ಯಾದಗಿರಿ: ಜಿಲ್ಲೆಯಲ್ಲಿ ಜೂನ್ 17 ರಂದು ತ್ಯಾಗ ಬಲಿದಾನದ ಸಂಕೇತವಾದ ಬಕ್ರಿದ್ ಹಬ್ಬವನ್ನು ಶಾಂತಿ ಸೌಹಾರ್ದಯುತವಾಗಿ ಆಚರಿಸಲು ಅಧಿಕಾರಿಗಳು ಕ್ರಮವಹಿಸಿ ಹಾಗೂ ಸಮಾಜ ಭಾಂದವರು ಸರಕಾರದ ನಿಯಮಗಳನ್ನು ಪಾಲಿಸುವ ಮೂಲಕ ಆಚರಿಸಲು ಸಹಕರಿಸಿ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಕೋರಿದರು. ಬಕ್ರಿದ್ ಪ್ರಯುಕ್ತ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆ ಮೊದಲಿನಿಂದಲೂ ಶಾಂತಿ ಸೌಹಾರ್ದತೆಗೆ ಹೆಸರಾಗಿದೆ. ಎಲ್ಲ ಹಬ್ಬಗಳನ್ನು ಸೌಹಾರ್ದದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಬಕ್ರಿದ್ ವೇಳೆಯೂ ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದಂತೆ ಯಶಸ್ವಿಯಾಗಿ ಹಬ್ಬದ ಆಚರಿಸಬೇಕು. ಜಿಲ್ಲೆಯ ಎಲ್ಲಾ ಪ್ರಾರ್ಥನೆಯ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಗಳು ನಿಗಾವಹಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಮಳೆಗಾಲ ಇರುವ ಕಾರಣ ನಗರಸಭೆ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ನಗರದ ಹಾಗೂ ಗ್ರಾಮಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಅಕ್ರಮ ಜಾನುವಾರು ಸಾಗಣೆ ತಡೆಗೆ ಇರುವ ಕಾನೂನನ್ನು ಯಾರೂ ಉಲ್ಲಂಘಿಸಬಾರದು. ಪ್ರಾಣಿಗಳ ವಧೆ ಹಾಗೂ ಅಕ್ರಮವಾಗಿ ಸಾಗಾಣಿಕೆ ತಡೆಯಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸಿಇಓ ಗರಿಮಾ ಪನ್ವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಹೆಚ್ಚುವರಿ ಎಸ್ಪಿ ಧರಣೇಶ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ರಾಜು ದೇಶಮುಖ , ಮುಖಂಡರಾದ ಚನ್ನಪ್ಪಗೌಡ ಮೋಸಂಬಿ, ವಿಶ್ವನಾಥ ಸಿರವಾರ, ಲಾಯಕ್ ಹುಸೇನ್ ಬಾದಲ್, ಅಸದ್ ಚಾವುಷ್, ಬಾಷುಮಿಯಾ, ಇನಾಯುತ್ ರಹಮಾನ್, ಡಿಎಸ್ಎಸ್ ರಾಜ್ಯ ಉಪಾಧ್ಯಕ್ಷ ಸದ್ದಾಂ ಹುಸೇನ್, ತಾಜಮ್ಮುಲ್ ಹುಸೇನ್, ಶೇಕ್ ಇಮ್ರಾನ್, ನತಿಕ್ ಬಾದಲ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

