ಯಾದಗಿರಿ: ಯವ್ವಾ, ಯಕ್ಕಾ ನಾ ಏನ್ ಮಾಡ್ಲಿ, ಹೋಳಿಗೆ ಮಾಡಿಡು ಅಂತ್ ಹೋದ್ ಮಾಮಾ ಹೀಂಗ ಮೋಸಾ ಮಾಡ್ತಾನಂತ ಗೊತ್ತಿದ್ದಿಲಬೇ ಎಕ್ಕಾ, ನನ್ನ ಹೀಂಗ ನಡು ನೀರಾಗ ಕೈ ಬಿಟ್ಟ ಹೋದರ್ ನಾ ಯಾರ್ ಮುಂದ ಹೇಳ್ಲಿ ಎವ್ವಾ…’. ಹೀಗೆ ಗೋಳಿಡುತ್ತ ಕಣ್ಣೀರು ಹಾಕುತ್ತಾ ಪುರುಷರು ಸೀರೆ ತೊಟ್ಟು ಸೋಗುವ ಮಾಡುವ ದೃಶ್ಯ ಒಂದೆಡೆಯಾದರೆ, ಇದನ್ನು ಕಂಡು ಒಳಗೊಳಗೆ ನಕ್ಕು ಖುಷಿಪಡುವ ದೃಶ್ಯ ಮತ್ತೊಂದು ಕಡೆ.
ಶವಯಾತ್ರೆಯಲ್ಲಿ ನಕ್ಕು ಖುಷಿಪಡುವಂತಹದ್ದು ಏನಿದೆ ಎಂದುಕೊಳ್ಳಬೇಡಿ. ಇದು ನಿಜವಾದ ಶವಯಾತ್ರೆ ಅಲ್ಲ. ಹೋಳಿ ನಿಮಿತ್ತ ನಡೆಯುವ ಅಣಕು ಶವಯಾತ್ರೆ. ದೋರನಹಳ್ಳಿಯ ಅಗಸಿಯಿಂದ ನಡೆದ ಅಣಕು ಶವಯಾತ್ರೆ ಮುಖ್ಯ ರಸ್ತೆಯವರೆಗೆ ಜರುಗಿತು.

ಅಣಕು ಶವಯಾತ್ರೆಯಲ್ಲಿ ಜನ ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರೋಧನ, ಗುಣಗಾನ ನಡೆಯುತ್ತಲೇ ಇತ್ತು. ಅಳುವವರು ಒಂದಿಷ್ಟು ಜನರಾದರೆ, ಒಳಗಿಂದೊಳಗೆ ನಗುವವರು ಇನ್ನೊಂದಿಷ್ಟು. ಅಳುವವರನ್ನು ಗೋಳು ಹೊಯ್ದುಕೊಂಡು ಇನ್ನಷ್ಟು ಖುಷಿ ಪಡುವವರೂ ಇದ್ದರು. ಸೀರೆ ಧರಿಸಿದ ಯುವಕರು, ಹಲಗೆ ವಾದನ, ಭಾಜ ಭಜಂತ್ರಿ ನರ್ತನ ಮುಂತಾದವು ಗಮನ ಸೆಳೆದವು.
ಅಣಕು ಶವಯಾತ್ರೆ ದೋರನಹಳ್ಳಿಯ ಅಗಸಿಯಿಂದ ಶುರುವಾಗಿದ್ದು, ಮುಖ್ಯರಸ್ತೆವರೆಗೂ ನಡೆಯಿತು., ಶವಯಾತ್ರೆ ವೇಳೆ ನೂರಾರು ಮಹಿಳೆಯರು, ಯುವಕರು, ಹಿರಿಯರು ಅಣಕು ಶವಯಾತ್ರೆ ನೋಡಲು ಸೇರಿದ್ದರು. ‘ಶವ’ ಆಗಿ ಮಲಗಿದ್ದ ವ್ಯಕ್ತಿ ಮೆರವಣಿಗೆಯುದ್ದಕ್ಕೂ ಕುಳಿತುಕೊಂಡಿದ್ದು.

ಯಾರಿಗೂ ಕೆಡಕು ಆಗಬಾರದು ಎಂಬ ಕಾರಣಕ್ಕೆ ಹೋಳಿ ಹುಣ್ಣಿಮೆ ಬಳಿಕ ಅಣಕು ಶವಯಾತ್ರೆ ನಡೆಯುತ್ತದೆ ಎಂಬ ನಂಬಿಕೆ ಸಹ ಇದೆ. ಅಣಕುಶವಯಾತ್ರೆ ವೇಳೆ ಸಾಬಣ್ಣ ಗೋಷಿ, ಪತ್ರಕರ್ತ ಚಂದಪ್ಪ ದೋರನಹಳ್ಳಿ, ತಮ್ಮಣ್ಣ ಜೋಳದ್, ಭಾಗಣ್ಣ ಗೌಡ, ದೊಡ್ಡಪ್ಪಗೌಡ, ಮಾನಪ್ಪ ಹುಣಸೂರು, ಮಾಳಪ್ಪ ಜೆಸಿಬಿ, ಭೀಮರಾಯ ಹೊಕ್ಕಳೂರು, ಹಣಮಂತ ಗುಂಡತ್ಕಲ್, ಹಣಮಂತ ದಿಗ್ಗಿ, ಅಯ್ಯಪ್ಪ ತಂಗಡಿಗಿ, ಶರಣು, ಸೇರಿದಂತೆ ಇನ್ನಿತರರಿದ್ದರು.

