ರೋಮ್: ಇಟಲಿಯ ಮಾರ್ಚೆ ಪ್ರದೇಶದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, ಇತರ ನಾಲ್ವರು ನಾಪತ್ತೆಯಾಗಿದ್ದಾರೆ.
ಗುರುವಾರ ಮತ್ತು ಶುಕ್ರವಾರ ಗುಡುಗು ಸಿಡಿಲುಗಳು ಮಾರ್ಚೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ನಡುಗಿಸಿದವು, ಹಠಾತ್ ಪ್ರವಾಹದಿಂದಾಗಿ ಮರಗಳು ಬೇರು ಸಹಿತ ಉರುಳಿಬಿದ್ದು, ಹಲವು ಮನೆಗಳು ನಾಶಗೊಂಡಿವೆ ಜೊತೆಗೆ ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಕಾಣೆಯಾದ ನಾಲ್ವರಲ್ಲಿ ಎಂಟು ವರ್ಷದ ಬಾಲಕ ಸೇರಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. 17 ವರ್ಷದ ಬಾಲಕಿ ಮತ್ತು 56 ವರ್ಷದ ತಾಯಿ ಶುಕ್ರವಾರ ತಡರಾತ್ರಿ ಕಾಣೆಯಾಗಿದ್ದಾರೆ. ಕಾಣೆಯಾದ ನಾಲ್ಕನೇ ವ್ಯಕ್ತಿಯ ಬಗ್ಗೆ ಅಧಿಕಾರಿಗಳು ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ.
ಮಾರ್ಚೆಯಾದ್ಯಂತ ಮತ್ತು ಪಕ್ಕದ ಪ್ರದೇಶವಾದ ಟಸ್ಕನಿಯಲ್ಲಿ ತೀವ್ರ ಆಸ್ತಿಪಾಸ್ತಿ ಹಾನಿಯಾಗಿದ್ದು, ಮಧ್ಯ ಇಟಲಿಯ ಉಂಬ್ರಿಯಾ, ಅಬ್ರುಝೊ, ಮೊಲಿಸ್ ಮತ್ತು ಲಾಜಿಯೊ ಮತ್ತು ಉತ್ತರ ಇಟಲಿಯ ಫ್ರಿಯುಲಿ ವೆನೆಜಿಯಾ ಗಿಯುಲಿಯಾ, ಲೊಂಬಾರ್ಡಿ ಮತ್ತು ಲಿಗುರಿಯಾದಲ್ಲಿ ಭಾರಿ ಮಳೆಯಾಗಿದೆ ಎಂದು ವರದಿಯಾಗಿದೆ.
ಹಾನಿಯನ್ನು ಸರಿಪಡಿಸಲು ಮತ್ತು ದುರಂತದಿಂದ ಸ್ಥಳಾಂತರಗೊಂಡವರಿಗೆ ತಾತ್ಕಾಲಿಕ ವಸತಿಗಳನ್ನು ಸ್ಥಾಪಿಸಲು ಅಗತ್ಯವಿರುವ ಆರ್ಥಿಕ ಬೆಂಬಲವನ್ನು ಈ ಪ್ರದೇಶವು ಪಡೆಯುತ್ತದೆ ಎಂದು ಪ್ರಧಾನಿ ಮಾರಿಯೋ ದ್ರಾಘಿ ಶುಕ್ರವಾರ ಹೇಳಿದರು.