಪತ್ರಿಕೆಯಲ್ಲಿ 25 ಸಾವಿರ ವೆಚ್ಚ ಮಾಡಲಾಗಿದೆ. ಅದರಂತೆ ಒಟ್ಟು 144 ನಾಮಫಲಕಕ್ಕೆ 36 ಲಕ್ಷ ಅನುದಾನ ಬಳಕೆ ಮಾಡಲಾಗಿದೆ.

ಅಂದಾಜು ಪತ್ರಿಕೆಯಲ್ಲಿ ಈ ನಾಮಫಲಕವು 3 ಮಿಮಿ ತೀಕ್ನೆಸ್ ಇರುವ ಎಂ.ಎಸ್ ಶೀಟ್ ನಿಂದ ಮಾಡಿದ ಬೆಂಡಾಗದ ಉಕ್ಕುವಿನ ತಗಡು ಹೊಂದಿದ್ದು, ಅದಕ್ಕೆ 5 ಮಿಲಿ ಮೀಟರ್ ನ ಎರಡು ಸಮಾನ 50 ಮಿಮಿ ಉಕ್ಕಿನ ಕಂಬಗಳ ಜೊತೆಗೆ ಹಲವು ಸಲಕರಣೆಗಳು ಹೊಂದಿದೆ. ಹಾಗೂ ಬೋರ್ಡ್ ಗೆ ಬಣ್ಣದಿಂದ ಪೇಂಟ್ ಮಾಡಬೇಕು. ಆದರೆ ವಾಸ್ತವದಲ್ಲಿ ಮಾತ್ರ ತೆಳ್ಳನೆಯ ತಗಡು ಉಪಯೋಗಿಸಿ ಅದಕ್ಕೆ ಮಾಹಿತಿ ಇರುವ ಪ್ರಿಂಟ್ ಪ್ಲಾಸ್ಟಿಕ್ ಲೇಪಿಸಿ ಮನ ಬಂದಂತೆ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಸಿದ್ದಾರೆ.
ಜೊತೆಗೆ ಒಂದು ನಾಮಫಲಕ ಸರಬರಾಜು ಮಾಡುವುದಕ್ಕೆ ಒಂದು ಸಾವಿರ ಎಂಬಂತೆ ಅಂದಾಜು ಪತ್ರಿಕೆ ರೂಪಿಸಿದ್ದಾರೆ. ಇದರಲ್ಲಿ ವಿಶೇಷವೆಂದರೆ 144 ನಾಮಫಲಕವು ಒಬ್ಬರೇ ಗುತ್ತಿಗೆದಾರರ ಹೆಸರಲ್ಲಿದೆ. ಒಂದೇ ಬಾರಿಗೆ ಹತ್ತಾರು ಬೋರ್ಡ್ ಸಾಗಿಸಲು ಅವಕಾಶ ಇದ್ದರು, ಒಂದೊಂದು ಬೋರ್ಡ್ ಸಪ್ಲೈ ಮಾಡುವುದಕ್ಕೆ ಒಂದು ಸಾವಿರ ಬಳಕೆ ಮಾಡಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಭೀಮರಾಯ ಬಾರಿಗಿಡ ಅವರು ಆರೋಪಿಸಿದ್ದಾರೆ.

ಜೆಜೆಎಂ ಅನುದಾನ ಕೊಳ್ಳೆ ಹೊಡೆಯಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು, ಶಹಾಪುರ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಎಇ, ಜೆಇ ಮತ್ತು ಗುತ್ತಿಗೆದಾರರು ಸೇರಿ 25 ಸಾವಿರ ಖರ್ಚು ಮಾಡಿ ಅಳವಡಿಸಬೇಕಾದ ನಾಮಫಲಕವನ್ನು 4 ಸಾವಿರ ಖರ್ಚು ಮಾಡಿ ಕೇವಲ ಫ್ಲೆಕ್ಸ್ ಮತ್ತು ಬ್ಯಾನರ್ ಹಾಕಿ ಅನುದಾನ ಕೊಳ್ಳೆ ಹೊಡೆದು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದ್ದಾರೆ.
ಕೂಡಲೇ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಮುನ್ನೆಲೆಗೆ ಬಂದು ಜೆಜೆಎಂ ಕಾಮಗಾರಿಗಳ ನಾಮಫಲಕಗಳ ಕುರಿತಾಗಿ ತನಿಖಾ ತಂಡ ರಚಿಸಿ, ಕೂಲಂಕುಷವಾಗಿ ಅಧ್ಯಯನ ಮಾಡಿ, ಅನುದಾನ ದುರ್ಬಳಕೆ ಮಾಡಿದ ಅಧಿಕಾರಿಗಳಿಗೆ ಅಮಾನತು ಮಾಡಬೇಕು. ಜೊತೆಗೆ ದುರ್ಬಳಕೆಯಾದ ಅನುದಾನ ವಸೂಲಿ ಮಾಡಿ, ಗುತ್ತಿಗೆದಾರರ ಲೈಸೆನ್ಸ್ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಬಾರಿಗಿಡ ಅವರು ಆಗ್ರಹಿಸಿದರು.

ಸರ್ಕಾರದ ಅನುದಾನ ಕೊಳ್ಳೆ ಹೊಡೆಯಲು ಅಧಿಕಾರಿಗಳು ಮತ್ತು ಗುತ್ತೆದಾರರು ವ್ಯವಸ್ಥಿತವಾಗಿ ದಾಖಲೆ ಸೃಷ್ಟಿಸಿ, ಕಳಪೆ ಕಾಮಗಾರಿ ಮಾಡಿ ಗ್ರಾಮೀಣ ಜನರಿಗೆ ನೀರು ಕೊಡದೆ, ಕಾಮಗಾರಿಯು ಪೂರ್ಣಗೊಳಿಸದೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಕೂಡಲೇ ಇವರ ಕ್ರಮವಾಗಬೇಕು. ದುರ್ಬಳಕೆಯಾದ ಅನುದಾನ ವಸೂಲಿಯಾಗಬೇಕು.
– ವರದಿ
ಸುಧೀರ್ ಕೋಟೆ ಯಾದಗಿರಿ

